೧. ಬಾನು ಬೆಳಗಿತು
ಮದುವೆಯ ಸಮಾರಂಭದಲ್ಲಿ ಪರಿಚಯವಾದ ರಾಮನಾಥನೊಂದಿಗೆ ಕಲ್ಯಾಣಿಯ ವಿವಾಹವು ನಡೆಯಿತು.ಹೊಸತರಲ್ಲಿ ಕಲ್ಯಾಣಿಗೆ ಸಮಯ ಸರಿದಿದ್ದೆ ತಿಳಿಯುತ್ತಿರಲಿಲ್ಲ.ಆದರೆ ದಿನ ಕಳೆದಂತೆ ಸಮಯ ಕಳೆಯುವುದು ಕಷ್ಟವಾಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು.ಕೆಲಸದ ಒತ್ತಡದಿಂದ ಬೇಗನೆ ಆಯಾಸಗೊಂಡು ಮೊದಲಿನ ಹಾಗೆ ಗಂಡನ ಜೊತೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಕಾರಣದಿಂದಾಗಿ ಇಬ್ಬರಲ್ಲು ಜಗಳ ಪ್ರಾರಂಭವಾಗಿ ಅದು ತಾರಕಕ್ಕೇರಿ ಅವಳು ಮುನಿಸಿಕೊಂಡು ತವರಿಗೆ ಬಂದಳು.ತಿಂಗಳಾದರು ಇಬ್ಬರಿಗು ಮುನಿಸು ಇಳಿದಿರಲಿಲ್ಲ.ಒಂದು ದಿನ ರಾಮನಾಥನಿಗೆ ಟೆಲಿಗ್ರಾಂ ಬಂದಿತು ಕಲ್ಯಾಣಿಗೆ ಅನಾರೋಗ್ಯವೆಂದು. ತಕ್ಷಣ ರಾಮನಾಥ ಮೈಸೂರಿಗೆ ಹೊರಟನು.ಮನೆಗೆ ಬಂದಾಗ ಬಾಗಿಲು ತೆರೆದ ಅತ್ತೆ "ಕಲ್ಯಾಣಿಯು ನಿನ್ನನ್ನೆ ಕಾಣಲು ಹೊರಟಳು.ಗಾಬರಿಯಾಗಬೇಡ ಅವಳು ತಾಯಿಯಾಗುತ್ತಿದ್ದಾಳೆ.ಹೆರಿಗೆಯ ಸಮಯದಲ್ಲಿ ತಾನು ಸಾಯಬಹುದೆಂಬ ಭಯದಲ್ಲಿ ಬದುಕಿರುವ ಆರು ತಿಂಗಳು ನಿನ್ನ ಜೊತೆಯಲ್ಲಿಯೇ ಇರುತ್ತೇನೆಂದು ಹೊರಟಳು." ಸಂತೋಷಗೊಂಡ ರಾಮನಾಥ "ಅವಳನ್ನು ಸಾಯುವುದಕ್ಕೆ ಬಿಡುವರಾರು ಅತ್ತೆ??" ಎಂದು ಹೇಳಿ ತಕ್ಷಣವೇ ಹಿಂತಿರುಗುತ್ತಾನೆ.
೨. ಸೋತು ಗೆದ್ದವಳು
ಆನಂದನ ಜೊತೆ ಚೆಲುವೆ ಭಾರತಿಯ ಮದುವೆ ನಡೆಯಿತು. ಮದುವೆಗೆ ಬಾರದಿದ್ದ ಸೋದರಮಾವ ಚಂದು ಬಂದಾಗ ಮಡದಿಗೆ ಪರಿಚಯ ಮಾಡಿದನು.ಕಲಾವಿದನಾದ ಚಂದು ಸಹಜವಾಗಿ ಅವಳ ಸೌಂದರ್ಯಕ್ಕೆ ಮಾರುಹೋದನು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆನಂದನು ಇಂಗ್ಲೆಂಡ್ ಗೆ ಹೊರಟನು. ವರ್ಷದ ನಂತರ ಮನೆಗೆ ಬಂದ ಚಂದು ದೀಪ ಹಾಕುವ ನೆಪದಲ್ಲಿ ಅವಳನ್ನು ಸ್ಪರ್ಶಿಸಿದಾಗ ಒಂದು ಕ್ಷಣ ಮೈಮರೆತಳು. ವಯೋಸಹಜವಾದ ಆಕರ್ಷಣೆಯಿಂದ ಅವನೊಡನೆ ಸಹಕರಿಸಿದಳು. ನಂತರ ಭಾರತಿಗೆ ಚಂದು "ನಾವಿಬ್ಬರು ದೂರ ಹೋಗಿ ಒಟ್ಟಾಗಿ ಬಾಳೋಣ" ಎಂದು ಹೇಳಿದನು. ಕ್ಷಣಿಕ ಸುಖಕ್ಕಾಗಿ ನಡೆದ ತಪ್ಪಿಗೆ ಗಂಡನಲ್ಲಿ ಕ್ಷಮೆ ಕೇಳಿ ಸಾಯುವೆನೆಂದು ಭಾರತಿ ನಿರ್ಧರಿಸಿದಳು. ಅನಿವಾರ್ಯ ಕಾರಣದಿಂದ ಆನಂದ ಹಿಂದಿರುಗಿದನು. ಬಂದ ಗಂಡನೊಡನೆ ನಡೆದಿದ್ದೆಲ್ಲವನ್ನು ಹೇಳಿ "ನನ್ನನ್ನು ಕ್ಷಮಿಸಿ" ಎಂದಳು. ಆಗ ಆನಂದನು ಮಡದಿಯೊಡನೆ "ನಾನು ಲಂಡನ್ ನಲ್ಲಿದ್ದಾಗ ಇದೆ ತಪ್ಪನ್ನು ಮಾಡಿದ್ದೇನೆ ನಿನ್ನನ್ನು ಕ್ಷಮಿಸುವ ಹಕ್ಕು ನನಗಿಲ್ಲ, ನಮ್ಮಿಬ್ಬರ ಪ್ರೀತಿಯ ನಡುವೆ ನೀತಿಯ ಪ್ರಶ್ನೆ ಬೇಡ. ಇಬ್ಬರು ನವಜೀವನವನ್ನು ಪ್ರಾರಂಭಿಸೋಣ" ಎಂದನು.
೩. ದೂರದ ಬೆಟ್ಟ
ಸೀತಾರಾಮು ತನ್ನ ವಿಧವೆ ತಂಗಿ ಸುನಂದಳಿಗೆ ತನ್ನ ಗೆಳೆಯನೊಡನೆ ಮದುವೆ ಮಾಡುವ ಉದ್ದೇಶದಿಂದ ಶ್ರೀಧರನನ್ನು ತಂಗಿಗೆ ಪರಿಚಯಿಸಿದನು. ಪರಸ್ಪರ ಮಾತನಾಡಿಕೊಂಡ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ನಂತರ ಅವಳು ತನ್ನಲ್ಲಾಗುತ್ತಿದ್ದ ಮಾನಸಿಕ ಬದಲಾವಣೆಗಳನ್ನು ಗಮನಿಸಿ ಮನೋವೈದ್ಯರಲ್ಲಿಗೆ ಬಂದಳು. ವಿವರವನ್ನು ಪಡೆದ ವೈದ್ಯರು "ನಿನ್ನ ಅಣ್ಣನನ್ನು ಕಳಿಸು" ಎಂದರು. ಬಂದ ಅಣ್ಣನೊಡನೆ ಸುನಂದಳ ವರ್ತನೆಯನ್ನು ಗಮನಿಸಿ "ನಾಳೆ ಅವಳೊಂದಿಗೆ ಬಾ" ಎಂದು ಹೇಳಿ ಕಳಿಸಿದರು. ರಾತ್ರಿ ಸ್ವತಃ ತಂಗಿಯೆ ಅವಳ ಕೆಲವು ವಸ್ತುಗಳನ್ನು ಬಾವಿಗೆ ಹಾಕುವುದನ್ನು ನೋಡಿದನು. ಮಾರನೆ ದಿನ ಅವಳೊಂದಿಗೆ ವೈದ್ಯರಲ್ಲಿಗೆ ಬಂದು ವಿಷಯವನ್ನು ತಿಳಿಸಿದನು. ಅಲ್ಲೆಯಿದ್ದ ಅವಳು ನಾನು ಹೀಗೆಲ್ಲ ಮಾಡ್ಡಿದ್ದೀನ ಎಂದಳು. ಆಗ ವೈದ್ಯರು ಸಂಪ್ರದಾಯ ಕುಟುಂಬದಲ್ಲೊ ಬೆಳೆದ ನಿನ್ನ ಮನದಲ್ಲಿ ವಿಧವಾ ವಿವಾಹವು ಧರ್ಮಬಾಹಿರ ಎಂಬ ಭಾವನೆ ಬೇರೂರಿದೆ. ಇದನ್ನೆಲ್ಲಾ ನೀನು ಬೇರು ಸಹಿತ ಕಿತ್ತು ಹಾಕಿ ಹೊಸದೃಷ್ಟಿಯಿಂದ ಬಾಳ್ವೆ ನಡೆಸು ಎಂದು ಅವಳಲ್ಲಿ ಧೈರ್ಯ ತುಂಬಿದರು.
ತ್ರಿವೇಣಿಯವರು ಮೇಲ್ಕಂಡ ಮೂರು ಕಥೆಗಳಲ್ಲೂ ಸಂದರ್ಭ ಕ್ಕೆ ಸಿಲುಕಿ ಮಹಿಳೆಯಲ್ಲಾಗುವ ಮಾನಸಿಕ ಗೊಂದಲಗಳ ಬಗ್ಗೆ ವಿಭಿನ್ನವಾಗಿ ಚಿತ್ರಿಸಿದ್ದಾರೆ.ಈ ಎಲ್ಲಾ ಕಥೆಗಳಲ್ಲೂ ಮಹಿಳಾ ಸಮಸ್ಯೆಗಳೇ ಪ್ರಧಾನವಾಗಿದ್ದರೂ ಸಮಾಜದ ವಿರುದ್ಧವಾಗಿ ಇಲ್ಲ.
"ಭಾನು ಬೆಳಗಿತು" ಕಥೆಯಲ್ಲಿ ಉದ್ಯೋಗಸ್ಥ ಮಹಿಳೆಯು ಎದುರಿಸುವ ಸಮಸ್ಯೆ, ಅದರಿಂದ ಸಂಸಾರದಲ್ಲಾಗುವ ಏರುಪೇರುಗಳ ಬಗ್ಗೆ ಬರೆದಿದ್ದಾರೆ.
"ಸೋತು ಗೆದ್ದವಳು" ಕಥೆಯಲ್ಲಿ ವಿವಾಹವಾದ ಮಹಿಳೆ ಗಂಡನ ಅನುಪಸ್ಥಿತಿಯಲ್ಲಿ ವಯೋಸಹಜವಾದ ದೈಹಿಕ ಆಕರ್ಷಣೆಗೆ ಬಲಿಯಾಗಿ ನಂತರ ತಪ್ಪನ್ನರಿತು ಕ್ಷಣಿಕಸುಖಕ್ಕಿಂತ ಪ್ರೀತಿಯೇ ಶ್ರೇಷ್ಠ ವೆಂದು ಅರಿತು ಗಂಡನೊಂದಿಗೆ ನವಜೀವನ ವನ್ನು ಆರಂಬಿಸುತ್ತಾಳೆ.
"ದೂರದಬೆಟ್ಟ" ಕಥೆಯಲ್ಲಿ ವಿಧವಾ ವಿವಾಹವನ್ನು ಸಮಾಜ ಅಂಗೀಕರಿಸಿದ್ದರೂ ವಿವಾಹಕ್ಕೆ ಒಪ್ಪಿದ ಹೆಣ್ಣಿನ ಮನಸ್ಸಿನಲ್ಲಾಗುವ ಹೋರಾಟ ಮತ್ತು ತೊಳಲಾಟಗಳ ಬಗ್ಗೆ ಬಹಳ ಮನೋಜ್ಞವಾಗಿ ಬರೆದಿದ್ದಾರೆ.
ಸಂಸಾರ,ದೈಹಿಕ ಆಕರ್ಷಣೆ,ವಿಧವಾವಿವಾಹ ಎಂಬ ವಸ್ತು ವಿಷಯಗಳನ್ನು ಆಧರಿಸಿ ಮನಃಶಾಸ್ತ್ರಜ್ಞೆಯಾದ ತ್ರಿವೇಣಿಯವರು ಈ ಮೂರು ಕಥೆಗಳನ್ನು ಬಹಳ ಅದ್ಬುತ ವಾಗಿ ಬರೆದಿದ್ದಾರೆ. ಅವರ ಬರವಣಿಗೆಯ ಶೈಲಿ ಸರಳವಾಗಿದ್ದು, ಮಹಿಳೆಯರ ಸಮಸ್ಯೆಗಳನ್ನು ಓದುಗರ ಮನ ಮುಟ್ಟುವಂತೆ ಬರೆಯುವುದರಲ್ಲಿ ಅವರು ಅದ್ವಿತೀಯರೆನಿಸಿದ್ದಾರೆ.ಅವರು ರಚಿಸಿರುವ ಎಲ್ಲಾ ಕಾದಂಬರಿಗಳು ಇಂದಿಗೂ ಪ್ರಸ್ತುತವೆನಿಸಿವೆ.
- ಗೀತಾ ಕೆ
- ಗೀತಾ ಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ