Pages

ಅನುವಾದ: "ಕಣ್ಣುಗಳು"


(ಓಲ್ಗಾರವರ ತೆಲುಗು ಕಥೆ)

ನನ್ನ ಕಣ್ಣುಗಳು ಸುಂದರವಾಗಿವೆ ಎನ್ನುತ್ತಾಳೆ ಅಮ್ಮ. ಕಣ್ಣ ತುಂಬ ಕಾಡಿಗೆ ಹಚ್ಚುತ್ತಾಳೆ. ಹಳದಿ ಕೆನ್ನೆಗಳ ಮೇಲೆ ಕಪ್ಪು ಕಾಡಿಗೆ, ಬಿಳಿ ಕಣ್ಣುಗಳಲ್ಲಿ ಕಪ್ಪು ಕಾಡಿಗೆ. ನಿನ್ನ ಕಣ್ಣುಗಳಲ್ಲಿ ಅದೆಷ್ಟು ಕಳೆ ಇದೆಯೇ ಎನ್ನುತ್ತಾಳೆ ಅತ್ತಿಗೆ ಕೂಡ.
ನಿಜ ನನ್ನ ಕಣ್ಣುಗಳು ದೊಡ್ಡವು. ಆದರೆ ಏನು ಲಾಭ. ಅವರ ರಾಮನದು ಹುಣಿಸೆ ಎಲೆಯಷ್ಟು ಕಣ್ಣುಗಳು. ನನಗೂ ಹತ್ತು ವರ್ಷಗಳೇ. ಅವನಿಗೂ ಹತ್ತು ವರ್ಷಗಳೇ. ಅವನಿಗಿಂತ ನಾನೇ ಹತ್ತು ದಿನ ದೊಡ್ಡವಳು. ಆದರೆ, ನಮ್ಮ ಊರಿನಲ್ಲಿ ಅವನು ನೋಡಿರುವ ವಿಚಿತ್ರಗಳಲ್ಲಿ ನೂರನೇ ಒಂದು ಭಾಗವನ್ನೂ ನಾನು ನೋಡಿಲ್ಲ.
ಮೊನ್ನೆ ಒಂದು ದಿನ ಮನೆ ಬಾಗಿಲಲ್ಲಿ ಒಂದು ದೊಡ್ಡ ಗಲಾಟೆ ನಡೆಯಿತು. ನಾನು ಹೊರಗಡೆ ಓಡಿ ಹೋಗಿ ಗುಂಪಿನಲ್ಲಿ ನಿಂತುಕೊಂಡೆ. ಎಲಿಂ್ಲದ ಬಂದನೊ ಏನೊ ನಮ್ಮ ಅಣ್ಣ ಭರಭರನೆ ಎಳೆದುಕೊಂಡು ಬಂದು ಮನೆಯಲ್ಲಿ ಹಾಕಿದ.
“ಹೆಣ್ಣು ಹುಡುಗಿ, ಭಯಭಕ್ತಿಯಿಲ್ಲದೆ ಅಲ್ಲಿ ಹೇಗೆ ನಿಂತುಕೊಂಡಿದ್ದೀಯೆ? ಆ ಅರಚಾಟ ಮನೆಯ ಒಳಗಿನಿಂದ ಕೇಳಿದರೇನೆ ಎದೆ ಡವಡವ ಎಂದು ಹೊಡೆದುಕೊಳ್ಳುತ್ತಿದ್ದರೆ” ಅಂದಳು ಅಮ್ಮ.
“ನನಗೆ ಭಯವಾಗಲಿಲ್ಲ” ಎಂದರೆ ಎಲ್ಲರೂ ಬೈದುಬಿಟ್ಟರು. ನಮ್ಮ ಅತ್ತಿಗೆಯ ಭಯ ನೋಡಿದರೆ ನಮ್ಮ ಅಣ್ಣನಿಗೆ ಎಷ್ಟು ಖುಷಿಯೊ. ಅತ್ತಿಗೆಯನ್ನು ಭಯಪಡಿಸಿ ಆಕೆ ಹೆದರಿಕೊಳ್ಳುತ್ತಿದ್ದರೆ ಅವನು ಕಿಲಕಿಲನೆ ನಗುತ್ತಾನೆ. ಅತ್ತಿಗೆಯೂ ಅಷ್ಟೇ – ಮಾತೆತ್ತಿದರೆ “ಅಮ್ಮೊ, ಭಯ” ಎನ್ನುತ್ತಾ ಕಣ್ಣು ಮುಚ್ಚಿಕೊಳ್ಳುತ್ತಾಳೆ. 
“ಕಣ್ಣು ತೆಗೆದು ನೋಡತ್ತಿಗೆ, ಏನೂ ಇಲ್ಲ” ಎಂದರೂ ಕಣ್ಣು ತೆರೆಯುವುದಿಲ್ಲ. ಅತ್ತಿಗೆಯ ಕಣ್ಣು ಕೂಡ ದೊಡ್ಡವೇ. ಆದರೆ ಏನು ಲಾಭ, ಅತ್ತಿಗೆಗೆ ಕಣ್ಣು ಮುಚ್ಚಿಕೊಳ್ಳುವುದೇ ಚೆನ್ನಾಗಿರುತ್ತದೆ. ರಸ್ತೆಗೆ ಬರುತ್ತಾರಾ – ಅಮ್ಮ, ಅತ್ತಿಗೆ ತಲೆ ಎತ್ತುವುದಿಲ್ಲ. ಅವರ ಕಣ್ಣುಗಳು ನೆಲದ ಮೇಲೆಯೇ. ನೆಲದ ಮೇಲೆ ಏನಿರುತ್ತದೆ, ಒಂದು ವೇಳೆ ಇದ್ದರೂ ಎಷ್ಟು ದಿನ ಅಂತಾ ಅವನ್ನೇ ನೋಡುತ್ತೇವೆ? ದಾರಿಯಲ್ಲಿ ಏನಿದೆಯೋ ಸರಿಯಾಗಿ ನೋಡುವುದೇ ಇಲ್ಲ. ಮೇಲೆ ಅಮ್ಮ ನನ್ನನ್ನೇ ಬಯ್ಯುತ್ತಾಳೆ.
“ಹಾಗೆ ಏನದು ದಿಕ್ಕುಗಳನ್ನು ನೋಡುವುದು? ತಲೆಬಗ್ಗಿಸಿ ನಡೆ. ನೆಲ ನೋಡು” ಅನ್ನುತ್ತಾ ತಲೆ ಮೇಲೆ ಮೊಟಕುತ್ತಾಳೆ.
ಅಮ್ಮೊ, ಖಂಡಿತ ನಾನು ಹಾಗೆ ನಡೆಯಲಾರೆ. ಬೀದಿಗೆ ಬಂದ ಮೇಲೆ ಆಕಡೆ, ಈಕಡೆ ನೋಡದಿದ್ದರೆ ನನಗೆ ಎಲ್ಲಾ ಹೇಗೆ ಗೊತ್ತಾಗುತ್ತೆ. ಇಪ್ಪತ್ನಾಲ್ಕು ಘಂಟೆಗಳ ಕಾಲ ಬೀದಿಯಲ್ಲಿ ತಿರುಗುವ ರಾಮ ನನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನಾ?
ಆದರೆ ಅವನಿಗೆ ಕೂಡ ಸಾಕಷ್ಟು ಗೊತ್ತಿಲ್ಲ. ಹೆಣ್ಣುಮಕ್ಕಳು ಕೆಲವನ್ನು ಮಾತ್ರ ನೋಡಿದರೆ ಸಾಕು ಎಂಬುದು ಅವನಿಗೆ ಗೊತ್ತಿಲ್ಲ. ಆದರೆ ಅಮ್ಮನಿಗೆ ಅದು ಚೆನ್ನಾಗಿ ಗೊತ್ತು.
ನಮ್ಮ ದೇಹವನ್ನು ಕೂಡ ನಾವು ಸರಿಯಾಗಿ ನೋಡಿಕೊಳ್ಳಕೂಡದು. ಅಮ್ಮ ಕಿರುಚಿಕೊಳ್ಳುತ್ತಾಳೆ. ‘ಏನದು ನೋಡಿಕೊಳ್ಳುವುದು’ ಎಂದು. ದೊಡ್ಡವರಾಗುತ್ತಿದ್ದಂತೆ ಗಂಡಸರನ್ನು ನೋಡಬಾರದು. ಈಗ ನಾನು ರಾಮನೊಂದಿಗೆ ಆಡಿಕೊಳ್ಳಬಹುದು. ಆದರೆ ಇನ್ನೆರಡು ದಿನಗಳಾದರೆ ಅವನೊಂದಿಗೆ ಆಡಬಾರದು. ರಾವi ಕಾಣಿಸಿದರೆ ಮನೆಯೊಳಗೆ ಬಂದು ಬಿಡಬೇಕು. ಮಾರ್ಕೆಟ್‍ನಲ್ಲಿ ಕಾಣಿಸಿದರೆ ತಲೆ ಮೇಲಕ್ಕೆತ್ತದೆ, ಕಣ್ಣು ಮಾತ್ರ ಮೇಲೆತ್ತಿ ನೋಡಬೇಕು. ನಮ್ಮ ಪಕ್ಕದ ಮನೆಯ ಪದ್ಮಕ್ಕ ಹಾಗೆ ನೋಡುತ್ತಾಳೆ. ‘ಯಾಕಕ್ಕ, ಹಾಗೆ ನೋಡುತ್ತೀಯ?’ ಅಂದರೆ ‘ಹಾಗೆ ನೋಡಿದರೇನೆ ಬಹಳ ಅಂದವಾಗಿರುತ್ತದೆ’ ಅನ್ನುತ್ತಾಳೆ. ನನಗಿನ್ನೂ ಹಾಗೆ ನೋಡುವುದು ಬರುತ್ತಿಲ್ಲ. ಯಾವಾಗ ಬರುತ್ತದೊ ಏನೋ. ರಾಮನಿಗಾದರೆ ಸತ್ತರೂ ಬರುವುದಿಲ್ಲ.
ಹೆಣ್ಣು ಮಕ್ಕಳ ಕಣ್ಣುಗಳಲ್ಲಿ ನೀರು ಬೇಗ ಬರಬೇಕಂತೆ. ಮೊನ್ನೆ ಅಮ್ಮ ಪಕ್ಕದ ಮನೆಯವರನ್ನು ಬೈದುಕೊಳ್ಳುತ್ತಿದ್ದಳು, “ಕಲ್ಲು ಮನಸ್ಸು, ಒಂದು ಹನಿ ಕಣ್ಣೀರು ಬರಲಿಲ್ಲ.” ಹೆಣ್ಣುಮಕ್ಕಳಿಗೆ ಸುಮ್ಮಸುಮ್ಮನೆ ಕಣ್ಣೀರು ಬರಬೇಕಂತೆ. ನನಗೇನೋ ಕೋಪ ಬರುತ್ತದೆಯೇ ಹೊರತು ಕಣ್ಣೀರು ಬರುವುದಿಲ್ಲ. ನನ್ನನ್ನು ಸುಮ್ಮಸುಮ್ಮನೆ ಬೈದರೆ ಕೋಪ ಬರುತ್ತದೆ. ಅತ್ತಿಗೆಗಾದರೆ ಅಳು ಬರುತ್ತೆ. ಆಗ ಅಣ್ಣನ ಕೋಪ ಕಡಿಮೆಯಾಗುತ್ತೆ.
“ಸಾಕು ಬಿಡು, ಆ ಅಳು ನಿಲ್ಲಿಸು,” ಅನ್ನುತ್ತಾನೆ. ಆದರೂ ಅತ್ತಿಗೆ ಬಿಕ್ಕಿಬಿಕ್ಕಿ ಅಳುತ್ತಾಳೆ. ಅಣ್ಣ ಅತ್ತಿಗೆ ಜಗಳವಾಡಿದರೆ ಯಾವಾಗಲೂ ಅತ್ತಿಗೆಯ ಅಳುವುದು. ಅಣ್ಣ ಒಂದು ಸಾರಿಯೂ ಅತ್ತಿಲ್ಲ. ಅಪ್ಪ, ಅಮ್ಮ ಆದರೂ ಅಷ್ಟೇ. ಯಾವಾಗಲೂ ಅಮ್ಮನೇ ಅಳಬೇಕು. ನನಗೆ ಅಳು ಅಂದ್ರೆ ಇಷ್ಟವಿಲ್ಲ. ಅತ್ತರೆ ನನ್ನ ಕಣ್ಣುಗಳು ಏನೂ ಚೆನ್ನಾಗಿರುವುದಿಲ್ಲ.  ಮುಖವೆಲ್ಲಾ ಕಪ್ಪಾಗುತ್ತದೆ. ನಾನ್ಯಾವಾಗಲೂ ಅಳುವುದಿಲ್ಲಪ್ಪ.
ನಮ್ಮ ಕಣ್ಣುಗಳಿಗೆ ಏನು ಕಂಡರೂ ಸರಿಯೇ ಏನೂ ಅನ್ನಬಾರದಂತೆ, ಏನೂ ಮಾಡಬಾರದಂತೆ. ನನಗೆ ಅಪ್ಪನ ಕೈಯಲ್ಲಿ ಮಾವಿನಹಣ್ಣಿನ ಬುಟ್ಟಿ ಕಾಣಿಸಿದರೆ – ‘ಓ ಮಾವಿನಹಣ್ಣು’ ಎಂದು ಎಗರಬೇಕೆಂದೆನಿಸುತ್ತೆ. ಆದರೆ ಎಗರಬಾರದಂತೆ. ಆ ಮಾವಿನಹಣ್ಣು ನಮ್ಮ ತಟ್ಟೆಯಲ್ಲಿ ಬರುವವರೆಗೆ ಕೂಗಬಾರದಂತೆ. ನಮ್ಮ ತಟ್ಟೆಗೆ ಬಂದ ನಂತರ ಸಮಾಧಾನವಾಗಿ ತಿನ್ನಬೇಕಂತೆ. ಮಾವಿನ ಹಣ್ಣು ನೋಡಿದ ತಕ್ಷಣ ಎಗರದಿದ್ದರೆ ನೋಡಿದ ಭಾಗ್ಯವೇನು? ಹಾಗೆಯೇ ಕೋಪ ಬಂದರೂ ಕಿರುಚಬಾರದಂತೆ.
ಒಮ್ಮೆ ಏನಾಯಿತೆಂದರೆ, ಕಲ್ಯಾಣಿ ಅಕ್ಕ ಕಾಲೇಜಿನಿಂದ ಬರುತ್ತಿದ್ದರೆ, ಒಂದು ಹುಡುಗ ಸೈಕೆಲ್ ಮೇಲಿನಿಂದ ಬಿದ್ದು ಹೋದನಂತೆ, ಕಾಲು ಉಳುಕಿ ಏಳಲಿಕ್ಕಾಗಲಿಲ್ಲವಂತೆ. ದಾರಿಯಲ್ಲಿ ಯಾರೂ ಇರಲಿಲ್ಲ. ಕಲ್ಯಾಣಿ ಅಕ್ಕ ಅವನನ್ನು ಎಬ್ಬಿಸಿ, ಸೈಕೆಲ್ ಎತ್ತಿ ಕಂಬಕ್ಕೆ ಒರಗಿಸಿ ನಿಲ್ಲಿಸಿದಳಂತೆ. ಆ ಹುಡುಗ ಕಾಲು ಸರಿಮಾಡಿಕೊಳ್ಳುತ್ತಿದ್ದಾಗ, ಬೀಳದಂತೆ ಹಿಡಿದುಕೊಂಡಳಂತೆ. ಇದೆಲ್ಲ ನಮ್ಮ ಎದುರ ಮನೆ ಅಂಕಲ್ ನೋಡಿ ಕಲ್ಯಾಣಿಯವರ ತಂದೆಯ ಹತ್ತಿರ ಹೇಳಿದರಂತೆ. ಅವರು ಕಲ್ಯಾಣಿ ಅಕ್ಕನನ್ನು ಚೆನ್ನಾಗಿ ಹೊಡೆದರಂತೆ.
‘ಪರಗಂಡಸನ್ನು ರೋಡಿನಲ್ಲಿ ತಬ್ಬಿಕೊಳ್ಳುತ್ತೀಯಾ’ ಅಂತಾ ಬೈಯ್ಯುತ್ತಾ ಹೊಡೆದರಂತೆ.
“ಬಿದ್ದ, ಅದಕ್ಕೆ ಎಬ್ಬಿಸಿದೆ” ಎಂದರೆ, “ನೋಡಿದರೆ ಏನಂತೆ, ನಿನ್ನ ಪಾಡಿಗೆ ನೀನು ಬರಬೇಕಾಗಿತ್ತು, ದೇಶಸೇವೆ ಮಾಡ್ತೀಯ” ಅಂತಾ ಬೈದರಂತೆ.
ಕಲ್ಯಾಣಿ ಅಕ್ಕನ ಅಪ್ಪ ನನಗೆ ಮಾವನೇ, ಆದರೆ ಇದಾದ ನಂತರ ನನಗೆ ಕೋಪ ಬಂದು, ನಾನು ಅವರನ್ನು ಮಾತಾಡುವುದನ್ನು ನಿಲ್ಲಿಸಿಬಿಟ್ಟಿದ್ದೀನಿ. ನೋಡಿದ ಮೇಲೆ ಏನಾದ್ರೂ ಮಾಡಬೇಕಲ್ಲವೇ? ಇಲ್ಲದಿದ್ದರೆ ನೋಡುವುದೇಕೆ? ನೋಡುವ ಮುನ್ನ, ನೋಡಿದ ನಂತರ ಒಂದೇ ರೀತಿ ಇದ್ದರೆ, ನೋಡುವುದೇಕೆ? ಅಂದರೆ ಅಮ್ಮನಿಗೆ ಅರ್ಥವಾಗುವುದಿಲ್ಲ. ಬಾಯ್ಮುಚ್ಚು ಎನ್ನುತ್ತಾಳೆ.
ಕಣ್ಣು ಮುಚ್ಚಿಕೊಳ್ಳಬೇಕು, ಬಾಯಿ ಮುಚ್ಚಿಕೊಳ್ಳಬೇಕು. ನಮ್ಮ ಅಣ್ಣ ಆಫಿûೀಸಲ್ಲಿ ಕೆಲಸ ಮಾಡುವಾಕೆ ಮನೆಗೆ ಬಂದಿದ್ದರು. ಆಕೆ ಎಷ್ಟು ಚೆನ್ನಾಗಿ ನಗುತ್ತಾರೊ. ಆದರೆ ವಿಚಿತ್ರ ಎಂದರೆ ಆಕೆ ಬೊಟ್ಟು ಇಟ್ಟುಕೊಂಡಿರಲಿಲ್ಲ. ಕಾಡಿಗೆ ಇಟ್ಟುಕೊಂಡಿರಲಿಲ್ಲ. ಆದರೂ ಎಷ್ಟು ಚೆನ್ನಾಗಿದ್ದರೊ. ಇರುವವರೆಗೂ ಚೆನ್ನಾಗಿ ನಗುತ್ತಿದ್ದರು. ಆದರೆ ಅವರು ಅಮ್ಮನಿಗೆ, ಅತ್ತಿಗೆಗೆ ಹಿಡಿಸಲಿಲ್ಲವಂತೆ. ಮುಖದಲ್ಲಿ ಬೊಟ್ಟು ಇಲ್ಲದಿದ್ದರೆ, ಕುತ್ತಿಗೆಯಲ್ಲಿ ಸರ ಹಾಕಿಕೊಳ್ಳದಿದ್ದರೆ, ಆಕೆಯ ಮುಖ ಚೆನ್ನಾಗಿಲ್ಲವಂತೆ.
“ನಿಜವಾಗಲೂ ಚೆನ್ನಾಗಿಲ್ಲವೇನಮ್ಮ” ಎಂದು ಎಷ್ಟು ಸಾರಿ ಕೇಳಿದೆನೊ?
“ನನ್ನ ಕಣ್ಣುಗಳಿಗೆ ಹಾಗೆ ಕಾಣಿಸಿತೆ. ಬೊಟ್ಟು ಇರದ ಮುಖವನ್ನು ನೋಡಲು ನನಗಂತೂ ಇಷ್ಟವಾಗಲಿಲ್ಲ” ಅಂದಳು ಅಮ್ಮ.
ಅಮ್ಮನಂತಾದರೆ ನನ್ನ ಕಣ್ಣುಗಳು ಅಮ್ಮನಂತೆ ಬದಲಾಗಿಬಿಡುತ್ತದಾ. ಅಮ್ಮೊ, ಆ ರೀತಿ ಬದಲಾಗಿಬಿಟ್ಟರೆ ನನ್ನ ಕಣ್ಣುಗಳಿಗೆ ಏನೂ ಕಾಣಿಸುವುದಿಲ್ಲ. ‘ಎಲ್ಲೆಲ್ಲಿಯವೊ ನಿನ್ನ ಕಣ್ಣಿಗೆ ಕಾಣಿಸುತ್ತವಲ್ಲೇ’ ಎಂದು ಅಮ್ಮ ಅಂತಿರ್ತಾಳೆ. ಅಮ್ಮನ ಕಣ್ಣಿಗೆ ಏನೂ ಕಾಣಿಸುವುದಿಲ್ಲ. ಕಾಣಿಸಿದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಣ್ಣುಮಕ್ಕಳ ಕಣ್ಣುಗಳು ಹೀಗೇಕೆ ಇರುತ್ತವೆ?

ಸುಧಾ ಜಿ

ಕಾಮೆಂಟ್‌ಗಳಿಲ್ಲ: