Pages

ಪುಸ್ತಕ ಪ್ರೀತಿ: "ತ್ರಿವೇಣಿಯವರ ಮೂರು ಕಾದಂಬರಿಗಳು"



ವಸಂತಗಾನ 

ಸರಳ ಮತ್ತು ವಾಸು ಮದುವೆಯಾದ ನಾಲ್ಕು ವರ್ಷಗಳ ನಂತರ ಪ್ರವಾಸಕ್ಕೆ ಹೊರಟಿದ್ದರು. ಯಾವಾಗಲೂ ತಿನ್ನುತ್ತಲೆ ಇರುವ ಮಡದಿಯನ್ನು ಕೀಟಲೆ ಮಾಡುತ್ತಿದ್ದ ವಾಸು. ಗಂಡನಿಗೆ ಸರಿಯಾದ ಉತ್ತರವನ್ನ ನೀಡುತ್ತಿದ್ದಳು ಸರಳಾ. ಊರಿಂದ ಬಂದ ಅಮ್ಮನಿಗೆ ವಾಸು "ಸರಳಾ ಗರ್ಭಿಣಿಯಾಗಿದ್ದಾಳೆ, ನಮ್ಮ ಪ್ರವಾಸ ರದ್ದಾಯಿತು" ಎಂದು ತಿಳಿಸಿದ. ವಿಷಯ ತಿಳಿದ ರಂಗಮ್ಮ ಸಂತಸದಿಂದ ಸೊಸೆಗೆ ಊಟಉಪಚಾರಗಳನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಅತ್ತೆಯ ಉಪಚಾರದಿಂದ ಗುಂಡು ಗುಂಡಾದ ಮಡದಿಗೆ ಹೆಣ್ಣಾದರೆ ಪೂತನಿ, ಗಂಡಾದರೆ ಬಕಾಸುರನೆಂದು ಹೆಸರಿಡಬಹುದು ಎಂದು ಕೀಟಲೆ ಮಾಡುತ್ತಿದ್ದನು. ಡಾಕ್ಟರ್ ಕೊಟ್ಟ ಅವಧಿ ಮುಗಿದರೂ ಹೆರಿಗೆ ನೋವು ಬರಲಿಲ್ಲ. ಅತ್ತೆ ಊಟಕ್ಕೆ ಕರೆದಾಗ "ಊಟ ಮಾಡುವುದಿಲ್ಲ ಅತ್ತೆ, ನಿಮ್ಮ ಮೊಮ್ಮಗನಿಗೆ ಉಪವಾಸ ಹಾಕುತ್ತೀನಿ. ಆಗ ಆಚೆ ಬರುತ್ತಾನೆ, ಹೊರಗೆ ಬರಲಿ ಅವನು, ಚೆನ್ನಾಗಿ ಕಿರುಗುಟ್ಟಿಸ್ತೀನಿ" ಎನ್ನುತ್ತಿದ್ದಂತೆಯೇ ಹೆರಿಗೆ ನೋವು ಕಾಣಿಸಿಕೊಂಡಿತು. ಗಂಡುಮಗುವಿಗೆ ಜನ್ನವಿತ್ತಳು ಸರಳಾ. ಮಗು ಅಳಲು ಮಡದಿಗೆ "ಈಗ ಹಾಲು ಕೊಡಬೇಡ ನೆನ್ನೆ ಹೇಳಿದೆ ಅಲ್ವಾ? ಅದಕ್ಕೆ ಜ್ಞಾಪಿಸಿದೆ" ಎಂದನು. ಅದಕ್ಕೆ ಸರಳಾ "ಹಾಲುಕಂದನಿಗೆ ಹಾಗೆಲ್ಲಾ ಹಿಂಸೆ ಕೊಡಕ್ಕೆಆಗುತ್ತೇನ್ರಿ?" ಎಂದು ಗಂಡನನ್ನು ಸುಮ್ಮನಿರಿಸಿದಳು. 

 ಮೊದಲ ಹೆಜ್ಜೆ 

"ಮಗು ಅಳ್ತಾಯಿದೆ, ಎತ್ಕೋಬಾರದಾ, ಶ್ಯಾಮಲ?" ಎಂದು ಸಿಸ್ಟರ್ ಹೇಳಿದಾಗ ಎಚ್ಚರಗೊಂಡಳು. "ನಿನ್ನ ಗಂಡ ಮಗುವನ್ನು ನೋಡಲು ಇನ್ನು ಏಕೆ ಬಂದಿಲ" ಲ ಎಂದಾಗ ಅವಳ ಮನಸ್ಸು ಹಿಂದಕ್ಕೆ ಓಡಿತು. ನೋಡಲು ತಾನು ಕಪ್ಪಾಗಿದ್ದು, ಸುಂದರವಾಗಿದ್ದ ತಂಗಿಗೆ ಮೊದಲು ಮದುವೆಯಾಗಿ ಅವಳ ಬಾಣಂತನಕ್ಕೆ ಬಂದಾಗ ಎದುರು ಮನೆಯ ಶಿವಸ್ವಾಮಿಯ ಬಣ್ಣದ ಮಾತಿಗೆ ಮರುಳಾಗಿ ಅವನಿಂದ ತಾನು ಗರ್ಭಿಣಿಯಾಗಿದ್ದೆನೆಂದು ತಿಳಿದಾಗ ಅವನು ಮನೆ ಖಾಲಿ ಮಾಡಿ ಹೋಗಿದ್ದು ಎಲ್ಲವು ನೆನಪಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಸಿಸ್ಟರ್ ಅವಳಿಗೆ " ನೋಡು ತಪ್ಪು ನಿನ್ನದು, ಮಗುವಿನದಲ್ಲ. ಅದನ್ನು ಸರಿಯಾಗಿ ಬೆಳೆಸು" ಎಂದು ಹೇಳಿದಳು. ಮಾರನೆ ದಿನಪತ್ರಿಕೆಯಲ್ಲಿ ಶಿಶುಹತ್ಯೆ ಸುದ್ದಿ ಬಂದಿತ್ತು. ಮಗುವನ್ನು ಕೊಂದ ಶ್ಯಾಮಲಳನ್ನು ಪೋಲೀಸರು ಬಂಧಿಸಿ ವಿಚಾರಿಸಿದಾಗ ಅವಳು "ಮಗುವಿಗೆ ನನ್ನಿಂದ ಏನು ಕೊಡಲು ಸಾಧ್ಯ? ಬೆಚ್ಚನೆಯ ಮನೆಯೆ? ವಿದ್ಯಾಭ್ಯಾಸವೆ? ಹೊಟ್ಟೆ ತುಂಬ ಅನ್ನವೆ? ನಾನೆ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದೆ ನನ್ನ ಮಗಳು ನನ್ನಂತೆ ಆಗಬಾರದೆಂದು ಕೊಂದೆ" ಎಂದು ಉತ್ತರಿಸಿದಳು. ಜೈಲಿನಲ್ಲಿದ್ದಾಗ ತನ್ನನ್ನು ನೋಡಲು ಬಂದ ಅಪ್ಪನನ್ನು ಭೇಟಿಯಾಗಲು ನಿರಾಕರಿಸಿದಳು. ಕಾರಣ ಅವರು ತನ್ನಲ್ಲಿ ಇಟ್ಟಿದ್ದ ನಂಬಿಕೆಯನ್ನು ತಾನು ಚೂರು ಮಾಡಿದ್ದೆ ಎಂದು. ಬಿಡುಗಡೆಯ ದಿನದಂದು ಸಾಹೇಬರ ರೂಮಿನ ಮುಂದೆ ಬಂದು ನಿಂತಾಗ ಯಾರೋ "ನನ್ನ ಹೆಸರು ಶಿವಸ್ವಾಮಿ, ನಾನು ಹತ್ತು ವರ್ಷದ ಹುಡುಗಿಯನ್ನ ಅತ್ಯಾಚಾರ ಮಾಡಲು ಹೋದಾಗ ಹುಡುಗಿಗೆ ಆಘಾತದಿಂದ ಪ್ರಾಣ ಹೋಯಿತು" ಎಂದಿದ್ದು ಇವಳ ಕಿವಿಗೆ ತಲುಪಿತು. ಶ್ಯಾಮಲಳನ್ನು ಕಂಡ ಸಾಹೇಬರು ಬಿಡುಗಡೆಯಾದ ನಂತರ "ನೀನು ತಂದೆ ಮನೆಗೆ ಹೋಗುವೆಯ?" ಕೇಳಿದರು. ಅದಕ್ಕೆ ಅವಳು "ಇಲ್ಲ ಸರ್ ನಾನು ಅವರ ವಂಶಕ್ಕೆ ಮಸಿ ಬಳಿದಿದ್ದೇನೆ " ಎಂದು ಅವರು ತಿಳಿದುಕೊಂಡಿದ್ದಾರೆ. ಆದ್ದರಿಂದ ನಾನು ಅಲ್ಲಿಗೆ ಹೋಗುವುದಿಲ್ಲ" ಎಂದು ಹೇಳಿ ಹೊರಬಂದಾಗ ಜೋರಾದ ಮಳೆ ಬರುತ್ತಿತ್ತು. "ಶ್ಯಾಮಲ" ಎಂದು ಕರೆದಾಗ ಬೆಚ್ಚಿದ ಅವಳನ್ನು "ಯಾಕಮ್ಮ ನನ್ನ ಗುರುತು ಸಿಗಲಿಲ್ಲವೆ ? ನಾನು ನಿನ್ನ ತಂದೆ" ಎಂದರು. "ಅಪ್ಪ ಎಷ್ಟು ವಯಸ್ಸಾದವರ ಹಾಗೆ ಕಾಣುತ್ತೀರ?" ಎಂದಾಗ "ಹೌದಮ್ಮ ಮುದುಕ ಆಗ್ಬೀಟ್ಟಿದ್ದೀನಿ. ನಡೆಯಮ್ಮ ಹೋಗೋಣ" ಎಂದಾಗ "ಎಲ್ಲಿಗಪ್ಪ?" ಎಂದು ಕೇಳಿದಳು. "ನಮ್ಮ ಮನೆಗೆ ತಾಯಿ" ಉತ್ತರಿಸಿದರವರು. 

ಕಾಶಿಯಾತ್ರೆ 

10ನೇ ವಯಸ್ಸಿಗೆ ಮದುವೆಯಾಗಿ 13ನೆ ವಯಸ್ಸಿಗೆ ವಿಧವೆಯಾದ ಪಾತಮ್ಮ ದಿನವೂ ಕಪಿಲ ನದಿಯಲ್ಲಿ ಸ್ನಾನಮಾಡಿ ದೇವರ ದರ್ಶನ ಮಾಡುತಿದ್ದರು. ಕಾಶಿಗೆ ಹೋಗಿ ಗಂಗೇಲಿ ಸ್ನಾನಮಾಡಿ ಮುಕ್ತಿ ಹೊಂದಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು. ಪರೋಪಕಾರಿಯಾಗಿದ್ದ ಪಾತಮ್ಮ ಎಲ್ಲರಿಗೂ ತಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಡುತಿದ್ದರು. ತಾವೆ ಸಾಕಿ ಬೆಳೆಸಿದ್ದ ಶ್ಯಾಮಲಳು ಹೆರಿಗೆಗೆಂದು ಬಂದಿದ್ದಳು. ಪಾತಮ್ಮನೊಂದಿಗೆ ಅಜ್ಜಿ "ನಾನು ಸತ್ತರೆ ನನ್ನ ಮಗಳನ್ನು ನೀವೆ ಸಾಕಬೇಕೆಂದು" ಆಣೆ ಮಾಡಿಸಿಕೊಂಡಳು. ಹೆರಿಗೆಯಾದ ನಂತರ ಶ್ಯಾಮಲ ತೀರಿಹೋದಳು. ಪಾತಮ್ಮ ಮಗುವಿಗೆ ಮಂಗಳ ಎಂದು ಹೆಸರಿಟ್ಟಳು. ಮಂಗಳ ತಾತನ ಹತ್ತಿರ ಹೋಗದೆ ಸದಾ ಇವರ ಬಳಿಯೆ ಇರುತ್ತಿದ್ದಳು. ಮುದ್ದಾಗಿದ್ದ ಮಂಗಳ ಮದುವೆಯ ವಯಸ್ಸಿಗೆ ಬಂದಾಗ ಊರಿನ ವೈದ್ಯನಾದ ನರಹರಿಯು ಅವಳನ್ನು ಮೆಚ್ಚಿದನು. ಆದರೆ ನರಹರಿಯ ತಂದೆ "ನಿನ್ನ ಕ್ಲಿನಿಕ್ಕಿಗಾಗಿ ಮಾಡಿರುವ 2000ರೂಗಳನ್ನು ಅವರ ಹತ್ತಿರ ತೆಗೆದುಕೊ, ನಂತರ ಮದುವೆ" ಎಂದರು. ಇದನ್ನು ನರಹರಿಯು ಮಂಗಳಾಳಿಗೆ ಹೇಳಿದನು. ಮಂಗಳ ತಾತನ ಹತ್ತಿರ ಹೇಳಿದಳು. ಆದರೆ ಅವರಿಗೆ ಹಣವನ್ನು ಹೊಂದಿಸಲಾಗಲಿಲ್ಲ. ಇದನ್ನು ರಾಮಣ್ಣ ಪಾತಮ್ಮನಿಗೆ ಹೇಳಿದಾಗ ಆಕೆ ಮನೆಗೆ ಹೋಗಿ 2000ರೂಗಳನ್ನು ಕೊಟ್ಟು "ಮದುವೆಯನ್ನು ಮಾಡು" ಎಂದರು. ಆಗ ಮಂಗಳ "ಅಜ್ಜಿ ನೀನು ಬೇರೆಯವರ ಕೆಲಸ ಮಾಡಿ ಕಾಶಿಯಾತ್ರೆಗೆಂದು ಕೂಡಿಟ್ಟುಕೊಂಡ ಹಣ. ನನಗೆ ಬೇಡ ನಿನ್ನ ಆಸೆಯಂತೆ ಯಾತ್ರೆಗೆ ಹೋಗು" ಎಂದಳು. ಆಗ ಪಾತಮ್ಮ "ಕನ್ಯಾದಾನದ ಪುಣ್ಯ, ಕಾಶಿಯಾತ್ರೆಯ ಪುಣ್ಯಕ್ಕಿಂತ ದೊಡ್ಡದು" ಎಂದು ಅವಳನ್ನು ಸಮಾಧಾನಿಸಿ, ಹಣವನ್ನು ನೀಡಿದರು 

ತ್ರಿವೇಣಿಯವರ ಬರಹವು ಸರಳವಾಗಿದ್ದು ವಾಸ್ತವಿಕ ಜೀವನದ ಕೈಗನ್ನಡಿಯಂತಿರುತ್ತದೆ. ಅವರ ಒಂದೊಂದು ಕತೆಗಳಲ್ಲೂ ಬರುವ ವಸ್ತುವಿಷಯಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆದಿರುವಂತಹ , ನೋಡಿರುವಂತಹ ಘಟನೆಗಳೇ ಆಗಿರುತ್ತವೆ. "ಮೊದಲ ಹೆಜ್ಜೆ" ಕತೆಯಲ್ಲಿ, ಅವರು "ಒಬ್ಬ ಹೆಣ್ಣುಮಗಳು ಬಡಕುಟುಂಬದಲ್ಲಿ ಜನಿಸಿ , ಹೇಗೆ ಒಬ್ಬ ಗಂಡಿನ ಬಣ್ಣದ ಮಾತಿಗೆ ಮರುಳಾಗಿ ತನ್ನ ಜೀವನವನ್ನೇ ಹಾಳುಮಾಡಿಕೊಂಡಳು ಎಂಬುದನ್ನು ಮನಮುಟ್ಟುವಂತೆ ಹೇಳಿದ್ದಾರೆ. 

"ವಸಂತಗಾನ" ದಲ್ಲಿ ಅವರು ಗಂಡಹೆಂಡತಿಯ ನಡುವೆ ನಡೆಯುವ ಸರಸವಿರಸಗಳನ್ನು , ಹೆಣ್ಣು ತಾಯಿಯಾದಾಗ, ಅವಳಲ್ಲಾಗುವ ಬದಲಾವಣೆಗಳನ್ನು ಓದುಗರಿಗೆ ತಿಳಿಸುತ್ತಾರೆ. "ಕಾಶೀಯಾತ್ರೆ" ಯಂತೂ ಬಹಳ ಅರ್ಥಪೂರ್ಣವಾದ ಕತೆಯಾಗಿದೆ. ಯಾತ್ರೆ ಮಾಡುವುದರಿಂದ ನಮಗೆ ಮುಕ್ತಿ ಸಿಗುವುದಿಲ್ಲ. ನಾವು ನಮ್ಮ ಸುತ್ತಮುತ್ತಲಿನವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಮಗೆ ಮುಕ್ತಿ ಸಿಗುವುದು ಎಂಬುದನ್ನು ಬಹಳ ಸೊಗಸಾಗಿ ಮನಮುಟ್ಟುವಂತೆ ಬರೆದಿದ್ದಾರೆ. 

ಹೀಗೆ "ತ್ರಿವೇಣಿ" ಯವರ ಒಂದೊಂದು ಕತೆಗಳು ವಿಭಿನ್ನವಾದ ಕಥಾವಸ್ತುವಿನಿಂದ ಕೂಡಿದ್ದು ಓದುಗರ ಮನಸ್ಸಿಗೆ ನಾಟುತ್ತವೆ. 

- ಕೆ ಗೀತಾ

ಕಾಮೆಂಟ್‌ಗಳಿಲ್ಲ: