Pages

ಸ್ತ್ರೀದನಿ - ಡಂಗನ್ಮಾಲ್ ನ ನೀರಿನ ಪತ್ನಿಯರು


ನ 


ಮುಂಬೈಯಿಂದ 106 ಕಿ,ಮೀ. ದೂರದಲ್ಲಿರುವ ಡೆಂಗನ್ಮಾಲ್ ಎಂಬ ಪುಟ್ಟ ಹಳ್ಳಿಯು ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದಿರದೆ, ಕಡು ಬಡವರು ನೆಲೆಸುವ ಕುಗ್ರಾಮವಾಗಿದ್ದರೂ, ಇತ್ತೀಚೆಗೆ ಹೆಚ್ಚು ಈ ಗ್ರಾಮದ ಬಗ್ಗೆ ಚರ್ಚೆಗಳಾಗುತ್ತಿವೆ. ಯಾವುದೋ ದೊಡ್ಡ ಪ್ರಮಾಣದ ಯೋಜನೆಗಳು ಬಂದು ಜನರು ನೆಮ್ಮದಿಯಿಂದ ಜೀವನ ನಡೆಸುವಂತ ವಿಚಾರಗಳಿಗೇನು ಇದು ಖ್ಯಾತಿ ಪಡೆಯುತ್ತಿಲ್ಲಾ, ಅಥವಾ ಮಂತ್ರಿಮಹೋದಯರು ಅಲ್ಲಿನ ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆಂದು ನೀವು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದ್ಯಾವುದನ್ನೂ ಈ ಗ್ರಾಮದಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ. ಮುಂಬೈಯಿಂದ ಅನಿತು ದೂರದಲ್ಲೇ ಇದ್ದರೂ ಕುಡಿಯುವ ನೀರಿಗಾಗಿ ಇಲ್ಲಿಯ ಪುರುಷರು ಮರು ಮದುವೆಯಾಗಿ ಬಹುಪತ್ನಿತ್ವವನ್ನು ಒಪ್ಪಿಕೊಂಡು ನೀರಿನ ಹೆಂಡತಿಯರನ್ನು ಪಡೆಯುತ್ತಿದ್ದಾರೆ. ತಮ್ಮ ಮನೆಯ ನೀರಿನ ಬವಣೆ ನೀಗಬೇಕಾದರೆ, ದಿನ ಪೂರ್ತಿ ಮೈಲಿಗಟ್ಟಲೆ ದೂರ ನಡೆದು ನೀರನ್ನು ತರಬೇಕಾಗುತ್ತದೆ. 500 ಜನರಿರುವ ಈ ಗ್ರಾಮದಲ್ಲಿ ಪ್ರತಿ ನಿತ್ಯ ಹೆಂಗಳೆಯರು ಕ್ಯೂ ನಿಂತು ಇರುವ ಒಂದೆರಡು ಬಾವಿಗಳಿಂದಲೇ ಬಂದಿಗೆಗಳಲ್ಲಿ ನೀರು ತುಂಬಿಸಿಕೊಂಡು ಹೋಗುವರು. ಅದು ಬತ್ತಿ ಹೋದರೆ ಇವರ ಪಾಡು ಆ ದೇವರೇ ಬಲ್ಲ. ಹೀಗೆ ಕೇವಲ ಈ ಕೆಲಸಕ್ಕಾಗಿಯೇ ಮದುವೆಯಾದ ಇವರನ್ನೇ ನೀರ ಪತ್ನಿಯರು ಎಂದು ಕರೆಯುತ್ತಾರೆ. 66 ವರ್ಷದ ಸುಖಾರಾಮ್ ಭಗತ್ ಎಂಬುವವನು ಈವರೆಗೆ 03 ಮದುವೆಗಳಾಗಿದ್ದು, ಇವರಲ್ಲಿ ಯಾರು ಕಿರಿಯವಳೋ, ಅವಳ ಕೆಲಸವೇ ಈ ನೀರು ತರುವುದು. ಅದಕ್ಕೆಂದೇ ಅವಳನ್ನು ಮದುವೆಯೂ ಆಗಿರುವುದು. ಮನೆಗೆ ನೀರು ತರಲಿಕ್ಕೆ ಯಾರು ಇರಲಿಲ್ಲ. ಹಾಗಾಗಿ ಮದುವೆಯಾದೆ ಎಂದು ರಾಜಾರೋಷವಾಗಿ ಹೇಳುವನು. ಈ ಗ್ರಾಮದ ಸುಖಾರಾಮ್ ಭಗತ್‍ನೊಬ್ಬನೇ ಅಲ್ಲ ಹೀಗೆ ಮದುವೆಯಾಗಿರುವುದು, ಬಹುತೇಕರು ಬಹುಪತ್ನಿತ್ವವನ್ನು ಬೆಂಬಲಿಸುತ್ತಾರೆ. ಭಾರತದಲ್ಲಿ ಬಹುಪತ್ನಿತ್ವ ಕಾನೂನು ಬಾಹಿರವೆಂದು ತಿಳಿದಿದ್ದರೂ ಈ ಹಳ್ಳಿಯಲ್ಲಿ ಜಾರಿಯಲ್ಲಿದೆ. ಹೀಗೆ ಮದುವೆಯಾಗಿರುವ ಈ ಹೆಣ್ಣು ಮಕ್ಕಳಾದರೂ ಕಡು ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ. ಇವರಲ್ಲಿ ಕೆಲವರು ವಿಧವೆಯರು, ಅಥವಾ ಒಬ್ಬರೇ ಇರುವಂಥಹವರು, ಅಥವಾ ನಿರ್ಗತಿಕರೂ ಇರುವರು, ಹಾಗಾಗಿ ಎರಡನೇ / ಮೂರನೇ ಮದುವೆಯಾದರೂ ಯಾರು ತಲೆಕೆಡಿಸಿಕೊಂಡಿಲ್ಲ. ಇವರಿಗೊಂದು “ಬಾಳು ಸಿಗುವುದು” ಎನ್ನುವುದು ಅಲ್ಲಿನ ಜನರಲ್ಲಿರುವ ನಂಬಿಕೆ. ಆದ್ದರಿಂದ ಇಂತಹ ಮದುವೆಗೆ ಅಲ್ಲಿ ಬೆಂಬಲವಿದೆ.

ನೀರಿನ ಬವಣೆಯಲ್ಲಿ ಬೆಂದ ನಾರಿಯರು
ಇಂದಿನ ಆಧುನಿಕ ಯುಗದಲ್ಲೂ ನೀರಿನ (ಬವಣೆಗಾಗಿ) ಸಮಸ್ಯೆಯನ್ನು ನಿವಾರಿಸಲಿಕ್ಕಾಗಿ ಮದುವೆಗಳಾಗಿ ಅವರು ಕೇವಲ ನೀರು ತರುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುವುದು ಆಶ್ಚರ್ಯದ ಜೊತೆಗೆ ನೋವು ಕೊಡುವ ಸಂಗತಿಯೂ ಆಗಿದೆ. ಈ ಸಮಸ್ಯೆ ತಮಾಷೆ ತರುವ ದೋತ್ಯಕವಾದರೂ ನಮ್ಮ ದೇಶದ ವಸ್ತು ಸ್ಥಿತಿಯನ್ನು ತೋರಿಸುತ್ತದೆ. ನಗರ ಪ್ರದೇಶಗಳಲ್ಲಿ ಮೆಟ್ರೋಗಳು, ರೈಲು ಸಂಪರ್ಕ, ಆಧುನಿಕ ಮಾಲ್‍ಗಳು ಬಂದಾಕ್ಷಣವೇ ದೇಶದ ಅಭಿವೃದ್ಧಿಯಾಗಿದೆ. ಎಲ್ಲರೂ ಸುಖವಾಗಿದ್ದಾರೆ ಎಂಬ ಭ್ರಾಂತಿ ಒಂದೆಡೆಯಾದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಕ್ಕೂ ಕೊರತೆಯಿರುವುದು ಎದ್ದುಕಾಣುತ್ತದೆ. ವಿಜ್ಞಾನ, ತಂತ್ರಜ್ಞಾನ, ಜ್ಞಾನ ಭಂಡಾರವೆಲ್ಲವೂ ಎಲ್ಲಿ ಹೋದವು? ಒಂದು ಕೊಡ ನೀರು ತರಲಿಕ್ಕೆ ದಿನ ವಿಡೀ ಕಳೆಯಬೇಕಾದಂತಹ ಸಂದರ್ಭ ಬಂದಾಗ ಅದಕ್ಕಾಗಿ ಇನ್ನೊಬ್ಬ ಹೆಂಡತಿಯನ್ನು ಹೊಂದುವುದೂ ತಪ್ಪಲ್ಲ ಅನ್ನುವ ಮನೋಭಾವನೆಯ ಹಿಂದಿರುವ ಕಹಿ ಸತ್ಯವಾದರೂ ಯಾವುದು. ಮೂಲ ಸೌಕರ್ಯವನ್ನು ಒದಗಿಸುವುದು ರಾಜ್ಯದ ಧರ್ಮ ಎಂಬ ವಿಚಾರವನ್ನು ಸಂವಿಧಾನದಲ್ಲಿ ನಾವು ಒಪ್ಪಿರುವಾಗಲೂ ಇಂತಹ ಪರಿಸ್ಥಿತಿ ಉದ್ಭವವಾಗಿದೆಯೆಂದರೆ ನಾವು ದುಡಿಯುವ ಸಂಪತ್ತೆಲ್ಲವೂ ಹಾಗಾದರೆ ಎಲ್ಲಿ ಹೋಗುತ್ತದೆ? ಕತ್ತಲ ಬೇಗುದಿಯಲ್ಲಿ ಬೆಂದು ಜೀವನ ಸವೆಸುವ ಈ ಮಡದಿಯರಾದರೂ ನಿರ್ಜೀವಿಗಳಂತೆ ಬದುಕು ಸವೆಸುತ್ತಿರುವುದು ನಿಜಕ್ಕೂ ಶೋಚನೀಯ.
ಈ ಹೆಣ್ಣು ಮಕ್ಕಳಾದರೂ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲವರು ಮೂವತ್ತು ವರ್ಷಕ್ಕೆ 60ರ ವಯೋವೃದ್ದರಂತೆ ಕಾಣುವರು. ಕೆಲವರು ಬೆನ್ನು ನೋವು, ಕಾಲುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಸಮಸ್ಯೆ ಹೀಗೆ ಮುಂದುವರೆದರೆ ನಾಳೆಯ ಬೆಳಕನ್ನು ಕಾಣದೆಯೇ ಅವರ ಬದುಕು ನಿಂತು ಹೋಗುವುದು.
ಗುಜ್ಜರ್ ಮದುವೆಗಳು ಒಂದು ರೀತಿಯಾದ ಶೋಷಣೆಯಾದರೆ, ನೀರಿನ ಹೆಸರಿನಲ್ಲಿ ನಡೆಯುವುದು ಇನ್ನೊಂದು ರೀತಿಯ ಶೋಷಣೆಯ ಮುಖ. ಅಲ್ಲಿ ಹೆಣ್ಣು ಎಲ್ಲರ ಸ್ವತ್ತಾದರೆ, ಇಲ್ಲಿ ಅಧಿಕೃತವಾಗಿ ಮದುವೆಯಾಗುವ ಮನ್ನಣೆಯಿದೆ. ಆದರೆ ಎರಡೂ ಸಂದರ್ಭದಲ್ಲಿ ಈ ಶೋಷಣೆಯ ಸಂಕೀರ್ಣತೆಗಳನ್ನು ಎದುರಿಸುವವಳು ಹೆಣ್ಣು. ಅವಳ ಮನಸ್ಥಿತಿಯನ್ನು ಯಾರೂ ಅರಿಯಲಾರರು. ಬಯಸಿ ಬಯಸಿ ಆಕೆ ಇಂತಹ ಸ್ಥಿತಿಯಲ್ಲಿ ಜೀವಿಸಲು ಇಷ್ಟ ಪಡುವುದಿಲ್ಲ. ಬಡತನದ ಕ್ರೌರ್ಯ / ಅಸಹಾಯಕತೆ ಆಕೆಯನ್ನು ಈ ಸ್ಥಿತಿಗೆ ದೂಕಿವೆ.
ಹೆಣ್ಣು ಎದುರಿಸುವ ಹಲವು ಬಗೆಯ ಶೋಷಣೆಗಳಲ್ಲಿ ಇದೂ ಕೂಡ ಒಂದಾಗಿದ್ದು, ನಾಗರೀಕ ಸಮಾಜದ ವೈರುದ್ಯಗಳಿಗೆ ಕನ್ನಡಿಯಂತಿದೆ. ಈಗಾಲಾದರೂ ಆಡಳಿತ, ರಾಜ್ಯನಾಯಕರು ಎಚ್ಚೆತ್ತುಕೊಳ್ಳದಿದ್ದರೆ, ಇಡೀ ಮನುಕುಲವೇ ತಲೆ ತಗ್ಗಿಸಬೇಕಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮಗಳ ಕಡೆ ಗಮನಹರಿಸದೆ ಹೋದರೆ ಏನಾದೀತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಮತ್ತೊಂದಿಲ್ಲ.




ಗಿರಿಜಾ ಕೆ.ಎಸ್.
ಸಹಾಯಕ ಪ್ರಾಧ್ಯಾಪಕರು,
ರಾಜ್ಯಶಾಸ್ತ್ರ ವಿಭಾಗ,
ವಿಶ್ವವಿದ್ಯಾನಿಲಯ ಕಲಾ ಕಾಲೇಕು,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕಾಮೆಂಟ್‌ಗಳಿಲ್ಲ: