Pages

ಕವನ: "ಹುಡುಕಾಟ"


 
ನನಗೆ ಗೊತ್ತು
ನೀವೆಲ್ಲ ನನ್ನನ್ನು 
ದುರ್ಬೀನು ಹಾಕಿಕೊಂಡು ಹುಡುಕುತ್ತೀರಿ! 
ಸಂಪುಟ-ಸ್ಮಾರಕ 
ಮಂದಿರ-ಮಸೀದಿ 
ಗಲ್ಲಿ-ಗಟಾರ 
ಗುಡಿಸಲು-ಮಹಲುಗಳಲ್ಲಿ! 

ಸೂರ್ಯ ಚಂದ್ರ ಚುಕ್ಕಿಗಳ 
ವಿಸ್ಮಯಗಳಲ್ಲಿ 
ಈ ನೆಲದ ಬೇರಿನ ನೀರವ ಮೌನಗಳಲ್ಲಿ 
ಚಿಗುರು ಹೂ ಹಣ್ಣುಗಳ ಸಂಭ್ರಮದಲ್ಲಿ... 

ತಪ್ಪದೇ ಕೆದಕುತ್ತಿರಿ 
ಹೆದ್ದಾರಿ ಬದಿಯ ಹುಡುಗಿಯರ 
ಕನವರಿಕೆಗಳಲ್ಲಿ 
'ಸುಖ'ಮಾರುವ ಅನಿವಾರ್ಯಕ್ಕೆ 
ಬದುಕನ್ನು ಬಿಕರಿಗಿಟ್ಟ ಕನ್ಯೆಯರಲ್ಲಿ... 

ಯಾರದೋ ಉಮ್ಮಳಿಕೆ 
ವಿಲಾಪಗಳು 
ಮತ್ತಾರದೋ ಪರಿವೇಷಗಳನ್ನು 
ಭರಪೂರ ಬಿಂಬಿಸುತ್ತೀರಿ... 

ಮೂರ್ತ ಅಮೂರ್ತಗಳಿಗೆಲ್ಲ 
ಚಾಲಾಕಿನಿಂದ ಬಣ್ಣ ಹಚ್ಚುವ ನಿಮಗೆ 
ಜಾತಿ,ಧರ್ಮ, ಪ್ರೀತಿ ಇತ್ಯಾದಿತ್ಯಾದಿಗಳು ಸೆಳೆಯುತ್ತವೆ... 

ನನ್ನನ್ನು ಹೆಕ್ಕುವಾಗ 
ನೀವೆಷ್ಟೊಂದು ನಾಜೂಕು! 
ಪೂರ್ವಾಗ್ರಹಗಳನ್ನು ಕಳಚಿ 
ಕಲ್ಲೆದೆ ಕರಗಿಸಿಕೊಂಡು ಕರುಣಾಳುಗಳು! 
ನನ್ನನ್ನು ಸಿಂಗರಿಸುವ ನಿಮ್ಮ ಸೂಕ್ಷ್ಮತೆ 
ಮೆಚ್ಚಬೇಕು ಬಿಡಿ 
ಪ್ರತಿಭೆಯ ರುಜುವಾತಿಗೆ 
ಹೆಣಗುವ ನಿಮ್ಮ ಸರ್ಕಸ್ಸಿಗೆ! 

ಅತ್ತಿತ್ತ ಎಳೆದಾಡಿ 
ನನಗೊಂದು ಚೌಕಟ್ಟು ಹಾಕಿಟ್ಟು 
ನೀವು ನಿಮ್ಮಂತವರದೇ ಸಂತೆಯಲ್ಲಿ 
ಭೇಷ್ ಎನಿಸಿಕೊಳ್ಳುವಾಗ 
ನಾನು ಮುಗುಮ್ಮಾಗಿ ಕುಳಿತಿರುತ್ತೇನೆ 
ಆಶ್ರಮದ ಹಾದಿ ಹಿಡಿದ 
ಅವ್ವಂದಿರ ಕಣ್ಣಾಲಿಗಳಲ್ಲಿ.....!! 
ಕಸದ ತೊಟ್ಟಿಯಲ್ಲಿ ಹೆಣವಾಗುವ 
ಪಾಪದ ಹೂವುಗಳಲ್ಲಿ........!! 

~ರಂಗಮ್ಮ ಹೊದೇಕಲ್

ಕಾಮೆಂಟ್‌ಗಳಿಲ್ಲ: