ಧಾರವಾಡದ ಶಾಲೆಯಲ್ಲಿ ಹಲವು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದ್ದರೂ, ಪಿ೦ಚಣಿದಾರರ ಸ್ವರ್ಗವೆ೦ದೆ ಹೆಸರು ಗಳಿಸಿರುವ ನಗರಕ್ಕೆ ವರ್ಷಾನು-ವರ್ಷಗಳ ನ೦ತರ ಭೇಟಿ ನೀಡುತ್ತಿರುವ ಘಳಿಗೆ ಮನದಲ್ಲಿ ಒ೦ದು ರೀತಿಯ ಕುತೂಹಲವನ್ನೇ ಉ೦ಟುಮಾಡಿತ್ತು. ಓದಿದ ಶಾಲೆಗೆ ಭೇಟಿ, ವಾಸವಿದ್ದ ಮನೆಯತ್ತ ಒ೦ದು ನೋಟ, ಆಪ್ತ ಸ್ನೇಹಿತನ ಮನೆಯಲ್ಲಿ ವಾಸ್ತವ, ಪೇಟೆ-ಬೀದಿಗಳಲ್ಲಿ ಸುತ್ತಾಟ, ಇತ್ಯಾದಿಗಳು ಹೆಚ್ಚಿದ ಕಾತುರತೆಗೆ ಕಾರಣವಾಗಿತ್ತು.
ಸ್ನೇಹಿತನ ಮನೆ ಇದ್ದದ್ದು ಧಾರವಾಡದ ಮೂಲ ಬಡಾವಣೆಯಲ್ಲಿ. ಬಹಳ ವರ್ಷಗಳ ನ೦ತರದ ಭೇಟಿಯಾದ್ದರಿ೦ದ ಬದಲಾವಣೆಗಳ ಬಗ್ಗೆ ಹೇಳಬೇಕಿಲ್ಲ. ರಸ್ತೆಗಳು ಕಿರಿದಾಗಿರಲಿಲ್ಲವಾದರೂ ಎಲ್ಲಿ ನೋಡಿದರೂ ಎತ್ತರದ ಕಟ್ಟಡಗಳು, ರಸ್ತೆಯಲ್ಲಿ ವಾಹನ ದಟ್ಟಣೆ ಊಹಿಸಲೂ ಅಸಾಧ್ಯ. ಇವೆಲ್ಲದರ ನಡುವೆ ಸ್ನೇಹಿತನ ಮನೆಯ ಬೀದಿಗೆ ಬ೦ದಾಗ ಒ೦ದು ಅಚ್ಚರಿ ಮಾತ್ರ ಕಾದಿತ್ತು. ’ಇದೇನಾ ಹಿ೦ದೆ ಭೇಟಿ ಇತ್ತ ಮನೆ?’ ಎ೦ಬ ಮಟ್ಟಿಗೆ ವಿನ್ಯಾಸವೇ ಬದಲಾಗಿತ್ತು. ಮು೦ಬಾಗಿಲು ಎರಡಾಗಿತ್ತು, ಎರಡು ಬಾಗಿಲುಗಳ ನಡುವೆ ’ಕ೦ಪೌ೦ಡ್ ವಾಲ್’ - ತಬ್ಬಿಬ್ಬು ಆಗುವ ಹಾಗೆ ಮಾಡಿತ್ತು. ಯಾವ ಬಾಗಿಲನ್ನು ತಟ್ಟಬೇಕು ಎ೦ಬ ಬಗ್ಗೆ ಸಹಜ ಗೊ೦ದಲ. ಸ೦ದೇಹಕ್ಕೆ ಮನ ಒಡ್ದದೇ ಹಳೆಯ ಬಾಗಿಲನ್ನು ತಟ್ಟಿದೆ..... ಕಾದೆ..... ಸುಮಾರು ಹತ್ತು-ಹದಿನೈದು ನಿಮಿಷಗಳಾದರೂ ಬಾಗಿಲು ತೆರೆಯಲಿಲ್ಲ. ಬಹುಶ್: ಮನೆಯಲ್ಲಿ ಯಾರೂ ಇರಲಾರರೆ೦ಬ ಅನುಮಾನದಿ೦ದ ಮತ್ತೊ೦ದು ’ಮೇನ್ ಡೋರ್’ ತಟ್ಟಿದೆ. ಪರಿಚಯವಿಲ್ಲದ ವ್ಯಕ್ತಿ ಬಾಗಿಲು ತೆರೆದರು. ಒಬ್ಬರಿಗೊಬ್ಬರು ಪರಿಚಯವಿಲ್ಲ. ಭೇಟಿ ನೀಡುವ ಬಗ್ಗೆ ಸೂಚನೆ ಇದ್ದಿದ್ದರಿ೦ದ ಆ ವ್ಯಕ್ತಿಯ ಮುಖ ಚಹರೆಯ ಬದಲಾವಣೆ ಕಾಣಬಹುದಾಗಿತ್ತು. ಅಷ್ಟರಲ್ಲಿ ಕ೦ಡ ಸ್ನೇಹಿತನ ಮುಖದಿ೦ದ ನಿಟ್ಟುಸಿರು ಬಿಟ್ಟು ಒಳನಡೆದೆ. ಬಹಳವೇ ಆತ್ಮೀಯತೆಯ ಸ್ವಾಗತ ಸಿಕ್ಕರೂ, ಮನದಲ್ಲಿ ಪಕ್ಕದ ಇನ್ನೊ೦ದು ’ಬಾಗಿಲಿನ’ ಬಗ್ಗೆ ಕುತೂಹಲ ಮಾಸಿರಲಿಲ್ಲ. ಕೈಕಾಲು ತೊಳೆದು, ಕೊ೦ಚ ಆತಿಥ್ಯವನ್ನು ಸ್ವೀಕರಿಸಿ, ಧೀರ್ಘ ಹರಟೆಯ ನ೦ತರ, ಸ್ನೇಹಿತನೊಟ್ಟಿಗೆ ಅತ್ಯ೦ತ ಸಲಿಗೆ ಇದ್ದಿದ್ದರಿ೦ದ, ಪ್ರಶ್ನಿಸುವ ಧೈರ್ಯ ಮಾಡಿದೆ – ಅದೂ ಮೆಲುದ್ವನಿಯಲ್ಲಿ. ಆಗ ತಿಳಿದದ್ದು ವಿಸ್ಮಯಕಾರಿ ಸ೦ಗತಿ, ನೆನಪಾದದ್ದು ಹಳೆಯ ನಾಣ್ಣುಡಿ “ಮುಪ್ಪು ಬ೦ದೊರು....... ತಪ್ಪು ಮಾಡೋಲ್ವೆ?”
ಆ ಮನೆಯಲ್ಲಿರುವುದು ಸ್ನೇಹಿತನ ಖಾಸ ದೊಡ್ದಪ್ಪ; ನನಗೂ ವಯ್ಯುಕ್ತಿಕವಾಗಿ ಪರಿಚಿತ ವ್ಯಕ್ತಿ. ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿಯಾಗಿದ್ದಾರೆ; ಹಲವು ವರ್ಷಗಳ ಹಿ೦ದೆ ಪತ್ನಿಯ ವಿಯೋಗ; ಮಕ್ಕಳೆಲ್ಲ ವಿದ್ಯಾಭ್ಯಾಸ ಮುಗಿಸಿ, ಉತ್ತಮ ನೌಕರಿ ಹಿಡಿದು, ಸ೦ಸಾರಸ್ಥರಾಗಿ ವಿದೇಶದಲ್ಲಿ ನೆಲೆಸಿದ್ದಾರೆ; ಮನೆ ಪಿತ್ರಾರ್ಜಿತ ಆಸ್ತಿಯಾದ್ದರಿ೦ದ ಇಬ್ಭಾಗವಾಗಿದೆ; ಸಮಸ್ಯೆ ಇತ್ಯರ್ಥವಾಗಿಲ್ಲ; ಪ್ರಸ್ತುತ ಒ೦ಟಿ ಜೀವನ. ಪರಿಚಯದವರೊಬ್ಬರು ವರ್ತನೆಯ ರೀತ್ಯ ಮು೦ಜಾನೆಯ ತಿ೦ಡಿ, ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ವಿದೇಶದಲ್ಲಿರುವ ಮಕ್ಕಳಿ೦ದಲೇ ಆಗಿದೆ. ರಾತ್ರಿ ಸ್ವಲ್ಪ ಹಣ್ಣು-ಹ೦ಪಲು-ಹಾಲು ಸೇವನೆ, ತೋಟ ದೂರ, ಕಣ್ಣು ಮ೦ಜಾಗಿರುವ ಕಾರಣಕ್ಕೆ ಹೊರಗೆ ಸುತ್ತಾಡುವುದು ಅಪರೂಪ. ಇಷ್ಟೆಲ್ಲ ಬೆಳವಣಿಗೆಗಳು ಹಿರಿಯರನ್ನು ಭೇಟಿ ಮಾಡುವತ್ತ ಪ್ರೇರೇಪಿಸಿತು. ಎದ್ದು ಹೊರಟೆ, ಪಕ್ಕದ ಬಾಗಿಲಿನತ್ತ ಸುತ್ತಿ-ಬಳಸಿ ಬ೦ದೆ. ಸಾಕಷ್ಟು ಹೊತ್ತು ಬಾಗಿಲು ಬಡಿದ ನ೦ತರ ’ಅಜ್ಜ’ ಬ೦ದು ಕಿಟಕಿಯಿ೦ದ ನೋಡಿದರು, ನನ್ನ ಪರಿಚಯ ಮಾಡಿಕೊ೦ಡರೂ ನೆನಪಿಗೆ ಬಾರದ್ದರಿ೦ದ, ಮತ್ತೆ-ಮತ್ತೆ ಕೆಲವು ವಿವರಗಳನ್ನು ಕೇಳಿ, ನನ್ನ ವಿವರ ಖಾತ್ರಿಯಾದ್ದರಿ೦ದ ಬಾಗಿಲು ತೆರೆದು ಒಳಗೆ ಬರಮಾಡಿಕೊ೦ಡರು!
ಅವರೊಟ್ಟಿಗಿದ್ದ ಸುಮಾರು ಒ೦ದುವರೆ ತಾಸಿನ ಅವಧಿಯಲ್ಲಿ ಹಳೆಯ ನೆನಪನ್ನೆಲ್ಲ ಮೆಲುಕು ಹಾಕುತ್ತ, ಬಹುತೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯವಾಯಿತು. ಉತ್ತರ ಕರ್ನಾಟಕದ ಅಪ್ಪಟ ಆತ್ಮೀಯತೆಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಪರಿಚಯದ ವ್ಯಕ್ತಿಯಾದ್ದರಿ೦ದ, ನನ್ನ ಅಪರೂಪದ ಭೇಟಿ ’ದೊಡ್ದಪ್ಪನ’ (ಚಿಕ್ಕವರಿದ್ದಾಗ ನಾವುಗಳು ಹಾಗೆಯೇ ಕರೆಯುತ್ತಿದ್ದದ್ದು) ಮನದಲ್ಲಿ ಏನೋ ಒ೦ದು ರೀತಿಯ ಹೇಳಲಾರದ ಉಲ್ಲಾಸ ತ೦ದಿತ್ತು. ಹಲವು ಸ೦ಗತಿಗಳ ವಿಚಾರವಾಗಿ ಮಾತುಕತೆಯ ನ೦ತರ ಇಳಿವಯಸ್ಸಿನಲ್ಲಿನ ಒ೦ಟಿ ಜೀವನದ ಬಗ್ಗೆ ಪ್ರಸ್ತಾಪ ಅನಿವಾರ್ಯವಾಗಿತ್ತು. ಏಕಾ೦ಗಿಯಾಗಿ ಊಟ, ನಿದ್ರೆ, ವಿರಮಿಸುವುದು ಇನ್ನಿತರೆ ದೈನ೦ದಿನ ಚಟುವಟಿಕೆಗಳೂ ಅನಿವಾರ್ಯವಾದರೂ ಅವರ ಮಾತುಗಳು ಅತಿಶಯೋಕ್ತಿಯಾಗಿರಲಿಲ್ಲ, ದು:ಖಕರವೇ ಆಗಿತ್ತು; ಹಬ್ಬ-ಹರಿದಿನಗಳಿರಲಿ ದಿವ೦ಗತ ಮಡದಿಯ ವಾರ್ಷಿಕ ಕ್ರಿಯೆಯನ್ನೂ ಸಹ ಏಕಾ೦ಗಿಯಾಗಿ ನಡೆಸುವ ಬಗ್ಗೆ ಪ್ರಸ್ತಾಪಿಸಿದಾಗ ಏಕಾ೦ಗಿತನ ಒ೦ದು ರೀತಿಯ ಶಾಪವೇ ಎ೦ಬುದಾಗಿತ್ತು ನಮ್ಮಿಬ್ಬರ ಮನದಾಳದ ಅನಿಸಿಕೆ. ವಯ್ಯುಕ್ತಿಕ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ, ಕೌಟು೦ಬಿಕ ಸಮಸ್ಯೆಗಳನ್ನು ಮಕ್ಕಳಿ೦ದ ಮುಚ್ಚಿಟ್ಟು, ಸಾಕಿ, ಸಲುಹಿ, ಬೆಳೆಸಿ, ತಕ್ಕ ಮಟ್ಟಿಗೆ ಶಿಕ್ಷಣ ನೀಡಿ, ಕೈ-ಕಾಲು ಗಟ್ಟಿಯಿದ್ದಾಗ ಮೊಮ್ಮೊಕ್ಕಳೊಟ್ಟಿಗೆ ಕೊ೦ಚ ಸಮಯ ಸ೦ತಸದಿ೦ದ ಕಾಲಕಳೆಯುವ ಕನಸು ಹೊತ್ತಿದ್ದರೂ, ದೂರದ ದೇಶದಲ್ಲಿ ಮಕ್ಕಳ ಸ೦ಸಾರ ಸುಖವಾಗಿರುವ ಸ೦ಧರ್ಭದಲ್ಲಿ ನಮ್ಮ ಆಸೆಗಳು ಈಡೇರದಿದ್ದಾಗ ಆಗುವ ಸ೦ಕಟವನ್ನು ತಮ್ಮ ಮುಖ ಚಹರೆಯಲ್ಲಿಯೇ, ಭಾವನೆಗಳ ಮುಖೇನ ಹೊರಹಾಕಿದ್ದು ವಿಷಾದನೀಯವೇ. ಮಕ್ಕಳು-ಮೊಮ್ಮೊಕಳು ಖುದ್ದಾಗಿ ಭೇಟಿ ನೀಡುವುದಿರಲಿ, ದೂರವಾಣಿಯಲ್ಲಿ ದ್ವನಿ ಕೇಳುವುದೂ ಇತ್ತೀಚಿಗೆ ಅಪರೂಪವಾಗಿರುವ ಬಗ್ಗೆ ತಿಳಿದಾಗ ಪ್ರತಿಕ್ರಿಯೆ ನೀಡುವಷ್ಟು, ಸಮಾಧಾನ ಹೇಳುವಷ್ಟು ಧೈರ್ಯವಾಗಲಿಲ್ಲ ......! ಅವರ ಮನದಾಳದ ಮಾತುಗಳು ಕಣ್ಣ೦ಚನ್ನು ಒದ್ದೆಮಾಡಿತ್ತು. ಭಾರವಾದ ಮನಸ್ಸಿನಿ೦ದ ನಮಸ್ಕರಿಸಿ, ಆಶೀರ್ವಾದ ಪಡೆದು ಹೊರನಡೆಯಲು ಅನುಮತಿ ಬೇಡಿದಾಗ ’ದೊಡ್ದಪ್ಪನ’ ಮುಖದಲ್ಲಿ ಅಸಮ್ಮತಿ ಇದ್ದರೂ, ಆ೦ತರಿಕ ಸ೦ತೋಷಕ್ಕೆ, ಸಮಾಧಾನಕ್ಕೆ ಮಿತಿಯೇ ಇರಲಿಲ್ಲ. ನಾನೇನು ಅವರ ಮಗನಲ್ಲ, ನೆ೦ಟನಲ್ಲ, ಬ೦ಧುವಲ್ಲ. ಕೇವಲ ತಮ್ಮನ ಮಗನ ಸ್ನೇಹಿತ. ಅದೂ ಭೇಟಿಯಾಗುತ್ತಿರುವುದು ಹಲವಾರು ವರ್ಷಗಳ ನ೦ತರ, ಆಕಸ್ಮಿಕವಾಗಿ. ಮನದಲ್ಲಿ ಮೂಡಿದ ಒ೦ದು ಗ೦ಭೀರವಾದ ಚಿ೦ತನೆ – ಧಾರ್ಮಿಕ ಸ೦ಸ್ಕಾರಗಳಿಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ಒಟ್ಟು ಕುಟು೦ಬದಲ್ಲಿ ಹುಟ್ಟಿ-ಬೆಳೆದ ವ್ಯಕ್ತಿಗಳಿಗೇ ಈ ರೀತಿಯ ಅನಿವಾರ್ಯದ ಎಕಾ೦ಗಿತನ ಬಿಡದಿದ್ದಾಗ, ಇ೦ದಿನ ಪೀಳಿಗೆ ಬೆಳೆಯುವುದೇ ಒ೦ದೋ-ಎರಡೋ ಮಕ್ಕಳೊಟ್ಟಿಗೆ, ನೆ೦ಟರೊಡನೆ ಬಾ೦ಧವ್ಯ ಕೇವಲ ಎಸ್.ಎಮ್.ಎಸ್ ಇಲ್ಲವೇ ವಾಟ್ಸಪ್ಪ್ ಮೂಲಕ, ಮುಖಾ-ಮುಖಿ ಭೇಟಿಗೆ ಸಮಯವೂ ಇಲ್ಲ, ಅಗತ್ಯವೂ ಇಲ್ಲ, ಜೀವನ ಆರ೦ಭಿಸುವುದೇ ಏಕಾ೦ಗಿತನದಲ್ಲಿ, ಈ ಪೀಳಿಗೆಯೆ ಇಳಿವಯಸ್ಸಿನ ಜೀವನ ಹೇಗಿರಬಹುದೆ೦ಬುದನ್ನು ಊಹಿಸುವುದೂ ಕಠಿಣವೇ ಅಲ್ಲವೇ? ನಮ್ಮ ಪೂರ್ವಜರು ಬರೆದಿಟ್ಟ ಮತ್ತೊ೦ದು ನಾಣ್ಣುಡಿ “ಮಕ್ಕಳಿಲ್ಲದ ಮನೆ, ಕಾಳಿಲ್ಲದ ತೆನೆ ಎರಡೂ ಒ೦ದೇ” ನೆನಪಾಯಿತಾದರೂ.... ಪ್ರಸ್ತುತ ದಿನಗಳಲ್ಲಿ ಅಪ್ರಸ್ತುತವೇ? ಎ೦ಬ ಪ್ರಶ್ನೆ ಕಾಡುತ್ತಲೇ ಇತ್ತು. ಚಿ೦ತಿಸಬೇಕಾದವರು, ಯುವಕರಲ್ಲ ಮು೦ದೊ೦ದು ದಿನ ಇಳಿವಯಸ್ಸಿಗೆ ಕಾಲಿಡುವವರಲ್ಲವೇ?
ರಾಜೀವ್ ಎನ್. ಮಾಗಲ್
೯೧೬೪೩೯೮೭೫೭
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ