1. ಅಣ್ಣಾ ಸಾಹೇಬ್ ಕರ್ವೆ – ಏಪ್ರಿಲ್ 18, 1858ರಂದು ಮಹಾರಾಷ್ಟ್ರದ ಮುರುದ್‍ನಲ್ಲಿ ಜನಿಸಿದ ಇವರ ಪೂರ್ಣ ಹೆಸರು ಧೊಂಡು ಕೇಶವ್ ಕರ್ವೆ. ಇವರು ಮಹಾರಾಷ್ಟ್ರದಲ್ಲಿ ಸಾಮಾಜಿಕ ಸುಧಾರಣಾ ಚಳುವಳಿಯನ್ನು ಪ್ರಾರಂಭಿಸಿದರು ಮತ್ತು “ವಿಧವಾ ವಿವಾಹ ಸಮಿತಿ”ಯನ್ನು ರಚಿಸಿದರು. ಇವರು ನಿರ್ಗತಿಕ ಮಹಿಳೆಯರಿಗಾಗಿ ‘ಅನಾಥಾಶ್ರಮ’ವನ್ನು ಸ್ಥಾಪಿಸಿ, ಅವರ ಸ್ಥಿತಿಗತಿಯ ಸುಧಾರಣೆಗಾಗಿ ಶಿಕ್ಷಣವನ್ನು ನೀಡಿದರು ಹಾಗೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. 1936ರಲ್ಲಿ ಮಹಾರಾಷ್ಟ್ರ ಗ್ರಾಮ ಪ್ರಾಥಮಿಕ ಶಿಕ್ಷಣ ಮಂಡಳಿಯನ್ನು, ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯುವ ಸಲುವಾಗಿ ಸ್ಥಾಪಿಸಿದರು. ಜನತೆಯಲ್ಲಿ ಏಕತೆಯ ಭಾವನೆಯನ್ನು ಮೂಡಿಸಲು ಸಮತಾ ಸಂಘವನ್ನು ಸ್ಥಾಪಿಸಿದರು. ಇವರಿಗೆ 1958ರಲ್ಲಿ ‘ಭಾರತ ರತ್ನ’ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ನವೆಂಬರ್ 9, 1962ರಲ್ಲಿ ಮರಣಹೊಂದಿದರು.
2. ಈಶ್ವರಚಂದ್ರ ವಿದ್ಯಾಸಾಗರ - 1820ರ ಸೆಪ್ಟ್‍ಂಬರ್ 26ರಲ್ಲಿ ಬಂಗಾಳದ ಬಿರ್ಸಿಂಗಾ ಗ್ರಾಮದಲ್ಲಿ ಜನಿಸಿದರು. ಪ್ರಗತಿಪರ ವಿಚಾರವನ್ನು ಹೊಂದಿದ್ದ ಮತ್ತು ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದ ತಮ್ಮ ತಾಯಿ ಭಗವತಿ ದೇವಿಯವರಿಂದ ಸ್ಫೂರ್ತಿಯನ್ನು ಪಡೆದರು. ವಿಚಾರವಾದಿ ಮಾನವತಾವಾದದಿಂದ ಪ್ರೇರೇಪಿತರಾದ ಅವರು, ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಶೋಷಣೆಯ ವಿರುದ್ಧ ಹೋರಾಡಲಾರಂಭಿಸಿದರು. ಶಿಕ್ಷಣ ತಜ್ಞರಾದ ಅವರು, ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕಾಗಿ ಶ್ರಮಿಸಿದರು. ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಮತ್ತು ವಿಧವಾ ವಿವಾಹದ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು. ಜನತೆ ಅವರನ್ನು ಪ್ರೀತಿಯಿಂದ ‘ವಿದ್ಯಾಸಾಗರ’ ಮತ್ತು ‘ಕರುಣಾಸಾಗರ’ ಎಂದು ಕರೆದರು. ಅವರು ಈ ದೇಶದ ಮಹಾನ್ ಸಮಾಜ ಸುಧಾರಕರಲ್ಲಿ ಒಬ್ಬರು.
3. ಜ್ಯೋತಿಬಾ ಫುಲೆ - ಇವರು ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ 1827ರಲ್ಲಿ ಜನಿಸಿದರು. ಹಿಂದುಳಿದ, ತುಳಿತಕ್ಕೊಳಪಟ್ಟ ಜನತೆಯ ಘನತೆಯನ್ನು ಎತ್ತಿ ಹಿಡಿಯಲು ಶ್ರಮಿಸಿದರು. ಎಲ್ಲಾ ರೀತಿಯ ಭೇದಗಳನ್ನು ತೊಲಗಿಸಲು ಹೋರಾಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ತೀರ್ಮಾನಿಸಿ ತಮ್ಮ ಪತ್ನಿಗೆ ತಾವೇ ಕಲಿಸಿ ಅವರನ್ನು ಶಿಕ್ಷಕಿಯಾಗಿ ಮಾಡಿದರು. ಇಬ್ಬರೂ ಸೇರಿ ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ದುಡಿದರು. 1873ರಲ್ಲಿ ‘ ಸತ್ಯ ಶೋಧಕ ಸಮಾಜ’ವನ್ನು ಆರಂಭಿಸಿದರು. ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಅವರಿಗೆ ಮುಂಬೈನ ಜನ ಪ್ರೀತಿಯಿಂದ ‘ಮಹಾತ್ಮ’ ಎಂಬ ಬಿರುದನ್ನು ನೀಡಿದರು. 1890ರಲ್ಲಿ ನಿಧನರಾದರು.
4. ರಾಜಾ ರಾಮಮೋಹನ್ ರಾಯ್ - ಬಂಗಾಳದ ರಾಧಾನಗರದಲ್ಲಿ 1772ರ ಮೇ 22ರಂದು ಜನಿಸಿದರು. 1815ರಲ್ಲಿ ಸಾಮಾಜಿಕ ಪಿಡುಗುಗಳ ವಿರುದ್ಧ ದನಿಯೆತ್ತಲು ‘ಆತ್ಮೀಯ ಸಭೆ’ಯನ್ನು ಸ್ಥಾಪಿಸಿದರು. ಅವರನ್ನು ಭಾರತದ ನವೋದಯದ ಪಿತಾಮಹನೆಂದು ಕರೆಯಲಾಗಿದೆ. ಕ್ರೂರವಾದ ಸತಿ ಪದ್ಧತಿಯ ವಿರುದ್ಧ ಹೋರಾಟವನ್ನು ನಡೆಸಿದ ಇವರು 1829ರಲ್ಲಿ ಇದನ್ನು ನಿಷೇಧಿಸಲು ಸರ್ಕಾರ ಕಾಯಿದೆ ಜಾರಿಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಮತ್ತು ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. 1828ರಲ್ಲಿ ಜನತೆಯಲ್ಲಿ ಐಕ್ಯತೆಯನ್ನು ತರಲು ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿದರು. ಇಂಗ್ಲಿಷ್ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಜಾರಿಗೊಳಿಸಲು ದುಡಿದರು. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ ಮೊದಲಿಗರು. 1833ರ ಸೆಪ್ಟೆಂಬರ್ 27ರಂದು ಇಂಗ್ಲೆಂಡ್‍ನಲ್ಲಿ ನಿಧನರಾದರು.
5. ಸ್ವಾಮಿ ವಿವೇಕಾನಂದ - ಬಂಗಾಳದ ಕಲ್ಕತ್ತಾದಲ್ಲಿ ಜನವರಿ 12, 1863ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸವನ್ನು ಸ್ವೀಕರಿಸಿದರು. ಆದರೆ ಸನ್ಯಾಸಕ್ಕಿಂತ ದೇಶಸೇವೆಯೇ ದೊಡ್ಡದೆಂದು ಭಾವಿಸಿ, ದೇಶಸೇವೆಗೆ ತೊಡಗಿದರು. ಅಂದಿನ ದಿನಗಳ ಸಾಮಾಜಿಕ ಚಳುವಳಿಯ ಪ್ರೇರಕ ಶಕ್ತಿಯಾಗಿದ್ದ ಅವರು, ಭಾರತದಲ್ಲಿ ರಾಷ್ಟ್ರೀಯತಾವಾದದ ಸ್ಫೂರ್ತಿಯನ್ನು ಹರಡಿದರು. ಅವರು ಬಡ ಜನತೆಯ, ಅನಕ್ಷರಸ್ತ, ಅಜ್ಞಾನಿ ಜನತೆಯ ಉದ್ಧಾರಕ್ಕಾಗಿ ದುಡಿದರು. ಅಮೆರಿಕಾದ ಚಿಕಾಗೊದ ಧರ್ಮ ಸಮ್ಮೇಳನದಲ್ಲಿ ಅವರ ಭಾಷಣ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿತು. ಈ ದೇಶದ ತುಳಿತಕ್ಕೊಳಪಟ್ಟ ಜನತೆಯ ಸೇವೆಮಾಡಲು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ‘ರಾಮಕೃಷ್ಣ ಮಿಷನ್’ಅನ್ನು ಸ್ಥಾಪಿಸಿದರು. ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡುವಂತೆ ಯುವಜನತೆಯನ್ನು ಪ್ರೇರೇಪಿಸಿದರು. ಅವರ ಸಂದೇಶದಿಂದ ಪ್ರೇರೇಪಿತರಾದ ಬಂಗಾಳದ ನೂರಾರು ಯುವಜನರು ಸಂತೋಷದಿಂದಲೇ ಚಳುವಳಿಗೆ ಧುಮುಕಿದರು ಮತ್ತು ಎಲ್ಲಾ ಕಷ್ಟಗಳನ್ನು ಎದುರಿಸಿ ಜೀವವನ್ನೂ ಸಹ ತ್ಯಾಗ ಮಾಡಿದರು. ಆದ್ದರಿಂದಲೇ ಅವರನ್ನು ‘ಆಧುನಿಕ ಭಾರತದ ರಾಷ್ಟ್ರೀಯತಾವಾದದ ಪಿತಾಮಹ’ರೆಂದು ಕರೆಯಲಾಗಿದೆ. 1902ರ ಜುಲೈ 4ರಂದು ನಿಧನ ಹೊಂದಿದರು.
6. ಕೇಶಬ್ ಚಂದ್ರ ಸೇನ್-1838-1884- ಇವರು ಬಂಗಾಳದಲ್ಲಿ 1838ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಇವರು ನಾಯಕತ್ವ ಗುಣಗಳನ್ನು ಹೊಂದಿದ್ದರು ಮತ್ತು ಅನೇಕ ಸಂಘಗಳನ್ನು ಕಟ್ಟಿದರು. 1857ರಲ್ಲಿ ಬ್ರಹ್ಮ ಸಮಾಜದ ಸದಸ್ಯರಾದರು. ಇವರು ದೇಶದಾದ್ಯಂತ ಸಂಚರಿಸಿ, ಅನೇಕ ಶಾಖೆಗಳನ್ನು ತೆರೆದರು. ಇವರು ಅನೇಕ ಶಾಲೆಗಳನ್ನು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸಿದರು. 1861ರ ಬರಗಾಲದ ಸಮಯದಲ್ಲಿ ಬರಪೀಡಿತರಿಗೆ ಸಹಾಯ ಮಾಡಿದರು. ಇವರು ವೈಜ್ಞಾನಿಕ, ಪ್ರಜಾತಾಂತ್ರಿಕ ಹಾಗೂ ಮೌಲ್ಯ ಶಿಕ್ಷಣದ ಪ್ರತಿಪಾದಕರಾಗಿದ್ದರು. ಇವರು ಜಾತ್ಯಾತೀತತೆಗಾಗಿ ಹೋರಾಡಿದ ಮೊದಲಿಗರಲ್ಲಿ ಒಬ್ಬರಾಗಿದ್ದರು. 1872ರಲ್ಲಿ ವಿಶೇಷ ವಿವಾಹ ಕಾಯಿದೆಯನ್ನು ಜಾರಿಗೆ ತರಲು ಬ್ರಿಟಿಷರ ಮೇಲೆ ಒತ್ತಡ ಹೇರಿದರು. ಇದು ಮದುವೆಯಾಗುವ ಕನಿಷ್ಠ ವಯಸ್ಸನ್ನು ಹೆಚ್ಚಿಸಿತು ಮತ್ತು ಇದರಿಂದ ಬಾಲ್ಯ ವಿವಾಹ, ಬಹುಪತ್ನಿತ್ವಗಳು ಕಾನೂನು ಬಾಹಿರವಾದವು. ಇದು ವಿಧವಾ ವಿವಾಹ, ಅಂತರ್ಜಾತೀಯ ವಿವಾಹ ಮತ್ತು ವಿವಾಹ ವಿಚ್ಛೇದನಗಳಿಗೆ ಅವಕಾಶ ನೀಡಿತು. ಇವರು 1884ರಲ್ಲಿ ನಿಧನರಾದರು.
- ಜಮುನ