1. ಖಾನ್ ಅಬ್ದುಲ್ ಗಫಾರ್ ಖಾನ್ - 1890 -1987 - ಪೇಶಾವರ್ ಜಿಲ್ಲೆಯ ಉಥಾನ್ ಜೈ ಎಂಬ ಹಳ್ಳಿಯಲ್ಲಿ ಜನಿಸಿದರು. ‘ಫಕ್ತೂನ್’ ಎಂಬ ಪತ್ರಿಕೆಯ ಮೂಲಕ ಗಡಿನಾಡಿನಲ್ಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಚಾರಗಳನ್ನು ಹರಡಲಾರಂಭಿಸಿದರು. ‘ಕೆಂಪಂಗಿ ದಳ’ ಎಂಬ ಯುವಜನರ ಸಂಘಟನೆಯನ್ನು ಸಂಘಟಿಸಿದ್ದರು ಮತ್ತು ಬ್ರಿಟಿಷರಲ್ಲಿ ಆ ಸಂಘಟನೆ ಭಾರಿ ನಡುಕವನ್ನು ಹುಟ್ಟಿಸಿತ್ತು. ಗಾಂಧೀಜಿಯವರ ಅಭಿಮಾನಿಯಾಗಿದ್ದರೂ ಅವರ ಅಹಿಂಸಾವಾದವನ್ನು ಒಪ್ಪಿರಲಿಲ್ಲ. ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವುದನ್ನು ವಿರೋಧಿಸಿದರು. ಸ್ವಾತಂತ್ರ್ಯದ ನಂತರವೂ ಪಾಕಿಸ್ತಾನದಲ್ಲಿ ಜನ ಚಳುವಳಿಗಳನ್ನು ಸಂಘಟಿಸಿದರು. ಜನತೆ ಪ್ರೀತಿಯಿಂದ ಇವರನ್ನು ಬಾದ್‍ಶಾಹ್ ಖಾನ್ ಮತ್ತು ಗಡಿನಾಡ ಗಾಂಧಿ ಎಂದು ಕರೆದರು.
2. ಅಲ್ಲೂರಿ ಸೀತಾರಾಮರಾಜು – 1897ರ ಜುಲೈ 4ರಂದು ಆಂಧ್ರಪ್ರದೇಶದ ವಿಶಾಖ ಜಿಲ್ಲೆಯ ಪಾಂಡ್ರಕಿ ಎಂಬಲ್ಲಿ ಜನಿಸಿದರು. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಟವನ್ನು ಆರಂಭಿಸಿದ ಇವರು ಮನ್ಯಾ ಬುಡಕಟ್ಟಿನ ಮೇಲೆ ಬ್ರಿಟಿಷರು ನಡೆಸುತ್ತಿದ್ದ ಆಮಾನವೀಯ ದೌರ್ಜನ್ಯವನ್ನು ವಿರೋಧಿಸಿ ಆ ಜನಾಂಗದವರನ್ನು ಸಂಘಟಿಸಲಾರಂಭಿಸಿದರು. 1922ರ ಸೆಪ್ಟೆಂಬರ್ 23ರಂದು ಅವರು ಗುಜ್ರಿಘಾಟ್ ಎಂಬಲ್ಲಿದ್ದ ಸೈನಿಕ ತುಕಡಿಯನ್ನು ನಾಶಗೊಳಿಸಿದರು ಮತ್ತು ಸಾರಿಗೆ, ಸಂಪರ್ಕ ಮತ್ತು ಟೆಲಿಗ್ರಾಫ್ ವ್ಯವಸ್ಥೆಯನ್ನು ಮುರಿದರು. 1924ರ ಮೇ 7ರಂದು ಅವರನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ಅಂದೇ ಅವರನ್ನು ಅಮಾನುಷವಾಗಿ ಕೊಂದರು.
4. ಅರವಿಂದ ಘೋಷ್ – 1872ರ ಆಗಸ್ಟ್ 15ರಂದು ಕಲ್ಕತ್ತಾದಲ್ಲಿ ಜನಿಸಿದರು. 1898ರಲ್ಲಿ ಕ್ರಾಂತಿಕಾರಿ ಚಳುವಳಿಯಲ್ಲಿ ಸಕ್ರಿಯವಾಗಿ ಧುಮುಕಿದರು. ತಮ್ಮ ಬರಹಗಳ ಮೂಲಕ ಸ್ವಾತಂತ್ರ್ಯದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಯತ್ನಿಸಿದರು. ವಿದ್ಯಾರ್ಥಿಗಳ ಗುಪ್ತ ಸಂಘಟನೆಯಲ್ಲಿ ಸೇರಿದರು. 1905ರ ನವೆಂಬರ್ 9ರಂದು ಬೃಹತ್ ಮೆರವಣಿಗೆಯನ್ನು ಸಂಘಟಿಸಿದರು. ಅಲಿಪುರ್ ಬಾಂಬ್ ಕೇಸ್ ನಲ್ಲಿ ಬಂಧಿತರಾಗಿ, ದೋಷಮುಕ್ತರಾಗಿ ಬಿಡುಗಡೆ ಹೊಂದಿದರೂ ಸಹ ಸರ್ಕಾರ ಇವರ ಮೇಲೆ ಕಣ್ಣಿಟ್ಟಿತ್ತು. ಪಾಂಡೀಚೆರಿಗೆ ತೆರಳಿದ ಇವರು, ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. 1950 ಡಿಸೆಂಬರ್ 5ರಂದು ಮರಣ ಹೊಂದಿದರು.
5. ಬಾಲಗಂಗಾಧರ ತಿಲಕ್ – ಮಹಾರಾಷ್ಟ್ರದ ರತ್ನಗಿರಿಯಲ್ಲಿ 1856ರ ಜುಲೈ 23ರಂದು ಜನಿಸಿದರು. 1880ರಲ್ಲಿ ನ್ಯೂ ಇಂಗ್ಲಿಷ್ ಸ್ಕೂಲ್‍ಅನ್ನು ಮತ್ತು 1885ರಲ್ಲಿ ಡೆಕ್ಕನ್ ಎಜುಕೇಷನ್ ಸೊಸೈಟಿಯನ್ನು ತೆರೆದರು. 1881ರಲ್ಲಿ ಕೇಸರಿ ಮತ್ತು ಮರಾಠ ಎಂಬ ಪತ್ರಿಕೆಗಳನ್ನು ಆರಂಭಿಸಿ ಅವುಗಳ ಮೂಲಕ ಬ್ರಿಟಿಷರ ನೀತಿಗಳ ಬಗ್ಗೆ, ರಾಷ್ಟೀಯತಾವಾದದ ಬಗ್ಗೆ ಮತ್ತು ಸ್ವರಾಜ್ಯವನ್ನು ಸಾಧಿಸುವ ಅವಶ್ಯಕತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾರಂಭಿಸಿದರು. ವಿದೇಶಿ ವಸ್ತುಗಳ ಬಹಿಷ್ಕಾರ, ಹರತಾಳ, ಮುಷ್ಕರಗಳನ್ನು ಸಂಘಟಿಸಿದರು. ಕಾಂಗ್ರೆಸ್ ನ ಮಂದಗಾಮಿ ನಿಲುವನ್ನು ಖಂಡಿಸಿದ ಇವರು, 1906ರಲ್ಲಿ ರಾಷ್ಟೀಯವಾದಿ ಪಕ್ಷವನ್ನು ಆರಂಭಿಸಿದರು. 1908ರಲ್ಲಿ ದೇಶದ್ರೋಹದ ಆಪಾದನೆಯ ಮೇಲೆ ಬಂಧಿತರಾದ ಇವರಿಗೆ, 6 ವರ್ಷಗಳ ಕಾಲದ ಶಿಕ್ಷೆಯನ್ನು ವಿಧಿಸಿ ಮಾಂಡಲೆ ಜೈಲಿಗೆ ಕಳಿಸಲಾಯಿತು. ಇಡೀ ಮುಂಬೈ ಪ್ರತಿಭಟನೆ ಮತ್ತು ಮುಷ್ಕರಗಳನ್ನು ಕಂಡಿತು. ಹೋಮ್ ರೂಲ್ ಲೀಗ್‍ನಲ್ಲಿಯೂ ಭಾಗವಹಿಸಿದರು. 1920ರ ಆಗಸ್ಟ್ 1ರಂದು ಮರಣಹೊಂದಿದರು.
6. ಚಂದ್ರಶೇಖರ್ ಆಜಾದ್- ಮಧ್ಯ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ 1906ರಲ್ಲಿ ಜನಿಸಿದ ಇವರು, ವಾರಣಾಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿದ ಇವರು, 15 ವರ್ಷವಾಗಿದ್ದಾಗ ಬಂಧನಕ್ಕೊಳಗಾದರು. ನ್ಯಾಯಾಲಯದಲ್ಲಿ ತಮ್ಮ ಹೆಸರನ್ನು ಆಜಾದ್ ಎಂದು ಘೋಷಿಸಿಕೊಂಡ ಇವರು, ಮತ್ತೆಂದೂ ಬಂಧನಕ್ಕೊಳಗಾಗುವುದಿಲ್ಲವೆಂದು ಪಣತೊಟ್ಟರು. ರಾಮ್‍ಪ್ರಸಾದ್ ಬಿಸ್ಮಿಲ್ಲಾರೊಂದಿಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿದ್ದ ಇವರು, ಬಿಸ್ಮಿಲ್ಲಾರ ಮರಣದ ನಂತರ ಭಗತ್ ಸಿಂಗರೊಡಗೂಡಿ ‘ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ ಅನ್ನು ಆರಂಭಿಸಿದರು. ಅವರು ಆ ಸಂಘಟನೆಯ ಕಮಾಂಡರ್ ಆಗಿದ್ದರು. ಉತ್ತರ ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳನ್ನು ಸಂಘಟಿಸಿದ ಇವರು, ಸ್ನೇಹಿತನೋರ್ವನ ನಂಬಿಕೆ ದ್ರೋಹದಿಂದಾಗಿ ಮಡಿದರು. 1931ರ ಫೆಬ್ರವರಿ 27ರಂದು ಇವರು ಅಲಹಾಬಾದ್‍ನ ಆಲ್ಫ್ರೆಡ್ ಪಾರ್ಕ್‍ನಲ್ಲಿದ್ದಾಗ ಪೋಲೀಸರು ಎಲ್ಲೆಡೆಯಿಂದಲೂ ದಾಳಿ ಮಾಡಿದರು. ಧೀರೋದಾತ್ತವಾಗಿ ಹೋರಾಡಿದ ಇವರು, ಅಂದೇ ಹುತಾತ್ಮರಾದರು.
7. ಚಾಪೇಕರ್ ಸಹೋದರರು – ದಾಮೋದರ್ ಚಾಪೇಕರ್ 1869ರಲ್ಲಿ, ಬಾಲಕೃಷ್ಣ ಚಾಪೇಕರ್ 1873ರಲ್ಲಿ, ವಾಸುದೇವ ಚಾಪೇಕರ್ 1879ರಲ್ಲಿ ಜನಿಸಿದರು. ವಾಸುದೇವ ಬಲವಂತ ಫಡ್ಕೆ ಯವರಿಂದ ಪ್ರಭಾವಿತರಾದ ಇವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ರಾಣಿ ವಿಕ್ಟೊರಿಯಾ ಪ್ರತಿಮೆಗೆ ಮಸಿ ಬಳಿದ ಇವರು, ಮುಂಬೈನಲ್ಲಿ ಪ್ಲೇಗ್ ಇದ್ದಾಗ ರಾಣಿಯ ಉತ್ಸವಕ್ಕೆ ತಯಾರಿ ನಡೆಸುತ್ತಿದ್ದ ಮತ್ತು ಭಾರತೀಯರನ್ನು ಅಪಮಾನ, ದೌರ್ಜನ್ಯಗಳಿಗೆ ಗುರಿಮಾಡಿದ್ದ ಬ್ರಿಟಿಷ್ ಅಧಿಕಾರಿ ರ್ಯಾಂಡ್‍ನನ್ನು ಕೊಲೆಮಾಡಿದರು. ದಾಮೋದರ್‍ನನ್ನು 1898ರ ಏಪ್ರಿಲ್ 18ರಂದು ಗಲ್ಲಿಗೇರಿಸಿದರು. ಬಾಲಕೃಷ್ಣ ಮತ್ತು ವಾಸುದೇವರನ್ನು ನಂತರ ಬಂಧಿಸಲಾಯಿತು ಮತ್ತು ಗಲ್ಲು ಶಿಕ್ಷೆ ನೀಡಲಾಯಿತು.
8. ಚಿದಂಬರಂ ಪಿಳ್ಳೈ – 1882 ರ ಸೆಪ್ಟೆಂಬರ್ 5 ರಂದು ಟ್ರಾವಂಕೂರ್‍ನಲ್ಲಿ ಜನಿಸಿದ ಇವರು, 1906ರಲ್ಲಿ ಸ್ವದೇಶಿ ಸ್ಟೀಮರ್ ಕಂಪನಿಯನ್ನು ಪ್ರಾರಂಭಿಸಿದರು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತಾ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕೆಂದು ಸಾರಿದರು. ಅದಕ್ಕಾಗಿ ಅವರನ್ನು ಬಂಧಿಸಿ 6 ವರ್ಷಗಳ ಕಾಲ ಜೈಲಿನಲ್ಲಿ ಇಡಲಾಯಿತು. ಹೊರಬಂದ ಮೇಲೆ ಕಾರ್ಮಿಕರನ್ನೂ ಸಹ ಸಂಘಟಿಸಲು ಆರಂಭಿಸಿದರು. 1936 ನವೆಂಬರ್ ನಲ್ಲಿ ಮರಣ ಹೊಂದಿದರು.
9. ಚಿತ್ತರಂಜನ್ ದಾಸ್ - ಬಂಗಾಳದಲ್ಲಿ ನವೆಂಬರ್ 1890ರಲ್ಲಿ ಜನಿಸಿದ ಇವರು ಖ್ಯಾತ ವಕೀಲರಾಗಿದ್ದರು. ಅರವಿಂದ ಘೋಷ್ ಮತ್ತಿತರ ಕ್ರಾಂತಿಕಾರಿಗಳ ಪರವಾಗಿ ವಾದಿಸಿ ಅವರನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡಿದರು. ವಿವಿಧ ಕೇಸ್‍ಗಳಲ್ಲಿ ಬಂಧಿತರಾಗುತ್ತಿದ್ದ ಕ್ರಾಂತಿಕಾರಿಗಳನ್ನು ಹಣಕಾಸು ಪಡೆಯದೆ ಅವರ ಪರವಾಗಿ ವಾದಿಸುತ್ತಿದ್ದರು. ನ್ಯೂ ಇಂಡಿಯಾ ಪತ್ರಿಕೆಗೆ ಬಹಳಷ್ಟು ವರ್ಷಗಳ ಕಾಲ ಹಣಕಾಸಿನ ನೆರವನ್ನು ನೀಡಿದರು. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ಶಾಲೆಗಳನ್ನು, ಆಸ್ಪತ್ರೆಗಳನ್ನು ಮತ್ತು ಅನಾಥಾಶ್ರಮಗಳನ್ನು ನಡೆಸಲು ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಸಮರ್ಪಿಸಿದ ಇವರು, 1925ರ ಜೂನ್ 25ರಂದು ನಿಧನರಾದರು.
9. ಚಿತ್ತರಂಜನ್ ದಾಸ್ - ಬಂಗಾಳದಲ್ಲಿ ನವೆಂಬರ್ 1890ರಲ್ಲಿ ಜನಿಸಿದ ಇವರು ಖ್ಯಾತ ವಕೀಲರಾಗಿದ್ದರು. ಅರವಿಂದ ಘೋಷ್ ಮತ್ತಿತರ ಕ್ರಾಂತಿಕಾರಿಗಳ ಪರವಾಗಿ ವಾದಿಸಿ ಅವರನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡಿದರು. ವಿವಿಧ ಕೇಸ್‍ಗಳಲ್ಲಿ ಬಂಧಿತರಾಗುತ್ತಿದ್ದ ಕ್ರಾಂತಿಕಾರಿಗಳನ್ನು ಹಣಕಾಸು ಪಡೆಯದೆ ಅವರ ಪರವಾಗಿ ವಾದಿಸುತ್ತಿದ್ದರು. ನ್ಯೂ ಇಂಡಿಯಾ ಪತ್ರಿಕೆಗೆ ಬಹಳಷ್ಟು ವರ್ಷಗಳ ಕಾಲ ಹಣಕಾಸಿನ ನೆರವನ್ನು ನೀಡಿದರು. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ಶಾಲೆಗಳನ್ನು, ಆಸ್ಪತ್ರೆಗಳನ್ನು ಮತ್ತು ಅನಾಥಾಶ್ರಮಗಳನ್ನು ನಡೆಸಲು ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಸಮರ್ಪಿಸಿದ ಇವರು, 1925ರ ಜೂನ್ 25ರಂದು ನಿಧನರಾದರು.
10. ಜತೀಂದ್ರನಾಥ್ ದಾಸ್ – ಕಲ್ಕತ್ತಾದಲ್ಲಿ 1904ರಲ್ಲಿ ಜನಿಸಿದ ಇವರು, ತಮ್ಮ ಶಾಲಾ ದಿನಗಳಿಂದಲೇ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸರ್ಕಾರಿ ಕಛೇರಿಯ ಮುಂದೆ ಪಿಕೆಟಿಂಗ್ ಮಾಡಿದ್ದಕ್ಕಾಗಿ, 6 ತಿಂಗಳುಗಳ ಕಾಲ ಬಂಧನದಲ್ಲಿದ್ದರು. ಇವರು ಬಾಂಬ್ ತಯಾರಿಸುವಲ್ಲಿ ನಿಪುಣರಾಗಿದ್ದರು. ಭಗತ್ ಸಿಂಗ್‍ರ ಎಚ್‍ಎಸ್‍ಆರ್‍ಎ ಅನ್ನು ಸೇರಿದ ಇವರು, 1929ರಲ್ಲಿ ಬಂಧನಕ್ಕೊಳಗಾದರು. ಜೈಲಿನಲ್ಲಿ ತಮ್ಮನ್ನು ರಾಜಕೀಯ ಖೈದಿಗಳೆಂದು ಪರಿಗಣಿಸಬೇಕೆಂದು, ಸರಿಯಾದ ಆಹಾರ, ಪುಸ್ತಕಗಳನ್ನು ಒದಗಿಸಬೇಕೆಂದು, ಮಾನವೀಯ ವರ್ತನೆ ಇರಬೇಕೆಂದು ಬೇಡಿಕೆಗಳನ್ನು ಮುಂದಿಟ್ಟು ನಿರಾಹಾರ ದೀಕ್ಷೆಯನ್ನು ಆರಂಭಿಸಿದ ಕ್ರಾಂತಿಕಾರಿಗಳಲ್ಲಿ ಇವರೂ ಒಬ್ಬರು. 63 ದಿನಗಳ ಸುದೀರ್ಘ ಕಾಲದ ಉಪವಾಸದ ನಂತರ ಜತಿನ್ ದಾಸ್ ಹುತಾತ್ಮರಾದರು. ನಂತರ ಬ್ರಿಟಿಷ್ ಸರ್ಕಾರ ಕ್ರಾಂತಿಕಾರಿಗಳ ಬೇಡಿಕೆಗಳನ್ನು ಈಡೇರಿಸಿತು.
11. ಜಯಪ್ರಕಾಶ ನಾರಾಯಣ್ - ಲೋಕನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು, 1902ರ ಅಕ್ಟೋಬರ್ 11ರಂದು ಉತ್ತರ ಪ್ರದೇಶದ ಬಾಲರ್ ಲಾನಿ ಎಂಬ ಹಳ್ಳಿಯಲ್ಲಿ ಜನಿಸಿದರು. ಭಾರತ ಬಿಟ್ಟು ತೊಲಗಿ ಚಳುವಳಿಯ ಸಮಯದಲ್ಲಿ ಬಂಧಿತರಾದ ಇವರು, ಬಿಡುಗಡೆಯ ನಂತರ ನೇಪಾಳಕ್ಕೆ ತೆರಳಿ ನೂರಾರು ಯುವಕರಿಗೆ ಗೆರಿಲ್ಲಾ ಯುದ್ಧ ತಂತ್ರದ ತರಬೇತಿ ನೀಡಿ ಭಾರತಕ್ಕೆ ಕಳುಹಿಸಿದರು. ಭಾರತ ಸ್ವಾತಂತ್ರ್ಯಾನಂತರ ಇವರನ್ನು ಕೇಂದ್ರೀಯ ಸಚಿವಾಲಯಕ್ಕೆ ಸೇರಲು ನೆಹರೂರವರು ಆಹ್ವಾನಿಸಿದರೂ ಇವರು ನಿರಾಕರಿಸಿದರು ಮತ್ತು ಸಮಾಜವಾದಿ ಪಕ್ಷಕ್ಕಾಗಿ ದುಡಿದರು. ಇವರು ಚಂಬಲ್ ಕಣಿವೆಯಲ್ಲಿನ ಅನೇಕ ಡಕಾಯಿತರ ಮನಃಪರಿವರ್ತಿಸಿ, ಅವರು ಶರಣಾಗುವಂತೆ ಮಾಡಿದರು. ಭಾರತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದಾಗ, ಸಂಪೂರ್ಣ ಕ್ರಾಂತಿಯ ಕರೆ ನೀಡಿದರು. ಇಂದಿರಾಗಾಂಧಿ ಸರ್ಕಾರವು ಜೂನ್ 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಬಂಧಿತರಾದ ಮೊದಲ ವ್ಯಕ್ತಿ, ಜಯಪ್ರಕಾಶ ನಾರಾಯಣ್. ಇವರು 1979ರ ಅಕ್ಟೋಬರ್ 7ರಂದು ಮರಣ ಹೊಂದಿದರು.
12. ಖುದಿರಾಮ್ ಬೋಸ್ – ಇವರು ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಬೀಬ್‍ಪುರ್ ಎಂಬಲ್ಲಿ ಜನಿಸಿದರು. 1905ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಇವರು, ‘ವಿದ್ಯಾರ್ಥಿ ಭಂಡಾರ’ವನ್ನು ಸೇರಿ ಕ್ರಾಂತಿಕಾg ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟಗಾರರಿಗೆ ದುರ್ಬರ ಶಿಕ್ಷೆಯನ್ನು ವಿಧಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ನ್ನು ಕೊಲ್ಲಲು ‘ಯುಗಾಂತರ ಕ್ರಾಂತಿದಳ’ ದಿಂದ ನೇಮಕವಾದರು. ಈ ಪ್ರಯತ್ನ ವಿಫಲರಾದರೂ ಸಹ, ಇದು ಬ್ರಿಟಿಷರಲ್ಲಿ ನಡುಕವನ್ನು ಹುಟ್ಟಿಸಿತು. ನಂತರ ಇವರನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು. ಇವರನ್ನು 1908ರ ಆಗಸ್ಟ್ 11ರಂದು ಗಲ್ಲಿಗೇರಿಸಲಾಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಬಂಗಾಳದ ಮೊದಲ ಹುತಾತ್ಮರಾದರು.
13. ಲಾಲಾ ಲಜಪತ್ ರಾಯ್ - ಪಂಜಾಬಿನ ಫಿರೋಜ್‍ಪುರ್ ಜಿಲ್ಲೆಯ ದುಡಿಕೆ ಗ್ರಾಮದಲ್ಲಿ 1865ರ ಜನವರಿ 28ರಂದು ಜನಿಸಿದರು. ಇವರೂ ಸಹ ಪ್ರಖ್ಯಾತ ವಕೀಲರಾಗಿದ್ದರು. ಇವರು ಮಹಿಳೆಯರ ವಿಮೋಚನೆಗಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಕಾಂಗ್ರೆಸ್‍ನ ತೀವ್ರವಾದಿಗಳಲ್ಲಿ ಪ್ರಮುಖರಾಗಿದ್ದ ಇವರು, ಕಾಂಗ್ರೆಸ್ಸಿಗೆ ಒಂದು ಹೊಸ ಧೋರಣೆಯನ್ನು ನೀಡಲು ಪ್ರಯತ್ನಿಸಿದರು. ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿಗಳು ದೇಶದೆಲ್ಲೆಡೆ ಹರಡಬೇಕೆಂಬುದು ಇವರ ಆಕಾಂಕ್ಷೆಯಾಗಿತ್ತು. ಸ್ವರಾಜ್ ಪಕ್ಷದ ಸ್ಥಾಪಕರಲ್ಲೊಬ್ಬರಾದ ಇವರು ಬ್ರಿಟಿಷ್ ಶಾಲೆಗಳನ್ನು ವಿರೋಧಿಸಿ ಲಾಹೋರಿನಲ್ಲಿ ರಾಷ್ಟೀಯ ಶಾಲೆ ಆರಂಭಿಸಿದರು. ಹಲವಾರು ಬಾರಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರು. ‘ಸೈಮನ್ ಹಿಂತಿರುಗು’ ಚಳುವಳಿಲ್ಲಿ ಪೋಲೀಸರ ಹೊಡೆತಕ್ಕೆ ಸಿಕ್ಕಿ ತೀವ್ರವಾಗಿ ಗಾಯಗೊಂಡರು ಮತ್ತು ಅದರಿಂದಲೇ 1929ರ ನವೆಂಬರ್ 16ರಂದು ನಿಧನರಾದರು.
14. ಮದನ್ ಲಾಲ್ ಧಿಂಗ್ರ - ಪಂಜಾಬಿನಲ್ಲಿ ಜನಿಸಿದ ಇವರು, ‘ಅಭಿನವ ಭಾರತ್’ ಮತ್ತು ‘ಸ್ವತಂತ್ರ್ಯ ಭಾರತ್ ಸಂಘ’ ಗಳಲ್ಲಿ ಸಕ್ರಿಯರಾಗಿದ್ದರು. ಇವರು ಬಾಂಬ್ ಗಳನ್ನು ಮಾಡುವುದರಲ್ಲಿ ನಿಪುಣರಾಗಿದ್ದರು. ಭಾರತೀಯರನ್ನು ತುಳಿಯಲು ಬ್ರಿಟೀಷರಿಗೆ ಸಲಹೆಗಳನ್ನು ಕೊಡುತ್ತಿದ್ದ, ಬ್ರಿಟಿಷರ ರಾಜಕೀಯ ಸಲಹೆಗಾರರಾದ, ಸರ್ ವಿಲಿಯ ಕರ್ಜನ್ ವೈಲಿಯನ್ನು ಕೊಂದರು. ಇವರನ್ನು ಆಗಸ್ಟ್ 9ರಂದು ಗಲ್ಲಿಗೇರಿಸಿದರು.
15. ಮೈಲಾರ ಮಹಾದೇವ – ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು ಕರ್ನಾಟಕಕ್ಕೆ ಸೇರಿದವರು. ಹಲವು ಬಾರಿ ಬಂಧನಕ್ಕೊಳಗಾಗಿದ್ದಾರೆ. ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಯುವಜನರನ್ನು ಸಂಘಟಿಸಿ “ಕಬೀರ” ಎನ್ನುವ ಸಂಘವನ್ನು ಕಟ್ಟಿದರು. ಸರ್ಕಾರದ ನಡೆಯದಂತೆ ಎಲ್ಲಾ ರೀತಿಯ ಅಡೆತಡೆಗಳನ್ನೊಡ್ಡಿದರು. ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬ್ರಿಟಿಷ್ ಅಧಿಕಾರಿಗಳಿಂದ ಹಣವನ್ನು ಲೂಟಿಮಾಡಲು ಹೋಗಿ, ಏಪ್ರಿಲ್ 1, 1943ರಲ್ಲಿ ಪೋಲೀಸರಿಂದ ಹತರಾದರು.
16. ರಾಜಗುರು - 1909 – 1931 – ಇವರು ಮಹಾರಾಷ್ಟ್ರದ ಖೋಡ ಎಂಬಲ್ಲಿ 1909ರಲ್ಲಿ ಜನಿಸಿದರು. ಬನಾರಸ್ ನ ಸಂಸ್ಕೃತ ಶಾಲೆಯಲ್ಲಿ ಕಲಿತು ಶಿಕ್ಷಕರಾದರು. ಭಗತ್ ಸಿಂಗ್ ರ ಕ್ರಾಂತಿಕಾರಿ ಸಂಘಟನೆಯನ್ನು ಸೇರಿ, ಸಾಂಡರ್ ನ ಕೊಲೆಯಲ್ಲಿ ಭಾಗಿಯಾಗಿ ಬಂಧಿತರಾದರು. ಇವರನ್ನು ಭಗತ್ ಸಿಂಗ್ ಮತ್ತು ಸುಖದೇವ್ ರ ಜೊತೆ ಮಾರ್ಚ್ 23, 1931ರಲ್ಲಿ ಗಲ್ಲಿಗೇರಿಸಲಾಯಿತು.
17. ರಾಮ್ ಪ್ರಸಾದ್ ಬಿಸ್ಮಿಲ್ – 1897ರಲ್ಲಿ ಉತ್ತರ್ ಪ್ರದೇಶದಲ್ಲಿ ಜನಿಸಿದ ಇವರು, ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಧುಮುಕಿದರು. ತಮ್ಮ ದೇಶಪ್ರೇಮಿ ಪುಸ್ತಕಗಳ ಮೂಲಕ ಜನರನ್ನು ಪ್ರೇರೇಪಿಸಿದರು. ಪೋಲಿಸರು ಅವರ ವಿರುದ್ಧ ಮೊಕದ್ದಮೆ ಹೂಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆಯನ್ನೊಡ್ಡಿತು. ಆದರೆ ಅವರು ಅಶ್ಫಾಕುಲ್ಲಾ ಮತ್ತಿತರರೊಂದಿಗೆ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಆರಂಭಿಸಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ಸ್ವಾತಂತ್ರ್ಯ ಚಳುವಳಿಗಾಗಿ ಬ್ರಿಟಿಷರಿಂದಲೇ ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಕಾಕೋರಿ ಎಂಬಲ್ಲಿ ರೈಲನ್ನು ನಿಲ್ಲಿಸಿ ಸರ್ಕಾರಿ ಹಣವನ್ನು ದರೋಡೆ ಮಾಡಿದರು. ನಂತರ ಬಂಧನಕ್ಕೊಳಗಾದ ಇವರನ್ನು ಇವರ ಸಹಚರರಾದ ಅಶ್ಫಾಕುಲ್ಲಾ, ರಾಜೇಂದ್ರ ಲಾಹಿರಿ ಮತ್ತು ಸೋಹನ್ ಸಿಂಗ್ ರೊಂದಿಗೆ 19ನೇ ಡಿಸೆಂಬರ್ 1925 ರಲ್ಲಿ ಗಲ್ಲಿಗೇರಿಸಲಾಯಿತು.
18. ರಾಸ್ ಬಿಹಾರಿ ಬೋಸ್ – 1886ರಲ್ಲಿ ಬಂಗಾಳದಲ್ಲಿ ಜನಿಸಿದ ಇವರು, ಕಲ್ಕತ್ತಾದ ಅನುಶೀಲನ ಸಮಿತಿಯ ಸದಸ್ಯರಾಗಿದ್ದರು. ವೈಸ್‍ರಾಯ್ ಹಾರ್ಡಿಂಜೆಯ ವಿಫಲ ಕೊಲೆ ಯತ್ನದ ನಂತರ ತಲೆಮರೆಸಿಕೊಂಡರು. ಭಾರತೀಯ ಸೈನ್ಯದಲ್ಲಿ ಬಂಡಾಯವನ್ನು ಯೋಜಿಸಿದ್ದರು. ಆದರೆ ದೇಶದ್ರೋಹಿಯೊಬ್ಬನ ಕಾರಣದಿಂದಾಗಿ ಅದು ವಿಫಲವಾಯಿತು. ಅವರು 1915ರ ಮೇ 12ರಂದು ಮಾರುವೇಷದಲ್ಲಿ ಜಪಾನಿಗೆ ತೆರಳಿದರು. ಅಲ್ಲಿ ಇಂಡಿಯನ್ ಇಂಡಿಪೆಂಡೆಂಟ್ ಲೀಗ್‍ಅನ್ನು ಆರಂಭಿಸಿದರು. ಸುತ್ತಲಿನ ದೇಶಗಳಲ್ಲಿ ಇದ್ದ ಭಾರತೀಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರುವಂತೆ ಪ್ರೇರೇಪಿಸಿದರು. 1945ರ ಜನವರಿ 21ರಂದು ತಮ್ಮ ಲೀಗ್ ಅನ್ನು ನೇತಾಜಿಯವರಿಗೆ ವಹಿಸಿಕೊಟ್ಟು ನಿಧನರಾದರು.
19. ಸುಭಾಷ್ ಚಂದ್ರ ಬೋಸ್ –ಒರಿಸ್ಸಾದ ಕಟಕ್‍ನಲ್ಲಿ 1897ರ ಜನವರಿ 23ರಂದು ಜನಿಸಿದರು. ಚಿಕ್ಕಂದಿನಿಂದಲೇ ದೇಶಪ್ರೇಮಿಯಾಗಿ ಬೆಳೆದ ಇವರು, ಐಸಿಎಸ್ ಪರೀಕ್ಷೆಯನ್ನು ಪಾಸಾದರೂ ಸಹ ಬ್ರಿಟಿಷ್ ನೌಕರಿಯನ್ನು ಸ್ವೀಕರಿಸದೆ ಚಳುವಳಿಗೆ ಧುಮುಕಿದರು. ಗಾಂಧೀಜಿಯವರ ಇಚ್ಛೆಗೆ ವಿರುದ್ಧವಾಗಿ ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1940ರಲ್ಲಿ ಗೃಹಬಂಧನಕ್ಕೊಳಗಾದರು, ನಂತರ ಮಾರುವೇಶದಲ್ಲಿ ಜರ್ಮನಿಗೆ ನಂತರ ಜಪಾನ್‍ಗೆ ತಪ್ಪಿಸಿಕೊಂಡು ಹೋದರು. ಅಲ್ಲಿ ಇಂಡಿಯನ್ ಇಂಡಿಪೆಂಡೆಂಟ್ ಲೀಗ್‍ನ ನೇತೃತ್ವವನ್ನು ವಹಿಸಿಕೊಂಡ ಅವರು, ಆಜಾದ್ ಹಿಂದ್ ಫೌಜ್ ಅನ್ನು ಸಂಘಟಿಸಿದರು. ಮಲಯಾ, ಸಿಂಗಪೂರ್, ಥಾಯ್ಲಾಂಡ್ ಮತ್ತು ಬರ್ಮಾದಲ್ಲಿ ನೆಲೆಸಿದ್ದ ಭಾರತೀಯರ ಸಹಾಯದಿಂದ ಸೈನ್ಯವನ್ನು ಕಟ್ಟಿದರು. 1945ರಲ್ಲಿ ಬ್ರಿಟಿಷರ ವಿರುದ್ಧ ಸಮರವನ್ನು ಸಾರಿ ಅಂಡಮಾನ್‍ನಲ್ಲಿ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸಿದರು. ನಂತರ ಆಗಸ್ಟ್ 13, 1945 ರಂದು ಜಪಾನ್‍ನಿಂದ ತೆರಳುವಾಗ, ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೊಳಗಾಯಿತು.
20. ಸುಖ ದೇವ್ – 1907-1931- ಪಾಕಿಸ್ತಾನದಲ್ಲಿರುವ ಪಂಜಾಬಿನ ಲಾಯಲ್ ಪುರದಲ್ಲಿ ಮೇ 15, 1907ರಲ್ಲಿ ಜನಿಸಿದರು. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ಕಲಿತ ಇವರು ಭಗತ್ ಸಿಂಗ್ ಮತ್ತು ಇತರರೊಡಗೂಡಿ “ನೌ ಜವಾನ್ ಭಾರತ್ ಸಭಾ”ವನ್ನು ಸೇರಿದರು. ಪಂಜಾಬ್ ಪ್ರಾಂತ್ಯದ ಸಂಚಾಲಕರಾದರು. ಇವರೂ ಕೂಡ ಸಾಂಡರ್ಸ್ ನ ಕೊಲೆಯಲ್ಲಿ ಭಾಗಿಯಾಗಿ ಬಂಧಿತರಾದರು. ಇವರನ್ನು ಭಗತ್ ಸಿಂಗ್ ಮತ್ತು ರಾಜಗುರುರವರ ಜೊತೆ ಮಾರ್ಚ್ 23, 1931ರಲ್ಲಿ ಗಲ್ಲಿಗೇರಿಸಲಾಯಿತು.
- ದೀಪಶ್ರೀ ಜೆ
2 ಕಾಮೆಂಟ್‌ಗಳು:
💐💐💐💐💐💐💐💐💐💐💐💐💐
💐💐💐💐💐💐💐💐💐💐💐💐💐
ಕಾಮೆಂಟ್ ಪೋಸ್ಟ್ ಮಾಡಿ