ಹಿರಿಯಣ್ಣಯ್ಯನಿಗೆ ಇಬ್ಬರು ಪುತ್ರರು- ಪುಟ್ಟು, ಮಾಧು. ಪತ್ನಿ ಭಾಗಿರಥಮ್ಮ ,ಹಿರಿ ಸೊಸೆ ಪಾತು ಕಿರಿ ಸೊಸೆ ಸಾತು, ಸೋದರಿ ನಾಗಮ್ಮ(ವಿಧವೆ) ...ಇಷ್ಟು ಮಂದಿ ಆ ಮನೆಯ ಸದಸ್ಯರು. ಪುಟ್ಟು ಓದಿನಲ್ಲಿ ಯಾವಾಗ್ಲೂ ಫಸ್ಟ್ ....ಪುಸ್ತಕದ ಹುಳೂನೆ ಅವ. ಅದು ಬಿಟ್ಟರೆ ಲೋಕದಲ್ಲಿ ಎಲ್ಲವೂ ವ್ಯರ್ಥವೆಂಬ ಭಾವನೆ ಅವನದು. ಖಾಯಿಲೆಯ ತಾಯಿಯನ್ನೂ ಲೆಕ್ಕಿಸದವ.
ಮಾಧು....ಬಡಪಾಯಿ... ಓದಿನಲ್ಲಿ ಹಿಂದೆ ಗುಣದಲ್ಲಿ ಮುಂದೆ. ತನ್ನ ಆಟ ಪಾಠಗಳನ್ನು ಮರೆತು ತಾಯಿಗೆ ಔಷಧಿ, ಸಣ್ಣ ಪಾಪಗೆ ಹಾಲು ತರುವಲ್ಲಿ ಅವರ ಆರೈಕೆ ಮಾಡೋದರಲ್ಲೆ ಅವನು ಮಗ್ನನಾಗಿರುತ್ತಾನೆ.
ಹಿರಿಯಣ್ಣಯ್ಯನಿಗೆ ಪುಟ್ಟುವೇ ಒಂದು ಕೋಡಿದ್ದಂತೆ, ಮನೆಯ ಕೀರ್ತಿಪುತ್ರರತ್ನನೆಂದು ಅವನಿಗೆ ಹೆಚ್ಚೇ ಸಮ್ಮಾನ ಸೌಕರ್ಯಗಳನ್ನು ಮಾಡುತ್ತಿರುತ್ತಾನೆ. ಮಾಧು ಒಂದು ದಂಡಪಿಂಡ ಪಾಸಾಗದವನೆಂದು ಅವನಿಗೆ ಊಟದಲ್ಲೂ ಕೊರತೆ ಮಾಡಿ ಮಲಗಲು ಹೊದಿಕೆಯೂ ನೀಡದೆ ಶಿಕ್ಷಿಸುತ್ತಿರುತ್ತಾನೆ.
ಒಂದಿನ ರಾತ್ರಿ ಮಲಗಿರೋವಾಗ ಮನೆಗೆ ಬೆಂಕಿ ಹತ್ತುದ ಕಂಡು ಪುಟ್ಟು ತನ್ನ ಪಾಡಿಗೆ ತಾ ಎದ್ದು ಹೊರ ಓಡುತ್ತಾನೆ. ಆದರೆ ಮಾಧು ತನ್ನ ತಾಯಿಯನ್ನ ಹಸುಳೆ ಕಂದನ್ನ ಒಳ ಮಲಗಿದ್ದ ಅಪ್ಪನನ್ನ ಎಬ್ಬಿಸಿ ಕಾಪಾಡುತ್ತಾನೆ. ಪುಟ್ಟೂನ ಮರೆತನೆಂದು ಅಪ್ಪನು ಶಪಿಸಿ ದೂರಿದಾಗ ಅವನ ಹುಡುಕಲು ಪ್ರಾಣವನ್ನು ಲೆಕ್ಕಿಸದೆ ಬೆಂಕಿ ಹತ್ತಿದ್ದ ಭಾಗಕ್ಕೆ ಹೋಗಿ ಗಾಯಗೊಂಡು ಮೂರ್ಛೆ ಹೋಗುತ್ತಾನೆ. ಪುಟ್ಟು ಹೊರಗೆ ಇದ್ದಾನೆಂದು ತಿಳಿದು ರಾಮಾಶಾಸ್ತ್ರಿ (ಹಿರಿಯಣ್ಣನಿಗೆ ಪರಿಚಿತ) ಮತ್ತು ನೆರೆಹೊರೆಯವರು ಬಂದು ಮಾಧೂನ ಕಾಪಾಡ್ತಾರೆ. ಮಾಧುವಿನ ಧೈರ್ಯ ಮತ್ತು ಸಮಯಪ್ರಜ್ಞೆಗೆ ತುಂಬಾ ಮೆಚ್ಕೋತಾರೆ. ಆಗ ರಾಮಾಶಾಸ್ತ್ರಿ ಹೇಳುವ ಮಾತು...."ಈಗ್ಲಾದ್ರೂ ತಿಳೀತಾ ಹಿರಿಯಣ್ಣೋರೆ.. ಪಾಸಾದ್ರೇನು ಆಗ್ದಿದ್ರೇನು... ಟೊಳ್ಳು ಟೊಳ್ಳೇ ಗಟ್ಟಿ ಗಟ್ಟೀನೆ".
ಕನ್ನಡ ನಾಟಕ ರಂಗವು ಹಳೇ ಪುರಾಣದ ನಾಟಕಗಳನ್ನೆ ಮತ್ತೆ ಮತ್ತೆ ತಿರುಗಿ ಮುರುಗಿ ಅವನ್ನೇ ಆಡಿಸುತ್ತ ಜನರಿಗೆ ನಾಟಕಗಳಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಂತಹ ಕಾಲದಲ್ಲಿ ಹೊಸ ಪ್ರಯೋಗದಂತೆ ಬಂದು ಯಶಸ್ವಿಕಂಡ ಕೈಲಾಸಂರ ಮೊದಲ ನಾಟಕವೇ 'ಟೊಳ್ಳು ಗಟ್ಟಿ ಅಥವಾ ಮಕ್ಕಳಿಸ್ಕೂಲು ಮನೇಲಲ್ವೆ'. ಸಮಾಜದ ಓರೆಕೋರೆಗಳನ್ನು ತಿದ್ದುವ ನಾಟಕಗಳನ್ನು ಹೊರತಂದ ಕೈಲಾಸಂರವರು (ಸ್ವತಃ ಓದಿ ಸ್ವತಃ ಓದಿನಲ್ಲಿ ಮುಂದಿದ್ದರೂ ಅದೊಂದೆ ಮುಖ್ಯವಲ್ಲ ಎಂಬುದನ್ನು ಮನಮುಟ್ಟಿಸುತ್ತಾರೆ) 'ಟೊಳ್ಳು ಗಟ್ಟಿ'ಯಲ್ಲಿ ಸಮಾಜದಲ್ಲಿನ ಶಿಕ್ಷಣದ ಬಗೆಗಿನ ತಪ್ಪು ಕಲ್ಪನೆಯನ್ನು ಬಹಳ ಸೂಕ್ಷ್ಮವಾಗಿ ಟೀಕಿಸಿದ್ದಾರೆ.
ಅವರ ಈ ನಾಟಕದಲ್ಲಿ ಆಡಂಬರವಿಲ್ಲ ಸಂಬಂಧಗಳ ವೈಭವ ವರ್ಣನೆಯಿಲ್ಲ ನಾಯಕನ ಆರ್ಭಟವಿಲ್ಲ ಬದಲಿಗೆ ಸಾಮಾನ್ಯ ವಿದ್ಯಾರ್ಥಿ ಅದರಲೂ ಪಾಸಾಗದೆ ಅವಮಾನಿತನೂ ಆದರೆ ಸರಳ ಹೃದಯವಂತನು.
ಈ ಸಹಜತೆಗೆ ನೈಜತೆಗೆ ಜನರು ಮಾರುಹೋದರು. ಜೀವನ ಕನ್ನಡಿಗಳಂತ ಈ ನಾಟಕಗಳು ಅತಿ ಕಡಿಮೆ ಸಮಯದಲ್ಲೇ ಜನರ ಮನಸೂರೆಗೊಂಡವು. ಕೈಲಾಸಂರಿಂದ ನಾಟಕ ಕ್ಷೇತ್ರದ ದಿಕ್ಕೇ ಬದಲಾದ್ದರಿಂದ ಕ್ರಾಂತಿಕಾರಕ ಪ್ರಯೋಗಗಳು ನಡೆದುದರಿಂದ
ಆಧುನಿಕ ಕನ್ನಡ ನಾಟಕ ರಂಗದ ಹರಿಕಾರನೆಂದೆನಿಸಿಕೊಂಡರು.
ಈ ನಾಟಕದ ಮುಖ್ಯ ಪಾತ್ರಗಳಾದ ಮಾಧು ಮತ್ತು ನಾಗಮ್ಮ ಪಾತ್ರಗಳನ್ನು ಕೈಲಾಸಂರೇ ಖುದ್ದು ನಟಿಸಿ ಸೈ ಅನಿಸಿಕೊಂಡುದುದೀಗ ಇತಿಹಾಸವಷ್ಟೆ. ನಾಟಕದಲ್ಲಿ ಮಾಧುವಿನಂತೆ ಹೆಚ್ಚು ಗಮನ ಸೆಳೆಯುವ ಪಾತ್ರ ವಿಧವೆ..ನಾಗಮ್ಮ. ಬ್ರಾಹ್ಮಣರ ಮನೆಯಲ್ಲಿ ಮುಖಕ್ಕೆ ಅರಿಶಿನ ಬಳಸ್ದೆ ಸೋಪು ಬಳಸಿ ಅಪಚಾರವೆಸೆಗಿದ ಹಿರಿ ಸೊಸೆ ಪಾತುಗೆ ನಾಗಮ್ಮ ಮಂಗಳಾರತಿ ಎತ್ತುವ ದೃಶ್ಯದಲ್ಲೆ ಆಕೆಯ ಮೊದಲ ಆಗಮನ. ಆಕೆಯ ಸಿಡಿಮಿಡಿ, ವಿನಾಕಾರಣ ಸಾತು (ಸಾತು ಮನೆಗೆ ಬಂದಾಗಲೇ ಪತಿ ತೀರಿಕೊಂಡನೆಂದು,ಅವಳ ಕಾಲ್ಗುಣ ಚೆನ್ನಾಗಿಲ್ಲವೆಂದು) ಪಾತುವನ್ನು(ಶ್ರೀಮಂತರ ಹೆಣ್ಣು ಸೊಕ್ಕೆಂದು ಕೆಲಸ ಮಾಡಳೆಂದು) ಶಪಿಸುವಾಗ ಕೋಪ ಬರುವುದು ಸಹಜ. ಆದರೆ ಕೈಲಾಸಂರು ನಾಗಮ್ಮನ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಯನ್ನು ಅಣಕಿಸಿದ್ದಾರೆ. ಇದೇ ಸಂಸಾರದ ಕಥೆಯನ್ನು ಮುಂದುವರೆಸಿ 'ಸಾತು ತೌರ್ಮನೆ' ನಾಟಕದಲ್ಲಿ ಸಾತುವಿನ ತಾಯಿ ನರಸಮ್ಮ ನಾಗಮ್ಮಳ ಮನಸ್ಥಿತಿ ಗೆ ಆಕೆಗೆ ಬಂದಿರುವ ಕಷ್ಟವೇ ಕಾರಣಳೆಂದು ಮಗಳಿಗೆ ಸಮಾಧಾನಿಸುತ್ತಾಳೆ. ಆಕೆಯ ಕಷ್ಟ ಕೊರಗುಗಳಿಗೆ ಮರುಗುತ್ತಾಳೆ.
ಹೀಗೆ ಸಮಾಜದ ಸಮಸ್ಯೆಗಳನ್ನು ತಿದ್ದುವಂಥ ಕಥಾವಸ್ತುವಿರುವ ಅವರ ನಾಟಕಗಳ ಭಾಷಾಶೈಲಿ ವಿಶೇಷವಾದುದು.ಆರಂಭದಲ್ಲಿ ಓದಿಕೊಳ್ಳಲು ಕ್ಲಿಷ್ಟವೆನಿಸಿದರೂ ಪಳಗಿದ ಮೇಲೆ ನವೀನ ರಂಜನೆ ಕೊಡುವ ಶೈಲಿ ಅದು. ಅದನ್ನು ಓದಿಯೇ ಅನುಭವಿಸಬೇಕು.
ಕೂತಲ್ಲಿ ಕಂಪನಿ ನಿಂತಲ್ಲಿ ನಾಟಕ ಎಂಬಂತೆ ಅವರು ನಾಟಕಗಳನ್ನು ಎಂದೂ ಕೂತು ಬರೆದವರಲ್ಲ. ಅವರಿಂದ ಕೇಳಿಸಿಕೊಂಡ ಸ್ನೇಹಿತರು ಸಂಗ್ರಹಿಸಿದ್ದೆಂದರೆ ಆಶ್ಚರ್ಯವಾಗುವುದು. ಅಪಾರ ಪಾಂಡಿತ್ಯವಂತರೂ ಮುಖ್ಯವಾಗಿ ಮಾನವೀಯತೆಯ ಪ್ರತಿರೂಪದಂತಿರುವ ಕೈಲಾಸಂರಿಂದ ಕನ್ನಡ ಭಾಷೆಯು ಹೊಸ ಮೆರುಗನ್ನು ಪಡೆದು 'ಕನ್ನಡಕ್ಕೊಬ್ಬನೇ ಕೈಲಾಸಂ' ಎಂಬ ಬಿರುದುನಿಂದ ಕನ್ನಡಿಗರ ಮನದಲಿ ವಿಶೇಷ ಸ್ಥಾನ ಪಡೆದರು.
- ಉಷಾಗಂಗೆ
- ಉಷಾಗಂಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ