1. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ – ಯುದ್ಧಾನಂತರ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಕೊಡುವ ತನ್ನ ಆಶ್ವಾಸನೆಯನ್ನು ಗಾಳಿಗೆ ತೂರಿ 1919ರಲ್ಲಿ ಮಾಂಟೆಗೊ- ಚೆಮ್ಸ್‍ಫೋರ್ಡ್ ಸುಧಾರಣೆಗಳನ್ನು ಮತ್ತು ಜೊತೆಗೆ ರೌಲತ್ ಕಾಯಿದೆಯನ್ನು ಜಾರಿಗೆ ತಂದಿತು. ರೌಲತ್ ಕಾಯಿದೆಯಲ್ಲಿ ಕ್ರಾಂತಿಕಾರಿ ಮತ್ತು ರಾಷ್ಟ್ರೀಯವಾದಿ ಚಟುವಟಿಕೆಗಳನ್ನು ದಮನಗೊಳಿಸುವ ಕ್ರಮಗಳನ್ನು ಒಳಗೊಂಡಿತ್ತು. ಇದರಿಂದ ನಿರಾಸೆಗೊಂಡ ಜನತೆ ಚಳುವಳಿಯ ಹಾದಿಯನ್ನು ತುಳಿದರು. ಗಾಂಧೀಜಿಯವರು ಏಪ್ರಿಲ್ 6 ರಂದು ಅಖಿಲ ಭಾರತ ಪ್ರತಿಭಟನಾ ದಿನವಾಗಿ ಆಚರಿಸಲು ಕರೆ ನೀಡಿದರು. ದೆಹಲಿ ಮತ್ತು ಮುಂಬೈನಲ್ಲಿ ಪೋಲಿಸರು ಶಾಂತ ಪ್ರತಿಭಟನಾಕಾರರ ಮೇಲೆ ಗುಂಡು ಸುರಿಸಿ ಜನರನ್ನು ಕೊಂದರು ಇದಕ್ಕೆ ಪ್ರತಿಯಾಗಿ ದೇಶದಾದ್ಯಂತ ಹಿಂದೂ- ಮುಸ್ಲಿಂರ ಐಕ್ಯ ಹೋರಾಟ ಆರಂಭವಾಯಿತು. ಮಾರ್ಚ್ 30, 1919ರಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾಬಾಗ್ ಎಂಬ ಪಾರ್ಕ್‍ನಲ್ಲಿ ಡಾ. ಸೈಫುದ್ದೀನ್ ಕಿಚ್ಲು ಮತ್ತು ಡಾ. ಸತ್ಯಪಾಲ್‍ರವರ ನೇತೃತ್ವದಲ್ಲಿ ಸಭೆ ಸೇರಲಾಯಿತು. ಪಂಜಾಬಿನ ಗವರ್ನರ್ ಆದ ಜನರಲ್ ಡಯರ್ ಇದ್ದ ಒಂದೇ ಮಾರ್ಗಕ್ಕೆ ಅಡ್ಡವಾಗಿ ನಿಂತು ಜನರ ಮೇಲೆ ಗುಂಡಿನ ಮಳೆಗರೆಯುವಂತೆ ಪೋಲಿಸರಿಗೆ ಆದೇಶವನ್ನು ನೀಡಿದನು. ಸುಮಾರು 400 ಜನರು ಹತ್ಯೆಯಾದರು ಮತ್ತು 2000 ಜನರು ತೀವ್ರವಾಗಿ ಗಾಯಗೊಂಡರು. ಒಂದು ಇಡೀ ತಿಂಗಳು ಪಂಜಾಬ್ ಭಾರತದಿಂದ ಬೇರ್ಪಟ್ಟಿತ್ತು ಮತ್ತು ತೀವ್ರವಾದ ಪೋಲೀಸ್ ದೌರ್ಜನ್ಯಕ್ಕೆ ಒಳಗಾಗಿತ್ತು.
2. ಅಸಹಕಾರ ಚಳುವಳಿ - 1920-1922 - ಪಂಜಾಬಿನ ಹತ್ಯಾಕಾಂಡ ಮತ್ತು ರೌಲತ್ ವಿರೋಧಿ ಕಾಯ್ದೆ ಚಳುವಳಿಯ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಿ ಕಾಂಗ್ರೆಸ್ ಅಸಹಾಕಾರ ಚಳುವಳಿಯನ್ನು ಆರಂಭಿಸಿತು. ದೇಶದಾದ್ಯಂತ ಜನತೆ ಬ್ರಿಟಿಷ್ ಸರ್ಕಾರದೊಂದಿಗೆ ಅಸಹಕಾರ ವ್ಯಕ್ತಪಡಿಸಲಾರಂಭಿಸಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಹೊರನಡೆದರು. ಜನತೆ ಸರ್ಕಾರಿ ಕಛೇರಿಗಳನ್ನು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು. ಎಲ್ಲೆಡೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಯಿತು. ಸಾವಿರಾರು ಜನರನ್ನು ಬಂಧಿಸಲಾಯಿತು. 1921ರ ಡಿಸೆಂಬರ್ 17 ರಂದು ವೇಲ್ಸ್‍ನ ರಾಜಕುಮಾರನ ಆಗಮನವನ್ನು ವಿರೋಧಿಸಿ ಬಾಂಬೆಯಲ್ಲಿ ಹರತಾಳವನ್ನು ಸಂಘಟಿಸಲಾಯಿತು. ಚಳುವಳಿಕಾರರ ಮೇಲೆ ಎಷ್ಟು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಯಿತೆಂದರೆ ಬೀದಿಗಳಲ್ಲಿ ಅಂದು ರಕ್ತ ಹರಿಯಿತು. ಚೌರಿಚೌರಾ ಘಟನೆಯ ನಂತರ ಗಾಂಧೀಜಿ ಚಳುವಳಿ ಅಹಿಂಸಾ ಮಾರ್ಗವನ್ನು ತೊರೆದಿದೆ ಎಂಬ ಕಾರಣವನ್ನು ನೀಡಿ ಚಳುವಳಿಯನ್ನು ಹಿಂತೆಗೆದುಕೊಂಡರು. ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರೂ, ಲಾಲಾಜಿ, ನೇತಾಜಿ, ನೆಹರೂ ಮತ್ತು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಈ ನಿರ್ಧಾರವನ್ನು ಪ್ರತಿಭಟಿಸಿದರು. ಬ್ರಿಟಿಷರಲ್ಲಿ ಭಯ-ನಡುಕಗಳನ್ನು ಹುಟ್ಟಿಸಿದ್ದ ಚಳುವಳಿಯನ್ನು ಕೈಬಿಡಬಾರದೆಂದು ಕೇಳಿಕೊಂಡರು. ಆದರೆ ಗಾಂಧೀಜಿ ಜಗ್ಗಲಿಲ್ಲ.
3. ಸೈಮನ್ ಹಿಂತಿರುಗು ಚಳುವಳಿ - 1919ರ ಕಾಯ್ದೆಯ ಜಾರಿಯ ಪರಿಶೀಲನೆಗಾಗಿ ಕೇವಲ ಬ್ರಿಟಿಷ್ ಸದಸ್ಯರನ್ನೊಳಗೊಂಡ ಒಂದು ಸಮಿತಿ ಜಾನ್ ಸೈಮನ್ ರ ನೇತೃತ್ವದಲ್ಲಿ ಭಾರತಕ್ಕೆ ಬಂದಿತು. 1828ರ ಫೆಬ್ರವರಿ 3 ರಂದು ಮುಂಬೈಗೆ ಆಗಮಿಸಿತು. ಭಾರತೀಯರಿಗೆ ಈ ಸಮಿತಿಯಲ್ಲಿ ಸದಸ್ಯತ್ವ ಇಲ್ಲದ ಕಾರಣ ಭಾರತದೆಲ್ಲೆಡೆಯಲ್ಲೂ ಆಂದೋಲನ ಆರಂಭವಾಯಿತು. ಲಾಹೋರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಹಿರಿಯ ನಾಯಕರಾದ ಲಾಲಾ ಲಜಪತ್ ರಾಯ್ರವರು ವಹಿಸಿದ್ದರು. ಪೋಲಿಸರು ಬರ್ಬರವಾಗಿ ಚಳುವಳಿಕಾರರ ಮೇಲೆ ಲಾಠಿಚಾರ್ಜ್ ಮಾಡಲಾರಂಭಿಸಿದರು. ಲಾಲಾಜಿಯವರು ಈ ಹೊಡೆತಗಳಿಂದ ತೀವ್ರವಾಗಿ ಆಘಾತಗೊಂಡರು ಮತ್ತು ಕೆಲವೇ ದಿನಗಳಲ್ಲಿ ಮರಣ ಹೊಂದಿದರು. “ನನ್ನ ಮೇಲೆ ಬಿದ್ದ ಪ್ರತಿ ಹೊಡೆತವೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವಪೆಟ್ಟಿಗೆಯ ಮೇಲಿನ ಮೊಳೆಗಳಾಗಿವೆ” ಎಂಬ ಅವರ ಘೋಷಣೆ ಸರಿ ಎಂಬಂತೆ ಭಾರತದಾದ್ಯಂತ ಬ್ರಿಟಿಷರ ವಿರುದ್ಧದ ಚಳುವಳಿ ತೀವ್ರಗೊಂಡಿತು.
4. ದಂಡಿ ಸತ್ಯಾಗ್ರಹ – ಬ್ರಿಟಿಷ್ ಸರ್ಕಾರ ಜನತೆಯ ಮೇಲೆ ಉಪ್ಪಿಗೆ ಶೇಕಡ 2400 ತೆರಿಗೆ ವಿಧಿಸಿತು. ಅಂದರೆ ಒಂದು ರೂಪಾಯಿಗೆ ಮಾರಬೇಕಿದ್ದ ಉಪ್ಪಿನ ಬೆಲೆ 24 ರೂಪಾಯಿಗಳಾದವು. ಜೊತೆಗೆ ಸರ್ಕಾರದ ಅನುಮತಿಯಿಲ್ಲದೆ ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ. ಇದನ್ನು ವಿರೋಧಿಸಬೇಕೆಂದು ತೀರ್ಮಾನಿಸಿದ ಗಾಂಧೀಜಿಯವರು 1930ರ ಮಾರ್ಚ್ 12ರಂದು ತಮ್ಮ 78 ಸತ್ಯಾಗ್ರಹಿಗಳೊಂದಿಗೆ ಸಬರಮತಿ ಆಶ್ರಮದಿಂದ 241 ಮೈಲಿಗಳ ಪಾದಯಾತ್ರೆ ಮಾಡಿ ಏಪ್ರಿಲ್ 5ರಂದು ದಂಡಿಯನ್ನು ತಲುಪಿದರು. ಏಪ್ರಿಲ್ 6ರಂದು ಉಪ್ಪಿನ ಕಾನೂನು ಮುರಿದು ಉಪ್ಪನ್ನು ತಯಾರಿಸಿ ಸರ್ಕಾರದ ಉಪ್ಪಿನ ಕಾಯ್ದೆಯನ್ನು ಮುರಿದರು. ಸಾವಿರಾರು ಜನ ಇದನ್ನು ಅನುಸರಿಸಿ ಬೇರೆ ಬೇರೆ ಭಾಗಗಳಲ್ಲಿ ಕಾಯ್ದೆಯನ್ನು ಮುರಿದು ಉಪ್ಪನ್ನು ತಯರಿಸಿದರು.
5. ಕಾನೂನು ಭಂಗ ಚಳುವಳಿ - ಗಾಂಧೀಜಿಯವರು ಆ ವಾರವನ್ನು ರಾಷ್ಟ್ರೀಯ ವಾರವೆಂದು ಘೋಷಿಸಿ ವಿದೇಶಿ ವಸ್ತ್ರಗಳನ್ನು ಮಾರುವ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಲು ಹೇಳಿದರು. ಕಾನೂನು ಭಂಗ ಚಳುವಳಿ ದೇಶದ ಮೂಲೆಮೂಲೆಗಳಲ್ಲಿಯೂ ಹರಡಿತು. ಸಾವಿರಾರು ಸರ್ಕಾರಿ ನೌಕರರು ಕೆಲಸಕ್ಕೆ ರಾಜಿನಾಮೆ ನೀಡಿ ಚಳುವಳಿಗೆ ಧುಮುಕಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಹೊರನಡೆದರು. ರೈತರು ತೆರಿಗೆ ಕೊಡಲು ನಿರಾಕರಿಸಿದರು. ಸರ್ಕಾರ ಪೋ ಲಿಸ್ ಮತ್ತು ಸೈನ್ಯದ ಸಹಾಯದಿಂದ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಸಾವಿರಾರು ಜನರನ್ನು ಬಂಧಿಸಿತು. ಆದರೆ ಜನ ಹಿಂಜರಿಯಲ್ಲಿಲ್ಲ. ಕೊನೆಗೆ ಸರ್ಕಾರ ದುಂಡು ಮೇಜಿನ ಪರಿಷತ್‍ಗೆ ಕಾಂಗ್ರೆಸ್ ಅನ್ನು ಆಹ್ವಾನಿಸಿತು ಮತ್ತು ಬಂಧಿತರಾದ ಎಲ್ಲಾ ಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಿತು.
6. ಕ್ವಿಟ್ ಇಂಡಿಯಾ ಚಳುವಳಿ-1942 ರ ಆಗಸ್ಟ್ 9ರಂದು ಹಲವಾರು ನಾಯಕರ ಮತ್ತು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ‘ಭಾರತ ಬಿಟ್ಟು ತೊಲಗಿ’ ಗೊತ್ತುವಳಿಯನ್ನು ಅಂಗೀಕರಿಸಿತು. ಅಂದೇ ಕಾಂಗ್ರೆಸ್ ನ ಬಹುತೇಕ ನಾಯಕರನ್ನು ಬಂಧಿಸಲಾಯಿತು. ಮರುದಿನದಿಂದಲೇ ಐತಿಹಾಸಿಕ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತು. ದೇಶದಾದ್ಯಂತ ಜನತೆ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದನಿಯೆತ್ತಿದರು. ‘ಮಾಡು ಇಲ್ಲವೇ ಮಡಿ’ ಎಂಬುದು ಅಂದಿನ ಘೋಷಣೆಯಾಗಿತ್ತು. ಎಲ್ಲಾ ವಿಭಾಗದ ಜನತೆ ಚಳುವಳಿಗೆ ಧುಮುಕಿದರು. ಹಳ್ಳಿ-ಪಟ್ಟಣಗಳೆನ್ನದೆ, ಸ್ತ್ರೀ- ಪುರುಷರೆನ್ನದೆ, ಬಡವ - ಬಲ್ಲಿದರೆನ್ನದೆ, ಯುವಕ – ಮುದುಕರೆನ್ನದೆ ಲಕ್ಷಾಂತರ ಜನ ಜೀವದ ಹಂಗು ತೊರೆದು ಅಂತಿಮ ಹೋರಾಟದಲ್ಲಿ ಪಾಲ್ಗೊಂಡರು. ಸರ್ಕಾರದ ಅಂಕಿಗಳ ಪ್ರಕಾರವೇ 1942ರ ಅಂತ್ಯದಲ್ಲಿ 60,229 ಜನರನ್ನು ಬಂಧಿಸಲಾಗಿತ್ತು, 18000 ಜನರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲಾಗಿತ್ತು, 940 ಜನ ಹತರಾಗಿದ್ದರು ಮತ್ತು 1630 ಜನ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಜನತೆಯ ಪ್ರಕಾರ ಸತ್ಯ ಇದಕ್ಕಿಂತ ಭಿನ್ನವಾಗಿತ್ತು. ಸಾವಿರಾರು ಜನ ಜೀವ ತೆತ್ತರು. ಎಲ್ಲಾ ಪಕ್ಷಗಳು ಈ ಚಳುವಳಿಗೆ ಧುಮುಕಿದವು. ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಯಂತ್ರ ಕುಸಿಯಿತು. ಜನತೆ ಸ್ವ-ಸರ್ಕಾರಗಳನ್ನು ಘೋಷಿಸಿಕೊಂಡರು. ಜನತೆ ಬ್ರಿಟಿಷ್ ಸರ್ಕಾರದ ಬರ್ಬರತೆಗೆ ಸೆಡ್ಡು ಹೊಡೆದು ನಿಂತಿತು. ಸರ್ಕಾರ ತತ್ತರಿಸಿತು. ಬ್ರಿಟಿಷ್ ಸರ್ಕಾರ ನಮ್ಮ ನಾಯಕರೊಂದಿಗೆ ಮಾತುಕತೆಯಾಡಲು ಕ್ರಿಪ್ಸ್ ಆಯೋಗವನ್ನು ಕಳಿಸಿತು. ಅದನ್ನು ನಿರಾಕರಿಸಿದ ಜನತೆ ಚಳುವಳಿಯನ್ನು ತೀವ್ರಗೊಳಿಸಿದರು. ಅಂತಿಮವಾಗಿ, ಬ್ರಿಟಿಷ್ ಸರ್ಕಾರ ಕ್ಯಾಬಿನೆಟ್ ಆಯೋಗವನ್ನು ಕಳಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಅಂಗೀಕರಿಸಿತು.
7. ಐ ಎನ್ ಎ ಹೋರಾಟ - ಭಾರತದಿಂದ ತಪ್ಪಿಸಿಕೊಂಡು ಹೋದ ನೇತಾಜಿಯವರು, ಜಪಾನಿನಲ್ಲಿ ರಾಸ್ ಬಿಹಾರಿ ಬೋಸ್‍ರವರು ಕಟ್ಟಿದ್ದ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ನ ಮತ್ತು ‘ಆಜಾದ್ ಹಿಂದ್ ಫೌಜ್ ನ ನಾಯಕತ್ವವನ್ನು ವಹಿಸಿಕೊಂಡರು. ಮಲಯಾ, ಸಿಂಗಪುರ, ಬರ್ಮಾ, ಜಪಾನ್ ಮತ್ತಿತರ ದೇಶಗಳನ್ನು ಸುತ್ತಿ ಆಜಾದ್ ಹಿಂದ್ ಫೌಜ್ ಅನ್ನು ಬಲಿಷ್ಠಗೊಳಿಸಿದರು. ಪೂರ್ವ ಏಷ್ಯಾದಲ್ಲಿದ್ದ ಭಾರತೀಯರು ಎಲ್ಲಾ ರೀತಿಗಳಿಂದಲೂ ನೇತಾಜಿಯವರನ್ನು ಬೆಂಬಲಿಸಿದರು. ಮಹಿಳಾ ತುಕಡಿ – ಝಾನ್ಸಿ ರಾಣಿ ತುಕಡಿಯನ್ನು ಕಟ್ಟಿದರು. ಸಾವಿರಾರು ಜನ ಭಾರತೀಯರು ಸೈನ್ಯವನ್ನು ಸೇರಿದರು. ಜಪಾನಿಯರು ತಾವು ಬ್ರಿಟಿಷರಿಂದ ವಶಪಡಿಸಿಕೊಂಡಿದ್ದ ಅಂಡಮಾನ್‍ಅನ್ನು ನೇತಾಜಿಯವರಿಗೆ ನೀಡಿದರು. ಅಲ್ಲಿ ನೇತಾಜಿಯವರು ಸ್ವತಂತ್ರ ಸರ್ಕಾರವನ್ನು ಸ್ಥಾಪಿಸಿದರು . ‘ದೆಲ್ಲಿ ಚಲೋ’ ಘೋಷಣೆಯಿಂದ ಪ್ರೇರೇಪಿತರಾದ ಸೈನಿಕರು ಭಾರತದ ಮೇಲೆ ದಾಳಿ ನಡೆಸಲು ಸಜ್ಜಾದರು. ಆರಂಭದ ವಿಜಯಗಳ ನಂತರ ಜಪಾನಿಯರ ಮೋಸದಿಂದಾಗಿ ಹಿನ್ನಡೆ ಆರಂಭವಾಯಿತು. ನೂರಾರು ಯೋಧರು ಹಸಿವಿನಿಂದ, ರೋಗಗಳಿಂದ ಮೃತರಾದರು. ಆದರೆ ಉಳಿದವರು ಹಿಂಜರಿಯದೆ ತಮ್ಮ ಹೋರಾಟ ಮುಂದುವರೆಸಿದರು. 1945ರ ಏಪ್ರಿಲ್ 13ರಂದು ನೇತಾಜಿಯವರು ಹತ್ತಿದ ವಿಮಾನ ಫಾರ್ಮೋಸಾ ದ್ವೀಪದ ಬಳಿ ಅಪಘಾತಕ್ಕೀಡಾಯಿತು. ಐಎನ್‍ಎ ಸೈನಿಕರನ್ನು ಬ್ರಿತಿಷರು ಬಂಧಿಸಿ ವಿಚಾರಣೆ ಆರಂಭಿಸಿದರು. ಆದರೆ ಭಾರತದಾದ್ಯಂತ ಅವರ ಬಿಡುಗಡೆಗಾಗಿ ಹೋರಾಟ ನಡೆಯಿತು. ಅವರಿಗೆ ಶಿಕ್ಷೆ ವಿಧಿಸಿದರೆ ಬ್ರಿಟಿಷರಲ್ಲೊಬ್ಬನನ್ನೂ ಸುರಕ್ಷಿತವಾಗಿರಲು ಬಿಡುವುದಿಲ್ಲವೆಂಬ ಧೋರಣೆಯನ್ನು ಕಂಡು ಸರ್ಕಾರ ಅವರನ್ನು ಬಿಡುಗಡೆಗೊಳಿಸಿತು. ಆದರೆ ಇದಾದ ನಂತರ ಸೈನ್ಯ ಮತ್ತು ನೌಕಾದಳದಲ್ಲಿದ್ದ ಭಾರತೀಯರನ್ನು ನಂಬಲಾಗದು ಎನ್ನುವ ಸ್ಥಿತಿಯಲ್ಲಿ ಬ್ರಿಟಿಷರು ಭಾರತವನ್ನು ಬಿಡಲೇಬೇಕಾಯಿತು.
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ