Pages

ವಿನೋದ:"ಹುಟ್ಟಿದ ಹಬ್ಬ"


ಚಿಕ್ಕ ಹುಡುಗನಿಗೆ ತಲೆ ನೀರು ಹಾಕಿ, ಸಿಕ್ಕು ಬಿಡಿಸುತ್ತಿದ್ದಾಳೆ ತಾಯಿ. ಆ ಹುಡುಗು ಅಳುತ್ತಿದ್ದಾನೆ. ಆ ಹುಡುಗನ ಅಕ್ಕ ಬರುತ್ತಾಳೆ)
ಅಕ್ಕ: ಹಬ್ಬಗಳೆಂದರೆ ನನಗೆ ಕೋಪ. ಈ ಹಾಳು ಹಬ್ಬಗಳಲ್ಲಿ ಹುಟ್ಟಿದ ಹಬ್ಬ ಒಂದು. ಯಾಕಾದ್ರೂ ಹುಟ್ಟಿದೆವೊ?
ತಾಯಿ: ಇಷ್ಟರಲ್ಲೇ ಏನಾಯಿತೆ ನಿನಗೆ?
ಅಕ್ಕ: ಪ್ರತಿ ಹಬ್ಬಕ್ಕೆ ಈ ತಲೆನೀರು, ಕಣ್ಣುಗಳಲ್ಲಿ ಸೀಗೆಕಾಯಿ ಪುಡಿ, ಈ ಜುಟ್ಟು ಕೀಳುವುದು, ಹೊಸಬಟ್ಟೆ ಹಾಕುವುದು, ಅವುಗಳನ್ನು ಆಟದಲ್ಲಿ ಗಲೀಜು ಮಾಡಿಕೊಂಡುಬಂದರೆ ಹೊಡೆಯುವುದು, ನೋಡು ಹೇಗೆ ತಮ್ಮನ ಜುಟ್ಟನ್ನು ಕಿತ್ತು ಅಳಿಸುತ್ತಿದ್ದೀಯಾ?
ತಾಯಿ:  ಇಲ್ಲದಿದ್ದರೆ ಗಲೀಜು ತಲೆಯೊಂದಿಗೆ. . . .
ಅಕ್ಕ: ಯಾರಿಗೋಸ್ಕರ ಈ ಹುಟ್ಟಿದ ಹಬ್ಬ ನಮಗೋಸ್ಕರಾನಾ, ನಿಮಗೋಸ್ಕರಾನಾ?
ತಾಯಿ: ನಿಮಗೋಸ್ಕರವೇ.
ಅಕ್ಕ: ನಮಗೆ ಬೇಡ. ಬಿಟ್ಟುಬಿಡು.
ತಾಯಿ: ಎಲ್ಲಾ ಮಕ್ಕಳು ಮಾಡಿಸಿಕೊಳ್ಳುತ್ತಿಲ್ಲವಾ? ನೀವೆ ಇಳಿದುಬಂದಿದ್ದೀರೇನು?
ಅಕ್ಕ: ಎಲ್ಲಿಂದ ಇಳಿದುಬಂದಿದ್ದೀವಿ? ಯಾವ ರೀತಿ ಬಂದಿದ್ದೀವಿ?
ತಾಯಿ: ದೇವರ ಹತ್ತಿರದಿಂದ. ಎಷ್ಟು ಸಾರಿ ಹೇಳಬೇಕು?
ಅಕ್ಕ: ದೇವರ ಹತ್ತಿರ ಹಾಯಾಗಿದ್ದೆವು, ಯಾಕೆ ಕೆಳಗೆ ಬಂದೆವು?
ತಾಯಿ: ದೇವರು ಕಳಿಸಿದರೆ?
ಅಕ್ಕ: ಯಾತಕ್ಕೆ ಕಳಿಸಿದ? ದೇವರಿಗೆ ನಮ್ಮ ಮೇಲೆ ಕೋಪವೇ?
ತಾಯಿ: ನಮಗೋಸ್ಕರ.
ಅಕ್ಕ: ನಿಮಗೋಸ್ಕರ ನಾವು ಭಾದೆ ಪಡಬೇಕು ಅಂದನಾ? ಯಾಕೆ?
ತಾಯಿ: ನಾವು ಪಡುತ್ತಿಲ್ವಾ ನಿಮ್ಮಿಂದ.
ಅಕ್ಕ: ಅದೇ ಹೇಳ್ತಾ ಇದ್ದೀನಿ, ನಮ್ಮಿಂದ ನೀವು, ನಿಮ್ಮಿಂದ ನಾವು ಈ ಭಾದೆಗಳನ್ನು ಪಡುವುದೇಕೆ? ಹೋಗಲಿ ನಾವು ಬರದಿದರೆ ಏನಾಯ್ತು?
ತಾಯಿ:  ಅದು ದೇವರ ಇಷ್ಟ.
ಅಕ್ಕ: ಬಾಧೆ ಅಂದ್ರೆ ಇಷ್ಟಾನಾ ದೇವರಿಗೆ? ಆ ರತ್ನನಿಗೆ ಹತ್ತು ಮಂದಿ ಮಕ್ಕಳನ್ನು ಏಕೆ ಕಳಿಸಿದ?
ತಾಯಿ: ದೇವರ ದಯೆ.
ಅಕ್ಕ: ಅದೇನು ದಯೆ? ಮತ್ತೆ ದೇವರ ದಯಕ್ಕೆ ಬುದ್ಧಿ ಇಲ್ಲವಾ?
ತಾಯಿ: ದೇವರ ಸಂಗತಿ ನಮಗೆ ಗೊತ್ತಿಲ್ಲ.
ಅಕ್ಕ: ಬಾರೋ ತಮ್ಮಾ, ಹೋಗೋಣ. ಇವತ್ತು ರಾಜಾರವರ ಮನೆಗೆ ಹೋಗೋಣ ಅಂದುಕೊಂಡ್ವಿ. ಅಮ್ಮ, ಅಮ್ಮ, ರಾಜಾಮಣಿಯವರಿಗೆ ಮಕ್ಕಳನ್ನು ಏಕೆ ಕಳಿಸಲಿಲ್ಲ ದೇವರು?
ತಾಯಿ: ನಮಗೆ ಆ ವಿಷಯ ಗೊತ್ತಿಲ್ಲ ಅಂತಾ ಹೇಳಲಿಲ್ವಾ?
ಅಕ್ಕ: ದೇವರನ್ನು ಕೇಳಲಾಗಲಿಲ್ವೆ?
ತಾಯಿ: ದೇವರನ್ನು ಕೇಳುವುದು ಎಂದರೇನೇ? ದೇವರು ಕಾಣಿಸೋಲ್ಲಾ.
ಅಕ್ಕ: ಮತ್ತೆ ನಮ್ಮನ್ನು ನಿಮಗೆ ಕೊಟ್ಟಾಗಲೂ ಕಾಣಿಸಲಿಲ್ವಾ?
ತಾಯಿ: ಉಹೂಂ.
ಅಕ್ಕ: ಯಾರೂ ಕಾಣಿಸಲಿಲ್ವಾ?
ತಾಯಿ: ಇಲ್ಲ.
ಅಕ್ಕ: ಮತ್ತೆ ದೇವರೆ ಕಳಿಸಿದ್ದಾನೆ ಎಂದು ಹೇಗೆ ಗೊತ್ತು?
ತಾಯಿ: (ತಡವರಿಸುತ್ತಾ) ದೇವರು ಕಳಿಸದಿದ್ದರೆ ಹೇಗೆ ಬರ್ತೀಯಾ?
ಅಕ್ಕ:  (ಆಲೋಚಿಸುತ್ತಾ) ನನಗೂ ಗೊತ್ತಿಲ್ವೆ, ಯಾರು ಕಳಿಸಿರಬಹುದು? ನಾನು ಬಂದಾಗ ಎಷ್ಟಿದ್ದೆ?
ತಾಯಿ: ತುಂಬಾ ಚಿಕ್ಕ ಮಗು.
ಅಕ್ಕ: ಬೆಳಿಗ್ಗೆ ಏಳುವಷ್ಟರಲ್ಲಿ ನಿನ್ನ ಪಕ್ಕ ಇದ್ದೆನಾ?
ತಾಯಿ: (ಬದುಕಿದೆನು ದೇವರೇ ಎಂದುಕೊಂಡು) ಹೌದು.
ಅಕ್ಕ: ಹಸುಗಳಿಗೆ ಹಾಗಲ್ವೆ. ನಮ್ಮ ಹಸುವಿಗೆ. . . .
ತಾಯಿ: (ಗಾಬರಿಯಾಗಿ, ತಕ್ಷಣವೇ) ಹಸುಗಳಿಗೆ ಬೇರೆ
ಅಕ್ಕ: ಕಾಂತಮ್ಮ ನೋವು ಪಡುತ್ತಿದ್ದಾರೆಂದು ನೀವೆಲ್ಲಾ ಅಲ್ಲಿ ಹೋದಿರಿ, ಮರುದಿನ ಬೆಳಿಗ್ಗೆಯೇ. . .
ತಾಯಿ: ಹೋಗೆ. ಇನ್ನು ಸಾಕು ಪ್ರಶ್ನೆಗಳು. ಹೋಗಿ ಆಡಿಕೊಳ್ಳಿ.
ಅಕ್ಕ: ಹಾಗಲ್ಲಮ್ಮ. ಆಗ ಡಾಕ್ಟರ್ ಬಂದು ಮಗುವನ್ನು ಹೊರಗೆ. . . .
ತಾಯಿ: ಆ ವಿಷಯ ಎಲ್ಲಾ ನಿಮಗೆ ಯಾಕೆ? ಚಿಕ್ಕವರಿಗೆ. ಹೋಗಿ.
ಅಕ್ಕ: ಮತ್ತೆ ದೇವರು ಕಳಿಸಿದ ಅಂದೆ.
ತಾಯಿ: ದೇವರು ಕಳಿಸಿದ್ರೇನೆ, ಡಾಕ್ಟರ್ . . . .
ಅಕ್ಕ: ಸೀತಮ್ಮ ಹೊಟ್ಟೆಯಲ್ಲಿ ಮಗು ತಿರುಗುತ್ತಿದೆ ಅಂತಾರೆ. ಅಮ್ಮಾ, ಕೇಳಿಸಿಕೊ , ಮತ್ತೆ ಕೆಲವರಿಗೆ. . .
ತಾಯಿ: ಹೋಗ್ತೀರಾ, ಎರಡು ಕೊಡ್ಲಾ?( ಹೊಡೆಯಲು ಹೋಗುತ್ತಾಳೆ. ಮಕ್ಕಳು ಹೊರಗೆ ಓಡಿ ಹೋಗುತ್ತಾರೆ)
ಅಕ್ಕ:  (ಹೊರಗೆ ಕಿಟಕಿಯಿಂದ) ಅಮ್ಮ ಸರಿಯಾಗಿ ಹೇಳ್ತೀಯಾ? ಅಣ್ಣನನ್ನು ಕೇಳಲಾ?
ತಾಯಿ: ಅಣ್ಣಯ್ಯ ಮುಖ. . . ಅವನಿಗೇನು ಗೊತ್ತು?
ಅಕ್ಕ: ಗೊತ್ತಿಲ್ಲದೆ ಏನು? ಎಲ್ಲಾ ವಿಷಯಗಳು ಶಾಲೆಯ ಪುಸ್ತಕಗಳಲ್ಲಿ ಇದೆಯಂತೆ. ಅಣ್ಣಯ್ಯ ಬರಲಿ.
ತಾಯಿ: ಏನೋ ಕೇಳು. ಅಣ್ಣನನ್ನು ಕೇಳಬೇಡ.
ಅಕ್ಕ: ಮಗು ಹುಟ್ಟಿದೆ ಅಂತಾರೆ. ಹೇಗೆ ಹುಟ್ಟುತ್ತೆ?
ತಾಯಿ: (ವಿಧಿಯಿಲ್ಲದೆ) ಹೊಟ್ಟೆಯಿಂದ.
ಅಕ್ಕ: ಹೌದು ಬಿಡು, ಹೊರಗೆ ಹೇಗೆ ಬರುತ್ತೆ?
ತಾಯಿ: ಹೊಕ್ಕಳಿನಿಂದ.
ಅಕ್ಕ: ಅದಕ್ಕಾ ಹೊಕ್ಕಳು? ನನಗೂ ಮಕ್ಕಳು ಹುಟ್ತಾರಾ?
ತಾಯಿ: ದೊಡ್ಡವಳಾದ ಮೇಲೆ.
ಅಕ್ಕ: ಚಿಕ್ಕಮಕ್ಕಳಿಗೆ ಚಿಕ್ಕ ಬೊಂಬೆಗಳಂತಹ ಮಕ್ಕಳು ಹುಟ್ಟಬಾರದೆ? ದೇವರು ಹುಟ್ಟಿಸುವುದಿಲ್ಲವಾ?
ತಾಯಿ: ನೀವು ನೋಡಿಕೊಳ್ಳಲಾಗುವುದಿಲ್ಲ ಎಂದು.
ಅಕ್ಕ: ನಿಮಗೆ ಕೊಡ್ತೀವಲ್ಲಾ ನೋಡಿಕೊಳ್ಳಿ ಎಂದು.
ತಾಯಿ: ನಮಗಿದೇ ಕೆಲಸ. ನೀವು ಸಾಲದಾ?
ಅಕ್ಕ: ಇನ್ನು ಬೇಡವಾ? ದೇವರೆ ನಿನ್ನ ಹೊಟ್ಟೆಯಲ್ಲಿ ಇಟ್ಟರೆ? ಮತ್ತೆ ಗಂಡನಿಲ್ಲದವರಿಗೆ ಮಕ್ಕಳನ್ನು ಹೊಟ್ಟೆಯಲ್ಲಿ ಇಡುವುದಿಲ್ಲವಲ್ಲ?
ತಾಯಿ: ಏನೋ ಗೊತ್ತಿಲ್ವೆ. ಅವರಿಗೆ ಅಪ್ಪ ಇರಲ್ಲ ಅಂತಾ.
ಅಕ್ಕ: ಅಪ್ಪ ಸತ್ತು ಹೋದರೆ.
ತಾಯಿ: ಆಗ ಏನು ಮಾಡಲು ಸಾಧ್ಯ?
ಅಕ್ಕ: ಯಾಕಮ್ಮ ಸಾಯಿಸೋದು?
ತಾಯಿ: ಖಾಯಿಲೆ ಬಂದ್ರೆ ಸತ್ತು ಹೋಗ್ತಾರೆ.
ಅಕ್ಕ: ಹಾಗಾದ್ರೆ ದೇವರಲ್ಲ ಸಾಯಿಸೋದು.
ತಾಯಿ: (ವಿಧಿಯಿಲ್ಲದೆ) ಅಲ್ಲ.
ಅಕ್ಕ: ಮತ್ತೆ ಆ ನಾರಾಯಣರವರು ‘ದೇವರೆ, ನನ್ನ ಮಗನನ್ನು ಕರೆದುಕೊಂಡು ಬಿಟ್ಟೆಯಾ ಅಂತಾ ಅತ್ತರು?
ತಾಯಿ: ಅವರು ಆ ರೀತಿ ಅಂದುಕೊಂಡರು.
ಅಕ್ಕ: ಮತ್ತೆ ಮತ್ತೆ ವೆಂಕಟರತ್ನಮ್ಮರವರ ಸೀತಾಬಾಯಿಗೆ ಗಂಡ ಇಲ್ಲವಲ್ವಾ. .. .
ತಾಯಿ: ನಾನು ಹೇಳಲಾರೆ. ಹೋಗತ್ತ.
ಅಕ್ಕ: ಮಕ್ಕಳು ಏನು ಕೇಳಿದರೂ ಸುಳ್ಳು ಹೇಳ್ತೀರ?
ತಾಯಿ: ಏನು ಸುಳ್ಳು ಹೇಳಿದೆವು?
ಅಕ್ಕ: ಇದುವರೆಗೂ ಎಲ್ಲಾ ಸುಳ್ಳೇ. ದೇವರು ಮಕ್ಕಳನ್ನು ಕೊಟ್ತಾನೆ ಅಂತಾ. ಇನ್ನೂ ಕೇಳಿದರೆ ಗೊತ್ತಿಲ್ಲ ಅಂತೀರಿ ನೀವು ಅಪ್ಪನ ಜೊತೆ ಮಾತನಾಡುವಾಗ ಕೇಳಿಸಿಕೊಳ್ಳಿಲ್ವಾ? ಗಂಡನಿಲ್ಲದ ಸೀತಾಬಾಯಿಗೆ ಮಕ್ಕಳು ಆಗಲು ಅವನ್ಯಾರು ಪೋಸ್ಟ್ ಮನ್ ಕಾರಣ ಅಂತಾ. ಏನು ಮಾಡಿದನೋ. .. .ನಾವು ಅಂದ್ರೆ ಕೆಟ್ಟ ಮಾತು ಆಡ್ತೀರಾ ಅಂತಾ ಒದೀತೀರಾ. ನಮ್ಮ ಮನೆ ಕೆಲಸದವಳನ್ನು ಅಪ್ಪ ಬೈತಾರೆ. ಆ ಮಾತುಗಳಿಗೆ ಅರ್ಥವೇನು?
ತಾಯಿ: ಏನು ಮಾತುಗಳೇ?
ಅಕ್ಕ: ಯಾವ ಮಾತುಗಳಾ? ಹೇಳಲಾ. ನಮಗೆ ಬರಲ್ಲಾ ಅಂದುಕೊಂಡಿರಾ? ನಾವು ಅಂದ್ರೆ ಒದೀತೀರಾ ಅಂತ ಗೊತ್ತಿಲ್ಲದೆ ಇರುವರಂತೆ ಇರುತ್ತೇವೆ. ನಾವು ಸುಳ್ಳು ಹೇಳಿದ್ರೆ ಚೆನ್ನಾಗಿ ಹೊಡೀತೀರಾ. ನಮಗಿಂತ ಹೆಚ್ಚು ಶಕ್ತಿ ಇದೆ ಅಂತಾ, ನೀವು ಸುಳ್ಳು ಹೇಳಬಹುದು, ಕೆಟ್ಟ ಮಾತುಗಳನ್ನು ಆಡಬಹುದು.
ತಾಯಿ: ನೀವಾದ್ರೂ ಚೆನ್ನಾಗಿರಲಿ ಅಂತಾ ಹೊಡೀತೀವಿ.
ಅಕ್ಕ: ನಿಮಗಿಂತ ಚೆನ್ನಾಗಿರಲಿ ಅಂತಾ?
ತಾಯಿ: ಆ.
ಅಕ್ಕ: ನೀವು ಸುಳ್ಳು ಹೇಳಿದಾಗ ನಿಮ್ಮ ಅಮ್ಮಾನೂ ಹೊಡಿದಿದ್ದಾರಲ್ಲಾ, ನೀವೇನು ಚೆನ್ನಗಿದ್ದೀರಾ? ಹೋಗಲಿ ಇದು ಹೇಳು. ಈಗಲಾದರೂ ನಿಜ ಹೇಳ್ತೀಯ. .. . ತಮ್ಮನ ಹುಟ್ಟಿದ ಹಬ್ಬ ಇವತ್ತೇ ಅಂತಾ ಹೇಗೆ ಗೊತ್ತು?
ನಾಳೆ ಯಾಕಾಗಬಾರದು?
ತಾಯಿ: (ಹುಟ್ಟಿನ ವಿಷಯ ಬಿಟ್ಟಳು ಎಂದು ಸಂತೋಷದಿಂದ) ತಮ್ಮ ಒಂದು ದಿನ ಹುಟ್ಟಿದ. . . .
ತಮ್ಮ: ನಾಳೆ ಇವತ್ತ್ಯಾಕಾಗಲ್ಲ?
ಅಕ್ಕ: ಹೋಗೊ ಹುಚ್ಚ. ನಾಳೆ ಇವತ್ತು ಹೇಗೆ ಆಗುತ್ತೆ?
ತಮ್ಮ: ಯಾಕಾಗಬಾರದು? ನಾಳೆ ಅಂದ್ರೆ ಏನು? ಇಂದು ಅಂದ್ರೆ ಏನು?
ಅಕ್ಕ: ನೀನು ಹೇಳಮ್ಮ? ಅವನ ಹತ್ತಿರ ಏನು ಮಾತು?
ತಾಯಿ: (ನಗುತ್ತಾ) ನೋಡಿದ್ಯಾ ಪ್ರಶ್ನೆಗಳನ್ನಾ? ಹೇಳು ಉತ್ತರ ತಮ್ಮನಿಗೆ. ತಮ್ಮ ಒಂದು ದಿನ ಹುಟ್ಟಿದ. ಆ ದಿನ ಮತ್ತೆ ಬಂದಿದೆ ಎಂದರ್ಥ.
ಅಕ್ಕ: ಈ ದಿನಗಳು ಎಲ್ಲಿಂದ ಬರ್ತಾವಮ್ಮಾ
ತಾಯಿ: ದಿನಗಳು ಬರುವುದೆಂದರೇನೆ?
ಅಕ್ಕ: ಮತ್ತೆ ಬಂದಿದೆ ಅಂದೆ.
ತಾಯಿ: ಆ ತಿಥಿ, ನಕ್ಷತ್ರ ಬಂದಿದೆ ಅಂತಾ.
ಅಕ್ಕ: ಆ ತಿಥಿ, ನಕ್ಷತ್ರ ಎಲ್ಲಿಂದ ಬರುತ್ತೆ? ಎಲ್ಲಿರುತ್ತವೆ?
ತಾಯಿ: ಸೋಮವಾರ ಬರುತ್ತಲ್ಲಾ, ಹಾಗೆ..
ಅಕ್ಕ: ಅದನ್ನೇ ನಾನು ಕೇಳ್ತಾ ಇರೋದು. ಆ ಸೋಮವಾರ ಎಲ್ಲಿಂದ ಬರುತ್ತೆ ಅಂತಾ?
ತಾಯಿ: ಬರೋಲ್ಲ. ಹಾಗೆ ಹೆಸರು ಇಟ್ಟುಕೊಂಡಿದ್ದಾರೆ.
ಅಕ್ಕ: ತಿಥಿ, ನಕ್ಷತ್ರ ಅಂದ್ರೆ ಏನು?
ತಾಯಿ: ನಕ್ಷತ್ರ ಗೊತ್ತಿಲ್ವಾ, ನೋಡಿಲ್ವಾ?
ಅಕ್ಕ: ಆಕಾಶದಲ್ಲಿ ತಾನೇ, ಅದು ಹೇಗೆ ಬರುತ್ತೆ?
ತಾಯಿ: ಹೆಸರು ಅಷ್ಟೆ.
ಅಕ್ಕ: ಆ ತಿಥಿ, ನಕ್ಷತ್ರಾನೆ ಬಂದಿದೆ ಅಂತಾ ಹೇಗೆ ಗೊತ್ತಾಗುತ್ತೆ?
ತಾಯಿ: ಪಂಚಾಂಗ ನೋಡುವವರಿಗೆ ಗೊತ್ತಾಗುತ್ತೆ.
ಅಕ್ಕ: ಅವರಿಗೆ ಹೇಗೆ ಗೊತ್ತಾಗುತ್ತೆ?
ತಾಯಿ: ಹುಟ್ಟಿದ ವರ್ಷ ಇವತ್ತಿಗೆ ಆಯ್ತು ಅಂತಾ.
ಅಕ್ಕ: ವರ್ಷ ಅಂದ್ರೆ?
ತಾಯಿ: 365 ದಿನಗಳಿಗೆ ಒಂದು ವರ್ಷ.
ಅಕ್ಕ: ಅಷ್ಟು ದಿನಗಳು ಯಾಕೆ?
ತಾಯಿ: ಹಾಗೆ ಇಟ್ಕೊಂಡಿದ್ದಾರೆ.
ಅಕ್ಕ: ಯಾರು?
ತಾಯಿ: ಎಲ್ಲರೂ.
ಅಕ್ಕ: ನೀನೂನಾ?
ತಾಯಿ: ಆ.
ಅಕ್ಕ: ಅಷ್ಟು ಯಾಕೆ ಇಟ್ಕೊಂಡಿದ್ದೀಯಾ? ಹತ್ತು ದಿನಗಳು ಇಟ್ಕೋಬಾರದಾ?
ತಾಯಿ: ಹತ್ತು ದಿನಗಳಿಗೊಮ್ಮ ಹುಟ್ಟಿದ ಹಬ್ಬನಾ?
ಅಕ್ಕ: ನಾನು ಇಟ್ಟೆನಾ? ಆ ದಿನಗಳನ್ನು ನಾನು ಇಡಲಿಲ್ಲ.
ತಾಯಿ: ದೊಡ್ಡವರು ಇಡ್ತಾರೆ.
ಅಕ್ಕ: ಚಿಕ್ಕವರು ಯಾಕೆ ಇಡೋಲ್ಲ.
ತಾಯಿ: ಅವರಿಗೆ ಇನ್ನೂ ಸರಿಯಾಗಿ ಗೊತ್ತಿಲ್ಲ.
ಅಕ್ಕ: ದೊಡ್ಡವರಿಗೆ ಗೊತ್ತಾ? ನಾವು ಏನು ಕೇಳಿದರೂ ಗೊತ್ತಿಲ್ಲಾ ಅಂತಾರೆ. ಏನು ಗೊತ್ತು? ಜೊತೆಗೆ ಹೇಳೋದೆಲ್ಲ ಸುಳ್ಳೆ. ಮಕ್ಕಳು ಸುಳ್ಳು ಹೇಳಿದ್ರೆ ಹೊಡೀತೀರಾ? ನೀವು ಎಷ್ಟೊ ಸುಳ್ಳು ಹೇಳ್ತೀರಾ. ನಿಮ್ಮನ್ನು ಯಾರು ಹೊಡೀತಾರೆ?
ತಾಯಿ: ನಾನೇನು ಸುಳ್ಳು ಹೇಳಿದೆನೆ?
ಅಕ್ಕ: ಅಗೊ ಮತ್ತೆ ಸುಳ್ಳು. ಮಕ್ಕಳು ಹುಟ್ಟುವ ಬಗ್ಗೆ ಕೇಳಿದರೆ. ..
ತಾಯಿ: ಅಂತವನ್ನು ಕೇಳಿದ್ರೆ ಮತ್ತೆ. . .
ಅಕ್ಕ: ನಾನೇನು ಕೇಳಿದೆ? ನೀವು ಮಾತ್ರ ನಮ್ಮನ್ನು ಎಂತವೆಲ್ಲಾ ಕೇಳ್ತೀರಾ? ನಿಜ ಹೇಳಿದ್ರೆ ಹೊಡೀತೀರಾ. ಅದಕ್ಕೆ ಸುಳ್ಳು ಹೇಳ್ತೀವಿ.
ತಾಯಿ: ಆಗ ಎರಡು ತಪ್ಪುಗಳಾಗುತ್ತೆ.
ಅಕ್ಕ: ಸುಳ್ಳು ಹೇಳಿದ್ರೆ ನಿಮಗೆ ಗೊತ್ತಾಗಲ್ವಲ್ಲಾ. ಯಾವಾಗ್ಲೊ ತಿಳಿಯುತ್ತೆ. ಎಲ್ಲಾ ಗೊತ್ತು ಅಂತೀರಾ. ನಿಮ್ಮ ತಪ್ಪ್ಪಿಗೆ ನಮ್ಮನು ಹೊಡೆಯುವುದೇಕೆ?  ತಮ್ಮ ಯಾವಾಗ ಹುಟ್ಟಿದ?
ತಾಯಿ: ಐದು ವರ್ಷದ ಹಿಂದೆ.
ಅಕ್ಕ: ಅದಲ್ಲ. ಏನೋ ತಿಥಿ ನಕ್ಷತ್ರ ಅಂದೆಯಲ್ಲಾ?
ತಾಯಿ: ಮಾಘ ಶುದ್ಧ ಏಕಾದಶಿಯಂದು.
ಅಕ್ಕ: ಅಂದ್ರೆ
ತಾಯಿ: ಆ ದಿನದ ಹೆಸರು. ಪ್ರತಿದಿನಕ್ಕೆ ಒಂದು ಹೆಸರಿರುತ್ತೆ. ಮತ್ತೆ ಇವತ್ತು ಮಾಘ ಶುದ್ಧ ಏಕಾದಶಿ.
ಅಕ್ಕ: ಅದೇ, ಆ ವಿಷಯ ಪಂಚಾಂಗದವರಿಗೆ ಹೇಗೆ ಗೊತ್ತಾಗುತ್ತೆ.
ತಾಯಿ: ಹೆಸರಿರುತ್ತಲ್ಲ, ಒಂದಾದ ಮೇಲೆ ಒಂದು ಬರೆದಿರುತ್ತಾರೆ.
ಅಕ್ಕ: ಒಂದು ದಿನದ ನಂತರ ಇನ್ನೊಂದು ದಿನ ಹೇಗೆ ಬರುತ್ತೆ?
ತಾಯಿ: ಅದೂ ಗೊತ್ತಿಲ್ವಾ? ಸೂರ್ಯ ಮುಳುಗಿದರೆ ಕತ್ತಲಾಗುತ್ತೆ, ಮತ್ತೆ ಬೆಳಕಾಗುತ್ತೆ, ಆಗ ಹೊಸ ದಿನ.
ಅಕ್ಕ: ಸೂರ್ಯ ಎಲ್ಲಿಗೆ ಹೋಗ್ತಾನೆ?
ತಾಯಿ: ಆಕಾಶದ ಕೆಳಗೆ ಹೋಗ್ತಾನೆ.
ಅಕ್ಕ: ಹೋಗಿ. ..
ತಾಯಿ: ಮತ್ತೆ ಬೆಳಿಗ್ಗೆ ಬರ್ತಾನೆ.
ಅಕ್ಕ: ರಾತ್ರಿಯೆಲ್ಲಾ ಪಾಪ ಎಲ್ಲಿ ಕೂತ್ಕೊಂಡಿರ್ತಾನೆ?
ತಾಯಿ: ಎಲ್ಲೊ ಇರ್ತಾನೆ. ನಮಗೆ ಹೇಗೆ ಗೊತ್ತಾಗುತ್ತೆ?
ಅಕ್ಕ: ಮತ್ತೆ ಯಾವಾಗ ಬರಬೇಕು ಅಂತ ಹೇಗೆ ಗೊತ್ತಾಗುತ್ತೆ ಸೂರ್ಯನಿಗೆ?
ತಾಯಿ: ಆರು ಗಂಟೆಗೆ ಬರ್ತಾನೆ.
ಅಕ್ಕ: ಗಡಿಯಾರ ಇರುತ್ತಾ ಅಲ್ಲಿ?
ತಾಯಿ: ಗಡಿಯಾರ ಇಲ್ಲದೇನೆ ಗೊತ್ತಾಗುತ್ತೆ.
ಅಕ್ಕ: ಹೇಗೆ ಗೊತ್ತಾಗುತ್ತೆ?
ತಾಯಿ: ನಿನಗೆ ಗೊತ್ತಾಗೋಲ್ವಾ ಬೆಳಗಾಗಿದೆ ಅಂತಾ?
ಅಕ್ಕ: ಸೂರ್ಯ ಬರ್ತಾನೆ ಅದಕ್ಕೆ. ಅಮ್ಮ ಸೂರ್ಯ ಬರದಿದ್ರೆ ನಮಗೆ ದಿನಗಳು ಹೇಗೆ ಗೊತ್ತಾಗುತ್ತೆ?
ತಾಯಿ: ಗೊತ್ತಿಲ್ಲ.
ಅಕ್ಕ: ಆಗ ಎಲ್ಲಾ ಒಂದೇ ದಿನ ಅಲ್ವಾ?
ತಾಯಿ: ಹೌದು.
ಅಕ್ಕ: ಈಗ ಇವೆಲ್ಲಾ ಒಂದೇ ದಿನಾನೇನೊ ಅಮ್ಮ. ಸೂರ್ಯ ಎರಡು ಸಾರಿ ಬಂದ್ರೆ ಎರಡು ದಿನ ಆಗುತ್ತೆ. ಒಂದು ವೇಳೆ ಬರದಿದ್ದರೆ ಹೊಸ ದಿನ ಬರುವುದೇ ಇಲ್ಲ. ಆಗ ನಾವು ಹಾಸಿಗೆಯ ಮೇಲಿಂದ ಏಳುವುದೇ ಇಲ್ಲ. ನಮಗೆ ಹಸಿವಾಗದು.
ತಾಯಿ: ಹಾಯಾಗಿ ಮುಖ ತೊಳೆದುಕೊಳ್ಳುವುದಿಲ್ಲ.
ಅಕ್ಕ: ಶಾಲೆಗೆ ಹೋಗುವಷ್ಟಿಲ್ಲ. ಈ ಸೂರ್ಯನಿಂದಾನೆ ಇಷ್ಟೆಲ್ಲ.
ತಮ್ಮ: ಸೂರ್ಯ ಸತ್ತು ಹೋಗಲ್ವಾ?
ಅಕ್ಕ: ಸೂರ್ಯನ್ನ ಯಾರಾದ್ರೂ ಎತ್ಕೊಂಡು ಹೋಗಿಬಿಟ್ರೆ? ಒಂದು ವೇಳೆ ಚೆನ್ನಾಗಿ ಬೈದುಬಿಟ್ಟ್ರೆ ನಾಚಿಕೆಯಿಂದ ಬರುವುದಿಲ್ಲವೇನೊ? ಆಕಾಶದಿಂದ ಬಿದ್ದುಹೋಗಲ್ವಾ?
ತಾಯಿ: ಬೀಳುವುದಿಲ್ಲ, ಇಟ್ಕೊಂಡಿರ್ತಾನೆ.
ತಮ್ಮ: ಕೈ ನೋಯಲ್ವಾ?
ಅಕ್ಕ: ಕೈ ಇಲ್ವೊ ಹುಚ್ಚ. ಅಮ್ಮ, ಸೂರ್ಯ ಹೇಗೆ ಜರುಗ್ತಾನೆ? ಅವನಿಗೆ ಕಾಲು ಇರ್ತಾವಾ?
ತಾಯಿ: ನನಗೆ ಗೊತ್ತಿಲ್ವೆ.
ಅಕ್ಕ: ಸರಿ ಬಿಡು. ಅದು ಮಾತ್ರ ನಮಗೆ ಹೇಳ್ತೀಯ? ಮಕ್ಕಳೇ ಅಲ್ವಾ ಅಂತಾ ನಿನ್ನ ಬಾಯಿಗೆ ಬಂದದ್ದು ಹೇಳ್ತೀಯಾ. ಎಲ್ಲಾ ಸುಳ್ಳೆ. ಬಾರೋ ತಮ್ಮ ಹೋಗೋಣ.

-  ಅನುವಾದ ('ಡಾ।। ಸುಧಾ.ಜಿ')

ಕಾಮೆಂಟ್‌ಗಳಿಲ್ಲ: