Pages

ಕವನ - ಸ್ವಾತಂತ್ರ್ಯೋತ್ಸವ


ಒಂದು ದಿನ ಧ್ವಜವ
ಏರಿಸಿದರೆ ಸಾಕೆ?
ಇದೊಂದು ದಿನ ದೇಶವ
ಹಾಡಿ ಹೊಗಳಿದರೆ ಸಾಕೆ?
ಎಲ್ಲೆಲ್ಲೂ ತಳಿರುತೋರಣ
ಹಬ್ಬದ ವಾತಾವರಣ
ಬಾವುಟಗಳ ರಾರಾಜಿಸುವಿಕೆ
ಬಣ್ಣದ ಬಟ್ಟೆಗಳ ತೊಡುವಿಕೆ
ಸಿಹಿತಿಂಡಿಗಳ ಹಂಚಿಕೆ
ಭಾಷಣಗಳ ವಾಚಿಕೆ
ಮಕ್ಕಳ ನಾಟಕ ನೃತ್ಯಗಳು
ವಿದ್ಯಾರ್ಥಿಗಳ ಪೆರೇಡ್ ಗಳು
ಶಾಲೆಗೆ ರಜ
ಒಂದಷ್ಟು ಮಜ
ಸ್ವಾತಂತ್ರ್ಯೋತ್ಸವವೆಂದರೆ ಹೀಗೇನಾ?
ಲಕ್ಷಾಂತರ ಜನರ ತ್ಯಾಗಬಲಿದಾನದ
ಸ್ವಾತಂತ್ರ್ಯದಿನದಾಚರಣೆ ಇಷ್ಟೇನಾ?

ದಾಸ್ಯವಿರದ, ದಮನವಿರದ
ಹೀನ ಅಪಮಾನವಿರದ
ನೋವಿರದ, ಕಣ್ಣೀರಿರದ
ಜಾತಿಧರ್ಮ ಭೇದವಿರದ
ಸ್ವಾತಂತ್ರ್ಯ, ಸಮಾನತೆಯ
ಉದ್ಯೋಗ, ಸಾಕ್ಷರತೆಯ
ಸಮೃದ್ಧಿ , ನೆಮ್ಮದಿಯ
ಏಕತೆ, ಸೌಹಾರ್ದತೆಯ
ಹೊಸನಾಡಿನ ಕನಸ ಕಂಡರು
ಭವ್ಯಭಾರತದ ಆಶೆ ಹೊತ್ತರು

ನಮ್ಮಗಳ ಓದಿಗಾಗಿ
ಅವರು ಓದು ಬಿಟ್ಟರು
ನಮ್ಮ ಮುಕ್ತ ಬದುಕಿಗಾಗಿ
ಅವರು  ಕೆಲಸ ಬಿಟ್ಟರು
ನಮ್ಮ ಸ್ವಾತಂತ್ರ್ಯಕಾಗಿ
ಅವರು ಪ್ರಾಣ ಕೊಟ್ಟರು
ಹೊಸ ದೇಶದ ಕನಸಿಗಾಗಿ
ತಮ್ಮ ಕನಸ ಬಲಿಯಿತ್ತರು
ನಮ್ಮಯ ಸುಖಬಾಳಿಗಾಗಿ
ತನುಮನವ ತೆತ್ತರು
ಮನೆಮಠ ಆಸ್ತಿಪಾಸ್ತಿ
ಕಳೆದುಕೊಂಡರು
ಲಾಠಿ ಏಟು ಗುಂಡಿನೇಟು
ಸಹಿಸಿಕೊಂಡರು
ಜೈಲು ಶಿಕ್ಷೆ ಗಡಿಪಾರು ಶಿಕ್ಷೆ,
ಅನುಭವಿಸಿಯೇಬಿಟ್ಟರು
ದಮನದೌರ್ಜನ್ಯವ
ಎದುರಿಸಿಯೆಬಿಟ್ಟರು
ನೇಣುಗಂಬವನ್ನು ಸಹ
ನಗುತ ಏರಿಬಿಟ್ಟರು
ತಾವ್ ಕಂಡ ಕನಸಿಗಾಗಿ
ಕನಸಾಗಿ ಹೋಗಿಬಿಟ್ಟರು.
ಅವರ ಕನಸ ಸಾಕಾರಗೊಳಿಸುವುದೇ
ಅವರಿಗೆ ನಾವ್ ನೀಡುವ ನಿಜಗೌರವ
ಹೊಸ ನಾಡ ಕಟ್ಟಲು ಪಣತೊಡುವುದೇ
ನಿಜವಾದ ರೀತಿಯ ಸ್ವಾತಂತ್ರ್ಯೋತ್ಸವ.
ಬನ್ನಿ ಕಂಕಣ ತೊಡೋಣ ಇಂದೇ
ಸ್ವಾತಂತ್ರ್ಯ-ಸಮಾನತೆ-ಭ್ರಾತೃತ್ವಕ್ಕೆ ಶ್ರಮಿಸೋಣವೆಂದೇ.
- ಸುಧಾ ಜಿ       
   

ಕಾಮೆಂಟ್‌ಗಳಿಲ್ಲ: