Pages

ನಾ ಕಂಡಂತೆ: "ಧನ್ಯತೆಯ ಕ್ಷಣಗಳು!"

ಚಿತ್ರ ಕೃಪೆ:


*ಸಿಗೋದೆ ಇಲ್ವಲ್ಲ ಮಿಸ್, ಮೂವತ್ತು ಕವನ ಬರೆದಿದ್ದೀನಿ! ನಿಮ್ಗೆ ತೋರಿಸ್ಬೇಕಿತ್ತು. ಸ್ಪೋರ್ಟ್ಸ್ ಗೆ ಸೇರಿದ್ದೀನಿ ಮಿಸ್, ಚಿತ್ರ ಬರೀತಿನಿ ಮಿಸ್... ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಆ ಹುಡುಗಿ ಹೇಳುತ್ತಾ ಹೋದಂತೆ ನಾನು ಸುಮ್ಮನೆ ನಿಂತುಬಿಟ್ಟೆ! ನಿಮ್ದೇ ಗ್ಯಾನ ಮೇಡಂ ಇವಳಿಗೆ ಅಂತ ಅವಳ ತಾಯಿ ಹೇಳುವಾಗ ಹೃದಯ ತುಂಬಿಕೊಂಡಿತು. 

*ನಮಸ್ತೆ ಅಮ್ಮಾವ್ರೆ, ನನ್ನ ಮಗನಿಗೆ ಮರುಜನ್ಮ ಕೊಟ್ಟಿದ್ದೇ ನಿಮ್ಮ ಶಿಷ್ಯ.ಅಷ್ಟೆತ್ತರದ ತೆಂಗಿನಮರದಿಂದ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿ ಹಗಲಿರುಳು ಕಾದು,ನಮ್ಮಿಂದ ಕಿಂಚಿತ್ತೂ ನಿರೀಕ್ಷಿಸದೆ ನನ್ನ ಮಗನನ್ನು ಜೋಪಾನ ಮಾಡಿಕೊಟ್ಟ ನಿಮ್ಮ ಶಿಷ್ಯ ನಮ್ಮ ಪಾಲಿನ ದೇವರು! ಅಂತ ಮಗನ ಮೇಲೆ ಜೀವವಿಟ್ಟಿರುವ ತಂದೆ ಗದ್ಗದಿತರಾಗಿ ಹೇಳುತ್ತಿದ್ದರೆ ನನ್ನ ಕಣ್ಣಲ್ಲಿ ನನ್ನ ಶಿಷ್ಯ ಎಷ್ಟೊಂದು ಮನುಷ್ಯ! 

 *ಊಹ್ಞುಂ ನೀವು ಹೇಳಿ, ನೀವು ತೋರುವ ದಾರಿಯಲ್ಲಿ ಒಳ್ಳೆಯದಿರುತ್ತದೆ. ನಿಮಗೆ ಸರಿ ಅನ್ನಿಸದ್ದನ್ನು ನಾನು ಮಾಡಲಾರೆ ಅಂತ ಗೆಳತಿಯಂತಹ ಶಿಷ್ಯೆ ಹೇಳುವಾಗ ಧನ್ಯತೆಯ ಭಾವ! 

 *ಓಹೋಓ, ನಿಮ್ಮೆದುರು ಹೀಗೆ ಅಷ್ಟೆ ಮೇಡಂ, ಮನೇಲಿ ಏನು ಅವಾಜ್ ಹಾಕ್ತಾನೆ ಗೊತ್ತ! ಆದರೂ ಮೇಡಂ ಅಂದಾಕ್ಷಣ ಅದೇಕೋ ಸುಮ್ಮನಾಗುವ ಮಗ ಇಷ್ಟೂ ವರ್ಷಗಳಲ್ಲಿ ನಿಮಗೆ ಮಾತ್ರ ಹೆದರುವುದನ್ನು ನೋಡಿದ್ದು! 

*ಓರಗೆಯವರೊಂದಿಗೆ ಬೆರೆಯದೆ, ಯಾವ ಚಟುವಟಿಕೆಯಲ್ಲೂ ತೊಡಗದ ಹುಡುಗ ಆ ಊರಿನಲ್ಲಿ ಓಡಾಡಲೇ ಅಳುಕುತ್ತಿದ್ದವನು 'ಮಿಸ್, ನಾನೀಗ ಓದ್ತಿರೋದು ತುಮಕೂರಲ್ಲಿ! ಅವತ್ತಷ್ಟೇ ಒಳ್ಳೆಯವನು!! ಅಂತನ್ನುವಾಗ ಅವನ ಮುಗ್ಧತೆಗೆ ಹೆಮ್ಮೆ! 

*ಬಿ ಕಾಂ ಮುಗೀತು ಟೀಚರ್, ಕೊನೆವರ್ಷದಲ್ಲಿ ೮೩% ಆಯ್ತು. ಎಂ .ಕಾಂ ಮಾಡೋಕೆ ತುಂಬಾ ಇಷ್ಟ ಇದೆ ಟೀಚರ್. ಆದ್ರೆ ಮನೇಲಿ ಆಗಲ್ಲಂತ ನಿಮ್ಗೂ ಗೊತ್ತು. ಹೆತ್ತವರಿಗೆ ಕಷ್ಟ ಕೊಡಬೇಡಿ ಅನ್ನೋ ನಿಂ ಮಾತು ನೆನಪಿದೆ! 

*ವಿದ್ಯೆ ಕೈಗೆ ಹತ್ತಲಿಲ್ಲ ಟೀಚರ್, ಹಾಗಂತ ತಪ್ಪು ದಾರೀಗೆ ಹೋಗಿಲ್ಲ, ಇಲ್ಲೇ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದೇನೆ. ಅಪ್ಪ, ಅಮ್ಮನಿಗೆ ಬೇಜಾರಂತೂ ಮಾಡ್ತಿಲ್ಲ!! 

ಇತ್ತೀಚೆಗೆ ಅಲ್ಲಲ್ಲಿ ಸಿಕ್ಕ ನನ್ನ ಹಳೆಯ ವಿದ್ಯಾರ್ಥಿಗಳು ಇವರು. ಒಬ್ಬ ಟೀಚರ್ ಗೆ ಇವೆಲ್ಲ ಧನ್ಯತೆಯ ಕ್ಷಣಗಳು. ಮೇಲಿನದ್ದಕ್ಕೆಲ್ಲ ಅಪವಾದವಿಲ್ಲವೆಂದಲ್ಲ. ಏನೇನೋ ಕನಸ ಕಟ್ಟಿಕೊಂಡವರು ಮತ್ತೇನೇನೋ ಆಗಿರುವುದುಂಟು! ಇವ/ಈಕೆ ಅಸಾಧ್ಯವಾದುದನ್ನು ಮಾಡುತ್ತಾರೆಂದುಕೊಂಡು ಭ್ರಮನಿರಸನವೂ ಆಗಿರುವುದುಂಟು! ಕಲಿತ ಮನಸ್ಸುಗಳೇ ತಣ್ಣಗೆ ನೋವ ನೀಡಿರುವುದೂ ಉಂಟು..  ಅದೆಲ್ಲದರ ಮಧ್ಯೆ ಇಂತಹ ಕೆಲವು ಹೂವುಗಳು... ಹಾಡುಗಳು... ಧನ್ಯತೆಯ ಭಾವವನ್ನು ತಂದುಕೊಡುತ್ತವೆ. ಹತಾಶೆಗೊಳಗಾದಂತೆ ಕಾಯುತ್ತವೆ!! 

- ರಂಗಮ್ಮ ಹೊದೇಕಲ್

1 ಕಾಮೆಂಟ್‌:

sarvejanahsukhinobhavantu ಹೇಳಿದರು...

ಶಿಕ್ಷಕರೆಂದರೆ ಯಾಕಾದ್ರೂ ಶಿಕ್ಷಕ ವೃತ್ತಿ ಹಿಡಿದೆವೋ ಎಂದು ಪರಿತಪಿಸುವ ಮಂದಿಯೇ ಏನೋ ಎಲ್ಲಾರೋ ಅನ್ನಿಸುತ್ತಿರುವ ಸಮಯದಲ್ಲಿ ಎಲ್ಲೋ ಒಂದು ಕಡೆ ಶಿಕ್ಷಕ ವೃತ್ತಿಯ ಹಿರಿಮೆಯ ಬಗ್ಗೆ ಆಪ್ತವಾಗಿ ಹಿಡಿದಿಡುವ ಅನುಭವದನ್ನಿಸಿಕೆಗಳು ಇಷ್ಟವಾಯಿತು. ಮಕ್ಕಳನ್ನು ಹೊಡಯುವಂತಿಲ್ಲ, ಬೈಯುವಂತಿಲ್ಲ ತಿದ್ದಲು ಮಾತುಗಳಷ್ಟೇ ಸಾಲದು, ವಿಪರೀತ ಕೆಲಸದೊತ್ತಡ ನೀಗಿಸಿಕೊಳ್ಳಲು ಅನ್ಯ ಹವ್ಯಾಸಗಳಿಗೆ ಪುರಸತ್ತಿಲ್ಲ, ಬೇಡಪ್ಪಾ ಬೇಡ ಶಿಕ್ಷಕತನ ಎನಿಸುವಾಗ, ಹೆಮ್ಮೆ ಪಡುವ ಶಿಕ್ಷಕಿ, ಮತ್ತೊಮ್ಮೆ ನಮ್ಮ ಬಗ್ಗೆ ನಮಗೇ ವಿಶ್ವಾಸ ಮೂಡಿಸಿದ್ದಾರೆ. ಧನ್ಯವಾದಗಳು ಸೋದರ. (ರಾ.ರಾ)