(ಇದು 150 ವರ್ಷಗಳ ಹಿಂದೆ, ರೆಡ್ ಇಂಡಿಯನ್‍ರಲ್ಲಿ ಬಹಳ ವಿವೇಕಿ ಮತ್ತು ಅಗಾಧವಾಗಿ ಗೌರವಿಸಲ್ಪಡುತ್ತಿದ್ದ ಮುಖ್ಯಸ್ಥ ಚೀಫ್ ಸಿಯಾಟೆಲ್ ವಾಷಿಂಗ್ಟನ್‍ನಲ್ಲಿ ಸರ್ಕಾರ ಅವರ ಜಮೀನನ್ನು ಕೊಂಡುಕೊಳ್ಳಬೇಕೆಂದಾಗ ಸರ್ಕಾರವನ್ನು ಉದ್ದೇಶಿಸಿ ಮಾಡಿದ ಭಾಷಣ. ಪರಿಸರದ ಬಗ್ಗೆ ಮಾಡಿರುವ ಎಲ್ಲ ಭಾಷಣಗಳಲ್ಲಿ ಅತ್ಯಂತ ಸ್ಪಷ್ಟ, ಪರಿಣಾಮಕಾರಿಯಾದ ಭಾಷಣ ಎನಿಸಲ್ಪಟ್ಟಿದೆ.)
ಆಕಾಶವನ್ಹೇಗೆ ಕೊಂಡುಕೊಳ್ಳುವಿರಿ? ಸಿಯಾಟೆಲ್ ಮುಖ್ಯಸ್ಥ ಆರಂಭಿಸಿದರು.
ಗಾಳಿ, ಮಳೆಯನ್ಹೇಗೆ ನಿಮ್ಮದಾಗಿಸಿಕೊಳ್ಳುವಿರಿ?
ಹೇಳಿದ್ದರು ಅಮ್ಮ ನನಗೆ,
ಈ ಭೂಮಿಯ ಪ್ರತಿಯೊಂದು ಭಾಗವೂ ನಮ್ಮವರಿಗೆ ಪವಿತ್ರವೆಂದು.
ಪ್ರತಿಯೊಂದು ಮರ, ಪ್ರತಿಯೊಂದು ಸಮುದ್ರ ತೀರ,
ಕಗ್ಗತ್ತಲ ಕಾಡಿನ ಪ್ರತಿ ಮಂಜು,
ಪ್ರತಿ ಹುಲ್ಲುಗಾವಲು ಮತ್ತು ಸುತ್ತ ಗುಂಯ್‍ಗುಡುವ ಕೀಟ,
ಎಲ್ಲವೂ ನನ್ನ ಜನರ ನೆನಪಿನಲ್ಲಿ ಪವಿತ್ರವೆಂದು.
ಅಪ್ಪ ಹೇಳಿದ್ದರು ನನಗೆ,
ಮರಗಳಲ್ಲಿ ಹರಿವ ಜೀವರಸದ ಬಗ್ಗೆ ಗೊತ್ತು ನನಗೆ,
ನನ್ನದೇ ರಕ್ತನಾಳಗಳಲ್ಲಿ ಹರಿವ ರಕ್ತದ ಅರಿವಿರುವಂತೆ.
ಭೂಮಿಯೊಳಗೊಂದು ಭಾಗ ನಾವು, ನಮ್ಮೊಳಗೊಂದು ಭಾಗವದು.
ಸುವಾಸನೆಭರಿತ ಹೂಗಳು ನಮ್ಮ ಅಕ್ಕತಂಗಿಯರು
ಕರಡಿ ಜಿಂಕೆ, ಹದ್ದುಗಳು ನಮ್ಮ ಅಣ್ಣತಮ್ಮಂದಿರು.
ಕಲ್ಲು, ಕಣಿವೆ, ಹುಲ್ಲುಗಾವಲು,
ಕುದುರೆಮರಿಗಳು – ಎಲ್ಲವೂ ಒಂದೇ ಕುಟುಂಬದವರು.
ನನ್ನ ಪೂರ್ವಜರ ದನಿ ಹೇಳಿತು ನನಗೆ,
ತೊರೆಗಳಲ್ಲಿ, ನದಿಗಳಲ್ಲಿ ಹೊಳೆವ ಹರಿವ ನೀರು
ನೀರು ಮಾತ್ರವಲ್ಲವದು, ನಿನ್ನ ಮುತ್ತಾತನ ತಾತನ ರಕ್ತವೆಂದು.
ಸರೋವರಗಳ ಸ್ವಚ್ಛ ಜಲದಿ ಕಾಣುವ ಅಸ್ಪಷ್ಟ ಛಾಯೆ
ನಮ್ಮ ಜನರ ಜೀವನದ ನೆನಪುಗಳ ಸಾರುತ್ತವೆಂದು.
ನೀರಿನ ಝುಳುಝುಳು ನಿನ್ನ ಮುತ್ತಜ್ಜಿಯ ಅಜ್ಜಿಯ ದನಿಯೆಂದು,
ನದಿಗಳು ನಮ್ಮ ಸೋದರರೆಂದು, ನಮ್ಮ ದಾಹ ತಣಿಸುತ್ತವೆ
ನಮ್ಮ ದೋಣಿಗಳ ತೇಲಿಸುತ್ತವೆ, ಮಕ್ಕಳನ್ನು ಪೆÇೀಷಿಸುತ್ತವೆ.
ನಿನ್ನ ಸೋದರನಿಗೆ ನೀ ನೀಡುವ ಪ್ರೀತಿಯನ್ನೇ ನದಿಗಳಿಗೂ ನೀಡಬೇಕೆಂದು.
ನನ್ನಜ್ಜನ ದನಿ ಹೇಳಿತು ನನಗೆ
ಗಾಳಿ ಅತ್ಯಮೂಲ್ಯ, ತನ್ನ ಚೇತನವನ್ನದು,
ಅದು ಬೆಂಬಲಿಸುವ ಎಲ್ಲ ಜೀವರಾಶಿಯೊಂದಿಗೆ ಹಂಚಿಕೊಳ್ಳುತ್ತದೆ.
ನಮಗೆ ಮೊದಲ ಉಸಿರನ್ನು ನೀಡುವ ಗಾಳಿಯೇ
ನಮ್ಮ ಕೊನೆಯುಸಿರನ್ನೂ ಸ್ವೀಕರಿಸುತ್ತದೆ.
ಭೂಮಿ ಮತ್ತು ಗಾಳಿಯನ್ನು ದೂರವಿಡಬೇಕು, ಪವಿತ್ರವಾಗಿಡಬೇಕು,
ಹೂಗಿಡಗಳ ತೋಟದಿಂದ ಸಿಹಿಯಾಗಿರುವ
ಗಾಳಿಯ ಸವಿಯಲು ಹೋಗುವಂತಹ ಸ್ಥಳದಂತೆ.
ಕೊನೆಯ ರೆಡ್ ಸ್ತ್ರೀ-ಪುರುಷ ಮರೆಯಾದಾಗಲೂ,
ಅವರ ನೆನಪು ಕೇವಲ ಹುಲ್ಲುಗಾವಲನ್ನು ದಾಟುವ ಮೋಡಗಳ ನೆರಳಿನಂತಾದಾಗಲೂ,
ಆಗಲೂ ಈ ತೀರಗಳು, ಕಾಡುಗಳು ಇನ್ನೂ ಇರುತ್ತವೆಯೇ?
ನನ್ನ ಜನರ ಚೇತನ ಇನ್ನೂ ಇರುತ್ತದೆಯೇ?
ನನ್ನ ಪೂರ್ವಜರು ಹೇಳಿದರು, ಇದು ನಮಗೆ ಗೊತ್ತು:
ಭೂಮಿ ನಮಗೆ ಸೇರಿದ್ದಲ್ಲ. ನಾವು ಭೂಮಿಗೆ ಸೇರಿದವರು.
ನನ್ನ ಅಜ್ಜಿಯ ದನಿ ಹೇಳಿತು,
ನಿನಗೆ ಕಲಿಸಿದ್ದನ್ನು ನಿನ್ನ ಮಕ್ಕಳಿಗೆ ಕಲಿಸು.
ಭೂಮಿ ನಮ್ಮ ತಾಯಿ.
ಭೂಮಿಗೆ ಏನಾಗುತ್ತದೋ ಅದು ಅವಳ ಮಕ್ಕಳಿಗೂ ಆಗುತ್ತದೆ.
ನನ್ನ ದನಿ ಕೇಳಿ ಮತ್ತು ನನ್ನ ಪೂರ್ವಜರ ದನಿ ಕೇಳಿ,
ಸಿಯಾಟೆಲ್ ಮುಖ್ಯಸ್ಥ ಹೇಳಿದರು:
ನಿಮ್ಮ ಜನರ ಹಣೆಬರಹ ನಮಗೆ ನಿಗೂಢ
ಎಲ್ಲಾ ಕಾಡೆಮ್ಮೆಗಳನ್ನು ಕಡಿದರೆ ಪರಿಣಾಮ ಏನಾಗುವುದು?
ಎಲ್ಲಾ ಕುದುರೆಗಳನ್ನು ಪಳಗಿಸಿದರೆ ಫಲಿತಾಂಶ ಏನಾಗುವುದು?
ಕಾಡಿನ ನಿಗೂಢ ಮೂಲೆಮೂಲೆಗಳಲ್ಲೂ ಮನುಷ್ಯನ ವಾಸನೆ
ಪಸರಿಸಿದರೆ ವಾತಾವರಣ ಏನಾಗುವುದು?
ಬೆಟ್ಟಗಳ ನೋಟ, ಮಾತನಾಡುವ ಕಂಬಿಗಳಿಂದ ಆವರಿಸಿದರೆ,
ಪೆÇದೆಗಳು ಎಲ್ಲಿರುತ್ತವೆ? ಹಾಳಾಗುತ್ತವೆ.
ಹದ್ದುಗಳು ಎಲ್ಲಿರುತ್ತವೆ? ಹಾರಿಹೋಗುತ್ತವೆ
ವೇಗವಾಗಿ ಓಡುವ ಮರಿಕುದುರೆ ಮತ್ತು ಬೇಟೆಗೆ
ವಿದಾಯ ಹೇಳಿದಾಗ ಏನಾಗುವುದು?
ಬದುಕಿನ ಅಂತ್ಯವದು, ಉಳಿವಿನ ಆರಂಭವದು.
ಇದು ನಮಗೆಲ್ಲ ಗೊತ್ತು: ನಮ್ಮ ರಕ್ತ ನಮ್ಮನ್ನು ಒಂದುಗೂಡಿಸಿದಂತೆ
ಎಲ್ಲವೂ ಸಂಬಂಧಿತವೆಂದು ನಮಗೆ ಗೊತ್ತು.
ಜೀವಜಾಲವನ್ನು ನಾವು ನೂಲಲಿಲ್ಲ,
ನಾವದರಲ್ಲೊಂದು ಎಳೆಯಷ್ಟೇ.
ಆ ಜಾಲಕ್ಕೆ ನಾವೇನು ಮಾಡುತ್ತೇವೋ, ಅದು ನಮಗೇ ನಾವು ಮಾಡಿಕೊಳ್ಳುತ್ತೇವೆ.
ಈ ಭೂಮಿಯನ್ನು ನಾವು ಪ್ರೀತಿಸುತ್ತೇವೆ, ನವಜಾತ ಶಿಶು ತನ್ನಮ್ಮನ ಎದೆಬಡಿತವನ್ನು ಪ್ರೀತಿಸುವಂತೆ.
ನಾವು ನಿಮಗೆ ಭೂಮಿಯನ್ನು ಮಾರಿದರೆ, ನಾವು ಜತನಗೊಳಿಸಿದಂತೆ ನೀವೂ ಕಾಳಜಿ ವಹಿಸಿ.
ನೀವು ಪಡೆದಾಗ ಈ ಭೂಮಿ ಹೇಗಿತ್ತು ಎಂಬುದ ನಿಮ್ಮ ಸ್ಮೃತಿಪಟಲದಿಂದ ಅಳಿಸದಿರಿ.
ಭೂಮಿ, ಗಾಳಿ, ನದಿಗಳನ್ನು ರಕ್ಷಿಸಿ, ನಿಮ್ಮ ಮಕ್ಕಳ ಮಕ್ಕಳಿಗಾಗಿ.
ಪ್ರೀತಿಸಿ ಅದನ್ನು, ನಾವದನ್ನು ಪ್ರೀತಿಸಿದಂತೆ.
- ಅನುವಾದ (ಡಾ।। ಸುಧಾ.ಜಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ