ಕವನ
ಬಂದಿದೆಯೇ ನಮಗೆ ದಿಟದ ಸ್ವಾತಂತ್ರ್ಯ
ದೊರೆತಿದೆಯೇ ನಿಜದ ಸಾಮಾಜಿಕ ನ್ಯಾಯ?
ಕಂಡಿಹೆವು ಏನನ್ನು ಭಾರತದ ಭುವಿಯಲ್ಲಿ
ನಾಡ ಹಿರಿಯರ ಕನಸು ಮಣ್ಣಾಗಿಹುದು ಇಲ್ಲಿ!
ಬುದ್ಧನ ನಾಡಿನಲ್ಲಿ ಬಾಂಬುಗಳ ದಾಳಿ
ಬಸವನ ಬೀಡಿನಲಿ ಜಾತಿಯ ಹಾವಳಿ
ಗಾಂಧಿಯ ರಾಷ್ಟ್ರದಲಿ ಹಿಂಸೆಯ ಭೀತಿ
ಭಗತ್ ರ ದೇಶದಲಿ ಧರ್ಮ ಭೇದದ ರೀತಿ,
ನಜ್ರುಲ್ ರ ನೆಲದಲ್ಲಿ ಕೋಮುವಾದದ ಉರಿ
ಬಿಎಂಶ್ರೀ ಯ ಪ್ರದೇಶದಲಿ ಭಾಷಾ ದಳ್ಳುರಿ,
ವಿವೇಕಾನಂದರ ಮಣ್ಣಲ್ಲಿ ಸ್ತ್ರೀ ಮಾನಭಂಗ,
ಗಿಜುಭಾಯಿಯರ ಭೂಮಿಯಲಿ ಮಕ್ಕಳ ಆತ್ಮಭಂಗ,
ರಾಮ್ಮೋಹನ್ ರ ಕ್ಷಿತಿಯಲ್ಲಿ ಸತಿಪದ್ಧತಿಗೆ
ಪುನಃಶ್ಚೇತನ
ವಿದ್ಯಾಸಾಗರರ ಭೂಭಾಗದಲಿ ವಿಧವೆಯರ ಅವಮಾನ,
ತಿಲಕರ ದೇಶದಲಿ ಸ್ವಾತಂತ್ರ್ಯದ ಹರಾಜು
ಅಂಬೇಡ್ಕರರ ರಾಷ್ಟ್ರದಲಿ ಹೆಂಡದ ಸರಬರಾಜು
ಗುರುಜಾಡರ ಮಣ್ಣಿನಲಿ ವರದಕ್ಷಿಣೆ ಪಿಡುಗು
ಜೆಪಿಯವರ ಜನಪದದಿ ಭ್ರಷ್ಟರ ಗುಡುಗು,
ಇಂತಹ ನಾಡಿಗಾಗಿಯೇ ಅವರ ಹೋರಾಟ?
ಇಂತಹ ಸ್ವಾತಂತ್ರ್ಯಕಾಗಿಯೇ
ಅವರ ಕಾದಾಟ?
ಕಸವೆಲ್ಲವ ಗುಡಿಸಬೇಕಿದೆ
ಮನಸೆಲ್ಲ ಸ್ವಚ್ಛಗೊಳಿಸಬೇಕಿದೆ
ಮತ್ತೊಂದು ಹೋರಾಟ ಬೇಕಿದೆ ಇಂದು
ಅವರೆಲ್ಲರ ಕನಸ ಸಾಕಾರಗೊಳಿಸಲೆಂದು!
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ