Pages

ಸಿನಿಮಾ ವಿಮರ್ಶೆ: "ಧರ್ಮ್"





"ಜಹಾ ದಯಾ ತಹಾ ಧರ್ಮ್, ಜಹಾ ಕ್ರೋಧ್ ತಹಾ ಪಾಪ್|
ಜಹಾ ಘೃಣಾ ತಹಾ ನರ್ಕ್ ಹೈ, ಜಹಾ ಕ್ಷಮಾ ತಹಾ ಆಪ್|"
(ಎಲ್ಲಿ ದಯೆಯೋ ಅಲ್ಲಿ ಧರ್ಮ, ಎಲ್ಲಿ ಕ್ರೋಧವೋ ಅಲ್ಲಿ ಪಾಪ)
ಎಲ್ಲಿ ಘೃಣವೋ ಅಲ್ಲಿ ನರಕ, ಎಲ್ಲಿ ಕ್ಷಮೆಯೋ ಅಲ್ಲಿ ನೀವು)
ಎಂಬ ಉಕ್ತಿಯೊಂದಿಗೆ ಪ್ರಾರಂಭವಾಗುತ್ತದೆ 'ಧರಮ್' ಎಂಬ ಹಿಂದಿ ಸಿನಿಮಾ. ಈ ಬಾರಿಯ ವಿಹಂಗಮ ನೋಟಕ್ಕೆ ಆರಿಸಿಕೊಳ್ಳಲು ಬೇಕಾದ ಎಲ್ಲಾ ಉತ್ತಮಾಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಪ್ರಮುಖವಾಗಿ ಕೋಮುವಾದದ ವಿರುದ್ಧ ಜಾಗೃತಿಯನ್ನು ಮೂಡಿಸುವಂತಹ ಶಕ್ತಿಯನ್ನು ಹೊಂದಿದೆ. ಧರ್ಮಕ್ಕಾಗಿ ಹೋರಾಡು, ಧರ್ಮಕ್ಕಾಗಿ ಕೊಲ್ಲು, ಎಂದು ಯುವ ಜನಾಂಗವನ್ನು ದಾರಿತಪ್ಪಿಸಿ ಧರ್ಮದ ನಿಜವಾದ ಅರ್ಥವನ್ನೆ ಕಲುಷಿತಗೊಳಿಸಿದವರು ಈ ಸಿನಿಮಾ ನೋಡಿ ಇನ್ನು ಮುಂದೆಯಾದರೂ ಬದಲಾಗಲಿ ಎಂಬ ಮಹತ್ವಕಾಂಕ್ಷೆ ನಮ್ಮದಾಗಿದೆ. ಪಂಕಜ್ ಕಪೂರ್‍ರವರ ಶ್ರೇಷ್ಠ ಅಭಿನಯವಂತೂ ನೋಡುಗರಿಂದ "ವಾಹ್! ಎಂತಹ ಅದ್ಭುತ ನಟನೆ" ಎಂಬ ಉದ್ಗಾರವನ್ನು ನುಡಿಸುತ್ತದೆ. ಅಂದ ಹಾಗೆ ಇವರು ಈ ಕಥೆಗೆ ಕಥಾನಾಯಕರೂ ಕೂಡ. ಭಾವನಾ ತಲ್‍ವಾರ್‍ರವರ ನಿರ್ದೇಶನ ಸಿನಿಮಾಗೆ ಜೀವಕಳೆ ತಂದಿದೆ. ಇನ್ನು ಸಹನಟಿ, ನಟರೆಲ್ಲರೂ ತಮ್ಮ ಪಾತ್ರಗಳಲ್ಲಿ ಲೀನವಾಗಿ ನೈಜ ಅಭಿನಯದಿಂದ ಮನಸೂರೆಗೊಳ್ಳುತ್ತಾರೆ. ಪ್ರಾರಂಭದಿಂದ ಕೊನೆಯವರೆಗೂ ಕುತೂಹಲವನ್ನು ಸಡಿಲಿಸದೆ ನೋಡಿಸಿಕೊಂಡು ಹೋಗುವ ಸುಂದರ ಕಥೆಯೇ ಸಿನಿಮಾದ ಮತ್ತೊಂದು ಹೈಲೈಟ್.
ಕಥೆ ಶುರುವಾಗುವುದೇ ಬನಾರಸ್(ವಾರಣಾಸಿ)ನ ಪವಿತ್ರ ಗಂಗಾ ನದಿ ತಟದಲ್ಲಿ. ಅಲ್ಲಿಗೆ ವೇದೋಪನಿಷತ್ ಭೋದಕರೂ,  ದೇವಾಲಯದ ಅರ್ಚಕರೂ, ನೇಮನಿಷ್ಠೆಗಳಿಂದ ಶಿವನನ್ನು ಪೂಜಿಸುವ ಬ್ರಾಹ್ಮಣ ಪಂಡಿತರು ಆದ ಚತುರ್ವೇದಿಯವರು ಶಿಷ್ಯರೊಡನೆ ಆಗಮಿಸುತ್ತಾರೆ. ಬೊಜ್ಜು ಹೊಟ್ಟೆಯ ಶುದ್ಧ ಬ್ರಾಹ್ಮಣ ವೇಷದಲ್ಲಿ ಪಂಕಜ್‍ರವರನ್ನು ನೋಡಲು ಹಾಸ್ಯಾಸ್ಪದವೆನಿಸಿದರೂ ತಮ್ಮ ಗಂಭೀರ ಅಭಿನಯದಿಂದ ನಮ್ಮಲ್ಲೂ ಗಂಭೀರತೆಯನ್ನು ಮೂಡಿಸುತ್ತಾರೆ.
ಪಂಡಿತರು ಸೂರ್ಯನನ್ನು ಪೂಜಿಸಿ ಹಿಂದಿರುಗುವಾಗ ಕಸ ಗುಡಿಸುತ್ತಿದ್ದ ಅಸ್ಪೃಶ್ಯನೊಬ್ಬ ಪಂಡಿತರನ್ನು ಹಿಂದಿನಿಂದ ಸ್ಪರ್ಷಿಸಿಬಿಡುತ್ತಾನೆ. ತಿಳಿಯದೆ ಆದ ಪ್ರಮಾದಕ್ಕೆ ಸುತ್ತಲಿನ ಜನ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಪಂಡಿತರು ಹೊಡೆಯಿರೆಂದು ಹೇಳಲಿಲ್ಲ ಹಾಗಂತ ಅದನ್ನು ತಡೆಯಲೂ ಇಲ್ಲ. ನಡೆದು ಹೋದ ಅಪರಾಧಕ್ಕೆ ಪ್ರಾಯಶ್ಚಿತ್ತಕ್ಕಾಗಿ ನೀರಿಗಿಳಿದು ಶಿವನನ್ನು ಜಪಿಸಿ ಜಲಪೆÇ್ರೀಕ್ಷಣೆ ಮಾಡಿಕೊಂಡು ತನ್ನ eನಿವಾರವನ್ನು ಬದಲಾಯಿಸಿ ಹೊರಡಲನುವಾಗುತ್ತಾರೆ. ಈ ಅನ್ಯಾಯವನ್ನು ತಡೆಯಲೆತ್ನಿಸಿದ ಸಾಧುವೊಬ್ಬರು ನೊಂದು ಪಂಡಿತರನ್ನು "ಇದೆಂತಹ ಅನ್ಯಾಯ, ಎಲ್ಲಾ ಶಾಸ್ತ್ರಗಳೂ ಹೇಳುತ್ತವೆ- ಯಾರೂ ಅಧಮರಲ್ಲ, ಯಾರೂ ಉತ್ತಮರಲ್ಲ. ಮನುಷ್ಯರಾಗಿ ನಾವೆಲ್ಲಾ ಒಂದೆ ಎಂದು. ನೀವೇ ತಡೆಯದೆ ಹೋದರೆ ಹೇಗೆ? ಎಂದು ವಿನಂತಿಸುತ್ತಾರೆ. ಭಗವಂತನ ದಯೆಯಿಂದ ನಾನೂ ಸಹ ಶಾಸ್ತ್ರಾಧ್ಯಯನವನ್ನು ಮಾಡಿದ್ದೇನೆ ಎಂದಷ್ಟೇ ಹೇಳಿ ನಮಸ್ಕರಿಸಿ ತೆರಳುತ್ತಾರೆ. ಇಂತಹ ಕಟ್ಟಾ ಮಡಿವಂತಿಕೆಯ ಪಂಡಿತರು ತಮ್ಮ ದಯೆಯಿರದ ಧರ್ಮಾಚರಣೆಗಳನ್ನು ತೊರೆದು ಕೋಮುವಾದಿಗಳ ವಿರುದ್ಧ ನಿಲ್ಲುವ ರೋಚಕ ಕಥೆಯೇ ‘ಧರ್ಮ್'.
ಪಂಡಿತರ ಪತ್ನಿ ಪಾರ್ವತಿ. ಪತಿಯ ಇಚ್ಛೆಗನುಗುಣವಾಗಿ ನಡೆಯುವ ಸುಗುಣವತಿ. ಪಂಡಿತರು ಪೂಜೆಗೆ ಕುಳಿತಾಗ ಅವರ ವ್ರತಕ್ಕೆ ಚೂರೂ ಭಂಗ ತರದಂತೆ ಎಚ್ಚರಿಕೆ ವಹಿಸುತ್ತಿದ್ದಳು. ಈ ಅನ್ಯೋನ್ಯ ದಂಪತಿಗಳಿಗೊಬ್ಬ ಮುದ್ದು ಮಗಳು. ಹೆಸರು ವೇದಿಕಾ. ಇವರ ಕಣ್ಮಣಿಯಾಗಿದ್ದಳು. ಪಂಡಿತರ ಬಳಿ ಪಾಲ್ ಎಂಬ ವಿದೇಶಿ ಯುವಕ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಬಂದಿದ್ದನು. ಆತನೊಬ್ಬ ಪತ್ರಕರ್ತ. ಇಲ್ಲಿ ಪಂಡಿತರ ಸಲಹೆ ಆಜ್ಞೆಗಳಿಗನುಸಾರವಾಗಿ ನಡೆಯುವ ಜಮೀನ್ದಾರಿ ಕುಟುಂಬವೊಂದರ ಪರಿಚಯವಾಗುತ್ತದೆ. ಮನೆಯ ಒಡೆಯ ವಿಷ್ಣುಸಿಂಗರು ಸಜ್ಜನರು. ಪಂಡಿತರ ಮಾತೇ ಇವರಿಗೆ ವೇದ ವಾಕ್ಯ. ಅವರ ಮಗಳು ಮಣಿ ರೂಪ, ಗುಣದ ಜೊತೆಗೆ ವಿದ್ಯಾವಂತೆ. ವಿದೇಶಿ ಯುವಕ ಪಾಲ್‍ಗೂ, ಮಣಿಗೂ ಪ್ರೇಮಾಂಕುರವಾಗಿರುತ್ತದೆ. ಇದು ಯಾರಿಗೂ ತಿಳಿದಿರುವುದಿಲ್ಲ. ಇನ್ನು ಮಗ ಸೂರ್ಯಪ್ರಕಾಶ ಮುಂಗೋಪಿ, ಅವಿವೇಕಿ. ತಂಗಿ ಎಮ್‍ಬಿಎ ಓದುವೆನೆಂದಾಗ ಪಂಡಿತರ ಮುಂದೆಯೇ ತಂದೆಯೆಂಬ ಗೌರವವಿಲ್ಲದೆ ವಿಷ್ಣುಸಿಂಗರ ಮೇಲೆ ರೇಗಾಡುತ್ತಾನೆ. ಹೆಣ್ಣುಮಕ್ಕಳಿಗಿದು ಸಭ್ಯತೆಯಲ್ಲ ಎಂದು ಕೂಗಾಡುತ್ತಾನೆ. ಆಗ ಪಂಡಿತರು ತಂದೆಯ ಜೊತೆ ಹೀಗೆ ಮಾತಾಡುವುದು ಕೂಡ ಸಭ್ಯತೆಯಲ್ಲವೆಂದು ಹೇಳಿ ಮಣಿಯ ಓದಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ತಂದೆಗಿದೆ ಎನ್ನುತ್ತಾರೆ. ತಂದೆ ಮಗಳ ಓದಿಗೆ ಸಮ್ಮತಿಸಿದರು.
ಒಂದು ದಿನ ಪಂಡಿತರ ಮಗಳು ವೇದಿಕಾಳಿಗೆ ದಾರಿಹೋಕಳೊಬ್ಬಳು ತನ್ನ ಎಳೆಮಗುವನ್ನು ನೀಡಿ ನೀರು ಕುಡಿದು ಬರುತ್ತೇನೆಂದು ಹೇಳಿ ವಾಪಸ್ಸು ಬಂದಿರುವುದಿಲ್ಲ. ತಾಯಿ ಮಗಳಿಬ್ಬರು ಮಗುವನ್ನು ಆಡಿಸುತ್ತಾ ಕಾಯುತ್ತಿದ್ದಾಗ ಮನೆಗೆ ಬಂದ ಪಂಡಿತರು ವಿಚಾರ ತಿಳಿದು, ಆಶ್ಚರ್ಯದಿಂದ ಜಾತಿಯಾದರೂ ತಿಳಿಯದೆ ಹೇಗೆ ಮಗುವನ್ನು ಮುಟ್ಟಿದಿರಿ ಎಂದು ಕೋಪಗೊಂಡರು. ಪಾರ್ವತಿಯು ಆ ವಿಷಯದ ಬಗ್ಗೆ ಏನೂ ತಿಳಿಯದಿದ್ದರು ಮಗಳನ್ನು ರಕ್ಷಿಸಲು ಮಗು ಬ್ರಾಹ್ಮಣರದಂತೆ, ವೇದಿಕಾ ಕೇಳಿಯೇ ಪಡೆದುಕೊಂಡಿದ್ದಾಳೆಂದಾಗ ನಿಟ್ಟುಸಿರು ಬಿಟ್ಟು ಆದರೂ ತಾಯಿ ನೊಂದುಕೊಳ್ಳುತ್ತಾಳೆಂದು ಪೆÇೀಲೀಸ್ ಕಂಪ್ಲೆಂಟು ನೀಡಿದರು.
ಆಕೆ ವಾಪಸ್ಸು ಬರಲಿಲ್ಲವಾದರೂ ಪಂಡಿತರ ಮನೆಯಲ್ಲಿ ಆ ಮಗುವಿನಿಂದ ಸಡಗರ ಹೆಚ್ಚಿತು. ವೇದಿಕಾಳಂತೂ ತನ್ನ ಪ್ರಿಯವಾದ ಟಿ.ವಿಯನ್ನು ಮರೆತು ಅದರ ಜೊತೆ ಆಡುತ್ತಾ ಸಂಭ್ರಮಿಸುತ್ತಿದ್ದಳು. ಆದರೆ ಮಗುವಿನ ಅಳು ಪಂಡಿತರ ಪೂಜೆಗೆ ಭಂಗವನ್ನುಂಟುಮಾಡುತ್ತಿತ್ತು. ಇರುವ ಕೆಲಸದ ಜೊತೆಗೆ ಮಗುವಿನ ಕೆಲಸವೂ ಸೇರಿ ಪಾರ್ವತಿ ಒಂದು ದಿನ ಗಂಡನ ಪೂಜೆಗೆ ಅಣಿ ಮಾಡಲು ಹೋಗಿ ಆತುರದಲ್ಲಿ ಪಂಡಿತರನ್ನು ಮುಟ್ಟಿಬಿಟ್ಟಳು. ಸಿಡಿಮಿಡಿಗೊಂಡ ಪಂಡಿತರು ಮಡಿ ಹಾಳಾಯಿತೆಂದು ಮತ್ತೊಮ್ಮೆ ಸ್ನಾನಕ್ಕೆ ತೆರಳಿದರು.
ಇತ್ತ ಮಣಿ ಮತ್ತು ಪಾಲ್‍ರ ಪ್ರೀತಿ ವಿಷಯ ಗೊತ್ತಾಗಿ ಮಣಿಯ ಅಣ್ಣ ಸೂರ್ಯಪ್ರಕಾಶ್ ಪಾಲ್‍ನನ್ನು ಹಿಡಿದು ಚಚ್ಚುತ್ತಿರುವಾಗ ಏನೂ ಮಾಡಲಾಗದ ಮಣಿ ಪಂಡಿತರನ್ನು ಕರೆತಂದು ಅದನ್ನು ತಪ್ಪಿಸುತ್ತಾಳಾದರೂ ಈ ವಿಷಯ ತಿಳಿದು ಪಂಡಿತರು ಬೇಸರಗೊಳ್ಳುತ್ತಾರೆ. ಜಮೀನ್ದಾರರಿಗೆ ಬೇಗನೆ ಮಗಳ ಮದುವೆ ಮಾಡಿರೆಂದು ಹೇಳಿ, ಮಣಿಗೆ, ಮಗಳಾದವಳು ತಂದೆಯ ಇಚ್ಛೆಗನುಸಾರವಾಗಿ ನಡೆಯಬೇಕೆಂದಷ್ಟೆ ಹೇಳಿ ಹೊರಟರು. ಆದರೆ ಮಣಿ ಅತ್ತಿಗೆಯ ಸಹಾಯದಿಂದ ಯಾರಿಗೂ ತಿಳಿಯದಂತೆ ಪಾಲ್‍ನೊಂದಿಗೆ ಹೊರಟುಬಿಟ್ಟಳು. 
ಮರುದಿನ ಮಗುವಿನ ತಾಯಿ ಸಿಗಲಿಲ್ಲವೆಂದು ಇನ್ಸ್‍ಪೆಕ್ಟರ್ ಪಂಡಿತರಿಗೆ ತಿಳಿಸಿದರು. ಆಗ ಪಾರ್ವತಿಯು ಪಂಡಿತರಿಗೆ ನೀವೆ ಹೇಳಿದಂತೆ ಪ್ರತಿಯೊಂದು ಘಟನೆಯೂ ಭಗವಂತನ ಇಚ್ಚೆಯಂತೆ ನಡೆಯುತ್ತದೆ. ಹಾಗಿರುವಾಗ ಈ ಮಗು ಬಂದಿರುವುದು ಭಗವಂತನ ಇಚ್ಛೆಯಿಂದಲ್ಲವೆ, ತಾಯಿ ಸಿಗುವವರೆಗೂ ಮಗು ಇಲ್ಲೇ ಇರಲಿ ಎಂದಳು. ಪಂಡಿತರಿಗೂ ಹೌದೆನಿಸಿ ಸುಮ್ಮನಾದರು.
ಎಷ್ಟು ದಿನಗಳಾದರೂ ತಾಯಿಯ ಪತ್ತೆಯಾಗದ ಕಾರಣ ಇನ್ಸ್‍ಪೆಕ್ಟರ್ ಮಗುವನ್ನು ಅನಾಥಾಲಯಕ್ಕೆ ಸೇರಿಸುವುದು ಒಳ್ಳೆಯದೆಂದರು. ಆದರೆ ಪಂಡಿತರು, ಮಗು ಬ್ರಾಹ್ಮಣರ ಬಾಲಕ, ಈ ಮನೆಯಲ್ಲಿ ಅವನೊಬ್ಬ ಭಾರವಾಗಲಾರ, ದೇವಾಲಯದ ನನ್ನ ಶಿಷ್ಯರ ಜೊತೆಯಲ್ಲಿಯೇ ಬೆಳೆಯುತ್ತಾನೆ ಎಂದಾಗ ಪಾರ್ವತಿಯು, ರಾತ್ರಿ ತನ್ನ ಮನದಾಸೆಯನ್ನು ಬಿಚ್ಚಿಟ್ಟು, ಆ ಮಗುವನ್ನು ತನ್ನ ಮಗನಾಗಿ ಸ್ವೀಕರಿಸಲು ಅನುಮತಿ ಕೇಳುತ್ತಾಳೆ. ಜೊತೆಗೆ ಈ ಮಗು ಪಂಡಿತರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದಾಗ, ಪಂಡಿತರು ಸಮ್ಮತಿಸೂಚಕವಾಗಿ ಆ ಮಗುವಿಗೆ 'ಕಾರ್ತಿಕೇಯ' ನೆಂದು ನಾಮಕರಣ ಮಾಡಿದರು.
ಹೀಗಿರುವಾಗ ಒಮ್ಮೆ ಮಗು ಜೋರಾಗಿ ಅಳುತಿತ್ತು. ಧ್ಯಾನಾಸಕ್ತರಾಗಿದ್ದ ಪಂಡಿತರು ಮಗುವಿನ ಅಳುವಿನಿಂದ ಎಚ್ಚರಗೊಂಡರು. ತಮ್ಮ ಪತ್ನಿಯನ್ನು ಅನೇಕ ಬಾರಿ ಕರೆದರು. ಮನೆಯಲ್ಲಿ ಯಾರು ಇರದ ಕಾರಣ ತಾವೇ ತೊಟ್ಟಿಲ ಬಳಿಗೆ ಬಂದು ಅಳುತ್ತಿದ್ದ ಮಗುವನ್ನು ತಮ್ಮ ಕರ್ಕಶ ಧ್ವನಿಯಿಂದ ಸುಮ್ಮನಿರಿಸ ಹೋದರು. ಪ್ರಯೋಜನವಾಗಲಿಲ್ಲ. ಗಿರಿಗಿಟ್ಲೆಯ ಶಬ್ಧ ಮಾಡಿದರೂ ಅಳು ನಿಲ್ಲಲಿಲ್ಲ. ಕೊನೆಗೂ ಸೋತ ಪಂಡಿತರು ಮೊದಲ ಬಾರಿಗೆ ಎಂದೂ ಮುಟ್ಟದ ಮಗುವನ್ನು ಎತ್ತಿಕೊಂಡುಬಿಟ್ಟರು. ಭುಜದ ಮೇಲೆ ಮಲಗಿಸಿಕೊಂಡ ಪಂಡಿತರು ಸಮಾಧಾನಿಸತೊಡಗಿದಾಗ ಮಗು ತನ್ನ ಅಳುವನ್ನು ನಿಲ್ಲಿಸಿತು. ಸಂತಸಗೊಂಡ ಪಂಡಿತರು ಸ್ತೋತ್ರವೊಂದನ್ನು ಹಾಡುತ್ತ ಮಗುವಂತೆ ಕುಣಿದರು. ಮಗುವನ್ನು ನಗಿಸಿದರು. ಈ ದೃಶ್ಯ ತುಂಬಾ ಸುಂದರವಾಗಿದ್ದು ಅವರ ಅಭಿನಯ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವಂಥದ್ದಾಗಿದೆ.
   ಸ್ವಲ್ಪ ಸಮಯದ ನಂತರ ಮನೆಗೆ ವಾಪಸ್ಸು ಬಂದ ತಾಯಿ ಮಗಳಿಬ್ಬರಿಗೂ ಆಶ್ಚ್ರರ್ಯವೋ ಆಶ್ಚರ್ಯ. ಪಂಡಿತರು ಮಗುವನ್ನು ತಮ್ಮ ಹೊಟ್ಟೆಯ ಮೇಲೆ ಮಲಗಿಸಿಕೊಂಡು ತಾವೂ ಸುಖನಿದ್ರೆಗೆ ತೆರಳಿಬಿಟ್ಟಿದ್ದರು. ಅಂದಿನಿಂದ ಪಂಡಿತರು ಮಗುವಿನ ಜೊತೆ ಬಿಡದೆ ತಾವೂ ಮಗುವಿನಂತಾಗಿ ಬಿಟ್ಟರು. ಕಾರ್ತಿಕೇಯನು ಆ ಮನೆಯಲ್ಲಿ ತೆವಳುತ್ತಾ, ಅಂಬೆಗಾಲಿಡುತ್ತಾ, ಪುಟ್ಟ ಹೆಜ್ಜೆಗಳನ್ನು ಕಲಿತು ನಡೆಯುವಂತಾದನು. ಪಾಠಶಾಲೆಯಲ್ಲಿ, ಗಂಗಾತೀರದಲ್ಲಿ, ಪೂಜಾ ಗೃಹದಲ್ಲೂ ಪಂಡಿತರಿಗೆ ಕಾರ್ತಿಕೇಯನು ಅಂಟಿಕೊಂಡೇ ಇರುತ್ತಿದ್ದನು. ಪಂಡಿತರೂ ಅವನನ್ನು ಬಿಟ್ಟಿರುತ್ತಿರಲಿಲ್ಲ. ಕಾರ್ತಿಕೇಯನು ಪಂಡಿತರ ವಿಧಿ ವಿಧಾನಗಳನ್ನರಿತು ಅವರೊಂದಿಗೇ ಕಾಲ ಕಳೆಯುತ್ತಿದ್ದನು.
ಗಂಗಾ ತೀರದಲ್ಲಿ ದಯಾಶಂಕರ್ ಪಾಂಡೆ ಎಂಬ ಶಾಸ್ತ್ರಿಗಳು ಸಣ್ಣ ಪುಟ್ಟ ಪೂಜೆಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾರೆ. ದೇವಾಲಯದ ಪ್ರಧಾನ ಅರ್ಚಕರಾದ ಪಂಡಿತರೆಂದರೆ ಅಸೂಯೆ. ಜಮೀನ್ದಾರರ ಮಗನ ಜೊತೆ ಸ್ನೇಹವೂ ಇತ್ತು. ಸೂರ್ಯಪ್ರಕಾಶ್‍ನಂತೂ ತಂಗಿ ವಿದೇಶಿ ಯುವಕನೊಂದಿಗೆ ಓಡಿಹೋದ ನಂತರ ಮತ್ತೂ ವಿವೇಕವನ್ನು ಕಳೆದುಕೊಂಡಿದ್ದ. ಕಂಡ ವಿದೇಶಿಯರ ಮೇಲೆಲ್ಲಾ ಕಿಡಿಕಾರುತ್ತಿದ್ದ. ಈ ಮನಸ್ಥಿತಿಯಲ್ಲಿ ಕೋಮುವಾದಿಗಳ ಸಂಗ ಮಾಡಿ ಧರ್ಮಾಂಧನಾಗಿಬಿಟ್ಟ.
ಒಂದು ದಿನ ದಯಾಶಂಕರ್ ಶಾಸ್ತ್ರಿಗಳು ಪಂಡಿತರ ಮನೆಗೆ ಆಗಮಿಸಿದರು. ಬಾಗಿಲಲ್ಲೇ ನಿಂತು ಕಾರ್ತಿಕೇಯನ ತಾಯಿ ಬಂದಿರುವುದಾಗಿ ವ್ಯಂಗವಾಗಿ ತಿಳಿಸಿದರು. ಹೊರಗೆ ನಿಂತಿದ್ದ ಆಕೆ ಒಳಬಂದಾಕ್ಷಣ ಪಂಡಿತರಿಗೆ ಸಿಡಿಲೆರಗಿದಂತಾಗಿ ಹಿಂದಕ್ಕೆ ಸರಿದುಬಿಟ್ಟರು. ಬುರ್ಖಾ ಧರಿಸಿದ್ದ ಆಕೆ ಕೋಮುಗಲಭೆಯ ಕಾರಣ ಮಗುವನ್ನು ಕರೆದುಕೊಂಡು ಹೋಗಲಾಗಲಿಲ್ಲವೆಂದು ಹೇಳುತ್ತಿದ್ದರೂ ಇವ್ಯಾವುದೂ ಪಂಡಿತರ ಕಿವಿಗೆ ಬೀಳಲಿಲ್ಲ. ತನ್ನ ಧರ್ಮ ಪತ್ನಿಯೇ ವಂಚಿಸಿದಳೆಂದು ಕುಗ್ಗಿಹೋದರು. ಆದರೆ ಪಾರ್ವತಿಯು ತಾನು ಹೇಳಿದ ಸುಳ್ಳಿನಿಂದ ತಲೆತಗ್ಗಿಸಿದಳು. ಪತಿಯ ಸ್ಥಿತಿಯನ್ನು ನೋಡಿ ಗಾಬರಿಗೊಂಡಳು. ಪತಿಯ ಕೋಪಕ್ಕೆ ಹೆದರಿ ಇಷ್ಟು ವರ್ಷ ಸಾಕಿದ ಮಗನನ್ನು ಒಲ್ಲದ ಮನಸ್ಸಿನಿಂದ ಎಳೆದುತಂದು ಅವನ ತಾಯಿಗೆ ಒಪ್ಪಿಸಿದಳು. ಬಾವೂಜಿ ಬಾವೂಜಿ ಎಂದು ಚೀರುತ್ತಲೇ ಕಾರ್ತಿಕೇಯನು ಮನೆಯಿಂದ ಮರೆಯಾದನು. ಆ ಮನೆಯಲ್ಲಿನ ನಗು, ಸಂತೋಷವನ್ನೂ ತನ್ನೊಂದಿಗೇ ಕರೆದುಕೊಂಡು ಹೋಗಿಬಿಟ್ಟನು. 
ಮರುದಿನವೇ ಎಲ್ಲಾ ಶುಭ್ರತಾ ಕಾರ್ಯಗಳು ನಡೆದು ಕಾರ್ತಿಕೇಯನ ವಸ್ತುಗಳೆಲ್ಲವನ್ನು ಬಿಸಾಡಿದರು. ಆದರೆ ಮನದಲ್ಲಿನ ಅವನ ನೆನಪು, ಅಗಲಿಕೆಯ ನೋವು ಮಾತ್ರ ಯಾರಿಂದಲೂ ಹೋಗಲಿಲ್ಲ. ಪಂಡಿತರಂತೂ ಇದು ಶಿವನಿಗೆ ಬಗೆದ ದ್ರೋಹವೆಂದು ತಲ್ಲಣಿಸಿಹೋದರು. ಧರ್ಮಕ್ಕೆ ತನ್ನಿಂದಾದ ಅಪಚಾರಕ್ಕೆ ಪಂಡಿತರು ಮೌನ ವ್ರತವನ್ನು ತಳೆದುಬಿಟ್ಟರು. ಜೊತೆಗೆ ಕಾರ್ತಿಕೆಯನ ನೆನಪು ಅವರನ್ನು ಬೆಂಬಿಡದೆ ಕಾಡಿಸಿಬಿಟ್ಟಿತು.
ಪಂಡಿತರು ಒಬ್ಬ ಮುಸಲ್ಮಾನ ಹುಡುಗನನ್ನು ಜೊತೆಯಲ್ಲಿರಿಸಿಕೊಂಡು ಹಿಂದೂ ಧರ್ಮವನ್ನೆ ಅಪವಿತ್ರಗೊಳಿಸಿದ್ದಾರೆಂದು ಪ್ರಧಾನ ಅರ್ಚಕರ ಸ್ಥಾನದಿಂದ ಕೆಳಗಿಸಲು ಸೂರ್ಯಪ್ರಕಾಶ್ ಮತ್ತು ದಯಾಶಂಕರ ಪಾಂಡೆ ಅವರ ಮನೆಗೆ ದಂಡೆತ್ತಿ ಬಂದರು. ಆದರೆ ಪಂಡಿತರು ತಮ್ಮ ಮೌನವ್ರತವನ್ನು ಅಂತಿಮಗೊಳಿಸಿ ಅತ್ಯಂತ ಕಠಿಣವಾದ ಚಂದ್ರಾಯಣ ವ್ರತವನ್ನು ಸ್ವೀಕರಿಸಿರುವುದನ್ನು ತಿಳಿದು ದಂಗಾಗಿ ನಿಂತುಬಿಟ್ಟರು. ವ್ರತದ ಪ್ರಕಾರ ಅಮಾವಾಸ್ಯೆಯ ನಂತರ ಹುಣ್ಣಿಮೆಯವರೆಗೂ ಮೊದಲ ದಿನ ಒಂದು ತುತ್ತು, ಎರಡನೆಯ ದಿನ ಎರಡು ತುತ್ತು ಹೀಗೆ ದಿನ ದಿನಕ್ಕೆ ಕೇವಲ ಒಂದು ತುತ್ತು ಹೆಚ್ಚುತ್ತಾ ಹೋಗಿ ಹುಣ್ಣಿಮೆಯ ನಂತರ ಹಾಗೆಯೇ ಒಂದೊಂದು ತುತ್ತು ಕಡಿಮೆಯಾಗಿ ಕೊನೆ ದಿನಕ್ಕೆ ಒಂದು ತುತ್ತು ಮಾತ್ರ ಸೇವಿಸುತ್ತಾರೆ. ಒಂದು ತಿಂಗಳ ನಂತರ ವ್ರತವು ಪೂರ್ಣಗೊಳ್ಳುವುದೆಂದು ತಿಳಿದು ಮರುಮಾತಾಡದೆ ಅವರು ಹಿಂತಿರುಗಿದರು. ಪಂಡಿತರ ಹದಗೆಡುತ್ತಿದ್ದ ಆರೋಗ್ಯವನ್ನು ನೋಡಿ ಕೊರಗುತ್ತಿದ್ದ ಪಾರ್ವತಿ ಮತ್ತು ವೇದಿಕ ವ್ರತ ಮುಗಿದ ನಂತರ ನಿಟ್ಟುಸಿರಿಟ್ಟರು. ಇದರ ನಂತರ ಜನರಿಗೆ ಪಂಡಿತರ ಮೇಲಿನ ಪೂಜ್ಯ ಭಾವ ಮತ್ತೂ ಹೆಚ್ಚಾಯಿತು.
ಸೇವಾಪುರಿಯಲ್ಲಿ ಭುಗಿಲೆದ್ದ ಕೋಮುಗಲಭೆ ಕಾಳ್ಗಿಚ್ಚಿನಂತೆ ಬನಾರಸ್ಸಿನವರೆಗೂ ಹರಡಿತು. ಎಲ್ಲೆಲ್ಲೂ ದಂಗೆ ಜಗಳಗಳು ಶುರುವಾದವು. ಆ ಗಲಭೆಯಲ್ಲಿ ಮಣಿಯ ಪತಿ ಪಾಲ್ ಮರಣಿಸಿದನು. ವಿಧವೆ ಮಣಿ ದಿಕ್ಕಿಲ್ಲದೆ ತಂದೆಯ ಮನೆಗೆ ವಾಪಸ್ಸು ಬಂದಳು. ಅವಳ ಅಣ್ಣ ಇದಕ್ಕೆ ಒಪ್ಪುವುದಿಲ್ಲವಾದರೂ ಪಂಡಿತರು  ವಿಧವಾ ಸಂಪ್ರದಾಯದಂತೆ ಆಕೆಗೆ ಆಶ್ರಯ ನೀಡಬೇಕೆಂದು ಹೇಳಿದರು
. ಒಂದು ದಿನ ಕಾರ್ತಿಕೇಯನ ತಾಯಿ ಗಾಬರಿಯಿಂದ ಓಡಿಬಂದು ಮಗನನ್ನು ಕಾಪಾಡಿರೆಂದು ಗೋಗರೆದಳು. ಪಾರ್ವತಿ ಆಕೆಯನ್ನು ಒಳಗಡೆಯೂ ಬರಗೊಡಲಿಲ್ಲ. ಪೂಜೆಯಲ್ಲಿರುವ ಪಂಡಿರು ಸ್ವಲ್ಪವೂ ಗಮನವೀಯಲಿಲ್ಲ. ಕಾರ್ತಿಕೇಯನಿಗೆ ಅಮ್ಮನನ್ನು, ಬಾವೂಜಿಯನ್ನು ಕೂಗು ಎಂದು ಹೇಳಿಕೊಡುತ್ತಾಳಾದರೂ ಕಾರ್ತಿಕೇಯನು ಪಂಡಿತರು ಪೂಜೆಯಲಿದ್ದುದನ್ನು ಕಂಡು ತಾಯಿಯನ್ನೆ ಸುಮ್ಮನಿರೆಂದು ಬಾಯಿ ಮೇಲೆ ಬೆರಳಿಡುತ್ತಾನೆ. ಆದರೂ ಯಾವುದೆ ಪ್ರಯೋಜನವಾಗದೆ ತಾಯಿ ಮಗ ತೆರಳಿಬಿಟ್ಟರು.
ಬೆಳಿಗ್ಗೆ ನಡದ ಘಟನೆಯಿಂದ ನೊಂದ ಪಾರ್ವತಿ ಮತಿಯಿರದವಳಂತೆ ರಾತ್ರಿ ಪಂಡಿತರಿಗೆ ಊಟ ಬಡಿಸುತ್ತಾ "ನಾವು ಆ ಮಗುವನ್ನು ಕಾಪಾಡದೆ ಇರುವುದರಿಂದ ಧರ್ಮವನ್ನು ರಕ್ಷಿಸಿದಂತಾಯಿತಲ್ಲವೆ" ಎಂದು ಕುಹಕವಾಡಿದಳು. ಕೋಪದಿಂದ ಪಂಡಿತರು ಊಟ ಮಾಡದೆಯೇ ಎದ್ದು ಹೊರಟರು. ಮರುದಿನ ಜಮೀನ್ದಾರರ ಮನೆಯಲ್ಲಿ ಹೋಮವೊಂದಕ್ಕೆ ಆಗಮಿಸಿದ ಪಂಡಿತರು ಸೂರ್ಯಪ್ರಕಾಶ್‍ನ ಮಿತ್ರರು (ಕೋಮುವಾದಿಗಳು) ಹಿಂದಿನ ದಿನ ಒಬ್ಬ ತಾಯಿ ಮಗನನ್ನು ಅಟ್ಟಿಸಿಕೊಂಡು ಹೊಡೆದದ್ದನ್ನು ವರ್ಣಿಸುತ್ತಿರುವಾಗ ಅದನ್ನು ಕೇಳಲಾಗದ ಪಂಡಿತರು ಅಸಹನೆಯಿಂದ ಒಂದು ನಿಮಿಷವೂ ನಿಲ್ಲದೆ ಹೊರಟು ಬಿಟ್ಟರು. ಅಂದು ಆ ಸಾಧುವು ಹೇಳಿದ ಮಾತುಗಳೇ ಪಂಡಿತರ ಕಿವಿಯಲ್ಲಿ ಮೊಳಗತೊಡಗಿದವು. ಸುಮ್ಮನಿರಲು ಆಗದೆ ಶಾಸ್ತ್ರಗಳ ಪುಟಗಳನ್ನು ತಿರುವಿಹಾಕಿದರು.
ಜ್ಞಾನೋದಯಗೊಂಡ ಪಂಡಿತರು ಧೃಡನಿರ್ಧಾರದಿಂದ ಹೊರಟು ನಿಂತರು. ಸೂರ್ಯಪ್ರಕಾಶನ ಗುಂಪು ಎಸಗುತ್ತಿದ್ದ ಕೃತ್ಯವನ್ನು ಕಣ್ಣಾರೆ ಕಂಡು ತತ್ತರಿಸಿಹೋದರು. ಗಲ್ಲಿಗಲ್ಲಿಗಳ ರಕ್ತಪಾತದಲ್ಲಿ ಮುಸ್ಲಿಂ ಬಾಂಧವರ ಮೃತ ದೇಹಗಳ ನಡುವೆ ಕಾರ್ತಿಕೇಯನ್ನು ಹುಡುಕುತ್ತಾ ಒಂದು ವಠಾರಕ್ಕೆ ಬಂದರು. ತಾನು ಸಾಕಿದ ಕಂದಮ್ಮನು ಇನ್ನೂ ಬದುಕಿರುವನಾ? ಎಂಬ ಆಸೆಯಿಂದ 'ಕಾರ್ತಿಕೇಯ' ಎಂದು ಕರೆದರು. ಸುಟ್ಟು ಕರಕಲಾದ ಆ ನಿರ್ಮಾನುಷ ಸ್ಥಳದಲ್ಲಿ ಮಗು ಜೀವಂತವಾಗಿರುತ್ತದೆಯೇ ಎಂಬ ಭಯದಿಂದ ಮತ್ತೊಮ್ಮೆ ' ಕಾರ್ತಿಕೇಯ' ಎಂದು ಕೂಗಿದರು. ಅಷ್ಟರಲ್ಲಿ ಮಹಡಿಮನೆಯಿಂದ ಕಾರ್ತಿಕೇಯನು ಬಾವೂಜಿ ಎಂದು ಕೂಗಿದನು. ಪಂಡಿತರ ಹೋದ ಜೀವ ಬಂದಂತಾಗಿ ಮೊಗದಲ್ಲಿ ನಗು ಅರಳಿತು. ಅಷ್ಟರಲ್ಲಿ ಕೋಮುವಾದಿಗಳ ಗುಂಪು ಒಬ್ಬ ಮುಸ್ಲಿಮ್ ವ್ಯಕ್ತಿಯನ್ನು ಕೊಲ್ಲಲು ಅಟ್ಟಿಸಿಕೊಂಡು ಬಂದಿತು. ಪಂಡಿತರನ್ನು ಕಂಡು ಆ ಗುಂಪು ನಿಂತುಬಿಟ್ಟಿತು.
ಆದರೆ ಸೂರ್ಯ ಪ್ರಕಾಶನು ಮಗುವಿನಿಂದ ಇವರ ತಲೆ ಕೆಟ್ಟಿದೆ ಒಂದೇ ಕ್ಷಣದಲ್ಲಿ ಅವನನ್ನು ಮುಗಿಸುವೆನೆಂದು ಕತಿ ್ತಎತ್ತಲು ಹೋಗುತ್ತಿದ್ದಂತೆ ಪಂಡಿತರು ಅವನ ಕೈಯನ್ನು ಹಿಡಿದು ನಿಲ್ಲಿಸಿದರು. "ನನ್ನ ಹತ್ತಿರ ಧರ್ಮದ ಪಾಠ ಕಲಿತ ನಿನ್ನನ್ನು ಅಧರ್ಮದ ಹಾದಿಯಲ್ಲಿ ನಡೆಯಲು ಬಿಡಲಾರೆ. ಧರ್ಮ ಕೇವಲ ಸಾಧನವಲ್ಲ. ಕರ್ತವ್ಯ, ಕರ್ಮವೂ ಕೂಡ. ಏಕತೆಯೇ ಧರ್ಮ, ಸದ್ಭಾವನೆಯೇ ಧರ್ಮ, ಭೇದಭಾವವನ್ನು ತೊರೆಯುವುದೇ ಧರ್ಮ, ‘ಮಾನವತೆಯೇ' ಧರ್ಮ. ನಿನ್ನ ಕತ್ತಿ, ನಿನ್ನ ಈ ಗುಂಪು, ನೀವು ಮಾಡುತ್ತಿರುವ ಕೃತ್ಯ ಧರ್ಮವಲ್ಲ" ಎಂದು ಹೇಳುವ ದೃಶ್ಯ ರೋಮಾಂಚನವುಂಟು ಮಾಡುತ್ತದೆ. ಸೂರ್ಯಪ್ರಕಾಶನು ಉಂಟು ಮಾಡುತ್ತಿದ್ದ ರಕ್ತಪಾತವನ್ನು ನೋಡಿಯೂ ಏನೂ ಮಾಡಲಾಗದೆ ಪರಿತಪಿಸುತ್ತಿದ್ದ ದಯಾಶಂಕರ್ ಶಾಸ್ತ್ರಿ ಪಂಡಿತರ ನಿಲುವಿಗೆ ತಲೆಬಾಗಿದನು. ಪಂಡಿತರು ಎಲ್ಲರ ಮುಂದೆಯೇ ಕಾರ್ತಿಕೇಯನನ್ನು ಕರೆದು ಎತ್ತಿಕೊಂಡು ಹೊರಟರು. ಪಂಡಿತರಿಗೆ ನಮಸ್ಕರಿಸಿ ಅವರ ಹಿಂದೆಯೇ ಶಾಸ್ತ್ರಿಗಳೂ ಹೊರಟರು. ಹಿಂದೆಯೇ ಕತ್ತಿಗಳನ್ನು ಬಿಸುಟು ಜನರೂ ಹೊರಟರು. ಕೊನೆಯಲ್ಲಿ ಏಕಾಂಗಿಯಾಗಿ ನಿಂತಿದ್ದ ಸೂರ್ಯ ಪ್ರಕಾಶನೂ ಕತ್ತಿಯನ್ನು ಬಿಸುಟು ಹೊರಟುಬಿಟ್ಟನು.
ಕೇವಲ ವೈಯುಕ್ತಿಕ ದ್ವೇಷ, ಸ್ವಾರ್ಥ ಸಾಧನೆಗಾಗಿ ಕೆಲವು ವ್ಯಕ್ತಿಗಳು ಹಿಂದೂ-ಮುಸ್ಲಿಮ್ ಧರ್ಮದ ಹೆಸರಿನಲ್ಲಿ ಅರ್ಥವಿಲ್ಲದೆ ಬಡಿದಾಡುವುದಲ್ಲದೆ, ಇಡೀ ಸಮುದಾಯವೇ ಹೊತ್ತಿ ಉರಿಯುವ ಹಾಗೆ ಗಲಭೆಯನ್ನು ಎಬ್ಬಿಸುತ್ತಾರೆ ಎನ್ನುವುದನ್ನು ಈ ಸಿನಿಮಾ ಸ್ಪಷ್ಟವಾಗಿ ತೋರಿಸುತ್ತದೆ. ಮತದ ಹೆಸರಿನಲ್ಲಿ ಹುಚ್ಚರಂತಾಗಿ, ಮಾನವೀಯತೆಯನ್ನು ಮರೆತು ರಕ್ಕಸರಂತೆ ಹೆಂಗಸರು, ಗಂಡಸರೆನ್ನುವ ಭೇದವಿಲ್ಲದೆ, ಮಕ್ಕಳು ಮುದುಕರೆನ್ನದೆ ಅವರ ರಕ್ತವನ್ನು ಹರಿಸಿ ಧರ್ಮ ಸಂಸ್ಥಾಪನೆ ಮಾಡಿದೆವೆಂದು ವಿಕೃತ ಭಾವದಿಂದ ಬೀಗುವುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಿದೆ.
ಆದರೆ ನಿಜವಾದ ಧರ್ಮವೇನೆಂಬುದನ್ನು ನಾವು ಪಂಡಿತ ಚತುರ್ವೇದಿಯವರ ನಡವಳಿಕೆಯಿಂದ ಅರ್ಥೈಸಬಹುದಾಗಿದೆ. ಆರಂಭದಲ್ಲಿ ಕಠೋರ ಮನಸ್ಸಿನವರಂತೆ ಕಂಡರೂ ಅಂತಿಮವಾಗಿ ಅವರಲ್ಲಿರುವ ನಿಜವಾದ ಧಾರ್ಮಿಕ ಜ್ಞಾನ ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಅವರಿಗಷ್ಟೇ ಅಲ್ಲದೆ ನಮಗೂ ಮನವರಿಕೆ ಮಾಡಿಕೊಡುತ್ತದೆ. ತಮ್ಮ ಜ್ಞಾನದಿಂದ ಧರ್ಮದ ನಿಜವಾದ ಅರ್ಥ ತಿಳಿದು ಕೋಮುವಾದಿಗಳ ಕೃತ್ಯವನ್ನು ತಡೆಗಟ್ಟುವುದಲ್ಲದೆ, ಅವರಲ್ಲೂ ಬದಲಾವಣೆ ತರುತ್ತಾರೆ. ಅಂತಿಮವಾಗಿ ಮಾನವೀಯತೆ ಜಯ ಗಳಿಸುವುದನ್ನು ನಾವು ಕಾಣಬಹುದಾಗಿದೆ. ಸಿನಿಮಾ ನೋಡಿದ ನಂತರ ನಮ್ಮ ಮನಸ್ಸಿನಲ್ಲಿ ಉಳಿಯುವ ಅಂಶವೆಂದರೆ ‘ಮಾನವೀಯತೆಯುಳ್ಳ ಧರ್ಮ ಮಾತ್ರವೇ ನಿಜವಾದ ಧರ್ಮ’ ಎಂಬುದು. 


ಕಾಮೆಂಟ್‌ಗಳಿಲ್ಲ: