ಮನುಷ್ಯರು ಜೀವನದಲ್ಲಿ ತಪ್ಪು ಮಾಡುವುದು ಸಹಜ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಅನುಭವಿಸಬೇಕು, ಬೆಲೆ ತೆತ್ತಬೇಕು. ಕೆಲವೊಮ್ಮೆ ಏನು ತಪ್ಪು ಮಾಡದಿದ್ದರೂ ಬೇರೆಯವರ ತಪ್ಪಿನಿಂದ ಕಷ್ಟ ಅನುಭವಿಸಬೇಕಾಗುತ್ತದೆ. ಪುರುಷ ಯಜಮಾನಿಕೆಯಿರುವ ಸಮಾಜದಲ್ಲಿ ಸ್ತ್ರೀಪುರುಷರು ಮಾಡುವ ತಪ್ಪುಗಳನ್ನು ಭಿನ್ನವಾಗಿ ನೋಡಲಾಗುತ್ತದೆ. ಇಲ್ಲಿ ದ್ವಂದ್ವ ನೀತಿಯಿದೆ. ಬೇರೆ ಬೇರೆ ತಪ್ಪುಗಳಿಗೆ ಬೇರೆ ಬೇರೆ ಶಿಕ್ಷೆ ನೀಡಬೇಕಾದುದು ನ್ಯಾಯ. ಒಂದೇ ತಪ್ಪಿಗೆ ಒಬ್ಬರಿಗೆ ಶಿಕ್ಷೆ ಇನ್ನೊಬ್ಬರಿಗೆ ವಿನಾಯಿತಿ ಎಂದರೆ? ಅಥವಾ ಒಬ್ಬರ ತಪ್ಪು ಕ್ಷಮಾರ್ಹ ಇನ್ನೊಬ್ಬರದು ಮಹಾಪರಾಧಿ ಕಠಿಣ ಶಿಕ್ಷೆಯಾಗಬೇಕು ಎಂದರೆ? ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಮಾಡುವ ತಪ್ಪುಗಳನ್ನು ಸಹಜವೆಂದು, ಏನು ಮಾಡುವುದಕಾಗುತ್ತದೆ, ಮನುಷ್ಯರಲ್ಲವಾ ಕ್ಷಮಿಸಬೇಕು ಎಂದು ಹೇಳಲಾಗುತ್ತದೆ. ಇಲ್ಲವೆ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಲಾಗುತ್ತದೆ. ಇಲ್ಲ ತಪ್ಪಿಗೆ ಸಾಕ್ಷಿ, ಕಾರಣಗಳನ್ನು ತೋರಿಸಿದರೆ ಪರಿಸ್ಥಿತಿಗೆ ಸಿಕ್ಕಿ ತಪ್ಪು ಮಾಡಿದ, ಬುದ್ದಿ ಇಲ್ಲದೆ ಮಡಿದ ಹಾಗಾಗಿ ಕಡಿಮೆ ಶಿಕ್ಷೆ ನೀಡಬೇಕು ಅಥವಾ ವಿನಾಯಿತಿ ಕೊಡಬೇಕು ಎಂದು ಹೇಳಲಾಗುತ್ತದೆ. ಸ್ತ್ರೀಯರನ್ನು ‘ಕ್ಷಮಯಾ ಧರಿತ್ರಿ’ ಎಂದು ಹೇಳುತ್ತಾ ಪುರುಷರ ತಪ್ಪುಗಳನ್ನು ಕ್ಷಮಿಸುತ್ತಾ ಹೋಗಬೇಕೆಂದು ನಿರೀಕ್ಷಿಸಲಾಗುತ್ತದೆ.
ಇಷ್ಟೆಲ್ಲ ಹಿನ್ನೆಲೆ ಹೇಳಬೇಕಾಗಿದ್ದು, ಮನೆಕೆಲಸದ ಮಹಿಳೆ ಮಾದಮ್ಮ ಅನುಭವಿಸಿದ ಸಂಕಟ, ನೋವು, ಅವಮಾನ, ಒಂಟಿತನ, ಬಡತನ ಅನುಭವಿಸಿದ್ದಕ್ಕೆ ಅವಳು ಮಾಡಿದ ತಪ್ಪೇನು? ಎಂದು ತಿಳಿಯಲು. ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತರಾದ ಹೆಣ್ಣುಮಕ್ಕಳು ಅತಿ ಚಿಕ್ಕ ವಯಸ್ಸಿಗೆ ಮುಪ್ಪಿಗೆ ಒಳಗಾಗುತ್ತಾರೆ. ಒಳ್ಳೆಯ ಸ್ಥಿತಿಯಲ್ಲಿರುವ ಅದೇ ವಯಸ್ಸಿನ ಇತರ ಮಹಿಳೆಯರು ಇನ್ನೂ ಚಿಕ್ಕವರಾಗೆ ಕಾಣುತ್ತಿರುತ್ತಾರೆ. ಮಾದಮ್ಮ 56 ವರ್ಷಕ್ಕೆ ವಯಸ್ಸಿಗೆ ಮೀರಿದ ಮುಪ್ಪನ್ನು ಕಂಡವಳು. 5 ಅಡಿ ಎತ್ತರ, ಕಪ್ಪು ಬಣ್ಣ. ಈಗಾಗಲೇ ಶೇಕಡ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದಾಳೆ. ಕೆಲವು ಹಲ್ಲುಗಳು ಉದುರಿವೆ, ತಲೆಗೂದಲು ಬೆಳ್ಳಗಾಗಿದೆ. ಮನೆ ಮಾಲೀಕರು ನೀಡುವ ಊಟ, ಬಟ್ಟೆಯನ್ನು ಪಡೆದೆ ಇಡೀ ಜೀವನ ಕಳೆದಿದ್ದಾಳೆ. ಬೇರೇನು ಕಾಯಿಲೆಗಳು ಇಲ್ಲದಿರುವುದರಿಂದ
ದೈಹಿಕ ಶ್ರಮ ಬೇಡುವ ಕೆಲಸಗಳನ್ನು ನಿರಾಯಾಸವಾಗಿ ಮಾಡಿಕೊಂಡು ಹೋಗುತ್ತಿದ್ದಾಳೆ.
ಯಾವುದೇ ವ್ಯಕ್ತಿಯ ಪ್ರಸ್ತುತ ಜೀವನ ಸ್ಥಿತಿ, ಗುಣಮಟ್ಟಕ್ಕೆ ಕೌಟುಂಬಿಕ ಹಿನ್ನೆಲೆಯು ಕಾರಣವಾಗಿರುತ್ತದೆ. ಅದು ಒಳ್ಳೆ ರೀತಿಯಲ್ಲೂ ಆಗಿರಬಹುದು, ಪ್ರತಿಕೂಲವಾಗಿಯೂ ಮೂಡಿಬರಬಹುದು. ಮಾದಮ್ಮ ಮೈಸೂರು ನಗರದಲ್ಲೇ ಹುಟ್ಟಿ ಬೆಳೆದಿದ್ದು ತಂದೆ ತಾಯಿಯ ನಾಲ್ಕು ಹೆಣ್ಣು ಮಕ್ಕಳು ಮೂರು ಗಂಡುಮಕ್ಕಳ ನಡುವೆ ಐದನೆಯವಳಾಗಿ ಬೆಳೆದವಳು. ಕೂಗಳತೆಯಲ್ಲಿ ಶಾಲೆಯಿದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬ ಅರಿವಿಲ್ಲದ ವಾತಾವರಣ. ಅನಕ್ಷರಸ್ಥ ತಂದೆತಾಯಿಗಳಿಗೆ ಅನಕ್ಷರಸ್ಥ ಮಕ್ಕಳಾಗೆ ಉಳಿದವರು. ತಂದೆ ಹಸು, ಆಡು ಸಾಕಿ ಕೂಲಿ ಮಾಡಿ ಮಕ್ಕಳನ್ನು ಬೆಳೆಸಿದರು. ಹೆಣ್ಣುಮಕ್ಕಳನ್ನು ಮಾದುವೆ ಮಾಡಿಕೊಟ್ಟರು. ಗಂಡುಮಕ್ಕಳು ತಂದೆಯ ಕೆಲಸಗಳನ್ನು ಮುಂದುವರೆಸಿದರು.
ಮಾದಮ್ಮನಿಗೆ 13 ವರ್ಷಕ್ಕೆ ಮೈಸೂರಿನಲ್ಲೆ ಇದ್ದ ಹುಡುಗನೊಂದಿಗೆ ಮದುವೆ ಮಾಡಿದರು. ಸರ್ಕಾರಿ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದ. ಗಂಡನ ಮನೆಗೆ ಹೋಗಿ ಒಂದು ವರ್ಷದ ಒಳಗೆ ಗರ್ಭಿಣಿಯಾದಳು. ಹೆರಿಗೆಗೆ ಎಂದು ತವರಿಗೆ ಬಂದಳು. ಏನಾಯಿತೊ ಗೊತ್ತಿಲ್ಲ ಹೆರಿಗೆಯಾದ ಮೇಲೆ ಗಂಡ ಮಗು ನೋಡಲು ಬರಲಿಲ್ಲ. ಹೆಂಡತಿ ಬೇಡ ಎಂದು ಹೇಳಿದ. ಮಾದಮ್ಮನ ಮನೆಯವರಿಗೆ ಗಾಬರಿಯಾಯಿತು. ಕಾರಣ ಗೊತ್ತಿಲ್ಲ, ಯಾವ ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಹೆಂಡತಿ ಮಗು ಬೇಡ ಎಂದರೆ ಹೇಗೆ ಎಂದು ಹುಡುಗನ ಮನೆಗೆ ಹೋಗಿ ಮಾತನಾಡಿಸಿ ಪರಿಪರಿಯಾಗಿ ಕೇಳಿಕೊಂಡರೂ ಹೆಂಡತಿಯನ್ನು ಕರೆದೊಯ್ಯಲು ಒಪ್ಪಲಿಲ್ಲ. ಸಂಬಂಧಿಕರನ್ನು ಸೇರಿಸಿ ಪಂಚಾಯ್ತಿ ಮಾಡಿದರು ಪ್ರಯೋಜನವಾಗಲಿಲ್ಲ. ಸರ್ಕಾರಿ ಕೆಲಸದಲ್ಲಿರುವುದರಿಂದ ಕೊನೆ ಪಕ್ಷ ಜೀವನಾಂಶವಾದರು ಕೊಡು ಎಂದರೂ ಒಪ್ಪಲಿಲ್ಲ.
ಕೆಲವು ವರ್ಷಗಳ ನಂತರ ಆತ ಇನ್ನೊಂದು ಮದುವೆಯಾದನೆಂದು ಸುದ್ದಿ ಬಂದಿತು. ಅಷ್ಟೊತ್ತಿಗೆ ಮಾದಮ್ಮ ಮನೆಗೆಲಸ ಪ್ರಾರಂಭಿಸಿ ಹೆಣ್ಣು ಮಗುವಿನೊಂದಿಗೆ ತವರು ಮನೆಯಲ್ಲಿ ಇರತೊಡಗಿದಳು. ಇವಳ ತವರು ಮನೆಯವರು ನಿಜವಾಗಲು ಇವಳ ಸಂಸಾರವನ್ನು ಸರಿಪಡಿಸಲು ಪ್ರಯತ್ನಿಸಿದರೊ
ಅಥವಾ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು ಅವನೆ ಬಿಟ್ಟು ಹೋಗಿದ್ದಾನೆ ಬೇಕಾದರೆ ಬಂದು ಕರೆದುಕೊಂಡು ಹೋಗಲಿ ಎಂದು ನಿರ್ಧರಿಸಿದರೋ ಗೊತ್ತಿಲ್ಲ. ಮಾದಮ್ಮನ ಬಳಿ ಈ ವಿಷಯದ ಬಗ್ಗೆ ಹಲವಾರು ಸಾರಿ ಮಾತನಾಡಿದೆ. ಸ್ಪಷ್ಟವಾಗಿ ಏನನ್ನು ಹೇಳಲಿಲ್ಲ. ಬಿಟ್ಟುಬಿಡುವುದಕ್ಕೆ ಕಾರಣವೇನು ಎಂದು ಕೂಡ ತಿಳಿಯಲಿಲ್ಲ. ತವರು ಮನೆಯವರು ಎರಡು ಮೂರು ವರ್ಷ ಪ್ರಯತ್ನ ಮಾಡಿದರು ಪ್ರಯೋಜನವಾಗಲಿಲ್ಲ ಎಂದು ಹೇಳಿದಳು. ಅಷ್ಟು ಚಿಕ್ಕ ವಯಸ್ಸಿಗೆ ಕಾರಣವೇ ತಿಳಿಯದೇ ಗಂಡನಿಂದ ಪರಿತ್ಯಕ್ತಳಾಗಿ, ಒಂಟಿಯಾಗಿ ಬದುಕುತ್ತಾ ಮನೆಗೆಲಸ ಮಾಡಿ ಮಗಳನ್ನು ಸಾಕುವ ಪರಿಸ್ಥಿತಿಗೆ ಬಂದಿದ್ದಕ್ಕೆ ಮಾದಮ್ಮ ಮಾಡಿದ ತಪ್ಪೇನು? ಇದಕ್ಕೆ ಯಾರನ್ನು ಹೊಣೆ ಮಾಡಬೇಕು? ಗಂಡ ಒಂದು ವೇಳೆ ತನಗಿಷ್ಟವಾಗಲಿಲ್ಲ ಎಂದರೆ ಕಾರಣ ತಿಳಿಸಿ, ವಿಚ್ಛೇದನ ನೀಡಿ ಅವಳ ಜೀವನಕ್ಕೆ ದಾರಿ ಮಾಡಿ ಕೊಡಬೇಕಿತ್ತು. ಮನೆಯವರಾದರು ಅವನನ್ನು ಪ್ರಶ್ನಿಸಿ ಕಾರಣ ತಿಳಿದು ಕಾನೂನು
ಪ್ರಕಾರ ನಡೆದುಕೊಳ್ಳುವಂತೆ ಹೇಳಬೇಕಿತ್ತು. ಒಪ್ಪದಿದ್ದರೆ ಸರ್ಕಾರಿ ನೌಕರಿಯಲ್ಲಿದ್ದ ಅವನ ಮೇಲೆ ಕ್ರಮ ಜರುಗಿಸಬಹುದಿತ್ತು. ಕಾನೂನು ತಿಳುವಳಿಕೆಯಿಲ್ಲದ್ದರಿಂದಲೋ ಅಥವಾ ಬಂಡ ಜನರ ಹತ್ತಿರ ನ್ಯಾಯ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಸುಮ್ಮನಾದರೋ ಗೊತ್ತಿಲ್ಲ. ಸದ್ಯ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಹೊರ ಹಾಕದೆ ಮನೆಯಲ್ಲಿಟ್ಟುಕೊಂಡು ಮನೆ ಕೆಲಸಮಾಡಿಕೊಂಡು ಮಗಳನ್ನು ಸಾಕಲು ಸಹಾಯ ಮಾಡಿದರು. ತಂದೆ ತಮ್ಮ ಬಳಿ ಇದ್ದ ಕಂದಾಯ ನಿವೇಶನಗಳಲ್ಲಿ ಒಂದನ್ನು ಅವಳ ಹೆಸರಿಗೆ ಬರೆದುಕೊಟ್ಟರು. ಅಂತು ಮಾದಮ್ಮನ ಜೀವನ ಮುಂದುವರೆಯಿತು.
ಈ ಕೆಳ ವರ್ಗದ ಜನರಲ್ಲಿ ಅರ್ಥವಾಗದ ಒಂದು ವಿಷಯವೆಂದರೆ ಒಮ್ಮೆ ತಪ್ಪು ಮಾಡಿದಾಗ ಅದರಿಂದ ಪಾಠ ಕಲಿತು ಮತ್ತೆ ಅದೇ ತರಹದ ತಪ್ಪು ಮಾಡಬಾರದು ಅನ್ನುವ ತಿಳುವಳಿಕೆಯಿಲ್ಲದಿರುವುದು. ನಗರದಲ್ಲಿ ವಾಸವಾಗಿದ್ದರೂ ಮಾದಮ್ಮನಿಗೆ ಶಾಲೆಗೆ ಕಳುಹಿಸಲಿಲ್ಲ. ಅತಿ ಚಿಕ್ಕ ವಯಸ್ಸಿಗೆ ಮದುವೆ ಮಾಡಿ 13 ವರ್ಷಕ್ಕೆ ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡಿದರು. ಈಗಲು ಆಕೆಯ ಮಗಳನ್ನು ಓದಿಸಿ ಕೆಲಸಕ್ಕೆ ಸೇರಿಸಿ ಅವಳು ಸ್ವತಂತ್ರವಾಗಿ ಬದುಕುವಂತೆ ಮಾಡುವ ಬದಲು ಅವಳಿಗೂ 15ನೇ ವಯಸ್ಸಿಗೆ ಮದುವೆ ಮಾಡಿದರು. ಅದೃಷ್ಟವಶಾತ್ ಅವಳ ಗಂಡ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿರುವುದರಿಂದ ಮಗಳ ಜೀವನ ಸುಗಮವಾಗಿದೆ. ಅದಕ್ಕೆ ಮಾದಮ್ಮನ ಸಹಾಯವಿದೆ. ದಿನ ನಿತ್ಯ ಮನೆಗೆಲಸ ಮಾಡಿ ಸಂಬಳ ನೀಡುತ್ತಾಳೆ. ತಮ್ಮ ಮನೆ ಕೆಲಸದಲ್ಲು ಮಗಳಿಗೆ ಸಹಾಯ ಮಾಡುತ್ತಾಳೆ. ತನ್ನ ಹೆಸರಿನಲ್ಲಿದ್ದ ನಿವೇಶನವನ್ನು ಅಳಿಯನ ಹೆಸರಿಗೆ ಮಾಡಿಕೊಟ್ಟು ಸ್ವಂತ ಮನೆ ಕಟ್ಟಿಕೊಳ್ಳಲು ಅನುವುತಿ ಮಾಡಿಕೊಟ್ಟಿರುವುದರಿಂದ ಮಗಳ ಸಂಸಾರ ಚೆನ್ನಾಗಿ ನಡೆಯುತ್ತಿದೆ.
ಮಾದಮ್ಮನ ಜೀವನವನ್ನು ಎರಡು ಭಾಗಗಳಲ್ಲಿ ನೋಡಬಹುದು. ಒಂದು ವೈಯಕ್ತಿಕ ಜೀವನ. ಇನ್ನೊಂದು ಆಕೆಯ ದುಡಿಮೆ ಜೀವನ. ಕಳೆದು 10 ವರ್ಷಗಳಿಂದ ನಾನು ಅವಳನ್ನು ಬಲ್ಲೆ. ಅವಳ ಜೀವನವನ್ನು ಹೊರಗಿನವಳಾಗಿ ನಾನು ಗಮನಿಸಿದ, ಗ್ರಹಿಸಿದ, ವಿಶ್ಲೇಷಿಸಿದ ಹಿನ್ನೆಲೆಯಲ್ಲಿ ನೋಡುತ್ತಿದ್ದೇನೆ. ಇದು ಖಂಡಿತ ಸೀಮಿತವಾದ ಗ್ರಹಿಕೆ. ತನ್ನ ತಪ್ಪಿದ್ದೋ ಇಲ್ಲದೆಯೋ ಸಂಕಷ್ಟಕ್ಕೆ ಸಿಲುಕಿ ಒಂಟಿ ಜೀವನಕ್ಕೆ ಗುರಿಯಾದವಳು. ತನ್ನ ಬದುಕಿನಲ್ಲಿ ಏನೂ ಸುಧಾರಣೆಯಾಗದಿದ್ದರೂ ಮಗಳ ಜೀವನ ಚೆನ್ನಾಗಿ ಆಗಲಿ ಎಂದು ಆಶಿಸಿ ಅದಕ್ಕೆ ಬೆಂಬಲವಾಗಿ ನಿಂತಳು. ಅದರಂತೆ ಮಗಳ ಜೀವನ ಸುಧಾರಿಸಿತು. ನಾನು ಗಮನಿಸಿದಂತೆ ಮಾದಮ್ಮ ಹಿಂದೆ ಮನೆಗೆಲಸದವರು ಕಂಡುಬರುತ್ತಿದ್ದ ಸ್ಥಿತಿಯಲ್ಲೇ ಇದ್ದಾಳೆ. ಅಂದರೆ ಒಂದು ಹಳೇ ಸೀರೆ, ಓಲೆ, ಬಳೆ, ಸರ ಏನೂ ಇಲ್ಲ, ತಲೆ ಸರಿಯಾಗಿ ಬಾಚಿರುವುದಿಲ್ಲ. ಮನೆಗೆಲಸ ಮಾಡುವುದಲ್ಲವಾ ಎಂದು ಸ್ವಚ್ಚತೆ ಕಡೆಗೆ ಅಷ್ಟೊಂದು ಗಮನವಿಲ್ಲ. ಕೆಲವು ಮನೆಗೆಲಸದ ಮಹಿಳೆಯರು ಅತ್ಯಂತ ಶುಚಿಯಾಗಿದ್ದು ಸರ್ಕಾರಿ ಉದ್ಯೋಗಕ್ಕೆ ಹೋಗುವ ಮಹಿಳೆಯರಂತೆ ಕಂಡುಬರುತ್ತಾರೆ. ಸುಮಾರು 30 ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದಾಳೆ. ಹೊಸ ಸೀರೆ ಉಟ್ಟಿಲ್ಲ. ಚಿನ್ನದ ಆಭರಣ ಕಂಡಿಲ್ಲ, ಚಪ್ಪಲಿ ಇಲ್ಲ, ಕಾಯಿಲೆ ಆದರೆ
ವೈದ್ಯ ಬಳಿ ಹೋಗುವುದಿಲ್ಲ (ಮನೆ ಔಷಧಿ ತೆಗೆದುಕೊಳ್ಳುತ್ತಾಳೆ). ನೆಂಟರಿಷ್ಟರ ಮನೆಗಾಗಲಿ ಬೇರೆ ಊರುಗಳಿಗಾಗಲಿ ಹೋಗುವುದಿಲ್ಲ. ಬಹುಶಃ ನಗರ, ಮಾರುಕಟ್ಟೆ, ಸಿನಿಮಾ ಮಂದಿರ, ಬಸ್‍ಸ್ಟ್ಯಾಂಡ್‍ಗಳನ್ನು ನೋಡಿಲ್ಲವೇನೋ. ದಿನವಿಡೀ ಮನೆಗೆಲಸ ಮಾಡಿ ಸಂಬಳವನ್ನು ಮಗಳಿಗೆ ನೀಡುವ, ಮಗಳ ಮತ್ತು ಮೊಮ್ಮಕ್ಕಳ ಜೀವನ ಚೆನ್ನಾಗಾಗಬೇಕು ಅನ್ನುವ ಯೋಚನೆ ಬಿಟ್ಟರೆ ಆಕೆಯ ಜೀವನದಲ್ಲಿ ಬೇರೇನೂ ಆಸೆಯೇ ಇಲ್ಲವೇನೊ. ಬಹುಶಃ ಗಂಡ ಬಿಟ್ಟುಹೋದಾಗಲೆ ತನ್ನೆಲ್ಲ ಆಸೆ, ಆಕಾಂಕ್ಷೆಗಳನ್ನು ಕೊಂದುಕೊಂಡಿರಬಹುದು. ತನ್ನ ಬದುಕಿನ ಅತಂತ್ರ, ಅವಮಾನದ, ಭರವಸೆಯಿಲ್ಲದ ಪರಿಸ್ಥಿತಿ ನೋಡಿಕೊಡು
ಮೌನಳಾಗುವುದು ಉಂಟು. ಅವಳ ಈ ವರ್ತನೆ ಹೊರಗಿನವರಿಗೆ ಮಾದಮ್ಮ ದಡ್ಡಿ, ತಿಳುವಳಿಕೆಯಿಲ್ಲದವಳು, ಅಯ್ಯೋ ಪಾಪದವಳು ಎಂಬಂತೆ ಕಂಡುಬರುತ್ತಾಳೆ. ಆದರೆ ಕೆಲವೊಮ್ಮೆ ಅವಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದಾಗ ಅವಳಿಗೆ ಎಲ್ಲವೂ ಗೊತ್ತಿದೆ. ತನ್ನೊಳಗೆ ಅಸಮಧಾನ, ಕೋಪ, ಆಸೆ, ನಿರೀಕ್ಷೆಗಳನ್ನು ತುಂಬಿಕೊಂಡಿದ್ದಳೆ, ತನ್ನಿಚ್ಚೆಯಂತೆ ಏನು ನಡೆಯುವುದಿಲ್ಲ, ಯಾರು ತನ್ನ ಮಾತು ಕೇಳಿಸಿಕೊಳ್ಳುವುದಿಲ್ಲ ಎಂದು ತಿಳಿದಿರುವುದರಿಂದ ಮೌನವಹಿಸಿ ಕತ್ತೆ ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಕೆಲವೊಮ್ಮೆ ಕೋಪದ, ಸುಳ್ಳು ಪ್ರತಿಷ್ಠೆಯ, ಜಂಬದ ಮಾತುಗಳ ಮೂಲಕ ತನ್ನ ಅಳಲನ್ನು ವ್ಯಕ್ತಪಡಿಸುತ್ತಾಳೆ.
ಮನೆಗೆಲಸದ ಮನೆಗಳಲ್ಲಿ ಅತ್ಯಂತ ಶ್ರಮದಿಂದ, ಪ್ರಾಮಾಣಿಕತೆಯಿಂದ ಕೆಲಸಮಾಡುತ್ತಾಳೆ. ಸಂಬಳ ಹೆಚ್ಚಿಗೆ ಕೊಡಲಿ ಎಂದು ನಿರೀಕ್ಷಿಸುತ್ತಾಳೆ. ಆದರೆ ಕೇಳುವುದಕ್ಕೆ ಸ್ವಾಭಿಮಾನ. ಅವರಿಗೆ ಗೊತ್ತಿಲ್ಲವಾ ನಾನು ಎಷ್ಟು ಗಂಟೆ ಕೆಲಸ
ಮಾಡುತ್ತೇನೆ, ಇವತ್ತಿನ ಜೀವನ ವೆಚ್ಚ ಎಷ್ಟು ಎಂದು ಅವರೇ ಅರಿತು ಕೊಡಲಿ ಎಂದು ಆಸೆ ಪಡುತ್ತಾಳೆ. ಆದರೆ ನಮಗೆಲ್ಲ ಗೊತ್ತಿರುವಂತೆ ಇತ್ತೀಚಿನ ವಿದ್ಯಮಾನದಲ್ಲಿ ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಹೆಚ್ಚಿಗೆ ಬಂದ ಹಣವನ್ನು ಯಾವುದಕ್ಕೆ ಖರ್ಚು ಮಾಡಬೇಕು, ಆಸ್ತಿಯನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೆಯೇ ಹೊರತು, ನಮಗೆ ಸೇವೆ ಸಲ್ಲಿಸುವವರಿಗೆ ಶ್ರಮಕ್ಕೆ ತಕ್ಕ ಕೂಲಿ ಕೊಡಬೇಕೆನ್ನುವ ಮನೋಭಾವವಿಲ್ಲ. ಇದರಿಂದ ದೈಹಿಕ ಶ್ರಮದ ಕೆಲಸ ಮಾಡುವ ಜನರ ಜೀವನ
ಸುಧಾರಿಸುವುದಕ್ಕೆ ಅವಕಾಶವೆ ಇಲ್ಲ. ಮಾದಮ್ಮ ಸುಮಾರು 35 ವರ್ಷಗಳಿಂದ ಮನೆಗೆಲಸ ಮಾಸುತ್ತಿದ್ದರೂ ಅವಳ ಆದಾಯ ತಿಂಗಳಿಗೆ 2000 ದಾಟಿಲ್ಲ. ತನ್ನದೆ ಎಂದು ಹೇಳುವ ಒಡವೆ, ಬೆಲೆಬಾಳುವ ವಸ್ತುಗಳು, ಉಳಿತಾಯವಾಗಲಿ ಇಲ್ಲ. ಒಮ್ಮೆ ಅವಳ ಹತ್ತಿರ ನಿನ್ನದು ಅಂತ ಏನೂ ಇಲ್ಲ. ಕೆಲಸ ಮಾಡಲು ಆಗದೆ ಮೂಲೆ ಹಿಡಿದರೆ ಏನು ಮಾಡುತ್ತೀಯ? ಎಂದು ಕೇಳಿದೆ. ಇಷ್ಟು ವರ್ಷ ದುಡಿದುದ್ದನ್ನೆಲ್ಲ ಮಗಳಿಗೆ, ಅವಳ ಸಂಸಾರಕ್ಕೆ ನೀಡಿದ್ದೇನೆ. ನನ್ನ ಜೀವವನ್ನೇ ತೇದಿದ್ದೇನೆ. ನನ್ನ ಕೈಲಿ ಕೆಲಸ ಮಾಡಲು ಆಗುವುದಿಲ್ಲ ಎಂದಾಗ ನನ್ನ ಮಗಳು ನೋಡಿಕೊಳ್ಳುತ್ತಾಳೆ ಎಂದು ತುಂಬು ಭರವಸೆಯಿಂದ ಹೇಳಿದಳು.
ಇನ್ನು ಮನೆಯ ಒಳಗೆ ಅವಳ ಪರಿಸ್ಥಿತಿ ನೋಡಿದರೆ ಮಗಳು ತಾಯಿ ದುಡಿದು ತಂದ ಹಣವನ್ನು ತೆಗೆದುಕೊಳ್ಳುತ್ತಾಳೆ. ಆದರೆ ಅವಳ ಅಗತ್ಯ, ಬೇಕು ಬೇಡಗಳ ಬಗ್ಗೆ ಲಕ್ಷ್ಯವಿಲ್ಲ. ಬೇರೆ ಮನೆಯವರ ಮನೆಯಲ್ಲಿ ಮಲೀನವಾದ ಪಾತ್ರೆ ಬಟ್ಟೆ ಒಗೆದು ಬರುವುದರಿಂದ ಮಾದಮ್ಮನೂ ಮೈಲಿಗೆಯಾಗುವುದರಿಂದ ಅವಳನ್ನು ಮನೆ ಒಳಗೆ ಸೇರಿಸುವುದಿಲ್ಲ. ಕೆಲಸದ ಮನೆಯವರು ತಿನ್ನಲಿಕ್ಕೆ ಏನಾದರೂ ಕೊಡುತ್ತಾರೆ ಎಂದು ಮನೆಯಲ್ಲಿ ಊಟ ನೀಡಲೇ ಬೇಕೆಂದು ಅಥವಾ ಅವಳ ಮೂಲ ಅವಶ್ಯಕತೆಗಳನ್ನು ಪೂರೈಸಬೇಕೆಂಬ ಕಾಳಜಿ ಅಷ್ಟಾಗಿ ಕಂಡುಬರುವುದಿಲ್ಲ. ಮಾದಮ್ಮನ ಭೌತಿಕ ಚಹರೆ, ಸ್ಥಿತಿಗೂ ಅವರ ಮನೆಯ ಇತರ ಸದಸ್ಯರ ಸ್ಥಿತಿಗೂ ಅಂತರವಿದೆ. ನನಗೆ ಅನಿಸಿದ ಮಟ್ಟಿಗೆ ಅವಳು ಕೆಲಸ ಮಾಡುವ ಮಾಲಿಕರು ಅವಳನ್ನು ನೋಡುವ ದೃಷ್ಟಿಕೋನದಲ್ಲೇ ಮಗಳ ಮನೆಯವರು ನೋಡುತ್ತಾರೆ. ಇದೆಲ್ಲವು ಮಾದಮ್ಮನಿಗೆ ಅರ್ಥವಾಗುತ್ತದೆ. ಆದರೆ ಪ್ರೀತಿ, ಗೌರವ, ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದನ್ನು ಒತ್ತಾಯ ಪೂರ್ವಕವಾಗಿ ಪಡೆಯಲಾಗುವುದಿಲ್ಲ ಎಂದು ಗೊತ್ತಾಗಿ, ಏನಿದೆಯೇ ಅದರಲ್ಲೇ ತೃಪ್ತಿಯಿಂದ ಇರೋಣ ಎಂದೋ ಅಥವಾ ಸದ್ಯ ಮಗಳು ಅಳಿಯ ಮನೆಯಲ್ಲಿಟ್ಟುಕೊಂಡಿದ್ದಾರಲ್ಲ, ಒಂದು ವೇಳೆ ಮನೆ ಬಿಟ್ಟು ಕಳಿಸಿದರೆ ನನ್ನ ಗತಿಯೇನು ಎಂದು ಯೋಚಿಸಿರಬಹುದು. ಕಳೆದ ಐದಾರು ವರ್ಷಗಳಿಂದ ಮಾದಮ್ಮನ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತಾ ಬಂದಿದೆ. ಹಿಂದೆ ಒಮ್ಮೆ ವೈದ್ಯರ ಬಳಿ ತೋರಿಸಿದಾಗ ಕನ್ನಡಕಕ್ಕೆ ಬರೆದುಕೊಟ್ಟಿದ್ದಾರೆ. ಕನ್ನಡಕವನ್ನು ಹಾಕಿಕೊಂಡಾಗ ಮಕ್ಕಳು, ಸುತ್ತಮುತ್ತಲಿನವರು ಹಾಸ್ಯ ಮಾಡಿದರು ಎಂದು ಕನ್ನಡಕವನ್ನು ಬಳಸಲೆ ಇಲ್ಲ. ಚಿಕ್ಕ ಹುಡುಗಿಯಾಗಿದ್ದಾಗ ಕಣ್ಣಿನ ಪಕ್ಕಕ್ಕೆ ಏಟು ಬಿದ್ದಿದ್ದರಿಂದ ಈಗ ನರ ದುರ್ಬಲವಾಗಿ ದೃಷ್ಟಿ ದೋಷವಾಗಿದೆಯಂತೆ. ನನ್ನ ಅಂದಾಜಿನ ಪ್ರಕಾರ ಶೇ.75ರಷ್ಟು ದೃಷ್ಟಿ ಹೋಗಿದೆ. ಅಂದಾಜು ಮೇಲೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾಳೆ. ಹೋದವಾರ ಕೆಲಸ ಮುಗಿಸಿ ಹೋಗುವಾಗ ಕಲ್ಲಿಗೆ ಎಡವಿ ಬಿದ್ದು ಮಂಡಿಯ ಮೂಳೆ ಮುರಿದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಸದ್ಯಕ್ಕೆ ಮಗಳು, ಅಳಿಯ ನೋಡಿಕೊಳ್ಳುತ್ತಿದ್ದಾರೆ. ಮುಂದೆ ಅವಳು ಕೆಲಸ ಮಾಡಲು ಆಗುವುದಿಲ್ಲ, ಹಣ ಸಂಪಾದಿಸಲಾಗುವುದಿಲ್ಲ ಎಂದರೆ ಅವರು ನೋಡಿಕೊಳ್ಳುವ ರೀತಿ ಹೇಗಾಗುತ್ತೊ ಗೊತ್ತಿಲ್ಲ.
ಮಾದಮ್ಮನಂತಹವರ ಜೀವನ ಅಗೋಚರವಾದ, ಲೆಕ್ಕಕ್ಕೆ ಬರದ ಕೋಟ್ಯಾಂತರ ಮಹಿಳೆಯರ ಜೀವನ ಅತ್ಯಂತ ಸಾಮಾನ್ಯವೆನ್ನುವಂತಿದೆ. ಆದರೆ ಮಹಿಳಾ ಅಧ್ಯಯನ ದೃಷ್ಟಿಯಿಂದ ಹೇಗೆ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ ಅನ್ನುವುದನ್ನು ನೋಡಬೇಕಾಗುತ್ತದೆ. - ನಮ್ಮಲ್ಲಿರುವ ಸಾಮಾನ್ಯ ನಂಬಿಕೆ, ಮಹಿಳೆ ಗಂಡನ ಆಶ್ರಯವಿಲ್ಲದೆ, ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಅನ್ನುವುದಕ್ಕೆ ವಿರುದ್ಧವಾಗಿ ಮಾದಮ್ಮ ಗಂಡನ ಸಹಾವಿಲ್ಲದೆ ತನ್ನ ಜೀವನ ಸಾಗಿಸಿ ಮಗಳಿಗೂ ಜೀವನ ರೂಪಿಸಿಕೊಟ್ಟಿದ್ದಾಳೆ. ಇದನ್ನು ಸಮಾಜ ಗುರುತಿಸುವುದೇ ಇಲ್ಲ. ಅವಳನ್ನು ಅಯ್ಯೋ ಪಾಪ ಅವಳ ಜೀವನವೇ ಹಾಳಾಯ್ತು ಅಂತ ಅನುಕಂಪದಿಂದ ನೋಡಲಾಗುತ್ತದೆ. ಆದರೆ ನಿಜದಲ್ಲಿ ತವರು ಮನೆಯವರು ಅಲ್ಪಸ್ವಲ್ಪ ಸಹಾಯ ಮಾಡಿದರು ಮಾದಮ್ಮ ತನ್ನ ಸ್ವಂತ ಶ್ರಮದಿಂದಲೆ ಸ್ವತಂತ್ರವಾಗಿ ಜೀವನ ನಡೆಸಿದ್ದಾಳೆ. - ತನ್ನ ಮನೆಕೆಲಸವನ್ನು ಮಾಡಿ ಬೇರೆಯವರ ಮನೆಯಲ್ಲೂ ಸಂಬಳಕ್ಕಾಗಿ ದುಡಿದು ಸ್ವತಂತ್ರವಾಗಿ ಬದುಕಿದ್ದಾಳೆ. ಹಲವು ವರ್ಷಗಳ ಕಾಲ ಹಸು ಸಾಕಿ ಹಾಲು ಮಾರಿ ಮಗಳ ಸಂಸಾರಕ್ಕೆ ಆರ್ಥಿಕವಾಗಿ ನೆರವಾದಳು. ಕೆಲಸದ ಮನೆಯವರು ಏನು ಕೊಟ್ಟರು ಮಗಳಿಗೆ, ಮೊಮ್ಮಕ್ಕಳಿಗೆ ಕೊಡುತ್ತಾಳೆ. ಇಷ್ಟೆಲ್ಲ ಮಾಡಿದರೂ ಅವಳಿಗೆ ಸಿಗುತ್ತಿರುವುದು ಏನು? - ನಗರ ಪ್ರದೇಶದಲ್ಲಿ ವಾಸವಿದ್ದು ಶಾಲೆಗಳು ಹತ್ತಿರದಲ್ಲಿದ್ದರೂ ಹೆಣ್ಣುಮಕ್ಕಳನ್ನು ಶಾಲೆಗೆಕಳುಹಿಸಬೇಕು ಅನ್ನುವ ಅರಿವೆ ಇಲ್ಲ. ಎರಡು ಪೀಳಿಗೆ ಅಕ್ಷರ ಜ್ಞಾನವಿಲ್ಲದೆ ಕಳೆದಾಗಿದೆ. ಸಂತಸದ ವಿಚಾರವೆಂದರೆ ಇವಳ ಮೊಮ್ಮಕ್ಕಳು ಕಾಲೇಜಿನ್ಲಲಿ ಓದುತ್ತಿದ್ದಾರೆ. ಮುಂದಿನ ಪೀಳಿಗೆ ಶಿಕ್ಷಿತ ಪೀಳಿಗೆಯಾಗಿ ಮುಂದುವರೆಯಬಹುದು. ಮೊಮ್ಮಳಿಗೆ ಡೊನೇಷನ್ ಕೊಟ್ಟು ಎಂ.ಕಾಂ ಗೆ ಸೇರಿಸಿದ್ದರು. ಒಳ್ಳೆ ಗಂಡು ದೊರೆಯಿತು ಎಂದು ವರದಕ್ಷಿಣೆ ನೀಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆ ಮಾಡಿದರು. ಕೆಲವು ಆತುರದ ನಿರ್ಧಾರಗಳು ವ್ಯಕ್ತಿಗಳ ಜೀವನವನ್ನು ದುಃಸ್ಥಿತಿಗೆ ತಳ್ಳಬಹುದು ಅನ್ನುವ ವಿವೇಚನೆಯಿಲ್ಲದಿರುವುದು ಕಂಡುಬರುತ್ತದೆ. ಮಾದಮ್ಮಳ ಜೀವನ ಇನ್ನು ಚೆನ್ನಾಗಿ ಸುಧಾರಿತ ರೀತಿಯಲ್ಲಿ ಆಗಬೇಕಿದಿದ್ದರೆ ಏನು ಮಾಡಬಹುದಿತ್ತು ಅನ್ನುವುದನ್ನು ನೋಡಿದರೆ ಅವಳ ಬಿಟ್ಟುಬಿಡಲು ಕಾರಣವನ್ನು ತಿಳಿದು ಸೂಕ್ತ ಕಾರಣವಿಲ್ಲದಿದ್ದರೆ ಆಪ್ತ ಸಮಾಲೋಚನೆ ನಡೆಸಿ ಇಬ್ಬರು ಒಟ್ಟಿಗೆ ಜೀವನ ನಡೆಸುವಂತೆ ಮಾಡಬಹುದಿತ್ತು. ಗಂಡ ಅವನು ಬಿಡುವುದೇ ಆದರೆ ಅವಳಿಗೆ ಜೀವನಾಂಶ ಕೊಡುವಂತೆ ಮಾಡಬಹುದಿತ್ತು. ಮಗುವನ್ನು ಸಾಕುವ ಜವಾಬ್ದಾರಿಯಯನ್ನು ತೆಗೆದುಕೊಳ್ಳುವಂತೆ ಮಾಡಬಹುದಿತ್ತು. ಇದಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಜಾರಿಗೊಳ್ಳುವಂತೆ ಮಾಡಬಹುದಿತ್ತು. (ಸರ್ಕಾರಿ ಕೆಲಸ ಹೋಗುತ್ತಿತ್ತು. ಅವನ ಸಂಬಳದಲ್ಲಿ ಅರ್ಧಭಾಗ ಕೊಡುವಂತೆ, ಎರಡನೇ ಮದುವೆ ಕಾನೂನು ಬಾಹಿರ ಎಂದು ಹೀಳಿ ತಪ್ಪಿಸಬಹುದಿತ್ತು. ಆ ಹುಡುಗಿಯ ಮನೆಯವರಿಗೆ ಮೊದಲ ಮದುವೆಯ ವಿಷಯ ವಿಷಯ ತಿಳಿಸಬೇಕಾಗಿತ್ತು) ಚಿಕ್ಕ ವಯಸ್ಸಾಗಿದ್ದಿದ್ದರಿಂದ ಮಾದಮ್ಮಳಿಗೆ ಓದಿಸಬಹುದಿತ್ತು ಅಥವಾ ಮತ್ತೊಂದು ಮದುವೆ ಮಾಡಬಹುದಿತ್ತು. ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತ ಮಹಿಳೆಯರ ಸಮಸ್ಯೆಗಳ ಪ್ರತಿರೂಪದಂತಿದ್ದಾಳೆ. ಸರ್ಕಾರ ಈ ವಲಯದವರಿಗಾಗಿ ಕನಿಷ್ಟ ವೇತನ ನಿಗದಿಪಡಿಸಿದಿದ್ದರೆ, ಯೋಜನೆಗಳು ಸರಳ ರೀತಿಯಲ್ಲಿ ಜನರನ್ನು ತಲುಪುವಂತೆ ರೂಪಿಸದಿದ್ದರೆ ಮಾದಮ್ಮನಂತವರಿಗೆ ಸಹಾಯವಾಗುತಿತ್ತು. ಸಕಾರದ ಯೋಜನೆಗಳು ಹಲವಾರಿದ್ದರೂ ಅಜ್ಞಾನದಿಂದಲೋ, ತಿಳುವಳಿಕೆಯಿಲ್ಲದಿದ್ದರಿಂದಲೋ ಯಾವುದೇ ಸೌಲಭ್ಯ ಪಡೆಯಲಾಗಿಲ್ಲ. ಗಂಡ ಬದುಕಿರುವುದರಿಂದ ವಿಧವಾ ವೇತನ ದೊರಕುವುದಿಲ್ಲ. ಮತದಾರರ ಪಟ್ಟಯಲ್ಲಿ ಕಡಿಮೆ ವರ್ಷದ ವಯಸ್ಸು ನಮೂದಾಗಿರುವುದರಿಂದ ನಿರ್ಗತಿಕರಿಗೆ ನೀಡುವ ಮಾಸಾಶನವಾಗಲಿ ವೃದ್ದರಿಗೆ ನೀಡುವ ಪಿಂಚಣಿಯಾಗಲಿ ದೊರಕುತ್ತಿಲ್ಲ. ಹಸಿರು ಕಾರ್ಡ್ ಆಗಲಿ, ಯಶಸ್ವಿನಿ ಕಾರ್ಡ್ ಆಗಲಿ ಯಾವುದು ಮಾಡಿಸಿಲ್ಲ. ನಿಜವಾಗಿಯೂ ಯಾರಿಗೆ ಸರ್ಕಾರಿ ಯೋಜನೆಗಳು ತಲುಪಬೇಕೋ ಅವರಿಗೆ ತಲುಪುತ್ತಿಲ್ಲ ಅನ್ನುವುದಕ್ಕೆ ಮಾದಮ್ಮನೇ ಉದಾಹರಣೆ. ಮೆನಗೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಮಾದಮ್ಮನೂ ಎದುರಿಸುತ್ತಿದ್ದಾಳೆ. ಸಾಮಾಜಿಕ ಸುರಕ್ಷೆಯಡಿ ಇಂತವರ ಬದುಕು ಸುಧಾರಣೆಯಾಗಿ
ಸಾರ್ವತ್ರಿಕ ಮಾನವ ಹಕ್ಕುಗಳ ಸವಲತ್ತಿನಂತೆ ಘನತೆಯಿಂದ ಬದುಕುವಂತಾಗಬೇಕು. - ಹೇಮಲತ ಎಚ್.ಎಮ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ