ಯಾರೂ ಶಾಸ್ತ್ರಿಗಳ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅಷ್ಟೇ ಏಕೆ ಶಾಸ್ತ್ರಿಗಳನ್ನು ಒಳಕರೆದು ಒಂದು ಲೋಟ ಮಜ್ಜಿಗೆ ಅಥವಾ ಪಾನಕವನ್ನು ಸಹ ನೀಡಿರಲಿಲ್ಲ. ಬೆಳೆಗ್ಗೆಯಿಂದ ಉಪವಾಸವಿದ್ದ ಶಾಸ್ತ್ರಿಗಳಿಗೆ ಬಿಸಿಲಿನಲ್ಲಿ ಸುತ್ತಾಡಿ ತಲೆ ಸುತ್ತಿ ಬಂದಂತಾಯಿತು. ನಾಲ್ಕೇ ಹೆಜ್ಜೆ ಹಾಕಿದರೆ ದೇವಸ್ಥಾನವೇ ಸಿಗುತ್ತದಲ್ಲಾ ಎಂದು ಕೊಂಡು ಎಲ್ಲಿಲ್ಯೂ ನಿಲ್ಲದೆ ಮುಂದೆ ನಡೆದರು. ಆದರೆ ಎರಡು ಹೆಜ್ಜೆ ಹಾಕುವಷ್ಟರಲ್ಲಿ ಬಸವಳಿದು ಬಿದ್ದುಬಿಟ್ಟರು.
ಜನ ಸಂತೆಯಂತೆ ಸುತ್ತಲೂ ನೆರೆದುಬಿಟ್ಟರು. ಏನು,ಏನು ಎಂದು ಎಲ್ಲರೂ ಕೇಳುವವರೇ, ಆದರೆ ಯಾರೂ ಶಾಸ್ತ್ರಿಗಳನ್ನು ಮುಟ್ಟಲಿಲ್ಲ. ಕೆಲವರಿಗೆ ಶಾಸ್ತ್ರಿಗಳ ಮಡಿವಂತಿಕೆಯ ಭಯ; ಇತರರಿಗೆ ತಮ್ಮ ತಮ್ಮ ಕೆಲಸಗಳ ಆತುರ.
ಅಲ್ಲಿ0iÉು ನೀರು ಹಿಡಿಯುತ್ತಿದ್ದ ಫಾತಿಮಾ ಇದನ್ನೆಲ್ಲಾ ನೋಡಿದಳು. ಯಾರಾದರೂ ನೀರನ್ನಾದರೂ ಚಿಮುಕಿಸಸಬಾರದೇ ಎನಿಸಿತು. ಆದರೆ ಎಲ್ಲರೂ ಸುಮ್ಮನೆ ಇರುವುದನ್ನು ಕಂಡು ಮನೆಯ ಒಳಗೋಡಿ ಗಂಡನನ್ನು ಕರೆದಳು.
“ಬೇಡ, ಬೇಡ, ಆಮೇಲೆ ಶಾಸ್ತ್ರಿಗಳು ನಮ್ಮನ್ನಿಲ್ಲಿ ಇರಿಸಗೊಡುವುದಿಲ್ಲ.” ಪಾಷಾ ನುಡಿದ. “ಅದೆಲ್ಲಾ ಆಮೇಲೆ ಯೋಚಿಸೋಣ, ಮೊದಲು ಅವರಿಗೆ ಏನಾಗಿದೆ ನೋಡಿ” ಪಾಷಾ ಅಲ್ಲಿಗೆ ಹೋಗುತ್ತಲೇ “ನೀರು ತಾ” ಎಂದ. ಬೇಡ’ ಬೇಡ’’ ಎಂದು ಕೆಲವರು ಹೇಳುತ್ತಿದ್ದರೂ ಶಾಸ್ತ್ರಿಗಳನ್ನು ಎತ್ತಿಕೊಂಡು ಬಮ್ದು ಮನೆಯ ಮುಂದಿನ ಜಗಲಿಯ ಮೇಲೆ ನೆರಳಿನಲ್ಲಿ ಮಲಗಿಸಿ ನೀರನ್ನು ಚಿಮುಕಿಸಿದ, ‘ಶಾಸ್ತ್ರಿಗಳೇ’ ಮೆಲ್ಲಗೆ ಎಬ್ಬಿಸಿದ.
ನಿಧಾನವಾಗಿ ಕಣ್ಬಿಟ್ಟ ಶಾಸ್ತ್ರಿಗಳಿಗೆ ಸ್ವಲ್ಪ ಸಮಯದ ನಂತರ ತಾವು ಎಲ್ಲಿದ್ದೇವೆ ಎಂದು ಅರಿವಾಯಿತು. ಫಾತಿಮ ಒಳಗಡೆಯಿಂದ ಎಳನೀರನ್ನು ತಂದು ಗಂಡನ ಕೈಯಲ್ಲಿ ಕೊಟ್ಟು “ಕುಡಿಸಿ” ಎಂದಳು. “ಬೇಡ ಸುಮ್ಮನಿರು”.
ಶಾಸ್ತ್ರಿಗಳಿಗೆ ಪೂರ್ತಿ ಎಚ್ಚರವಾಯಿತು. ಆದರೆ ಸುಸ್ತಿನಿಂದಾಗಿ ಮೇಲೇಳಲು ವಿಫಲರಾದರು. ಫಾತಿಮಾ ತಾನೇ, “ಶಾಸ್ತ್ರಿಗಳೇ ದಯವಿಟ್ಟು ಈ ಎಳನೀರನ್ನು ಕುಡಿಯಿರಿ” ಇದು ನಮ್ಮ ಮರದಿಂದ ಬೆಳಿಗ್ಗೆ ಕಿತ್ತದ್ದು. “ಇದಕ್ಕೇನೂ ದೋಷವಿಲ್ಲವಲ್ಲ”, ಕಳಕಳಿಯಿಂದ ಹೇಳಿದಳು. ಶಾಸ್ತ್ರಿಗಳಿಗೆ ಕಣ್ತುಂಬಿ ಬಂದಿತು.
ಈಕೆಯನ್ನು ಅವರು ಮ್ಲೇಚ್ಚರು ಎಂದು ಹೀಯಾಳಿಸಿದ್ದರು. ಕುಡಿಯಲು ನೀರು ಇಲ್ಲದಿದ್ದಾಗ ದೇವಸ್ಥಾನದ ಆವರಣದಲ್ಲಿದ್ದ ಬಾವಿಯಿಂದ ನೀರನ್ನು ಕೊಡಿ ಎಂದು ಕೇಳಿದಾಗ ಇಲ್ಲವೆಂದಿದ್ದರು. ಫಾತಿಮಾ ಮಕ್ಕಳು ಪ್ರಸಾದಕ್ಕೆ ಬಂದಾಗ ಕೋಲು ಹಿಡಿದು ಕಳಿಸಿದ್ದರು.
ಅವರ ಕಣ್ಣಲ್ಲಿ ನೀರು ಕಂಡು ಪಾಷಾ , ಫಾತಿಮಾಳನ್ನು ಗದರಿಸಿದ “ನೀನು ಅದನ್ನು ತೆಗೆದುಕೊಂಡುಹೋಗಿ ಒಳಗಿಡು. ಹಾಗೆ ಆ ದೇವಸ್ಥಾನದಲ್ಲಿರುವ ರಾಜೂಗೆ ನೀರು ತಾಲು ಹೇಳು.”
ಅಷ್ಟರಲ್ಲಿ ಫಾತಿಮಾ ಮಗಳು,”ತಾತಾ, ಕುಡಿ ತಾತಾ, ಕುಡಿದ್ರೆ ಶಕ್ತಿ ಬರುತ್ತೆ ಅಂತಾ ಅಮ್ಮ ಯಾವಾಗ್ಲೂ ಹೇಳ್ತಾ ಇರ್ತಾಳೆ.” ಮುದ್ದಾಗಿ ನುಡಿದಳು. ಶಾಸ್ತ್ರಿಗಳಿಗೆ ಈಗಂತೂ ತಮ್ಮ ಬಗ್ಗೆ ನಾಚಿಕೆ ಎನಿಸಿತು. ಈ ಮುಗ್ಧ ಮಗುವಿನೊಂದಿಗೆ ತಾವು ನಡೆದುಕೊಂಡ ರೀತಿ ನೆನಒಇಗೆ ಬಂದು ಸಂಕಟ ಪಟ್ಟರು.
ನಿಧಾನವಾಗಿ “ಫಾತಿಮಾ ಅದನ್ನು ಕೊಡಮ್ಮಾ” ಎಂದರು. “ಬೇಡ ಶಾಸ್ತ್ರಿಗಳೇ”, ತಡೆಯಲೆತ್ನಿಸಿದ ಪಾಷಾ. “ಇರಲಿ ಕೊಡಪ್ಪಾ, ಇಷ್ಟು ದಿನದ ಪಾಪ ತೊಳೆದು ಹೋಗುತ್ತೆ.” ಎಂದು, ಎಳ ನೀರನ್ನು ಕುಡಿದು ನಿಧಾನವಾಗಿ ಮೇಲೆದ್ದು ಕುಳಿತುಕೊಂಡರು.
“ಶಾಸ್ತ್ರಿಗಳೇ, ಈ ಬಿಸಿಲಿನಲ್ಲಿ ಎಲ್ಲಿ ಹೋಗಿದ್ದಿರಿ? ಛತ್ರಿಯನ್ನಾದರೂ ತೆಗೆದುಕೊಂಡು ಹೋಗಬಾರದಿತ್ತೇ? ಶಾಸ್ತ್ರಿಗಳು ತಮ್ಮ ಸಮಸ್ಯೆಯನ್ನು ಹೇಳಿದರು.
ಈ ಸಮಸ್ಯೆಗೆ ಏನು ಉತ್ತರ ಹೇಳಬಲ್ಲ? ಆತ ಮೌನವಾಗಿ ನಿಂತ. ಫಾತಿಮಾ ಅವನನ್ನು ಕರೆದು ಕಿವಿಯಲ್ಲಿ ಏನೋ ಹೇಳಿದಳು. ಪಾಷಾ ಅವಳನ್ನು ಗದರುತ್ತಿರುವುದನ್ನು ಕಂಡು ಶಾಸ್ತ್ರಿಗಳು “ಏನದು ಪಾಷಾ?” ಕೇಳಿದರು. “ಏನಿಲ್ಲ ಶಾಸ್ತ್ರಿಗಳೇ” ಸಂಕೋಚದಿಂದಲೇ ನಿಂತ. “ಏನಮ್ಮಾ ಅದು?”, “ಶಾಸ್ತ್ರಿಗಳೇ ನಿಮಗೇನೂ ಅಭ್ಯಂತರವಿಲ್ಲದಿದ್ದರೆ ನಮ್ಮ ಮನೆ ಅಂಗಳದಲ್ಲಿ ಮಾಡಿಕೊಳ್ಳಲಿ ಎಂದೆ. ಅದಕ್ಕೆ ಅವರು. . . .. . . ಪಾಷಾ ಮಧ್ಯಪ್ರವೇಶಿಸಿ, “ಅದು ಹೇಗೆ ಸಾಧ್ಯ? ನೀನು ಸುಮ್ನಿರು.” ಎಂದ.
ಶಾಸ್ತ್ರಿಗಳು ಏನೂ ಮಾತನಾಡದೆ ಆ ದಂಪತಿಗಳನ್ನೇ ನೋಡುತ್ತಾ ಕುಳಿತರು. “ಶಾಸ್ತ್ರಿಗಳೇ ನಿಮ್ಮ ಕಷ್ಟ ನೋಡಲಾರದೆ ಹಾಗೆಂದೆ. ಬೇಕಿದ್ದರೆ ನಾವು ಎರಡು ದಿನಗಳ ಮಟ್ಟಿಗೆ ನನ್ನ ತಾಯಿ ಮನೆಗೆ ಹೋಗಿ ಬರ್ತೀವಿ. ಇಲ್ಲೇ ಒಲೆ ಹಾಕೊಳ್ಳಿ ಸೌದೇನೂ ಇಲ್ಲೇ ಇದೆ.” ಫಾತಿಮಾ ಮಾತು.
“ಈ ಜನಗಳನ್ನೇ ನಾನು ಇಷ್ಟು ದಿನ ಪರಕೀಯರೆಂದು ದೂರವಿಟ್ಟಿದ್ದು” ಎಂದುಕೊಂಡರು ಶಾಸ್ತ್ರಿಗಳು.
“ಶಾಸ್ತ್ರಿಗಳೇ, ಅವಳಿಗೆ ಕೆಲವೊಮ್ಮೆ ಎಲ್ಲಿ, ಹೇಗೆ ಮಾತನಾಡಬೇಕು ಎಂದು ಗೊತ್ತಾಗೊಲ್ಲ , ದಯವಿಟ್ಟು ಕ್ಷಮಿಸಿಬಿಡಿ. ನಡೀರಿ ನಿಮ್ಮನ್ನು ದೇವಸ್ಥಾನದವರೆಗೂ ಬಿಟ್ಟು ಬರ್ತೇನೆ. ನೀವು ಮತ್ತೆ ಸ್ನಾನ ಮಾಡಿ ಊಟ ಮಾಡಬೇಕೇನೊ. ಇನ್ನೊಂದು ಎಳನೀರು ಕುಡಿದುಬಿಡಿ” ಎಂದ ಪಾಷಾ ಎಳನೀರನ್ನು ಕತ್ತರಿಸಲಾರಂಭಿಸಿದ.
“ಶಾಸ್ತ್ರಿಗಳೇ, ನಿಮಗೆ ನೋವುಂಟು ಮಾಡಿದ್ದರೆ ಕ್ಷಮಿಸಿ,” ಎಂದು ಹೇಳಿ, ಒಳಗೆ ಹೊರಟ ಫಾತಿಮಾಳನ್ನು ತಡೆದು, “ಇಲ್ಲಮ್ಮಾ ನಾಳೆ ಇಲ್ಲಿಗೇ ಬಂದು ನಮ್ಮ ಕೆಲಸ ಮಾಡಿಕೊಳ್ಳುತ್ತೇವೆ. ಆದ್ರೆ ನೀವು ಎಲ್ಲಿಗೂ ಹೋಗಬೇಕಿಲ್ಲ.” ಎಂದರು. ಫಾತಿಮಾ ಸಂತೋಷಗೊಂಡಳು. ಪಾಷಾ ಎಳನೀರನ್ನು ಕತ್ತರಿಸುವುದನ್ನು ನಿಲ್ಲಿಸಿ ಆಶ್ಚರ್ಯಚಕಿತನಾಗಿ ಶಾಸ್ತ್ರಿಗಳ ಕಡೆ ನೋಡಿದ. ಇದಾವುದನ್ನೂ ಗಮನಿಸದೆ ಶಾಸ್ತ್ರಿಗಳು ಮಗುವಿನ ಕೈ ಹಿಡಿದು, “ಮುನ್ನಿ ನಾಳೆ ಪ್ರಸಾದ ಕೊಡ್ತೀನಿ, ಬರ್ತೀಯಾ” ಎಂದರು.
- ಸುಧಾ ಜಿ
1 ಕಾಮೆಂಟ್:
ಕಾಲ್ಪನಿಕ ಕಥೆಯಾದರೂ ನೀತಿಕಥೆಯಾಗಿದೆ. ಸ೦ಪ್ರದಾಯಗಳು ಗೊಡ್ಡಾದರೂ, ಕಾಲಕ್ಕೆ ತಕ್ಕ೦ತೆ ಬದಲಾಗುತ್ತಿವೆ. ಈ ಬದಲಾವಣೆಗಳ ವೇಗ ಎಷ್ಟಿದೆಯೆ೦ದರೆ ಪೂಜೆ-ಪುನಸ್ಕಾರಗಳನ್ನು, ಸ೦ಪ್ರದಾಯವನ್ನು ಬದಲುಮಾಡಲು ಪ್ರಯತ್ನಿಸುವುವವರು, ಧಾರ್ಮಿಕತೆಯನ್ನು ನ೦ಬದೇ ಇರುವವರು ವಾಮಾಚಾರವನ್ನು ಖ೦ಡಿತ ನ೦ಬುತ್ತಿದ್ದಾರೆ - ಕಾರಣ ಸ್ವಾರ್ಥ, ತಮ್ಮ ಆಸೆ-ಆಕಾ೦ಕ್ಷೆಗಳು ಈಡೇರುತ್ತಿವೆ, ತಾತ್ಕಾಲಿಕವಾಗಿಯಾದರೂ ಸರಿ!
ಕಾಮೆಂಟ್ ಪೋಸ್ಟ್ ಮಾಡಿ