Pages

ಪುಟಾಣಿ ಕಥೆ



ಪುಟಾಣಿ ಕಥೆ - ೧
"ಪ್ರೀತಿಗೆ ಇಷ್ಟೇಕೆ ಬರಗೆಟ್ಟು ಕುಳಿತಿರುವೆ?" ಕೇಳಿದಳಾಕೆ.
"ಬರಬಿದ್ದ ಭೂಮಿಯಲ್ಲಿ ಹಸಿರ ಚಿಗುರಿಸಲು ಸಾಧ್ಯವಾಗುವುದು ಮಳೆಗೆ ಮಾತ್ರವಲ್ಲವೇ? "

ಪುಟಾಣಿ ಕಥೆ - ೨
ಪ್ರತಿದಿನ ಆ ಹುಡುಗ ಕಡಲೆಕಾಯಿ ಮಾರಲು ಬರುತ್ತಿದ್ದ. ಪ್ರತಿದಿನ ಕಾರಿನ ಒಡೆಯ ತಿನ್ನಲು ಸಮಯವಿಲ್ಲವೆಂದು ಹೇಳಿ ನಿರಾಕರಿಸುತ್ತಿದ್ದ.  ಒಂದು ದಿನ ಆ ಹುಡುಗ ಕೇಳಿದ, "ಕಡಲೆಕಾಯಿ ಸಹ ತಿನ್ನಲಾಗದಿದ್ದರೆ, ಮತ್ತೆ ಇಷ್ಟೊಂದು ದುಡಿಯೋದು ಯಾಕೆ ಸರ್?!!" 

ಪುಟಾಣಿ ಕಥೆ - ೩
"ಓದಿದವರನ್ನು ಮಾತ್ರ ಗೌರವಿಸಬೇಕೇ? " ಕೇಳಿದ ಶಿಕ್ಷಕಿಯನ್ನು ವಿದ್ಯಾರ್ಥಿಯೊಬ್ಬ.
"ಅದರ ಅವಶ್ಯಕತೆ ಇಲ್ಲಪ್ಪ."
"ಮತ್ತೇಕೆ ಓದು, ಓದು ಎನ್ನುವಿರಿ?" ಪ್ರಶ್ನಿಸಿದ.
"ವಿದ್ಯೆ ಬದುಕನ್ನು ಗೌರವಿಸುವುದನ್ನು ಕಳಿಸಿಕೊಡುತ್ತದೆ!!

ಪುಟಾಣಿ ಕಥೆ - ೪
ಧರ್ಮದ ವಿಷಯದಲ್ಲಿ ಜೋರು ಜೋರು ಜಗಳವಾಡುತ್ತಿದ್ದ ಅವರು ಇನ್ನೇನು ಕೈಕೈಮಿಲಾಯಿಸಬೇಕೆನ್ನುವಷ್ಟರಲ್ಲಿ,  ಅವರಿಬ್ಬರ ಅಮ್ಮಂದಿರು ಒಟ್ಟಿಗೆ ವಾಕಿಂಗ್ ಹೊರಟಿದ್ದು ಕಂಡು ದಂಗಾದರು! !

ಪುಟಾಣಿ ಕಥೆ - ೫
ಚಂದ್ರ ಪುಟ್ಟ ಕಂದನಿಗೆ ಹೇಳಿದ " ನಾನು ಒಂದು ದಿನ ಕಾಣಲಿಲ್ಲವೆಂದು ಮುನಿಸಿಕೊಂಡು ಉಳಿದ ೧೪ ದಿನಗಳೂ ಸಹ ಆಕಾಶದೆಡೆಗೆ ನೋಡುವುದನ್ನೇ ಬಿಟ್ಟೆ, ಸರಿಯೇ?"

ಪುಟಾಣಿ ಕಥೆ - ೬
ಹೊಸ ನೋಟು ಹಳೇ ನೋಟನ್ನು ನೋಡಿ ನಕ್ಕಿತು,  "ನೋಡಿದೆಯಾ, ನನ್ನ ಮಹಿಮೆ. ಕಪ್ಪು ಹಣವನ್ನು ತೊಡೆದು ಹಾಕುತ್ತೇನೆಂದು ನಮಗೆಷ್ಟು ಮರ್ಯಾದೆ?"
ಹಳೇ ನೋಟು ವಿಷಾದದ ನಗು ನಕ್ಕು ಹೇಳಿತು, "ನಾನೂ ನಿನ್ನಂತೆ ಬೀಗಿದ್ದೆ!!

ಪುಟಾಣಿ ಕಥೆ - ೭
ಮದುವೆಯಾದ ಎರಡು ವರ್ಷಗಳಲ್ಲಿ ಗಂಡ ಬಿಟ್ಟು ಹೋದ ನಂತರ ಆ ಹೆಣ್ಣು ಮಗಳು ಸಂಸಾರದ ಜವಾಬ್ದಾರಿ ನಿಭಾಯಿಸಿದ್ದಳು.  25 ವರ್ಷಗಳಾದ ಮೇಲೆ ಅವನು ತಿರುಗಿ ಬಂದ. ಎಲ್ಲರೂ ಹೇಳಿದರು "ಸೇರಿಸಿಕೊ, ನಿನಗೆ ಆಸರೆಯಾಗಿರುತ್ತಾನೆ."
ನಕ್ಕು ನುಡಿದಳಾಕೆ "ಜೀವನದ ಹದಿನೈದಾಣೆ ಭಾಗದಲ್ಲಿ ಅವನಿರಲಿಲ್ಲ,  ಉಳಿದ ಒಂದು ಭಾಗಕ್ಕೆ ಅವನ ಅವಶ್ಯಕತೆ ಇದೆಯೇ?"

ಪುಟಾಣಿ ಕಥೆ - ೮
ಆಕೆ ಪ್ರೀತಿಯನ್ನು ಗಣಿಸುತ್ತಿದ್ದಾಗ
ಅವನು ಹಣವನ್ನು ಎಣಿಸುತ್ತಿದ್ದ! !

ಪುಟಾಣಿ ಕಥೆ - ೯
ಎಂಜಲು ಕೈಯಲ್ಲಿ ಕಾಗೆ ಓಡಿಸುವುದು ಹೇಗೆ ಎಂದು ಚಿಂತಿಸುತ್ತಾ ನಿಂತ ವ್ಯಕ್ತಿ ಒಂದೆಡೆ, ಅಗಳು ಬಿದ್ದರೆ ಬಳಗವನ್ನೆಲ್ಲ ಕರೆಯಲು ಬಾಯ್ತೆರೆದು ನಿಂತ ಕಾಗೆ ಇನ್ನೊಂದೆಡೆ!

ಪುಟಾಣಿ ಕಥೆ - ೧೦
ತನ್ನ ಗಂಡನಿಗೆ ಇನ್ನೊಂದು ಸಂಬಂಧ ಇದೆ ಎಂದು ತಿಳಿದಾಗ ಆಕೆಗೆ ದಿಗ್ಭ್ರಮೆಯಾಯಿತು. ಚೇತರಿಸಿಕೊಂಡ ಆಕೆ ವಿಚ್ಛೇದನೆಗೆ ಅರ್ಜಿ ಸಲ್ಲಿಸುತ್ತೇನೆಂದಾಗ ಎಲ್ಲರೂ ಹಾಸ್ಯ ಮಾಡಿದರು. "ನನ್ನ ಭಾವನೆಗೆ, ವ್ಯಕ್ತಿತ್ವಕ್ಕೆ ಧಕ್ಕೆ ನೀಡಿದ ವ್ಯಕ್ತಿಯೊಂದಿಗೆ ನಾ ಬದುಕಲಾರೆ." ಆಗ ಆಕೆಯ ವಯಸ್ಸು 58!!

ಪುಟಾಣಿ ಕಥೆ - ೧೧
ಕ್ಯಾನ್ಸರ್ ಎಂದ ಕೂಡಲೆ ಆ ಧೈರ್ಯವಂತೆ ಸಹ ಕುಸಿದುಹೋದಳು. ಅವಳಲ್ಲಿ ಜೀವನೋತ್ಸಾಹ ತುಂಬಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಒಂದು ದಿನ ಇದ್ದಕ್ಕಿದ್ದಂತೆ ಆಕೆಗೆ ಜ್ಞಾನೋದಯವಾಯಿತು. ತನಗೆ ಚಿಕಿತ್ಸೆ ನೀಡಲು ಬರುತ್ತಿದ್ದ, ಎಲ್ಲರೊಂದಿಗೆ ನಗುತ್ತಾ ಮಾತನಾಡುತ್ತಿದ್ದ, ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕಿರಿಯ ವೈದ್ಯೆಗೆ ವಾಸಿಮಾಡಲಾಗದ ಕ್ಯಾನ್ಸರ್ ಇದೆ ಎಂದು ತಿಳಿದಾಗ!!

ಪುಟಾಣಿ ಕಥೆ - ೧೨
ಮಗಳಿಗೆ ಬರೆಬರುವಂತೆ ಹೊಡೆದಿದ್ದಳು ತಾಯಿ. ವೈದ್ಯೆ ಕಾರಣ ಕೇಳಿದಳು.
"ಓದ್ತಾ ಇಲ್ಲ ಅಂತ ಹೊಡ್ದೆ."
"ಅಷ್ಟಕ್ಕೆ,  ಹೀಗಾ ಹೊಡೆಯೋದು? " 
"ಅದಕ್ಕೇ ಹೊಡ್ದೆ, ಅವಳ ಬದ್ಕು ನನ್ ತರಾ ಆಗ್ಬಾರ್ದು ಅಂತ" ಬಿಕ್ಕಳಿಸುತ್ತಾ ನುಡಿದಳಾ ತಾಯಿ.
    
ಪುಟಾಣಿ ಕಥೆ - ೧೩
"ನಾ ದುಡಿಯುತ್ತಿರುವುದೆಲ್ಲ ನಿನಗಾಗಿಯೇ." ದಿನಂಪ್ರತಿ ಗಂಡನ ಮಾತು ಹೆಂಡತಿಗೆ.
ಕೇಳಿ ಕೇಳಿ ರೋಸಿಹೋದ ಪತ್ನಿ ಒಂದು ದಿನ ಗಂಡನಿಗೆ ಹೇಳಿದಳು "ನನಗಾಗಿ ನೀವು ಮಾಡಿಸಿಕೊಟ್ಟ ಚಿನ್ನದ ಸರವನ್ನು ನನ್ನಿಚ್ಛೆಯಂತೆ ಅಮ್ಮನಿಗೆ ಕೊಟ್ಟುಬಿಟ್ಟೆ."
ಗರಬಡಿದವನಂತಾಗಿಬಿಟ್ಟಗಂಡ.
   
ಪುಟಾಣಿ ಕಥೆ - ೧೪
ಮೂರು ದಿನ ಕಂಪ್ಯೂಟರ್ ಕಲಿಯಲೆತ್ನಿಸಿದ ನಂತರ ತಾಯಿ "ಇದು ನನಗೆ ಬರುತ್ತಿಲ್ಲ.ನಾ ಕಲಿಯೋಲ್ಲ" ಎಂದಳು.
ಮಗಳು ನಿಧಾನವಾಗಿ "ಅಮ್ಮ ಮದುವೆಯಾದಾಗ ನಿನಗೆ ಅಡಿಗೆ ಮಾಡಲು ಬರುತ್ತಿರಲಿಲ್ಲ ಎಂದು ಹೇಳಿದ ನೆನಪು....." 
"ಸರಿ, ಪ್ರಾರಂಭಿಸು " ಕಂಪ್ಯೂಟರ್ ಮುಂದೆ ಕುಳಿತಳು ತಾಯಿ!!
    
ಪುಟಾಣಿ ಕಥೆ - ೧೫
"ಸ್ವಾತಂತ್ರ್ಯವೇನು ಎಂಬುದರ ಬಗ್ಗೆ ಜೋರು ಜೋರು ಚರ್ಚೆ ನಡೆಯುತ್ತಿತ್ತು. ಯಾರೋ ಹೇಳಿದರು ಬದುಕಿನ, ಶಿಕ್ಷಣದ, ಉದ್ಯೋಗದ ಸ್ವಾತಂತ್ರ್ಯ - ಹೀಗೆ.
ಒಬ್ಬಾಕೆ ಎದ್ದು ನಿಂತು ಹೇಳಿದಳು "ನಂಗೂ ಬಹಳ ಅನಿಸುತ್ತೆ. ಆದರೆ ಎಲ್ಲಕ್ಕಿಂತ ಮುಂಚೆ ಸೂರ್ಯೋದಯ ನೋಡಲು, ೧೦ ರೂಪಾಯಿಗೆ ನಂಗಿಷ್ಟ ಬಂದದ್ದನ್ನು ಕೊಳ್ಳಲು ನಂಗೆ ಸ್ವಾತಂತ್ರ್ಯ ಬೇಕು!!!"
   
ಪುಟಾಣಿ ಕಥೆ - ೧೬
ಆಗ ಆ ಮನೆ ತುಂಬ ಮಕ್ಕಳಿದ್ದರು.  ಈಗ ಆಕೆ ಒಬ್ಬಂಟಿ.
ಆಗ ಈ ಮನೆಯಲ್ಲಿ ಮಕ್ಕಳಿರಲಿಲ್ಲ. ನಂತರ ಎಲ್ಲೆಲ್ಲಿಂದಲೋ ಬಂದರು. ಈಗ ಮನೆಯಲ್ಲಿ ಜಾಗವೇ ಇಲ್ಲ!

ಕಾಮೆಂಟ್‌ಗಳಿಲ್ಲ: