ಮೈ ನೆರೆಯುವುದು ಎಂದರೆ ಹೆಣ್ಣು ಸಂತಾನೋತ್ಪತ್ತಿಗೆ ಸಿದ್ಧಳಾಗುವುದು ಎಂದರ್ಥ. ಈ ಪ್ರಕ್ರಿಯೆಯನ್ನು ಋತುಮತಿಯಾಗುವುದು, ರಜಸ್ವಲೆಯಾಗುವುದು, ಮುಟ್ಟಾಗುವುದು, ದೊಡ್ಡವಳಾಗುವುದು ಎಂದು ಕರೆಯುವ ವಾಡಿಕೆಯಿದೆ. ಇದು ಋತುಸ್ರಾವದ ಆರಂಭವನ್ನು ಸೂಚಿಸುತ್ತದೆ.
ದೈಹಿಕ ಬೆಳವಣಿಗೆಯು ಆರಭವಾದ 18 ತಿಂಗಳಾದ ನಂತರ ಮೊದಲ ಬಾರಿಗೆ ಋತುಸ್ರಾವವಾಗುತ್ತದೆ. ಇದು ಸಾಮಾನ್ಯವಾಗಿ 11-15 ವರ್ಷದೊಳಗೆ ಆಗುತ್ತದೆ. 2 ವರ್ಷಗಳ ಕಾಲ ಇದು ನಿಯತವಾಗಿ (ಅಂದರೆ 28-30 ದಿನಗಳಿಗೊಮ್ಮೆ) ಆಗುವುದಿಲ್ಲ. ಜೊತೆಗೆ ಮೊದಲ ಋತುಸ್ರಾವವಾದ ನಂತರ ಸಾಮಾನ್ಯವಾಗಿ 12-18 ತಿಂಗಳುಗಳು ಅಂಡಾಣು ಬಿಡುಗಡೆಯಾಗುವುದಿಲ್ಲ ಅಂದರೆ ಆ ಅವಧಿಯಲ್ಲಿ ಗರ್ಭಿಣಿಯಾಗಲು ಸಾಧ್ಯವಿಲ್ಲ. ಆದರೆ ಎಲ್ಲಾ ಹೆಣ್ಣುಮಕ್ಕಳಲ್ಲೂ ಈ ಪ್ರಕ್ರಿಯೆ ಒಂದೆ ರೀತಿಯಲ್ಲಿ ಇರುವುದಿಲ್ಲ; ಅನುವಂಶಿಕತೆ, ಜನಾಂಗ, ಆರೋಗ್ಯ ಇತ್ಯಾದಿ ಅಂಶಗಳ ಪ್ರಭಾವವಿರುತ್ತದೆ. ಈ ಸಮಯದಲ್ಲಿ ಶಕ್ತಿಯ ಅವಶ್ಯಕತೆ ಹೆಚ್ಚಿರುವುದರಿಂದ ಪೌಷ್ಟಿಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.
ಕೇಂದ್ರ ನರಮಂಡಲ ಮತ್ತು ಎಂಡೊಕ್ರೈನ್ ಗ್ರಂಥಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹಾರ್ಮೋನುಗಳನ್ನು ರಕ್ತದೊಳಗೆ ಸ್ರವಿಸುತ್ತದೆ. ಥೈರಾಯಿಡ್, ಪಿಟ್ಯೂಟರಿ ಮತ್ತು ಅಡ್ರಿನಲ್ ಗ್ರಂಥಿಗಳು ಮುಖ್ಯವಾದ ಗ್ರಂಥಿಗಳು. ಮೈ ನೆರೆದಾಗ ಅಂಡಾಶಯಗಳು ಗ್ರಂಥಿಗಳಾಗಿ ಕೆಲಸ ನಿರ್ವಹಿಸುತ್ತಾ ಲೈಂಗಿಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಹೆಣ್ಣು ಮಗುವಿನ ದೇಹವನ್ನು ಸ್ತ್ರಿ ದೇಹವನ್ನಾಗಿ ಬೆಳೆಸುತ್ತದೆ. ಇದರೊಂದಿಗೆ ಸ್ತ್ರೀಯರ ದೇಹದಲ್ಲಿ ಪುರುಷ ಹಾರ್ಮೋನುಗಳು, ಪುರುಷರ ದೇಹದಲ್ಲಿ ಸ್ತ್ರೀಯರ ಹಾರ್ಮೋನುಗಳು ಅಲ್ಪ ಪ್ರಮಾಣದಲ್ಲಿರುತ್ತವೆ.
ಋತುಸ್ರಾವ ಏಕೆ ಮತ್ತು ಹೇಗೆ?
ಹೆಣ್ಣಿನ ಅಂಡಾಶಯದಿಂದ ತಿಂಗಳಿಗೊಮ್ಮೆ ಅಂಡಾಣು ಬಿಡುಗಡೆಯಾಗುತ್ತದೆ. ಒಂದು ವೇಳೆ ಅದು ಪುರುಷನ ವೀರ್ಯಾಣುವಿನ ಜೊತೆಗೂಡಿದರೆ ಹೊಸ ಜೀವಕ್ಕೆ ಕಾರಣವಾಗುತ್ತದೆ. ಇಲ್ಲದಿದ್ದಲ್ಲಿ ದೇಹದೊಳಗೆ ನಡೆಯುವ ಹಲವು ಪ್ರಕ್ರಿಯೆಗಳ ಕಾರಣದಿಂದಾಗಿ ಅಂಡಾಣು ಯೋನಿಯ ಮೂಲಕ ದೇಹದಿಂದ ಹೊರಬೀಳುತ್ತದೆ. ಇದನ್ನೇ ಋತುಸ್ರಾವ ಎನ್ನುತ್ತೇವೆ.
ಋತುಚಕ್ರ : ಋತುಚಕ್ರವೆಂದರೆ, ಸ್ತ್ರೀ ಸಂತಾನೋತ್ಪತ್ತಿಯ ಸಾಮರ್ಥ್ಯ ಹೊಂದಿದಷ್ಟೂ ಕಾಲ 28 ದಿನಗಳಿಗೊಮ್ಮೆ (ಸಾಮಾನ್ಯವಾಗಿ) ನಡೆಯುವ ಒಟ್ಟಾರೆ ಬದಲಾವಣೆಗಳು, ಅಂದರೆ, ಒಂದು ಋತುಸ್ರಾವದಿಂದ ಇನ್ನೊಂದು ಋತುಸ್ರಾವದವರೆಗಿನ ಅವಧಿಯಲ್ಲಿನ ಬದಲಾವಣೆಗಳು.
ಗರ್ಭಕೋಶದಲ್ಲಿನ ಬದಲಾವಣೆಗಳನ್ನು ಆಧರಿಸಿ ಈ ಚಕ್ರವನ್ನು 3 ಹಂತಗಳನ್ನಾಗಿ ವಿಭಜಿಸಲಾಗಿದೆ.
1. ಪ್ರಾಥಮಿಕ ಹಂತ (10 ದಿನಗಳು) : ಈ ಹಂತದಲ್ಲಿ, ಅಂಡಕೋಶವೊಂದರಲ್ಲಿರುವ ಫಾಲಿಕಲ್, ಪಿಟ್ಯೂಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಹಾರ್ಮೋನಿನ ಕಾರಣದಿಂದಾಗಿ ಅಂಡಾಣುವನ್ನು ಹೊಂದಿರುವ ಈ ಫಾಲಿಕಲ್ ಈಸ್ಟ್ರೊಜನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ. ಇದರಿಂದಾಗಿ, ಗರ್ಭಕೋಶ ಅಂಡಾಣುವನ್ನು ಸ್ವೀಕರಿಸಲು ಸಜ್ಜಾಗುವಂತೆ ಮಾಡುತ್ತದೆ. ಗರ್ಭಕೋಶದ ಒಳಪದರ ದಪ್ಪವಾಗುತ್ತದೆ. ಅಂಡಾಣುವನ್ನು ಫೆಲೊಪಿಯನ್ ಟ್ಯೂಬ್ ನೊಳಗೆ ಬಿಡುಗಡೆ ಮಾಡಿದಾಗ ಈ ಹಂತ ಮುಗಿಯುತ್ತದೆ.
2. ಮಾಧ್ಯಮಿಕ ಹಂತ ( 14 ದಿನಗಳು) : ಅಂಡಾಣು ಫೆಲೊಪಿಯನ್ ಟ್ಯೂಬ್ ದಾಟಿ ಗರ್ಭಕೋಶದತ್ತ ಧಾವಿಸುತ್ತದೆ.ಈ ಹಂತದಲ್ಲಿ ಗರ್ಭಕೋಶದಲ್ಲಿರುವ ಪುರುಷನ ವೀರ್ಯಾಣುವನ್ನು ಅಂಡಾಣುವಿನತ್ತ ಕಳಿಸಲು ಸಿದ್ಧವಾಗಿರುತ್ತದೆ. ಗರ್ಭಕೋಶದಲ್ಲಿರುವ ಗ್ರಂಥಿಗಳು ವೀರ್ಯಾಣುವಿನ ದಾರಿಯನ್ನು ಸುಗಮಗೊಳಿಸಲು ನೀರಿನಂತಿರುವ ಅಂಟುದ್ರವವನ್ನು ಬಿಡುಗಡೆ ಮಾಡುತ್ತದೆ. ವೀರ್ಯಾಣುವಿಗೆ 48 ಘಂಟೆಗಳ ಕಾಲ ಜೀವವಿದ್ದರೆ, ಅಂಡಾಣು ಒವ್ಯೂಲೇಷನ್ ಆದ ನಂತರ 24 ಘಂಟೆಗಳು ಫರ್ಟಿಲೈಸೆಬಲ್ ರೂಪದಲ್ಲಿರುತ್ತದೆ. ಎರಡು ಸಂದರ್ಭದಲ್ಲಿ ಫರ್ಟಿಲೈಸೇಷನ್ ಆಗುವುದಿಲ್ಲ. 1. ಪುರುಷನ ಜೊತೆ ದೈಹಿಕ ಸಂಪರ್ಕವಿಲ್ಲದಿದ್ದರೆ, 2. ಲೈಂಗಿಕ ಸಂಪರ್ಕವಿದ್ದರೂ, ಯಾವುದೇ ವೀರ್ಯಾಣು ಅಂಡಾಣುವನ್ನು ಸೇರಲಾಗದಿದ್ದರೆ. ಫರ್ಟಿಲೈಸೇಷನ್ ಆಗದಿದ್ದರೆ ಚಕ್ರವು ಮೂರನೆ ಹಂತವನ್ನು ತಲುಪುತ್ತದೆ.
3. ಋತುಸ್ರಾವದ ಹಂತ (4 ದಿನಗಳು) ಈ ಹಂತಕ್ಕೆ 14 ದಿನಗಳಿಗಿಂತ ಮುಂಚಿನಿಂದಲೂ ಗರ್ಭಕೋಶದ ಒಳಪದರ ಜೀವಕೋಶಗಳು ಮತ್ತು ರಕ್ತದಿಂದ ದಪ್ಪವಾಗುತ್ತಾ ಬಂದಿರುತ್ತದೆ. ಸಂತಾನೋತ್ಪತ್ತಿ ಆಗದಿದ್ದರೆ, ಗರ್ಭಕೋಶದ ಈ ಒಳಪದರ ಛಿದ್ರವಾಗುತ್ತದೆ ಮತ್ತು ದೇಹವು ಇದನ್ನು ಋತುಸ್ರಾವದ ಮೂಲಕ ತ್ಯಜಿಸುತ್ತದೆ. ಋತುಸ್ರಾವ ಅಂಟುದ್ರವ, ಒಳಪದರ, ರಕ್ತವನ್ನು ಒಳಗೊಂಡಿರುತ್ತದೆ. ಇದು 4-5 ದಿನಗಳವರೆಗೆ ನಡೆಯುತ್ತದೆ.
ನಂತರ, ಪುನಃ ಗರ್ಭಕೋಶ ಹೊಸ ಋತುಚಕ್ರವನ್ನು ಆರಂಭಿಸುತ್ತದೆ.
(ಮುಂದಿನಸಂಚಿಕೆಯಲ್ಲಿ - ಋತುಸ್ರಾವವಾದಾಗ ಮಾಡಬೇಕಾದದ್ದೇನು?)
- ಡಾ. ಪೂರ್ಣಿಮಾ ಮತ್ತು ಡಾ. ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ