Pages

ಕವನ - ಶರತ್ ಬಾಬುಗೆ



ನಾನು ರಾಜಲಕ್ಷ್ಮಿ
ಆದರೆ ನನಗೆ ಶ್ರೀಕಾಂತನ ಹೃದಯ ವೈಶಾಲ್ಯ ಬೇಕಿಲ್ಲ
ನನ್ನ ಗತದ ದುಃಖದಲ್ಲಿ ನಾನು ಮೀಯುತ್ತಿಲ್ಲ

ನಾನು ಕಿರಣ್ಮಯಿ
ಆದರೆ ನನಗೆ ಉಪೇಂದ್ರನ ಭಯವಿಲ್ಲ
ದಿವಾಕರನ ಅಗತ್ಯವಿಲ್ಲದೆ 
ನಾನು ನಾನಾಗಿ ಎದ್ದು ನಿಲ್ಲಬಲ್ಲೆ

ನಾನು ಸೌದಾಮಿನಿ
ನನಗೂ ಸ್ವಾಮಿ (ಘನಶ್ಯಾಮನಂತೆ) ಯಂತೆ
ಕ್ಷಮಾಗುಣವಿದೆ,
ಅವನೇ ನನ್ನಲ್ಲಿಗೆ ತಿರುಗಿ ಬಂದರೆ
ಅವನನ್ನು ಪ್ರೀತಿ ಮಾತ್ರವಲ್ಲ
ಗೌರವದಿಂದ ಸ್ವೀಕರಿಸಬಲ್ಲೆ

ನಾನು ಕಮಲೆ
ಆದರೆ ನಾನು ರಾಜೇಂದ್ರನಂತಹವರಿಗಿಂತ
ಉತ್ತಮರನ್ನು ನೋಡಿದ್ದೇನೆ

ನಾನು ಕಮಲಲತಾ
ನನ್ನ ಮೇಲೆ ಜಾಲ ಬೀಸಿದವರನ್ನು ಪ್ರಶ್ನಿಸಬಲ್ಲೆ
ಜಗತ್ತಿನ ಮುಂದೆ ನಾನು ಯೌವನದಲ್ಲಿ
ಮೋಸ ಹೋದನೆಂದು ಧೈರ್ಯವಾಗಿ ಹೇಳಬಲ್ಲೆ
ಶ್ರೀಕಾಂತನ ಕನಸು ಕಂಡು
ಭ್ರಮಾಲೋಕದಲ್ಲಿ ವಿಹರಿಸಿದ‌ನಂತರವೂ
ಗೌಹರನೊಂದಿಗೆ ಹೋಗಲು ಧೈರ್ಯವಾಗಿ
ಜಗತ್ತನ್ನು ಎದುರಿಸಬಲ್ಲೆ

ನಾನು ವಂದನಾ
ನನಗೆ ವಿಪ್ರದಾಸನ ಮುಚ್ಚಿದ ಮನಸ್ಸಿನ
ಕದ ತಟ್ಟುವ ಅಗತ್ಯವಿಲ್ಲ
ವಿಪ್ರದಾಸನಿಲ್ಲದೆ ಲೋಕ ಶೂನ್ಯವೆನಿಸುತ್ತ ಇಲ್ಲ

ನಾನು ಅಭಯಾ
ಆದರೆ ಸಾಮಾಜಿಕ ಹೋರಾಟದಲ್ಲೂ ಇದ್ದೇನೆ

ನಾನು ಸುಮಿತ್ರಾ
ಆದರೆ ಸವ್ಯಸಾಚಿಯ ಭ್ರಮೆಯಿಂದ ಕಳಚಿಕೊಂಡಿದ್ದೇನೆ

ನಿಮ್ಮ ಲೇಖನಿ ನಿಂತು ಕಾಲವಾಗಿದೆ ಶರತ್ ಬಾಬು
ಈಗ ನಾನೇ ನನ್ನ ಬಗ್ಗೆ ಹೇಳಬಲ್ಲೆ, ಬರೆಯಬಲ್ಲೆ

- ಸುಚೇತಾ ಪೈ




ಕಾಮೆಂಟ್‌ಗಳಿಲ್ಲ: