Pages

ವ್ಯಕ್ತಿ ಪರಿಚಯ - ನಂಜನಗೂಡು ತಿರುಮಲಾಂಬ


         
 ಇಲ್ಲಿಗೆ ಸರಿಸುಮಾರು 112 ವರ್ಷಗಳ ಹಿಂದೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಅವರ ಸಾಮಾಜಿಕ ಸ್ಥಿತಿಗತಿ, ಸಮಾಜದಲ್ಲಿ ಅವರ ಸ್ಥಾನಮಾನ, ಸಮಾನತೆ ಇವೆಲ್ಲವೂ ಪ್ರಸ್ತುತ ಸಾಮಾಜಿಕ ಸಮಾನತೆಯ ಸ್ಥಿತಿಗತಿಗಳಿಗೆ ಅನುಗುಣವಾಗಿರಲಿಲ್ಲ. ಆಗ ಹೆಣ್ಣು ಕೇವಲ ಸಾಂಸಾರಿಕ ನೌಕೆಯನ್ನು ತೂಗುವವಳು, ಗೃಹಿಣಿ, ಮಕ್ಕಳ ಪಾಲನೆ, ಪೋಷಣೆಗೆ ಮಾತ್ರವೇ ಎಂಬ ನಂಬಿಕೆಯಿದ್ದ ಕಾಲವದು. ಸಮಾಜದ ತುಂಬೆಲ್ಲಾ ಬಾಲ್ಯವಿವಾಹ, ಸತೀ, ವರದಕ್ಷಿಣೆ ಅಷ್ಟೇ ಏಕೆ ವಿಧವಾ ಮರುವಿವಾಹಕ್ಕೆ ಬೆಂಬಲವೇ ಇಲ್ಲದ ಕಾಲವದು. ಮಹಿಳೆಯರ ಸಂಪೂರ್ಣ ಅಧಃಪತನದ ಶತಮಾನವದು.
     ಪರಿಸ್ಥಿತಿ ಹೀಗಿದ್ದರೂ ಕರ್ನಾಟಕದಲ್ಲಿ ಮಹಿಳಾ ಚಳುವಳಿಗೆ ನಾಂದಿ ಹಾಡಿದ, ಕಳೆದ ಶತಮಾನ ಕಂಡ, ಕೇವಲ ಬರವಣಿಗೆಯ ಲೇಖನಿಯ ಮೂಲಕ ಮಾತ್ರವಲ್ಲದೇ ಹೋರಾಟದ ಮೂಲಕ ಸ್ತ್ರೀಪರ ಧೋರಣೆಗಾಗಿ ದನಿಯೆತ್ತಿದ, ಅಧುನಿಕ ಯುಗದಲ್ಲಿ ಕನ್ನಡದ ಮೊದಲ ಮಹಿಳಾ ಲೇಖಕಿ ನಂಜನಗೂಡು ತಿರುಮಲಾಂಬ.
ಇವರು 25-03-1887ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಿಸಿದರು. ಅಂದಿನ ಸಾಮಾಜಿಕ ದುಷ್ಟಪದ್ಧತಿಗೆ ಸಿಲುಕಿ ತಮ್ಮ ಹತ್ತನೇ ವಯಸ್ಸಿಗೆ ವಿವಾಹವಾದರು. ಆದರೆ ದುರದೃಷ್ಟವಶಾತ್ ತಮ್ಮ 13ನೇ ವಯಸ್ಸಿಗೆ ವಿಧವೆಯಾದರು.
ಹೆಚ್ಚೇನೂ ವಿದ್ಯಾಭ್ಯಾಸ ಮಾಡದ ಅವರು ತಂದೆಯ ಬೆಂಬಲ ಹಾಗೂ ಪ್ರೋತ್ಸಾಹದಿಂದಾಗಿ ವಿಧವೆಯಾದರೆಂಬ ಚಿಂತೆಯನ್ನು ಬದಿಗೊತ್ತಿ ತಮ್ಮ ಮುಂದಿನ ಇಡೀ ಬದುಕನ್ನು ಹೆಣ್ಣುಮಕ್ಕಳ ಸಂಕಷ್ಟ ನೋವು ಸಮಸ್ಯೆಗಳ ನಿವಾರಣೆಗೆ ಮೀಸಲಿರಿಸಿ, ಈ ಉದ್ದೇಶದ ಕಾರ್ಯಾಚರಣೆಗೆ ತಮ್ಮ ತಂದೆಯ ಮನೆಯನ್ನೇ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಮಹಾನ್ ಧೀಮಂತ ಮಹಿಳೆ ಇವರು.
     ಈ ನಿಟ್ಟಿನಲ್ಲಿ ದುಷ್ಟ ಪದ್ಧತಿ, ಅಂಧ ಆಚರಣೆಗಳ ವಿರುದ್ಧ ಪುಟಿದೇಳುವಂತೆ ಮಾಡಲು ತಮ್ಮ ಬರವಣಿಗೆಯ ಲೇಖನಿಯನ್ನೇ ಅಸ್ತ್ರವನ್ನಾಗಿಸಿಕೊಂಡರು. 1902ರಲ್ಲಿ ಅವರ ಮೊದಲ ಕವಿತೆ ‘ಭಾರತಿ ಪೊರೆಯೆನ್ನನು’ ಹೊರಬಂದಿತು. ಮಹಿಳಾ ವಿಮೋಚನಾ ಹಾದಿಯಲ್ಲಿ 1913ರಲ್ಲಿ ‘ಸತಿ ಹಿತೈಷಿಣಿ’ ಎಂಬ ಪ್ರಕಾಶನವನ್ನು ಸ್ಥಾಪಿಸಿ ‘ಸುಶೀಲೆ’ ಎಂಬ ಪ್ರಸ್ತಾವನೆಯಡಿಯಲ್ಲಿ ‘ತನಗೆ ವಿದ್ಯೆಯ ಗಂಧವಿಲ್ಲದೆ ಹೋಗಿ ತಾನು ಅಲ್ಪಮತಿಯಾದ ಸಾಮಾನ್ಯ ಸ್ತ್ರೀಯಾದರೂ ತಮ್ಮ ಸೋದರಿ ವರ್ಗಕ್ಕೆ ನನ್ನ ಕೈಲಾಗುವ ಸೇವೆ ಮಾಡಬೇಕೆಂಬ ಉತ್ಕಟೇಚ್ಛೆ ಮಾತ್ರ ಬಲವಾಗಿ ಬೇರೂರಿದೆ’ ಎಂಬುದನ್ನು ಬರೆಯುವ ಮೂಲಕವೇ ಸ್ತ್ರೀಪರ ಮೊದಲ ಮೈಲಿಗಲ್ಲು ತಲುಪಿದರು. ಯಾರ ಸಹಾಯ ಒತ್ತಾಸೆಯೂ ಇಲ್ಲದೆ ಹಲವಾರು ಬರಹ, ಪ್ರಕಟಣೆಗಳು ಹಾಗೂ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾದದ್ದು ವಿಶೇಷ ಸಾಧನೆ.
     ಅವರ ‘ಸತಿ ಹಿತೈಷಿಣಿ’ ಪ್ರಕಾಶನದ ಗ್ರಂಥಮಾಲೆಯಲ್ಲಿ 41 ಪುಸ್ತಕಗಳನ್ನು ಅವರು ಪ್ರಕಟಿಸಿದ್ದು, ಅದರಲ್ಲಿ 28 ಪುಸ್ತಕಗಳು ಅವರ ಸ್ವಂತ ರಚನೆಗಳಾಗಿದ್ದವು. ಪ್ರತಿ ಪುಸ್ತಕವೂ ಹೆಣ್ಣಿನ ಸಮಸ್ಯೆ, ಪರಿಹಾರಗಳಿಂದ ಕೂಡಿದ್ದು ಮಹಿಳೆಯರ ಪಾಲಿಗೆ ಅನರ್ಘ್ಯ ರತ್ನಗಳಾಗಿವೆ. ಕಾದಂಬರಿ, ನಾಟಕ, ಪದ್ಯ, ಪ್ರಬಂಧ, ಸಣ್ಣಕಥೆ, ಪತ್ತೆದಾರಿ, ಮಕ್ಕಳ ನಾಟಕ ಮುಂತಾದ ಪ್ರಾಕಾರಗಳಲ್ಲಿ ಸಾಧನೆಯನ್ನು ಮಾಡಿದರು. ಮಕ್ಕಳ ನಾಟಕವನ್ನು ಬರೆಯುವುದಷ್ಟೇ ಅಲ್ಲದೆ ಅವುಗಳನ್ನು ಸ್ವತಃ ಸಂಘಟಿಸಿ ನಿರ್ದೇಶಿಸುತ್ತಿದ್ದರು. ಜೊತೆಗೆ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ, ಅವರಿಗಾಗಿ ಒಂದು ಮಾಸಪತ್ರಿಕೆಯನ್ನು ಆರಂಭಿಸಿದರು.
    1917ರಲ್ಲಿ ಮೊಟ್ಟಮೊದಲ ಮಹಿಳಾ ಪತ್ರಿಕೆಯಾದ ‘ಕರ್ನಾಟಕ ನಂದಿನಿ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಈ ಪತ್ರಿಕೆಗಳನ್ನು ಪ್ರತಿತಿಂಗಳು ಹೊರತರಲು ಮನೆಯಲ್ಲಿಯೇ ಸ್ವತಃ ಮುದ್ರಣಾಲಯವನ್ನು ಹೊಂದಿದ್ದರು. ಅವರ ಪ್ರಮುಖ ಕೃತಿಗಳೆಂದರೆ ‘ಸುಶೀಲೆ, ನಭಾ, ವಿದ್ಯುಲ್ಲತಾ, ವಿರಾಗಿಣಿ, ದಕ್ಷಕನ್ಯೆ, ಮಾತೃನಂದಿನಿ, ಚಂದ್ರವದನೆ,’ ಮುಂತಾದವು. ಅವರು ತಮ್ಮ ಕೃತಿಗಳಲ್ಲಿ ಪ್ರಮುಖವಾಗಿ ವಿಧವೆಯರ ಸಮಸ್ಯೆಗಳು, ವರದಕ್ಷಿಣೆ, ಬಾಲ್ಯವಿವಾಹ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಅವರ ಕಾದಂಬರಿಗಳ ಸ್ತ್ರೀ ಪಾತ್ರಗಳು ಆತ್ಮಗೌರವಕ್ಕಾಗಿ ಹೋರಾ ಮಾಡುತ್ತಾರೆ ಮತ್ತು ಸಮಾಜ ಸೇವೆ ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಒಟ್ಟಾರೆಯಾಗಿ ಹೆಣ್ಣುಮಕ್ಕಳಿಗೆ ಅಡುಗೆಮನೆಯೇ ಸರ್ವಸ್ವ ಎಂಬ ವಿಚಾರವನ್ನು ತಿರುಮಲಾಂಬರವರು ತಿರಸ್ಕರಿಸುತ್ತಾರೆ.
     ಇಷ್ಟೆ ಅಲ್ಲದೆ ಆಕೆ ಮನೆಮದ್ದನ್ನು ಮಾಡುತ್ತಾ ಹಳ್ಳಿಯವರ ಸೇವೆ ಮಾಡುತ್ತಾರೆ ಜೊತೆಗೆ ಪ್ಲೇಗ್ ಬಂದಾಗ ಸುತ್ತಮುತ್ತಲಿನ ಹಳ್ಳಿಗಳ ಜನರ ಸೇವೆಯನ್ನು ತುಂಬುಹೃದಯದಿಂದ ಮಾಡಿದ್ದಾರೆ.
     ಅವರ ಸಾಹಿತ್ಯಾಭಿರುಚಿಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳು ಅವರನ್ನು ಸತ್ಕರಿಸಿದವು. ಆ ಕಾಲದಲ್ಲಿ ಹಿಂದೂ ಸಮಾಜದ ಸ್ತ್ರೀಯರು ಸಾಮಾಜಿಕವಾಗಿ ಹೊರಕಾಣಿಸಿಕೊಳ್ಳದ ದಿನಗಳಲ್ಲಿ ವಿಧವೆಯಾಗಿಯೂ ಯಾರಿಗೂ ಲೆಕ್ಕಿಸದೆ ಸಮಾಜ ಕಾರ್ಯ, ಸಾಹಿತ್ಯ ಸೇವೆಗಳಲ್ಲಿ ತೊಡಗಿ ಇತಿಹಾಸ ಗುರುತಿಸುವಂತಹ ಮಹತ್ಕಾರ್ಯಗಳನ್ನು ಮಾಡಿ ಕೀರ್ತಿ ಸಂಪಾದಿಸಿದ ತಿರುಮಲಾಂಬರವರು ಆಗಸ್ಟ್ 31, 1982ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ತೀರಿಕೊಂಡರು. 
     ತಿರುಮಾಲಾಂಬಾರವರ ನೆನಪಿಗಾಗಿ ಬೆಂಗಳೂರಿನಲ್ಲಿ ‘ಶಾಶ್ವತಿ ಅಧ್ಯಯನ ಕೇಂದ್ರ’ ರೂಪುಗೊಂಡಿದೆ. ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಬರೆದ ಅತ್ಯುತ್ತಮ ಕೃತಿಗೆ ‘ನಂಜನಗೂಡು ತಿರುಮಲಾಂಬಾ ಪ್ರಶಸ್ತಿ’ಯನ್ನು ಪ್ರತಿವರ್ಷವೂ ಶಾಶ್ವತಿ ಸಂಸ್ಥೆ ನೀಡುತ್ತಿದೆ.  
ಈ ವರ್ಷ ಕರ್ನಾಟಕದ ಮೊದಲ ಮಹಿಳಾ ಪತ್ರಿಕೆ ಆರಂಭವಾಗಿ 100 ವರ್ಷಗಳಾಗುತ್ತಿವೆ. ಅದರ ಶತಮಾನೋತ್ಸವವನ್ನು ಆಚರಿಸುವ ಮೂಲಕ ಅವರಿಗೆ ನಮ್ಮ ನಮನಗಳನ್ನು ಸಲ್ಲಿಸಬೇಕಿದೆ. 
-   ಜಮುನಾ