Pages

ಉತ್ತರವೇನು? -1


[ಈ ಅಂಕಣದಲ್ಲಿ ಹೆಣ್ಣುಮಕ್ಕಳ ಹಲವಾರು ಸಮಸ್ಯೆಗಳನ್ನು ತರುತ್ತಿದ್ದೇವೆ. ಇದನ್ನು ಬರಹಗಾರರು ತಮ್ಮ ಕಣ್ಣುಮುಂದೆ ಕಂಡ ಬೇರೆ ಬೇರೆ ಸಮಸ್ಯೆಗಳನ್ನು ಓದುಗರ ಮುಂದಿಡುತ್ತಿದ್ದಾರೆ. ಇದರ ಬಗ್ಗೆ ಬೇರೆಬೇರೆ ಕಡೆಗಳಲ್ಲಿ ಚರ್ಚೆಯಾಗಲಿ ಎನ್ನುವುದೇ 
ನಮ್ಮ ಆಶಯ] 
ಜೀವನ ಒಂದು ನಾಟಕ ರಂಗ, ನಾ ಪಾತ್ರಧಾರಿ, ಅವ ಸೂತ್ರಧಾರ, ಅವನಿಚ್ಛೆಯೇ ಅಂತಿಮ. ಏನಾದರಾಗಲೀ ನಾ ಸಂಪೂರ್ಣ ಸೋತು ಶರಣಾದೆ ಬದುಕಿನ ಬವಣೆಗಳಿಗೆ!!! ಕ್ಷಮಿಸಿ, ಕೇವಲ ಮನದ ತಳಮಳ, ಬೇಗೆಯನ್ನ ನನ್ನೊಳಗೆ ನಾನೇ ನುಂಗಿಕೊಳ್ಳೋದ್ರಿಂದ ಏನು ಪ್ರಯೋಜನವಿಲ್ಲ. ಬಹುಶಃ ನನ್ನ ಜೀವನದ ಸಂಕಷ್ಟಗಳ ಸರಮಾಲೆಯನ್ನ ನಿಮ್ಮ ಮುಂದೆ ಬಚ್ಚಿಡೋದಕ್ಕಿಂತ ಬಿಚ್ಚಿಟ್ರೆ, ಮುಂದಿನ ಕೆಲವು ದಿನಗಳಾದ್ರೂ ಜೀವನದ ಜೊತೆ ಹೋರಾಟ ನಡೆಸಿ ಬದುಕಬಹುದೇನೋ? 
ಅಂದ ಹಾಗೆ, ನಾನು ಶಿವಾನಿ, ಓದಿದ್ದು 8 ನೇ ತರಗತಿ. ಬಡ ಹಳ್ಳಿ ಕುಟುಂಬ, ಸೇರಿದ್ದು, ಅತ್ತೆ, ಮಾವ, ನಾದಿನಿ, ಭಾವ, ಓರಗಿತ್ತಿ ಇರೋ ಮನೆಗೆ. ಅಲ್ಲಿ ನನಗೆ ಸಿಕ್ಕಿದ್ದು ಕಿರುಕುಳ, ಗುಲಾಮಗಿರಿಯ ಕೆಲಸ, ಹೀಗಾಗಿ ನೊಂದು, ಗಂಡನೊಂದಿಗೆ ಮನೆ ಬಿಟ್ಟು, ಬೆಂಗಳೂರಿನ ಮಹಾನಗರಕ್ಕೆ ಬಂದು, ಬದುಕಿ ಸಾಧಿಸಬೇಕೆಂಬ ಛಲದಿಂದ ಇದ್ದ ಅಲ್ಪ ಸ್ವಲ್ಪ ಒಡವೆ ಮಾರಿ ಬಂದ ಹಣದಿಂದ ಸಣ್ಣ ಅಂಗಡಿ ಹಾಕಿಕೊಂಡೆವು. ಅದೃಷ್ಟವಶಾತ್ ನಾವು ತುಂಬಾ ಹಣ ಸಂಪಾದಿಸಿ, ಒಳ್ಳೆಯ ಸ್ಥಾನಕ್ಕೆ ಬಂದೆವು. ನನಗೆ ಅಷ್ಟೊತ್ತಿಗೆ ಎರಡು ಸುಂದರ ಮಕ್ಕಳು. 
ಹೀಗೆ ಕಾಲಚಕ್ರ ಉರುಳುತ್ತಾ ನನ್ನ ಗಂಡ ಪರಸ್ತ್ರೀ ಸಹವಾಸ ಮಾಡಿದ, ಹಣದ ಮೋಹ, ದುರಹಂಕಾರದಿಂದ. ಆಕೆಯನ್ನು ಮನೆಗೆ ತಂದು ಇಟ್ಕೊಂಡು, ನನ್ನನ್ನು ಮಕ್ಕಳ ಸಮೇತ ಹೊರಗೆ ಹಾಕಿಯೇಬಿಟ್ಟ! ಅವನ ಕ್ರೂರತೆಗೆ ನನ್ನ ಹೃದಯ ಛಿದ್ರವಾಯಿತು.
ಇದೇ ಛಲದಿಂದ, ಗಟ್ಟಿ ನಿರ್ಧಾರ ಮಾಡಿ ಕೂಡಿಟ್ಟ ಅಲ್ಪಸ್ವಲ್ಪ ಹಣದಿಂದ ಬೇರೆ ಅಂಗಡಿ ಹಾಕಿಕೊಂಡೆ. ಆದರೆ ನನ್ನ ಗಂಡನ ಕೆಂಗಣ್ಣು ನನ್ನ ಬದುಕನ್ನೇ ನಿರ್ನಾಮಗೊಳಿಸಿತು. ಎಲ್ಲಿ ಹೋದ್ರೂ ಬಂದು ಕಿರುಕುಳ ಕೊಡುತ್ತಿದ್ದ, ಅಂಗಡಿ ಸಾಮಾನೆಲ್ಲಾ ಸುಟ್ಟು ಹಾಕಿದ. ಅವನಿಂದ ತುಂಬಾ ದೂರ ಹೋಗಿ, ಅಲ್ಲಿ ಬಾಡಿಗೆ ಮನೆ ತೆಗೆದುಕೊಂಡು, ಸಣ್ಣದಾಗಿ ವ್ಯಾಪಾರ ಶುರುಮಾಡಿದೆ. ಒಂಟಿ ಹೆಣ್ಣೆಂದು ಅರಿತ ರೌಡಿಗಳು ಛೇಡಿಸಲಾರಂಭಿಸಿ, ಕಿರುಕುಳ ಕೊಡಲಾರಂಭಿಸಿದರು.
ತವರಿಗೆ ಹೋಗೋಣ ಅಂದರೆ, ನನ್ನ ತಾಯಿ ತಂದೆ ತೀರಿಹೋಗಿದ್ದಾರೆ, ಅಣ್ಣನ ಮದುವೆಯಾಗಿದೆ. ಪರಿಸ್ಥಿತಿ ಹೀಗಿರುವಾಗ, ಸ್ವತಂತ್ರವಾಗಿ ಬದುಕುವ ಛಲ ಇದ್ದರೂ, ನನ್ನ ಗಂಡನಂತಹ ಘಾತಕರಿಂದ, ಒಂಟಿ ಹೆಣ್ಣನ್ನು ಸಮಾಜ ನೋಡುತ್ತಿರುವ ರೀತಿ, ಈ ಎರಡರ ನಡುವೆ ನನಗೆ ಹಾಗೂ ಮಕ್ಕಳಿಗೆ ಸಾವೊಂದೇ ಪರಿಹಾರ ಅನ್ನೋದು ನನ್ನ ಮನಸ್ಸಿಗೆ ಬಂದಿರುವ ಏಕೈಕ ನಿರ್ಧಾರ. 
ಹೇಳಿ, ನಾನು ಶಿವಾನಿ, ಬದುಕನ್ನು ಎದುರಿಸಲೋ ಅಥವಾ ಅತ್ಮಹತ್ಯೆ ಮಾಡಿಕೊಳ್ಳಲೊ? ನಿಮ್ಮ ಉತ್ತರವೇನು????????
ಪ್ರಸ್ತುತ ಪಡಿಸಿರುವವರು - ವಿ ಜಮುನಾ
ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ 

ಕಾಮೆಂಟ್‌ಗಳಿಲ್ಲ: