Pages

ಪ್ರಚಲಿತ - ದೌರ್ಜನ್ಯ ಮುಕ್ತ ಸಮಾಜದೆಡೆಗೆ..........



ಕಳೆದ ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾದ “ಹತ್ತು ವರ್ಷದ ಪುಟ್ಟ ಕಂದಮ್ಮ ಅತ್ಯಾಚಾರಕ್ಕೆ ಒಳಗಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ”, "ಹನ್ನೆರಡರ ಬಾಲೆ ರಸ್ತಯಲ್ಲಿ ಮಗುವಿಗೆ ಜನ್ಮ” ನೀಡಿದ ಸುದ್ದಿಯು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದ್ದು ಮಾತ್ರ ಸತ್ಯ ಹಾಗು ಏನು ಮಾಡಲಾಗದೆ ಮನ ಮಮ್ಮಲ ಮರುಗಿರುವಾಗ ಹಲವು ದಶಕಗಳ ಹಿಂದೆಯೇ ತನ್ನ ಬಳಿ ಬಂದ ಭಕ್ತೆಯರ ಮೇಲೆ ಅತ್ಯಾಚಾರವೆಸಗಿದ್ದ ಸ್ವಯಂ ಘೋಷಿತ ದೇವಮಾನವ ಹರಿಯಾಣಾದ ಭಾಭಾ ‘ರಾಮ ರಹಿಮ್’ ಜೈಲು ಸೇರಿದ್ದು ಸಂತಸ ತಂದಿತು. 
ಹೀಗೆ ಪುಟ್ಟ ಕಂದಮ್ಮಗಳ, ಕಾಲೇಜು ವಿದ್ಯಾರ್ಥಿಗಳ, ಮಧ್ಯವಯಸ್ಕ ಹೆಣ್ಣು ಮಕ್ಕಳ, ವಯೋವೃದ್ಧರ, ಭಕ್ತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇದ್ದು ಆಧುನಿಕ ಸಮಾಜ ತಲೆತಗ್ಗಿಸುವಂತಿದೆ. ಲೆಕ್ಕವಿಲದಷ್ಟು ಕಾನೂನುಗಳು ಬಂದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ಈ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದ್ದು ಇದಕೆ ಕೊನೆ ಇಲ್ಲದಂತಾಗಿದೆ. ಇಂತಹ ದೌರ್ಜನ್ಯಗಳು ಒಂದು ಹೆಣ್ಣಿನ ಮೇಲಿನ ದೌರ್ಜನ್ಯ ಮಾತ್ರ ಆಗಿರದೆ ಅದು ಇಡೀ ಸಮಾಜದ ಮೇಲಿನ ದೌರ್ಜನ್ಯವಾಗಿದೆ ಹಾಗು ಅದು ಆಕೆಯ ದೈಹಿಕ ಮಾನಸಿಕ ಸ್ಥಿತಿಗತಿಗಳ ಮೇಲೆ ಮತ್ತು ಆಕೆಯ ವೈಕ್ತಿತ್ವದ ಮೇಲೊ ಗಾಢ ಪರಿಣಾಮ ಬೀರುತ್ತದೆ. 
ಒಂದೆಡೆ ಸಮಾಜದ ನಿಂದನೆಯಾದರೆ, ಇನ್ನೊಂದೆಡೆ ಆಕೆಯ ಮೇಲೆ ಬರುವ ಆರೋಪಗಳು. ಅತ್ಯಾಚಾರಕ್ಕೆ ಆಕೆಯೇ ಕಾರಣ, ಏಕೆಂದರೆ ಆಕೆಯ ಉಡುಗೆ ಮಾದಕವಾಗಿರುತ್ತದೆ, ರಾತ್ರಿ ಹೊತ್ತಲ್ಲದ ಹೊತ್ತಲ್ಲಿ ಆಕೆ ಓಡಾಡುವಳಾದ್ದರಿಂದ ಅವಳ ಮೇಲೆ ಅತ್ಯಾಚಾರಗಳು ನಡೆಯುತ್ತವೆಯೆಂದು, ನೂರೊಂದು ನಿರ್ಬಂಧಗಳನ್ನು ಹಾಕುವುದರ ಮೂಲಕ ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಹೆಚ್ಚಾಗುತ್ತಿದೆ.  

ಏಕೆ ಈ ದೌರ್ಜನ್ಯಗಳು?
ಅತ್ಯಾಚಾರವೆಂಬುದು ಹೆಣ್ಣಿನ ಶೀಲದ ಸುತ್ತ ಎಳೆದಿರುವ ಒಂದು ಷಡ್ಯಂತ್ರವಾಗಿದೆ. ಅತ್ಯಾಚಾರವಾದಾಗ  ದೂರುವುದು ಹೆಣ್ಣನ್ನೇ ಹೊರತು, ಈ ಪುರುಷಪ್ರಧಾನ ವ್ಯವಸ್ಥೆಯನ್ನಲ್ಲ, ಅತ್ಯಾಚಾರಿಯ ಮನಸ್ಥಿತಿಯನ್ನಲ್ಲ. ಜಾತಿ, ಧರ್ಮ, ಸಂಪ್ರದಾಯ, ಮುಂತಾದವುಗಳ ಹೆಸರಿನಲ್ಲಿ ನಿರಂತರವಾಗಿ ಆಕೆಯ ಮೇಲೆ ದೌರ್ಜನ್ಯಗಳು ಈ ಆಧುನಿಕ ಯುಗದಲ್ಲೂ ನಡೆಯುತ್ತಿದೆ ಎಂದರೆ ಆಶ್ಚರ್ಯವಾಗುತ್ತದೆ. ಅತ್ಯಾಚಾರದ ಮೂಲಕ ಹೆಣ್ಣನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಇರುವ ಮಾರ್ಗವಾಗಿದ್ದು ಅದನ್ನು ವಸ್ತ್ರಸಂಹಿತೆಯ ಮೂಲಕ, ಕೌಟುಂಬಿಕ ರೀತಿ-ನೀತಿಗಳ ಮೂಲಕವಿರಬಹುದು, ಧರ್ಮ-ಸಂಪ್ರದಾಯದ ಮುಖೇನ ಇರಬಹುದು - ನಿಯಂತ್ರಣವನ್ನು ತರಲು ಪ್ರಯತ್ನಗಳು ನಡೆಯುತ್ತಲೇ ಇದೆ. 
ರಾಜಕೀಯ ಪಕ್ಷಗಳು, ಮಾಧ್ಯಮಗಳು ಸಂತ್ರಸ್ತೆಯನ್ನು ಬೆತ್ತಲಾಗಿಸುತ್ತದೆಯೇ ವಿನ: ಇದ್ದಕ್ಕೆ ಕಾರಣವಾದವರನ್ನಲ್ಲ. ಹರಿಯಾಣದ ಸ್ವಯಂಘೋಷಿತ ಬಾಬಾ ಅಪರಾದಿಯೆಂದು ಸಾಬೀತಾದ ನಂತರವೋ ಆತನನ್ನು ಹೆಲಿಕಾಫ್ಟರನಲ್ಲಿ ಕರೆದುಕೊಂಡು ಹೋದದ್ದು, ಆತನ ಬ್ರೀಫ್ಕೇಸನ್ನು ಓರ್ವ ಉಪ – ಅಡ್ವೂಕೇಟ್ ಜನರಲ್ ಹಿಡಿದು ನಡೆದದ್ದು ಯಾವ ಸಂದೇಶವನ್ನು ರವಾನಿಸುತ್ತದೆ? ಇಂತಹ ಪ್ರಕರಣಗಳಲ್ಲಿ ಸೂಕ್ಷ್ಮತೆಯನ್ನು ಮೆರೆಯಬೇಕಾದ ಸಮಾಜವು ಇದಕ್ಕೆ ಪುಷ್ಠೀ ನೀಡಿದರೆ ಏನಾದೀತು? ಒಬ್ಬ ಅತ್ಯಾಚಾರಿಯನ್ನು ಬೆಂಬಲಿಸಿ ಜನ ಹಿಂಸಾಚಾರಕ್ಕೆ ಇಳಿದಿರುವುದಂತು ದುರದೃಷ್ಠವೇ ಸರಿ. ಅತ್ಯಾಚಾರಿಯನ್ನು ಶಿಕ್ಷಿಸಿ ಎಂದು ಜನ ಕ್ಯಾಂಡಲ್ ಹೊತ್ತಿಸಿ ಒಂದೆಡೆ ಮೆರವಣಿಗೆಗೆ ಹೋದರೆ, ಇನ್ನೊಂದೆಡೆ ಆತನನ್ನು ಬಂದಿಸಿದ್ದಕ್ಕೆ ಜನ ಮೆರವಣಿಗೆ ಹೊರಟಿರುವುದು ಇಲ್ಲಿ ಮಾತ್ರವೇ ನಡೆಯುವ ಘಟನೆ.
ಅತ್ಯಂತ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಸ್ಕಾಂಡಿನೀವಿಯಾದ ರಾಷ್ಟ್ರಗಳಲಿಯೂ ಈ ವಿದ್ಯಮಾನವನ್ನು ಕಾಣುತ್ತೇವೆ. ಹೆಣ್ಣಿನ ಮೇಲೆ ಒಂದಲ್ಲ ಒಂದು ವಿಧದಲ್ಲಿ ನಿಯಂತ್ರಣ ತರುವುದರ ಮೂಲಕ ಪುರುಷಪ್ರಧಾನ ವ್ಯವಸ್ಥೆಯು ಆಕೆಯು ಸದಾ ಈ ಮೌಲ್ಯಗಳನ್ನು ಪಾಲಿಸಬೇಕೆಂದು ಬಯಸುತ್ತದೆ. ಈ ಪ್ರಕ್ರಿಯೆಯಲ್ಲಿ ಪುರುಷಾಹಂಕಾರಕ್ಕೆ  ಅಲ್ಪ ಜಯ ಲಬಿಸಿದರೊ ಅದು ಸಮಾಜ ವಿರೋಧಿ ನಿಲುವು ಎಂಬುದನ್ನು ಎಲ್ಲರು ಒಪ್ಪುವರು. ಆದ್ದರಿಂದ ಅತ್ಯಾಚಾರವನ್ನು ಕೊನೆ ಹಾಕಬೇಕಾದರೆ ಅದು ಹೆಣ್ಣಿನ ಅಭಿವ್ಯಕ್ತಿಯನ್ನು ನಿರ್ಬಂಧಿಸುವುದರಿಂದಲ್ಲ, ಬದಲಿಗೆ ಅತ್ಯಾಚಾರ ಎಸಗುವವರಿಗೆ ಉಗ್ರ ಶಿಕ್ಷೆ ವಿಧಿಸುವುದರಿಂದ. 

- ಗಿರಿಜಾ ಕೆ. ಎಸ್.


ಕಾಮೆಂಟ್‌ಗಳಿಲ್ಲ: