ಇದರ ಅಂಗವಾಗಿ ಈ ಕವನ. ಈ ಕವನದಲ್ಲಿ ನಾನು ಪ್ರೇಕ್ಷಕ ಮತ್ತು ನಿರೂಪಣೆ ಮಾಡುತ್ತಾ ಹೋಗಿರುವುದು, ನೇತ್ರಸೇನನ ಪತ್ನಿ ಎಂಬುದು ನನ್ನ ಕಲ್ಪನೆ.
ಚಿತ್ತಗಾಂಗಿನ ಬಂಡಾಯದ ನಂತರ ಬ್ರಿಟಿಷ್ ದಬ್ಬಾಳಿಕೆಯು ಮಿತಿ ಮೀರಿದ ಸಂದರ್ಭದಲ್ಲಿ ಜನ ಹೋರಾಟಗಳನ್ನು ಕಟ್ಟುವ ನಿಟ್ಟಿನಲ್ಲಿ ಭೂಗತರಾಗುವ ಬಂಡಾಯದ ನೇತಾರ ಸೂರ್ಯಸೇನರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವ ನೇತ್ರಸೇನ. ಇಂತಹ ನೇತ್ರಸೇನ ತನ್ನ ಮನೆಯಲ್ಲಿ ಪತ್ನಿಯೊಡನೆ ಊಟ ಮಾಡುವ ಸಂದರ್ಭದಲ್ಲಿ, ಸೂರ್ಯಸೇನರ ಅಭಿಮಾನಿಯೊಬ್ಬ ಕೊಲೆ ಮಾಡುತ್ತಾನೆ. ಅ ವ್ಯಕ್ತಿಯನ್ನು ಬ್ರಿಟಿಷ್ ಸರ್ಕಾರ ಸೆರೆಹಿಡಿದು ಅ ವ್ಯಕ್ತಿಯನ್ನು ಗುರುತಿಸುವಂತೆ ಆಕೆಯನ್ನು ಒತ್ತಾಯಿಸುತ್ತದೆ. ಆದರೆ ಅ ಮಹಿಳೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ದ್ರೋಹ ಬಗೆದ, ತನ್ನ ಗಂಡನನ್ನು ತನ್ನ ಕಣ್ಣೆದುರೇ ಕೊಲೆ ಮಾಡಿದವರನ್ನು, ಗುರುತಿಸಲು ನಿರಾಕರಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾಳೆ.}
ನನ್ನ ಗಂಡನನ್ನು ಕೊಂದವನ ಹೆಸರು ಹೇಳಲಾರೆ...
ಎಂಬ ಚೀತ್ಕಾರ ಕಿವಿಯನ್ನು ಅಪ್ಪಳಿಸಿತು
ಏಕೆ ಎಂಬ ಪ್ರಶ್ನೆಗೆ ಮರುತ್ತರ ಅತ ನಂಬಿಕೆ ದ್ರೋಹಿ....
ಆತ ಹಿಡಿದು ಕೊಟ್ಟದ್ದು ಕೇವಲ ವ್ಯಕ್ತಿಯನ್ನಲ್ಲ.
ಬದಲಾಗಿ ಚಿತ್ತಗಾಂಗ್ ನ "ಶಕ್ತಿ"ಯನ್ನು, ನನ್ನ "ದಾದಾ" ನನ್ನು....
ಯಾವುದೋ ಶಬ್ದ ಕೇಳಿದಂತೆ ಕಿವಿಗಳು ನೆಟ್ಟಗಾದವು
ಆ ಅಕ್ಷರಸ್ಥ ಮಹಿಳೆ ಹೇಳುತ್ತಾ ಹೋದಳು...
ನಾ ಕೇಳುತ್ತಾ ನಿಂತೆ ನಿಬ್ಬೆರಗಾಗಿ,ಅ ಸವ್ಯಸಾಚಿ ಮಾಸ್ಟರ್ ದಾ ನ
ಕಥೆಯನ್ನು, ಅಲ್ಲಲ್ಲ ಸಾಹಸಗಾಥೆಯನ್ನು - ಕಿಕ್ಕಿರಿದ ಜನರ ನಡುವೆ
ಅದೇ ಅ ವ್ಯಕ್ತಿ ಬೋಳು ತಲೆಯ ಶಿಕ್ಷಕ
ವಿದ್ಯಾರ್ಥಿಗಳ ನೆಚ್ಚಿನ ಅಣ್ಣ,
ಚಿತ್ತಗಾಂಗ್ ನ "ಸವ್ಯಸಾಚಿ"
ಆತನೇ ನನ್ನ ಅಣ್ಣ ಸೂರ್ಯಸೇನ
ಆತನ ಊರು ಚಿತ್ತಗಾಂಗ್ ನ ನವಪಾಡ,
ಅಪ್ಪ ರಾಮ ನಿರಂಜನಸೇನ್ ಇಷ್ಟೇ
ಆತನ ಪೂರ್ವಾಪರ. ನಂತರ ಅತ "ಅನುಶೀಲನ"
ನಂತರ ಕ್ರಾಂತಿಯ "ಯುಗಾಂತರ"
ಪ್ರಭಾವ ಬೀರಿತು ನನ್ನ ಅಣ್ಣನ ಮೇಲೆ
ಜಲಿಯನ್ ವಾಲಾಬಾಗದ ಅ "ಹತ್ಯಾಕಾಂಡ".
ಭಾರತೀಯರ ಮೇಲೆ ನಡೆದ ಅ "ಹತ್ಯಾಚಾರ".
ಅ ಮೇಲೆ ಶುರುವಾಯಿತು ನೋಡಿ ಒಂದು ಹೊಸ ಅಧ್ಯಾಯ
ಮೊಳಗಿತು ಕ್ರಾಂತಿಯ ಕಹಳೆ ನಿಶ್ಯಬ್ದವಾಗಿ
ಹಸಿರು ಚಿತ್ತಗಾಂಗ್ ನ ಪರಿಸರದಲ್ಲಿ,
ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನದ ಜೊತೆಗೆ
ಲೋಕದ ಜ್ಞಾನ, ಶೋಷಣೆ ವಿರುದ್ಧದ ಕದನ
"ಸಾವಿಗೆ ಅಂಜದವರೇ ಮುಂದೆ ಬನ್ನಿ" ಎಂಬ ಅಣ್ಣನ ಕೂಗಿಗೆ,
ಒಟ್ಟುಗೂಡಿತು ಜೀವಕ್ಕೆ ಜೀವ ಕೊಡುವವರ ಮಹಾದಂಡು....
ಅನಂತ್ ಸಿಂಗ್, ಗಣೇಶ್ ಘೋಷ್, ಕಲ್ಪನಾ ದತ್ತ,
ಪ್ರೀತಿಲತಾ ಮುಂತಾದವರ ಒಳಗೊಂಡು,
ಸಾಕ್ಷಿಯಾಯಿತು ಚಿತ್ತಗಾಂಗ್ ನ ನೆಲ ಕ್ರಾಂತಿಯ ವಿಜಯಕ್ಕೆ....
ಕಳೆಗಟ್ಟಿತ್ತು ಹೊಸ ಸ್ವರಾಜ್ಯ ಸರ್ಕಾರ
ಒರೆಸಲು, ಬಡಜನತೆಯ ಕಣ್ಣೀರಾ....
ನನ್ನಣ್ಣನೇ ಆದರ ನೇತಾರ.
ಅ ಸಂತಸ ಉಳಿಯಲಿಲ್ಲ ಹೆಚ್ಚು ದಿನ.
ತೀವ್ರವಾಯಿತು ಬಲಾಢ್ಯ ಶತ್ರುವಿನ ದಾಳಿ.
ಚದುರಿತು ಆ ದಂಡು ಶತ್ರುವ ಎದುರಿಸುತ್ತಾ,
ತನ್ನವರ ಕಳೆದುಕೊಂಡು
ಸಾವಿಗೆ ಕೊರಳೊಡ್ಡಿ,
ಶತ್ರುವ ಹುಟ್ಟಡಗಿಸುವ ಹೊಸ ಕನಸ ಹೊತ್ತು
ನಿಟ್ಟುಸಿರ ಬಿಟ್ಟಳಾಕೆ ಏನನ್ನೋ
ನೆನೆಸಿಕೊಂಡವರಂತೆ, ಏನೋ ಕಳೆದಂತೆ
ಏನೆಂದು ನಾ ಪ್ರಶ್ನಿಸ ಹೋದೊಡೆ
ಮುಂದುವರೆಸಿದಳು ಗೆಲುವಾಗಿ
ಅ ಮೂರು ವರುಷ..ಮೂರು ವರುಷ..
"ಬ್ರಿಟಿಷ್ ದಬ್ಬಾಳಿಕೆಗಳ ವರುಷ"
ಬಡಿದರು-ಕಾಡಿದರು ಜನವ,
ಲೆಕ್ಕಿಸದೇ ಬಾಲ-ವೃದ್ದ, ಹೆಣ್ಣು-ಗಂಡು,
ಗಣಿಸದೇ ಹಿಂದೂ-ಮುಸ್ಲಿಮ....
ಆದರೂ ಬಾಯಿ ಬಿಡಲಿಲ್ಲ ನನ್ನ ಜನ...
ಆದರೆ ಒಂದು ದಿನ ಆ ಕರಾಳ ದಿನ
ತನ್ನ ತಂಗಿಯ ನೋಡಲೆಂಬಂತೆ ಬಂದಿದ್ದ ಅಣ್ಣ ನಮ್ಮ ಮನೆಗೆ.
ಚಪ್ಪರಿಸಿ ಊಟವ ಮಾಡತೊಡಗಿದ್ದ ತನ್ನ ಎಂದಿನ ಹಾಸ್ಯದೊಂದಿಗೆ,,
ತಕ್ಷಣವೇ ಬಂದರು ಅ ಯಮದೂತರು!
ನನ್ನ ಪತಿಯ ಬೆನ್ನಿಗಿರಿಸಿಕೊಂಡು....
ಅಂದೇ ಕೊನೆ, ನಾನು ನೋಡಿದ್ದು ನನ್ನಣ್ಣನ.....
ಚಿತ್ತಗಾಂಗಿನ "ಸ್ವರಾಜ್ಯ ಸೂರ್ಯನ"..
ಸಾವಿರಾರು ಜನಕ್ಕೆ ಸ್ಪೂರ್ತಿ ನೀಡಿದ
ಸ್ವಾತಂತ್ರ್ಯದ ಧೀರ ಹುತಾತ್ಮನ....
ಅ ಮೇಲೆ ನಡೆದದ್ದು ವಿಚಾರಣೆ ಎಂಬ ನಾಟಕ
ಮೊದಲೇ ಸಿದ್ಧವಾಗಿತ್ತು ಗಲ್ಲುಗಂಬದ ಪಾತಕ.!
ಆತ ಭಾಷಣಗಳನ್ನು ಮಾಡಿದ್ದು ನಾ ಕಾಣೆ...
ಆಡಂಬರದ ಮಾತುಗಳು ಅಪರೂಪ,
ಸಂದೇಶಗಳನ್ನು ನೀಡಿದ ಪ್ರವಾದಿಯಂತೂ ಅಲ್ಲವೇ ಅಲ್ಲ.!!
ಆದರೆ ಆತ ಗಳಿಸಿದ್ದು, ಕಲಿಸಿದ್ದು ಜನಗಳ ಪ್ರೀತಿ,
ಸ್ವರಾಜ್ಯವ ಗೆಲ್ಲುವ ರೀತಿ...
ಕೆಲವು ಜನ ಆತ ಕ್ರೂರಿ ಎಂದರು, ಕಠಿಣ ಹೃದಯಿ ಎಂದು ಶಪಿಸಿದರು..
ಆದರೆ ಆತ ಮಲ್ಲಿಗೆಯ ಹೃದಯಿ..
ತೊಟ್ಟ ಗುರಿಯ ಸಾಧಿಸಲು ಪಣತೊಟ್ಟ ಸವ್ಯಸಾಚಿ.
ಅವನ ಆಕೃತಿ ಕಲ್ಲು ಪೆಟ್ಟಿಗೆ, ಮನಸ್ಸು ಮಲ್ಲಿಗೆ.
ಆತ ಕಣ್ಣೀರಿಟ್ಟಿದನ್ನು ನೀವು ಗಮನಿಸಿದ್ದಿರಿಯೇ?
ದುಃಖದಲ್ಲಿ ಆತನ ಕಣ್ಣು ಮಂಜಾಗಿದ್ದು ಗೋತ್ತೇ?
ಮಕ್ಕಳಂತಹ ಶಿಷ್ಯಂದಿರನ್ನು ಕಳೆದುಕೊಂಡಾಗ...
ತಂಗಿಯಂತಹ ಪ್ರೀತಿಲತಾ ಹುತಾತ್ಮಳಾದಾಗ.....
ಕಥೆಯ ಮುಗಿಸುತ್ತಾ ನನ್ನನ್ನು ಕೇಳಿದಳಾಕೆ...
ನನ್ನಣ್ಣನ ಸಮ ಸಮಾಜದ ಕನಸನ್ನು ಈಡೇರಿಸಲು,
ನೀವು ತನ್ನೊಡನೆ ಕೈ ಜೋಡಿಸುವಿರಾ?
ಎಂದು ಭೋರ್ಗರೆತದ ಅಳುವಿನಲ್ಲಿಯೂ, ದಿಟ್ಟ ಸಂಕಲ್ಪದೊಂದಿಗೆ.........
ನಾನು ಏನೆಂದು ಉತ್ತರ ಕೊಡಲಿ ಈ ತೀಕ್ಷ್ಣ ಪ್ರಶ್ನೆಗೆ ???
- ಬಿ.ಎನ್. ಆಕಾಶ್ ಕುಮಾರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ