Pages

ಪುಟ್ಕಥೆಗಳು

ಪುಟ್ಕಥೆ - ೧

ದೈಹಿಕ ಶ್ರಮ ಹೆಚ್ಚೋ ಮಾನಸಿಕ ಶ್ರಮ ಹೆಚ್ಚೋ ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅಲ್ಲಿಯೇ ಹಪ್ಪಳ ಮಾಡುತ್ತಿದ್ದ ಅನಕ್ಷರಸ್ಥ ಅಕ್ಕ ಹೇಳಿದಳು "ಬರೀ ಓದಿದರೆ, ಮಾತನಾಡಿದರೆ ಊಟ ಎಲ್ಲಿಂದ ಸಿಗುತ್ತದೆ?" ಕೇಳಿದಳು. ಇವಳಿಗೇನು ಮಹಾ ಗೊತ್ತು ಎಂದುಕೊಂಡು ಉತ್ತರಿಸಲು ಬಾಯಿ ತೆಗೆಯುವಷ್ಟರಲ್ಲಿ ತನ್ನ ಮಾತು ಮುಂದುವರೆಸಿದಳು, "ಆದರೆ ಓದಿಲ್ಲದೆ, ಮಾತಿಲ್ಲದೆ ಇದ್ದರೆ ಬರೀ ಕಾಯಕ ಮಾಡುವುದು ಜೀತ ಮಾಡಿದ ಹಾಗೆ. ಎರಡೂ ಇದ್ದರೆ ಅಗೋ ಅವರಂತಾಗಬಹುದು!" ಅಲ್ಲಿ ವಿಶ್ವೇಶ್ವರಯ್ಯ, ಬಸವಣ್ಣ, ಸಾವಿತ್ರಿಬಾಯಿ, ಜ್ಯೋತಿಭಾರವರ ಫೋಟೊಗಳು ಕಂಡವು!!

ಪುಟ್ಕಥೆ - ೨
"ಮದುವೆಯಾಗಿ ಇನ್ನೂ ಮೂರು ತಿಂಗಳಾಗಿಲ್ಲ, ಆಗಲೇ ವಿಚ್ಛೇದನವೇ?" ಅಪ್ಪ ಅಪ್ಪ ಕೂಗಾಡಿದರು.
ಅವಳ ಮೈಮೇಲೆ ರಕ್ತ ಹೆಪ್ಪುಗಟ್ಟದಿರುವ ಒಂದಿಂಚು ಜಾಗವೂ ಕಾಣಿಸದಾಗ ಅವಳನ್ನು ಅಪ್ಪಿ, ಅತ್ತುಕೊಂಡೇ ಅವಳ ನಿರ್ಧಾರದ ಜೊತೆ ನಿಲ್ಲಲು ನಿರ್ಧರಿಸಿದರು!!

ಪುಟ್ಕಥೆ - ೩
ಸಾಯಳಾಕೆ ಫಿನಾಯಿಲ್ ಬಾಟಲ್ ಕೈಗೆತ್ತಿಕೊಂಡಳು.
"ನನ್ನಮ್ಮ ಇರುವವರೆಗೂ ನನಗೆ ಯಾವ ಕಷ್ಟವೂ ಇಲ್ಲ" ಮಗಳ ಮಾತನ್ನು ಕೇಳಿ ಅವಳ ಕೈಯಿಂದ ಬಾಟಲ್ ಜಾರಿ ಕೆಳಗೆ ಬಿದ್ದು ಛಿದ್ರವಾಯಿತು, ಹಾಗೆಯೇ ಅವಳ ನಿರ್ಧಾರವೂ ಸಹ!!

ಪುಟ್ಕಥೆ - ೪
"ಅಷ್ಟೊಂದು ಗೆಳತಿಯರಲ್ಲಿ ಅವಳಿಗೆ ಮಾತ್ರ ಏಕಷ್ಟು ಪ್ರಾಮುಖ್ಯತೆ?"
"ಕಾರ್ಗತ್ತಲಿನಲ್ಲಿ ಹಣತೆ ಹಿಡಿದವರು ತಾನೇ ಮಾನ್ಯರು!!"

ಪುಟ್ಕಥೆ - ೫
"ಅಲ್ಲಮ್ಮ ನನಗಿಂತ ಹೆಚ್ಚಾಗಿ ಅವಳನ್ನು ನೋಡಿಕೊಳ್ಳುತ್ತಿದ್ದೀಯಲ್ಲ?" ಪ್ರಶ್ನಿಸಿದಳು ಮಗಳು.
"ನನ್ನಂತೆ ನಿನ್ನನ್ನು ಪ್ರೀತಿಸಬಲ್ಲ ವ್ಯಕ್ತಿ ನನ್ನ ನಂತರವೂ ನಿನ್ನ ಬಗ್ಗೆ ಕಾಳಜಿ ವಹಿಸಬಲ್ಲ ವ್ಯಕ್ತಿಯ ಬಗ್ಗೆ ನಾನು ಕಾಳಜಿ ವಹಿಸಬಾರದೇ?"

ಪುಟ್ಕಥೆ - ೬
"ಇತರಿಗಾಗಿ ಅಷ್ಟು ತಲೆ ಕೆಡಿಸಿಕೊಳ್ಳುವುದು ಅವಶ್ಯವೇ? ಬೇರೆಯವರೆಲ್ಲ ಕಣ್ಣು ಮುಚ್ಚಿ ಕುಳಿತಿಲ್ಲವೇ?"
"ಹೊರಗಿನ ಕಣ್ಣನ್ನು ಮುಚ್ಚಿಕೊಳ್ಳಬಹುದು, ಆದರೆ ಒಳಗಿನ ಕಣ್ಣನ್ನು ಹೇಗೆ ಮುಚ್ಚಿಕೊಳ್ಳಲಿ?"

ಪುಟ್ಕಥೆ - ೭
"ಸಾಯಬೇಕೆಂದು ಹೇಗೂ ನಿರ್ಧರಿಸಿದ್ದೀಯ. ಹತ್ತು ನಿಮಿಷ ಯೋಚನೆ ಮಾಡು - ಸತ್ತು ನೋವನ್ನು ಹರಡುತ್ತೀಯೊ, ಬದುಕಿ ಖುಷಿಯನ್ನು ಹರಡುತ್ತೀಯೊ,  ನಿರ್ಧರಿಸಿ, ಅದರಂತೇ ಮಾಡು" ಹೇಳಿದಳಾಕೆ ಗೆಳತಿಗೆ!!

ಪುಟ್ಕಥೆ - ೮

"ನೀನು ಯಾವುದಕ್ಕೂ ಕ್ಷಮೆ ಕೇಳಬೇಕಿಲ್ಲ. ನಿನ್ನಿಂದ ಚಿಕ್ಕಂದಿನಲ್ಲಿ ಅಮ್ಮನಿಂದ ತುಂಬಾ ಏಟು ತಿಂದಿದ್ದೇನೆ ನಿಜ. ಆದರೆ ನಾನು ಹೊಳೆಯಲ್ಲಿ ಮುಳುಗಿ ಹೋಗುತ್ತಿದ್ದಾಗ ನಿನಗೆ ಪೂರ್ತಿ ಈಜು ಬಾರದಿದ್ದರೂ ನನ್ನನ್ನು ಉಳಿಸಲು ನೀರಿಗೆ ಹಾರಿದ್ದೂ ಸಹ ನಿಜವಲ್ಲವೇ? ಮೊದಲನೆಯದನ್ನು ನೆನೆಸಿಕೊಂಡಾಗ ನಗು ಬರುತ್ತೆ, ಆದರೆ ಎರಡನೆಯದನ್ನು ನೆನೆಸಿಕೊಂಡಾಗ....." ಅಕ್ಕ ಭಾವುಕಳಾಗಿ ಅಳುವುದನ್ನು ಕಂಡಳು ತಂಗಿ!!

ಪುಟ್ಕಥೆ - ೯
"ಬಹಳ ಸಾಹಸ ಮಾಡುತ್ತಿದ್ದೀಯ ಎನಿಸುತ್ತೆ, ಮತ್ತೊಮ್ಮೆ ಯೋಚಿಸು, ಆ ಕೆಲಸ ಮಾಡಬೇಕೆ ಬೇಡವೇ ಎಂದು" ಗೆಳತಿ ಹೇಳಿದಳು.
"ಎಲ್ಲವನ್ನು ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿರುವುದು. ಒಂದು ವೇಳೆ ನಾನು ಸಾಧಿಸಿದರೆ  ಬೇರೆ ಸೋತಟಟರೆ ನನಗೇ ಒಂದು ಪಾಠವಾಗುತ್ತೆ!"

ಪುಟ್ಕಥೆ - ೧೦
"ಅಮ್ಮ ಇರುವುದೇ ಒಂದು ಜೀವನ, ಇಷ್ಟೆಲ್ಲಾ ಚಿಂತಿಸಿ ಆರೋಗ್ಯ, ನೆಮ್ಮದಿ ಹಾಳುಮಾಡಿಕೊಳ್ಳಬೇಕೆ? ಯೋಚಿಸಿ ಪರಿಹಾರ ಹುಡುಕೋಣ ಬಾ"  ಮಗಳು ಸಮಾಧಾನಪಡಿಸಿದಾಗ, ಆ ತಾಯಿಗೆ ಮಗಳಿಗೆ  ಕೊಡಿಸಿದ್ದು ಸಾರ್ಥಕವೆನಿಸಿತು!!

ಸುಧಾ.ಜಿ   


1 ಕಾಮೆಂಟ್‌:

Rajiv Magal ಹೇಳಿದರು...

ಸ೦ಪೂರ್ಣ ನಕಾರಾತ್ಮಕ ಆಲೋಚನೆ ಕೊ೦ಚ ಬದಲಾದ೦ತಿದೆ...ಈ ಮಾದರಿಯ ಚೇ೦ಜ್ ಪರವಾಗಿಲ್ಲ!