Pages

“ಏನಾದರೂ ಆಗು, ಮೊದಲು ಮಾನವನಾಗು” - ಎಂದು ತಿಳಿವುದೋ ಮನುಜಕುಲ


{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿರುವುದನ್ನು, ಆ ದ್ವೇಷ ದಂಗೆಗಳಾಗಿ ಮಾರ್ಪಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ, ಜೀವಹರಣವಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಯಾವುದೇ ರೀತಿಯ ಗಲಭೆಗಳಾದಾಗಲೂ ಅದಕ್ಕೆ ಹೆಚ್ಚು ಬಲಿಯಾಗುವುದು, ಅವಮಾನಕ್ಕೊಳಗಾಗುವುದು, ನಷ್ಟಕ್ಕೊಳಗಾಗುವುದು ಹೆಣ್ಣುಮಕ್ಕಳೇ. 
ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದ್ವೇಷದಿಂದ ನಾವೇನೂ ಸಾಧಿಸಲು, ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ನಾವು ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ತಮ್ಮ ಹಿತಾಸಕ್ತಿಗಾಗಿ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ನಾವು ನೀವೆಲ್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಅನಿಸಿಕೆ, ಅಭಿಪ್ರಾಯಗಳನ್ನು, ಬರಹಗಳನ್ನು, ಕವನಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಮಹಾನ್ ಕವಿಗಳಲ್ಲೊಬ್ಬರಾದ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಕವನ}

ಎಂದು ತಿಳಿವುದೋ ಮನುಜಕುಲ ತಾನು ಒಂದೆಂದು
ಬಿಳಿಯವನು ಕರಿಯವನ ತುಳಿಯುವುದು, ಯೇಹೂದ್ಯ
ತನಗೆ ದೇವರಿಗೆ ಏನೋ ಹೆಚ್ಚಿಕೆಯ ಬಾಧ್ಯ
ಇದೆ ಎನುತ ಬೀಗುವುದು, ಬ್ರಹ್ಮಮುಖದಿಂದಂದು
ಹೊರಟು ಬಂದೆವು ನಾವು ನಮಗಾರು ಸರಿಯೆಂದು
ಮತ್ತೊಬ್ಬನುಬ್ಬಿ ಉಳಿದೆಲ್ಲರನು ಹಳಿಯುವುದು,
ನಾವಿಂತು ಒಂದೊಂದು ಡಂಭದಲಿ ಕೊಳೆಯುವುದು,
ಎಂದು ಬಿಡುವೆವೂ ಜಗನ್ನಾಯಕನ ಕೃಪೆ ಸಂದು.
ಬಿಸಿಲಿನಲಿ ಮಲಗಿರುವ ತಾಯ ಮೊಲೆಯೆಡೆ ಸೇರಿ
ಎರಡು ಕಣ್ತೆರೆದ, ಒಂದನು ತೆರೆದ, ಒಂದನೂ
ತೆರೆಯದಿಹ ನಾಯಿಮರಿ, ಹುಟ್ಟಿದೆರಡನೆಯ ದಿನ, 
ಒಂದರೊಡನೊಂದು ಕಚ್ಚಾಡಿ, ಹೋಗೋ ಭಿಕಾರಿ,
ಹೋಗೋ ಬೆರಕೆ, ತೊಲಗು ನಾಯಲ್ಲ ಹಂದಿ ನೀ,
ಎಂದು ಕಾದುವ ತೆರದೆ ಕಾದುತಿದೆ ಜಗದ ಜನ.
      - 

ಕಾಮೆಂಟ್‌ಗಳಿಲ್ಲ: