Pages

ವ್ಯಕ್ತಿ ಪರಿಚಯ - ಶ್ಯಾಮಲಾ ಬೆಳಗಾಂವ್ಕರ್



"ನಮ್ಮ  ಕವಿಕುಲದಲ್ಲಿ ನಾರಿಯರ ಹೆಸರುಗಳೇ ಕೇಳಿ ಬರುವುದಿಲ್ಲ, ಇದ್ದರೆ ಒಂದೆರಡಿರಬಹುದು. ಈ ಪರಿಸ್ಥತಿಗೆ ಆಗಿನ ಸಮಾಜ ಪದ್ಧತಿಯಲ್ಲಿ ಸ್ತ್ರೀಗಿದ್ದ ನಿಕೃಷ್ಟತೆ, ನಿರಕ್ಷರತೆ, ಪ್ರೋತ್ಸಾಹಹೀನತೆ ಮೊದಲಾದವೇ ಕಾರಣವೆಂಬುದು ನಿಸ್ಸಂದೇಹ. ಇದು ನಮ್ಮ ಸಾಹಿತ್ಯದ ಬೆಳವಣಿಗೆಯನ್ನು ಅರ್ಧದಷ್ಟು ಕುಗ್ಗಿಸಿದೆ" ಎಂದವರು ಮತ್ತಾರೂ ಅಲ್ಲ ಲೇಖಕಿ ಶ್ಯಾಮಲಾ ಬೆಳಗಾಂವ್ಕರ್. 

ಇವರ ಜನ್ಮದಿನಾಂಕದ ಬಗ್ಗೆ ನಿಖರವಾಗಿ ತಿಳಿದಿಲ್ಲ. 1910 ಅಥವಾ 1911 ಎಂಬುದರ ಬಗ್ಗೆ ಗೊಂದಲವಿದೆ. ಇವರು ಧಾರವಾಡದಲ್ಲಿ ಜನಿಸಿದರು. ತಮ್ಮ ಹುಟ್ಟೂರಿನಲ್ಲಿ ಮೆಟ್ರಿಕ್ ವರೆಗೆ ಓದಿದರು. ಇವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಭಾಷೆಯ ಅಭಿಮಾನಿಯಾಗಿದ್ದರು. ಇವರಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಅರಿವೂ ಇತ್ತು.

ಇವರು ಸರಳತೆ, ಆತ್ಮೀಯತೆ, ಸ್ನೇಹಪರತೆ, ಉದಾರತೆಗೆ ಹೆಸರುವಾಸಿಯಾಗಿದ್ದರು. ಇವರು ತುಂಬಾ ಉತ್ಸಾಹಿ ಹಾಗೂ ದೃಢಮನಸ್ಕರು. ಯಾವುದೇ ಅಡೆತಡೆ ಬಂದರೂ ತಾವು ಹಿಡಿದ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು.

ಇವರದು ಅಂತರ್ಜಾತಿಯ ವಿವಾಹ. ಸಾಹಿತ್ಯ ಕಲಾವಿದ ಚಿತ್ರಕಾರರಾಗಿದ್ದ ಬೆಳಗಾಂವಿ ರಾಮಚಂದ್ರರಾಯರನ್ನು ವಿವಾಹವಾದರು. ಪತಿ ಶ್ಯಾಮಲಾರವರ ಬರವಣಿಗೆಗೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಶ್ಯಾಮಲಾರವರ ಸಾಮಾಜಿಕ ಕಳಕಳಿಯ ಕಾರ್ಯವ್ಯಾಪ್ತಿ ಎಷ್ಟಿತ್ತೆಂದರೆ ನೆರೆಹೊರೆಯವರ ಕಾಳಜಿಯಿಂದ ಹಿಡಿದು ನಗರಸಭೆ, ಶಾಲಾಸಮಿತಿ ಮತ್ತು ರಾಷ್ಟ್ರೀಯ ಮಹಿಳಾ ಸಂಘಟನೆಯವರೆಗೂ ವ್ಯಾಪಿಸಿತ್ತು.

1942 ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಮೀಸಲಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲವು ಪಡೆದಿದ್ದರು.  ಇವರು ಶೈಕ್ಷಣಿಕ ಕ್ಷೇತ್ರದಲ್ಲೂ  ಸೇವೆಯನ್ನು  ಸಲ್ಲಿಸಿದ್ದಾರೆ. ಶಾಲಾಸಮಿತಿಯ ಸದಸ್ಯರಾಗಿದ್ದರು. ಹಿಂದುಳಿದ ವರ್ಗದ ಹೆಣ್ಣುಮಕ್ಕಳಿಗಾಗಿ "ಲಮಾಣಿ ಸ್ತ್ರೀ ಬೋರ್ಡಿಂಗ್" ಪ್ರಾರಂಭವಾಯಿತು. ಅದಕ್ಕಾಗಿ ಇವರು ಆಹಾರ ಸಂಗ್ರಹಣೆ ಮೊದಲಾದ ಕೆಲಸಗಳನ್ನು ಮಾಡಿದ್ದರು. ಹಾಗೆಯೆ ಮಕ್ಕಳ ಪ್ರಗತಿಯತ್ತಲೂ  ತಮ್ಮ ಗಮನವನ್ನರಿಸಿದ್ದರು. ಮಕ್ಕಳಿಗೋಸ್ಕರ "ಜಯಕರ್ನಾಟಕ" ಪತ್ರಿಕೆಯಲ್ಲಿ 'ತಾಯಿ ಮಗು' ಎಂಬ ವಿಭಾಗವನ್ನು ಪ್ರಾರಂಭಿಸಿದರು. ಇವರು ಜಯಕರ್ನಾಟಕ ಮಕ್ಕಳ ಸಂಘವನ್ನು 1940 ರಲ್ಲಿ ಸ್ಥಾಪಿಸಿದರು. 1941ರಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಮಕ್ಕಳ ಮೇಳ ನಡೆಯಲು ತುಂಬಾ ಶ್ರಮಿಸಿದರು. ಹಾಗೂ ವಾಚನಾಲಯವೊಂದನ್ನು ಆರಂಭಿಸಿದರು.

ಇವರು ಮಹಿಳೆಯರ ಏಳ್ಗೆಯನ್ನು ಬಯಸುತ್ತಿದ್ದರು. ಅದಕ್ಕಾಗಿ ಹಗಲಿರುಳು ದುಡಿದರು. ಅಖಿಲ ಭಾರತ ಮಹಿಳಾ ಪರಿಷತ್ತಿನ ಜಿಲ್ಲಾ‌ಮಟ್ಟದ ಕಾರ್ಯದರ್ಶಿಯಾಗಿದ್ದರು ಹಾಗೂ ಪರಿಷತ್ತಿನ ಸ್ಥಾಯಿ ಸಮಿತಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿದ್ದರು. ನಾಗಪುರ, ಬಡೋದೆ, ಸಾಂಗ್ಲಿ, ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 

ಇವರು ಪತ್ರಿಕೋದ್ಯಮದಲ್ಲೂ ಕಾರ್ಯ ನಿರ್ವಹಿಸಿದ್ದಾರೆ.  1924 ರಲ್ಲಿ ಆಲೂರು ವೆಂಕಟರಾಯರು ಪ್ರಾರಂಭಿಸಿದ "ಜಯಕರ್ನಾಟಕ" ಪತ್ರಿಕೆ 1930 ರಲ್ಲಿ ಬೆಳಗಾಂವಿ ರಾಮಚಂದ್ರರಾಯರ ಕೈ ಸೇರಿತು. ಪ್ರಾರಂಭದಲ್ಲಿ ಪತಿಯೊಡನೆ ಕೈಜೋಡಿಸಿದ್ದ ಶ್ಯಾಮಲಾರವರು ನಂತರ ಸಹ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದರು. 1940 ರಲ್ಲಿ ಪತ್ರಿಕೆಯಲ್ಲಿ 'ತಾಯಿ ಮಗು' ವಿಶೇಷ ವಿಭಾಗವನ್ನು ಪ್ರಾರಂಭಿಸಿದರು. "ಸ್ತ್ರೀಯರ  ಸಾಮಾಜಿಕ, ರಾಜಕೀಯ ಹಕ್ಕು ಬಾಧ್ಯತೆಗಳು, ಆಸೆ ಆಕಾಂಕ್ಷೆಗಳು ಅವರ ಪ್ರಗತಿಯ ವಿಚಾರಗಳು, ದೇಶ ವಿದೇಶಗಳಲ್ಲಿಯ ಸ್ತ್ರೀಯರ ಪ್ರಗತಿಕ್ರಮದ ಪರಿಚಯ ಮತ್ತು ಮಕ್ಕಳ ಮನೋವಿಕಾಸಕ್ಕೆ, ಸರ್ವಾಂಗೀಣ ಉನ್ನತಿಗೆ ಅಗತ್ಯವಾದ ವಿಷಯಗಳು, ಶಿಕ್ಷಣ ತತ್ವಗಳು ಮೊದಲಾದವುಗಳಿಗೆ ಮೀಸಲಾಗಿಡುವುದು" ಈ ವಿಭಾಗದ ಉದ್ದೇಶವಾಗಿತ್ತು.

ಅದರಂತೆ ಶ್ಯಾಮಲಾರವರು ಅದರಲ್ಲಿ ಅನೇಕ ಲೇಖಕಿಯರ ಬರಹಗಳನ್ನು ಪ್ರಕಟಿಸಿದರು. ಅನೇಕ ಶಿಕ್ಷಣ ತಜ್ಞೆಯರನ್ನು ಪರಿಚಯಿಸಿದರು. ಹಾಗು ಸಮಾಜ ಸುಧಾರಕಿಯರನ್ನು ಪರಿಚಯಿಸಿದರು. ಅಲ್ಲದೆ ಮಹಿಳೆಯರ ಸಮಸ್ಯೆಗಳ ಬಗ್ಗೆ, ಮಕ್ಕಳ ಪೋಷಣೆ, ಗೃಹಾಲಂಕಾರ, ಅಡುಗೆ ಇನ್ನೂ ಮೊದಲಾದ ಉಪಯುಕ್ತ ಮಾಹಿತಿಗಳನ್ನು ಪ್ರಕಟಿಸುತ್ತಿದ್ದರು. ಮಹಿಳೆಯರನ್ನು ಜಾಗೃತಿಗೊಳಿಸುವುದು ಇವರ ಮೂಲ ಉದ್ದೇಶವಾಗಿತ್ತು.

ಇವರು ಸ್ತ್ರೀಪರ ಚಿಂತಕಿ. ಇವರ ಬಹುತೇಕ ಬರಹಗಳೆಲ್ಲವೂ ಮಹಿಳೆ ಸಮಾಜ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿವೆ.  ಇವರು "ಆರ್ಯ ಸಂಸ್ಕೃತಿಯಲ್ಲಿ ನಾರೀದರ್ಶನ" ಲೇಖನದಲ್ಲಿ‌ " ಒಂದು ಕಾಲದಲ್ಲಿ  ಈ‌ ನಾಡಿನಲ್ಲಿ ಸ್ತ್ರೀಯರ ಸ್ಥಾನಮಾನಗಳು ಎತ್ತರದಲ್ಲಿದ್ದವೆಂದೂ, ಮಧ್ಯಮಯುಗದಲ್ಲಿ ಅದು ಅವನತಿ ಸ್ಥಿತಿಯನ್ನು ತಲುಪಿತು" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸ್ತ್ರೀಯರ ಏಳಿಗೆಯ ಬಗ್ಗೆ ಹೇಳುತ್ತಾ "ಸ್ತ್ರೀಗೂ ವಿಕಾಸ ಹೊಂದಲು ಅವಕಾಶ ಕೊಡುವುದಾದರೆ, ಅವರು ಪುರುಷರಿಗಿಂತ ಹಿಂದುಳಿಯಲಾರಳು" ಎಂದಿದ್ದಾರೆ. 

ಇವರು ತಮ್ಮ "ಸಾಹಿತ್ಯದಲ್ಲಿ ನಾರಿಯ ಸ್ಥಾನ" ಲೇಖನದಲ್ಲಿ ಸಾಹಿತ್ಯ ಸೇವೆಯಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಇದರಿಂದ ಸಾಹಿತ್ಯ ಬೆಳವಣಿಗೆ ಕುಗ್ಗಿದೆ ಎನ್ನುತ್ತಾರೆ. ಸಾಹಿತ್ಯದಲ್ಲಿ ಸ್ತ್ರೀ ವಾಕ್ ಸ್ವಾತಂತ್ರ್ಯ ಹಾಗೂ ಸ್ತ್ರೀ ಪರ ನೋಟದ ಅವಶ್ಯಕತೆ ಬೇಕು ಎಂದಿದ್ದಾರೆ. ಪುರುಷಸಾಹಿತ್ಯ ಜಗತ್ತಿನ ಬಗ್ಗೆ ಬರೆದ ಅಭಿಪ್ರಾಯಗಳು ಏಕಪಕ್ಷೀಯವಾಗಿವೆಯೆಂದೂ ಸ್ತ್ರೀಪರ ನೋಟವನ್ನು ಕಳೆದುಕೊಂಡ ಸಾಹಿತ್ಯ ಅಪರಿಪೂರ್ಣವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ "ಎದ್ದೇಳಿರಿ ಮತ್ತು ಸಾಹಿತ್ಯದಲ್ಲಿ ನಿಮ್ಮ ಗೌರವದ ಸ್ಥಾನವನ್ನು ಬೇಗನ ಕಂಡುಕೊಳ್ಳಿರಿ" ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ. ತಮ್ಮ 'ಅಲ್ಲೀಕೋಟೆ' ಲೇಖನದಲ್ಲಿ ಹಳ್ಳಿಗಳಲ್ಲಿನ ಮಹಿಳೆಯರ ಜೀವನಸ್ವರೂಪ, ಹಬ್ಬಗಳ ಆಚರಣೆ ಮೊದಲಾದವುಗಳ ಬಗ್ಗೆ ತಿಳಿಸಿದ್ದಾರೆ.

ಶ್ಯಾಮಲಾರವರು ಉತ್ತಮ ಹಾಗೂ ವಿಶಿಷ್ಠವಾದ ಕತೆಗಾರ್ತಿ. "ಹೂಬಿಸಿಲು" ಮತ್ತು "ಹೊಂಬಿಸಿಲು" ಕಥಾಸಂಕಲನಗಳು ಪ್ರಮುಖವಾದವುಗಳು. 1936 ರಲ್ಲಿ ಹೂಬಿಸಿಲು ಹೊರಬಂದಿತು. 1943ರಲ್ಲಿ ಇವರ ಮರಣಾನಂತರ ಇನ್ನೊಂದು ಕಥಾ ಸಂಕಲನ "ಹೊಂಬಿಸಿಲು" ಪ್ರಕಟಗೊಂಡಿತು. ಇವುಗಳಲ್ಲಿನ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ತಮ್ಮ ದಿನನಿತ್ಯದ ಅನುಭವಗಳನ್ನೇ ಕಥೆಯ ಮೂಲಕ ಹೇಳಿದ್ದಾರೆ. ಅಂದಿನ ಸಾಮಾಜಿಕ ಪದ್ಧತಿ, ಮನುಜರ ಸ್ವಾರ್ಥ, ಕಪಟ, ಜಾತೀಯತೆ, ಮಹಿಳೆಯರು ಅದರಲ್ಲೂ ಹಿಂದುಳಿದ ವರ್ಗದವರ ಸಮಸ್ಯೆಗಳು ಇವರ ಕಥಾವಸ್ತುಗಳಾಗಿವೆ. ಇವರ ಕಥೆಗಳು ಅಂದಿನ ಸಾಂಸಾರಿಕ, ಸಾಮಾಜಿಕ ಜೀವನದ ಪ್ರತಿಬಿಂಬದಂತಿದೆ. ಆಡು ಭಾಷೆಯಲ್ಲಿರುವ ಕಥೆಗಳು ಎಲ್ಲರ ಮನಗೆದ್ದಿವೆ.

ಕತೆಗಾರ್ತಿ, ವಿಮರ್ಶಕಿ, ಪತ್ರಕರ್ತೆ, ವರದಿಗಾರ್ತಿ, ಅನುವಾದಕಿ  ಹಾಗೂ ಸಾಮಾಜಿಕ ಕಳಕಳಿಯುಳ್ಳ ಶ್ಯಾಮಲಾರವರು ಅಲ್ಪಾಯುಷಿ‌. 1943 ನವೆಂಬರ್ ಒಂದರಂದು ಉಬ್ಬಸದ ಬಳಲಿಕೆಯಿಂದ ಕೊನೆಯುಸಿರೆಳೆದರು.

ಹೀಗೆ ಉತ್ತರ ಕರ್ನಾಟಕದ ಮೊದಲ ಕತೆಗಾರ್ತಿಯಾದ ಶ್ಯಾಮಲಾರವರು ತಮ್ಮ ಅತ್ಯಲ್ಪ ಕಾಲದಲ್ಲಿಯೇ ಸಾಹಿತ್ಯ ಸೇವೆಯೊಂದಿಗೆ ಸಾಮಾಜಿಕ ಸೇವೆಯನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

- ವಿಜಯಲಕ್ಷ್ಮಿ ಎಂ ಎಸ್

ಕಾಮೆಂಟ್‌ಗಳಿಲ್ಲ: