Pages

ಅನುವಾದಿತ ಕಥೆ - ಸಮಾಗಮ



[ತೆಲುಗಿನ ಪ್ರಖ್ಯಾತ ಲೇಖಕಿಯಾದ ಓಲ್ಗಾರವರ "ವಿಮುಕ್ತ" ಕಥಾಸಂಕಲನದಿಂದ "ಸಮಾಗಮ" ಎಂಬ ಈ ಕಥೆಯನ್ನು ಆರಿಸಲಾಗಿದೆ. ಈ ಸಂಕಲನದಲ್ಲಿರುವ ಎಲ್ಲ ಕಥೆಗಳು ಸೀತೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನದಿಂದ ಬರೆಯಲಾಗಿದೆ.]

ಸೂರ್ಯಾಸ್ತಮಾನದ ಸಮಯ. ಅರಣ್ಯ ಒಂದು ಕಡೆ ಕೆಂಪಾದ ಕಾಂತಿಯಿಂದ, ಇನ್ನೊಂದೆಡೆ ಆವರಿಸುತ್ತಿದ್ದ ಕತ್ತಲಿನ ಕಪ್ಪು ಹೊಗೆಯಿಂದ ಉರಿಯುತ್ತಿರುವ ಕೆಂಡದಂತಿತ್ತು. ಪಕ್ಷಿಗಳು ಗುಂಪು ಗುಂಪಾಗಿ ಗೂಡು ಸೇರುತ್ತಿದ್ದವು. ಅವುಗಳ ಕಲರವದಿಂದ ಕಾಡೆಲ್ಲ ಶಬ್ದದಿಂದ ತುಂಬಿತ್ತು. ಆ ದಟ್ಟವಾದ ಅರಣ್ಯದಲ್ಲಿ, ಆ ಮುನಿ ಆಶ್ರಮ, ಪ್ರತಿಭಾವಂತ ಚಿತ್ರಕಾರನ ಅತಿ ಪ್ರಶಾಂತವಾದ, ಸುಂದರವಾದ  ಸೃಷ್ಟಿಯಂತಿತ್ತು .

ಆಶ್ರಮದಲ್ಲಿ ಸಾಯಂಕಾಲದ ಸಂಧ್ಯಾ ಕಾರ್ಯಕ್ರಮಗಳು ಆರಂಭವಾದವು. ದೀಪಗಳು ಬೆಳಗುತ್ತಿದ್ದವು. ಗಂಭೀರ ಮಂತ್ರಗಳು ಮಧುರವಾಗಿ ಕೇಳುತ್ತಿದ್ದವು. ಮುನಿಕನ್ಯೆಯರು ಫಲಪುಷ್ಪ ಗಿಡಗಳಿಗೆ ನೀರನ್ನು ಹಾಕುತ್ತಿದ್ದರು. ಕೆಲವರು ದೇವರ ಪೂಜೆಗಾಗಿ ಹಾರಗಳನ್ನು ಮಾಡುತ್ತಿದ್ದರು. ಮಕ್ಕಳು ಅರಣ್ಯ ಸಂಚಾರದಿಂದ ತಿರುಗಿ ಬಂದು ತಮ್ಮ ತಾಯಂದಿರ ಅಪ್ಪುಗೆಯಲ್ಲಿದ್ದರು. ಕೆಲವರು ತಾಯಂದಿರು ತಮ್ಮ ಮಕ್ಕಳನ್ನು ಸಂಜೆಯ ಕೆಲಸಕ್ಕೆ ಸಿದ್ಧವಾಗುವಂತೆ ಅವಸರಿಸುತ್ತಿದ್ದರು. ಒಂದು ಸಣ್ಣ ಕುಟೀರದಲ್ಲಿ ಒಬ್ಬ ತಾಯಿ ಅರಣ್ಯ ಸಂಚಾರದಿಂದ ಇನ್ನೂ ತಿರುಗಿ ಬಾರದಿದ್ದ ತನ್ನ ಮಕ್ಕಳಿಗಾಗಿ ಎದುರುನೋಡುತ್ತಿದ್ದಳು. ಆ ಮಕ್ಕಳಿಗಾಗಿಯೇ ಅವಳು ಬದುಕುತ್ತಿದ್ದಾಳೆ ಎನ್ನುವುದು ಅವಳ ಕಂಗಳನ್ನು ನೋಡಿದರೆ ತಿಳಿಯುತ್ತಿತ್ತು. ಆ ಕಂಗಳಲ್ಲಿ ಆತುರ, ದಯೆಯ ಜೊತೆಗೆ ಭಯ ಮನೆ ಮಾಡಿತ್ತು.

ಆ ತಾಯಿ ಹೆಸರು ಸೀತಾ.
ತನ್ನ ಇಬ್ಬರು ಮಕ್ಕಳಿಗಾಗಿ ಎದುರು ನೋಡುತ್ತಿದ್ದಳು.

ದಿನವೂ ಆ ಸಮಯಕ್ಕೆ ಇಬ್ಬರೂ ಅರಣ್ಯದಿಂದ ಬಂದುಬಿಡುತ್ತಿದ್ದರು. ಬರುತ್ತಾ ಯಾವ್ಯಾವುದೋ ಕಾಡಿನ ಹೂಗಳನ್ನು ತರುತ್ತಿದ್ದರು. ಅವುಗಳನ್ನು  ದೇವತಾರ್ಚನೆಗೆ ಬಳಸು ಎಂದು ತಾಯಿಯನ್ನು ಬೇಡಿಕೊಳ್ಳುತ್ತಿದ್ದರು. ಹೆಸರು  ಗೊತ್ತಿರದ ಹೂಗಳಿಂದ ಪೂಜೆ ಮಾಡುವುದಿಲ್ಲವೆಂದು ಸೀತಾ ಹೇಳುತ್ತಿದ್ದಳು. ಅವರಿಬ್ಬರೂ  ಸೇರಿ ಆ ಹೂಗಳಿಗೆ ಚಿತ್ರವಿಚಿತ್ರವಾದ ಹೆಸರುಗಳನ್ನಿಡುತ್ತಿದ್ದರು. ಸೀತಾ ನಕ್ಕರೆ ಅವರು ಮುನಿಸಿಕೊಳ್ಳುತ್ತಿದ್ದರು. ಸೀತಾ ಅವರಿಬ್ಬರನ್ನು ಸಮಾಧಾನಗೊಳಿಸಿ ಆ ಹೂಗಳಿಂದ ಪೂಜೆ ಮಾಡಿ ಅವರುಗಳನ್ನು ಸಂತೋಷ ಪಡಿಸುತ್ತಿದ್ದಳು. ಕತ್ತಲಾಗುವ ವೇಳೆಗೆ ಬಾಲಕರಿಬ್ಬರೂ ಕಂಠವೆತ್ತಿ ಹಾಡುತ್ತಿದ್ದರೆ ವನವೆಲ್ಲಾ ಪರವಶವಾಗುತ್ತಿತ್ತು.

ಆ ಲವಕುಶರು ಇನ್ನೂ ಹಿಂದಿರುಗಲಿಲ್ಲ. ಸೀತೆಯ ಮನಸ್ಸು ಅಪಾಯವನ್ನೇನೂ ಶಂಕಿಸಲಿಲ್ಲ. ಏಕೆಂದರೆ ಲವಕುಶರಿಗೆ ಅಡವಿ ಚೆನ್ನಾಗಿ ತಿಳಿದಿತ್ತು. ಅವರು ಅಲ್ಲಿಯೇ ಹುಟ್ಟಿ ಬೆಳೆದವರು ಅವರು ಅರಣ್ಯ ಪುತ್ರರು. ಆದರೆ ತಡವಾಗಲು ಕಾರಣವೇನು? ಅದು ಗೊತ್ತಾಗದೆ ಭಯ, ಸಂದೇಹಗಳು. ಲವಕುಶರು ಅಯೋಧ್ಯೆಗೆ  ಹೋಗಿ ಬಂದಂದಿನಿಂದಲೂ ಸೀತೆಯ ಮನಸ್ಸಿನಲ್ಲಿ ಮಕ್ಕಳ ಬಗ್ಗೆ  ಇಷ್ಟಕ್ಕೂ ಮುಂಚೆ ಇರದಿದ್ದ ಭಯ ಮನೆ ಮಾಡಿತ್ತು. ಏನೋ ಗೊತ್ತಿಲ್ಲದ ಭಯ. ಅರಣ್ಯದ ಬಗ್ಗೆಯಲ್ಲ, ನಗರದ ಬಗ್ಗೆ. ಕ್ರಮೇಣ ಕತ್ತಲು ದಟ್ಟವಾಯಿತು ಸೀತೆಯ ಕಣ್ಣುಗಳೇ ದೀಪಗಳಂತೆ ಬೆಳಗುತ್ತಿದ್ದವು.
ಅಷ್ಟರಲ್ಲಿಯೇ ಆ ಬಾಲಕರಿಬ್ಬರು ಹಿಂತಿರುಗಿದರು. ಸೀತೆ ಒಮ್ಮೆ ನಿಟ್ಟುಸಿರಿಟ್ಟು ಏಕೆ ತಡವಾಯಿತು?" ಎಂದು ಪ್ರಶ್ನಿಸಿದಳು. ಲವ "ಅಮ್ಮಾ ಅಲ್ಲಿ ನೋಡು"  ಎಂದು ತಾನು ತಂದಿದ್ದ ಹೂಗಳನ್ನು ಬುಟ್ಟಿಯಲ್ಲಿ ಸುರಿದನು. ಕ್ಷಣದಲ್ಲಿ ಆ ಆಶ್ರಮ ಹಿಂದೆಂದೂ ಗೊತ್ತಿರದ ಸುವಾಸನೆಯಿಂದ ತುಂಬಿ ಹೋಯಿತು.

ಬುಟ್ಟಿಯ ತುಂಬಾ ಕೆಂಪು, ಬಿಳಿ, ಹಳದಿ ಹೂಗಳು ನಗುತ್ತಿದ್ದವು. ಅದು ಹಿಂದೆಂದೂ ನೋಡದ ಹೂಗಳು. ಸುವಾಸನೆ ಕೂಡ ಹಿಂದೆಂದೂ ಅರಿಯದ್ದು. ಲವಕುಶರಿಬ್ಬರೂ ತಾವು ಸಾಧಿಸಿದ ಪುಷ್ಪ ವಿಜಯದಿಂದ ಗರ್ವದಿಂದ ತಾಯಿಯೆಡೆಗೆ ನೋಡಿದರು.

"ಎಲ್ಲಿಯದು ಈ ಹೂಗಳು, ಎಷ್ಟು  ಚೆನ್ನಾಗಿವೆ" ಕೇಳಿದಳು ಸೀತೆ ಅವುಗಳನ್ನು ಮೃದುವಾಗಿ ಸ್ಪರ್ಶಿಸುತ್ತ.
"ಅಮ್ಮಾ ಇಂದು ಕಾಡಿನಲ್ಲಿ ಒಂದು ಹೊಸ ಉದ್ಯಾನವನ್ನು ನೋಡಿದೆವು.ಅಂತಹ ಉದ್ಯಾನವನದಲ್ಲಿ ಎಲ್ಲಿಯೂ ನೋಡಿರಲಿಲ್ಲ. ವಾಲ್ಮೀಕಿ ಅಜ್ಜ ವರ್ಣಿಸುವ ನಂದನವನವೂ ಇದರ ಮುಂದೆ ಸಪ್ಪೆಯೇ" ಎಂದನು ಕುಶ.
ಕುಶನ ಮಾತನ್ನ ಲವ ಕಣ್ಣಿನ ಮೂಲಕವೇ ಅಂಗೀಕರಿಸಿದನು.
"ಯಾರ ಉದ್ಯಾನವನ ಕುಶ" ಕೇಳಿದಳು ಸೀತೆ.
"ಅಮ್ಮಾ ಆ ಉದ್ಯಾನವನದಲ್ಲಿ ಎಷ್ಟು  ಸುಂದರವೋ, ಅದರ ಯಜಮಾನಿಯ ರೂಪ ಅಷ್ಟು ವಿಕಾರವಾಗಿತ್ತು. ನಾವು ಹೂಗಳನ್ನು ಕೊಯ್ದುಕೊಳ್ಳುವಾಗ ಅವಳು ಅಲ್ಲಿಗೆ ಬಂದಳು. ನಮಗೆ ಭಯವಾಯಿತು. ಅಣ್ಣ ಹೇಗೋ ಧೈರ್ಯ ತಂದುಕೊಂಡು ನಾವು ಮುನಿಬಾಲಕರು ಪೂಜೆಗಾಗಿ ಹೂಗಳನ್ನು ಕುಯ್ದುಕೊಳ್ಳುತ್ತಿದ್ದೇವೆ ಎಂದನು. ನಾವು ಬೇಗ ಬೇಗ ಬಂದು ಬಿಟ್ಟೆವು.ಅಬ್ಬಾ ಆ ರೂಪ ಪರಮ ವಿಕಾರವಾಗಿತ್ತು ಆಕೆ ಕುರೂಪಿ" ವ್ಯಂಗವಾಗಿ ಹೇಳಿದನು ಲವ.
"ತಪ್ಪು ಕಂದ, ಮನುಷ್ಯರ ರೂಪವನ್ನು ನೋಡಿ ಅವರನ್ನು  ಅಸಹ್ಯಿಸಿಕೊಳ್ಳಬಾರದು. ಆಕೆ ಕುರೂಪಿಯಾದರೂ ಎಷ್ಟು ಚೆನ್ನಾಗಿರುವ ಹೂದೋಟವನ್ನು ಬೆಳೆಸಿದ್ದಾಳಲ್ಲ" ಹೇಳಿದಳು ಸೀತೆ.
"ಅಮ್ಮಾ ಆಕೆ ಚೆನ್ನಾಗಿಯೇ ಇದ್ದಾಳೆ, ಆದರೆ ಕಿವಿ ಮೂಗುಗಳು ಮಾತ್ರ ಇಲ್ಲ. ಯಾರೋ ಕೊಯ್ದಿರುವಂತೆ ಅಲ್ಲೆಲ್ಲಾ ಹಳ್ಳವಿದೆ." ಕುಶ ಮುಖವನ್ನು ವಿಕಾರ ಮಾಡಿಕೊಂಡನು.
ಸೀತೆಗೆ ಇದ್ದಕ್ಕಿದಂತೆ ತನ್ನ ಮೇಲೆ ಯಾರೋ ಚಾವಟಿಯಿಂದ ಝಳಪಿಸಿದಂತಾಯಿತು.
"ಕಿವಿ ಮೂಗುಗಳಿಲ್ಲವಾ?"
"ಇಲ್ಲವೆಂದರೆ. . .  ಹಿಂದೊಮ್ಮೆ ಇತ್ತೇನೋ ಯಾರೋ ಕೊಯ್ದಿರುವಂತಿದೆ, ಹಾಗೆ  ಅನಿಸಿತು ಅಲ್ವೇನಣ್ಣ" ಕುಶನ ಸಾಕ್ಷ್ಯವನ್ನು ಕೇಳಿದ ಲವ. 
ಸೀತೆಗೀಗ ಖಚಿತವಾಯಿತು.
ಅವಳು ಶೂರ್ಪನಖ ಎನ್ನುವುದರಲ್ಲಿ ಯಾವುದೇ  ಸಂದೇಹವಿಲ್ಲ.

ಹದಿನೆಂಟು ವರ್ಷಗಳ ಹಿಂದಿನ ಮಾತು. ರಾಮನನ್ನು ಮೋಹಿಸಿ ಬಂದಳು. ಎಷ್ಟು  ಅಂದವಾಗಿದ್ದಳು. ಆಕೆ ರಾಮ ಲಕ್ಷ್ಮಣರ ಕ್ರೂರವಾದ ಪರಿಹಾಸ್ಯಕ್ಕೆ ಪಾಪ ಕುರೂಪಿಯಾದಳು. ಈಗ ಶೂರ್ಪನಖ ಈ ಅರಣ್ಯದಲ್ಲಿಯೇ ಇದ್ದಾಳೆಯೇ ಎಷ್ಟು ಕಾಲ ಕಳೆದುಹೋಗಿದೆ !

ಶೂರ್ಪನಖಳನ್ನು ರಾಮ ಅವಮಾನಿಸಿದರೆ ರಾವಣ ತನ್ನನ್ನು ಅಪಹರಿಸಿ ರಾಮನ ಮೇಲೆ ಪ್ರತೀಕಾರವನ್ನು ತೀರಿಸಿ ಕೊಳ್ಳಬೇಕೆಂದುಕೊಂಡನು. 
ಸ್ತ್ರೀಯರಿರುವುದೇ ಪುರುಷರ ದ್ವೇಷಪ್ರತೀಕಾರಗಳನ್ನು ತೀರಿಸಿಕೊಳ್ಳಲೋಸ್ಕರವೇ?

ರಾವಣನ ತಂಗಿ ಎಂದು ತಿಳಿಯದಿದ್ದರೆ ರಾಮಲಕ್ಮಣರು ಆ ರೀತಿ ನಡೆದು ಕೊಳ್ಳುತ್ತಿರಲಿಲ್ಲ. ರಾವಣನನ್ನು ಬಡಿದೆಬ್ಬಿಸಲೆಂದೆ ರಾಮನ ಆ ಕೃತ್ಯ. ಅವನ ಜೊತೆ ಜಗಳಕ್ಕೆ ಕಾರಣವನ್ನು ಹುಡುಕುತ್ತಿದ್ದ ರಾಮನಿಗೆ ಶೂರ್ಪನಖಿಯ ಮೂಲಕ ಅದು ಈಡೇರಿತು.
ಅದೆಲ್ಲಾ ರಾಜಕೀಯ. 
ಪಾಪ ಶೂರ್ಪನಖ ಪ್ರೇಮ ಪ್ರೇಮ ಎಂದು ಕನವರಿಸುತ್ತಲೆ ಬಂದಳು. ಕಿವಿ ಮೂಗುಗಳಿಲ್ಲದ ಆ ಕುರೂಪಿಯನ್ನು ಇನ್ನಾರು ಪ್ರೇಮಿಸುವರು.
ಜೀವನವೆಲ್ಲವೂ ಪ್ರೇಮವಿಲ್ಲದೇ ಕಳೆದಳಾ?
ತನ್ನಲ್ಲಿದ್ದ ಪ್ರೇಮವನ್ನೆಲ್ಲಾ ಧಾರೆಯೆರೆದು ಆ ಹೂದೋಟವನ್ನು ಬೆಳೆಸಿದಳಾ?  ತನ್ನ ಸೌಂದರ್ಯ ಆಕಾಂಕ್ಷೆಗಳ ಪ್ರತಿಫಲವಾಗಿ ಉದ್ಯಾನವನವನ್ನು ರೂಪಿಸಿದಳಾ?
ಅವಳ ಹೃದಯದ ಸುಕುಮಾರತೆಯ ಪ್ರತಿಫಲಗಳಾ ಈ ಹೂಗಳು?
ಪಾಪ ಶೂರ್ಪನಖ.
ಸೀತೆಯ ಕಣ್ಣೀರು ಕಂಡು ಲವಕುಶರು ಆಶ್ಚರ್ಯ ಪಟ್ಟರು.
"ಏನಮ್ಮ ಇದು ಯಾರದೋ ಬಗ್ಗೆ ಕೇಳಿದ ಮಾತ್ರಕ್ಕೆ ಇಷ್ಟು ನೋವನ್ನು ಅನುಭವಿಸುತ್ತಿದ್ದೆಯಲ್ಲಾ."
ಸೀತೆ ಕಣ್ಣೊರಿಸಿಕೊಂಡು ಸಣ್ಣದಾಗಿ ನಕ್ಕು--
" ನಾಳೆ ನನ್ನನ್ನು ಆ ಉದ್ಯಾನವನಕ್ಕೆ ಕರೆದೊಯ್ಯುವಿರಾ?" ಕೇಳಿದಳು.
ಲವಕುಶರು ನಂಬಿಕೆ ಇಲ್ಲದಂತೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.
"ನಿಜವಾಗಲೂ ನಾನು ನಿಮ್ಮ ಜೊತೆ ಬರುತ್ತೇನೆ. ಕರೆದುಕೊಂಡು ಹೋಗುವಿರಾ? ಆ ದಾರಿ ನೆನಪಿದೆಯೇ?"
ಸೀತೆಯ ಮಾತುಗಳಿಗೆ ಅಣ್ಣ ತಮ್ಮಂದಿರ ಸಂಭ್ರಮ ಹೆಚ್ಚಾಯಿತು.

ಅಮ್ಮ ತಮ್ಮ ಜೊತೆ ಅರಣ್ಯ ವಿಹಾರಕ್ಕೆ ಬರುತ್ತಾಳೆ ಎಂದು ತಿಳಿದ ಅವರ ಮನಸ್ಸುಗಳು ಉಲ್ಲಾಸಭರಿತವಾಯಿತು. ತಮಗೆ ಸುಪರಿಚಿತವಾದ ಅರಣ್ಯ ಪ್ರಾಂತ್ಯವನ್ನು ತಾಯಿಗೆ ತೋರಿಸಲು ಇಬ್ಬರಿಗೂ ಉತ್ಸಾಹ ಆದರೆ ಸೀತೆ ಯಾವಾಗಲೂ ಬಾರಳು. ಯಾವಾಗಲಾದರೂ ಹೋದರೂ ಇತರೆ ಮುನಿ ಸ್ತ್ರೀಯರ  ಜೊತೆ ಹೋಗುವಳು. ಅಮ್ಮನ ಕೈ ಹಿಡಿದು ಆ ದುರ್ಗಮ ಅರಣ್ಯದಲ್ಲಿ ಸಂಚರಿಸುತ್ತೇವೆ, ಅಮ್ಮಾ ಭಯಪಡದಿರುವಂತೆ ಧೈರ್ಯವನ್ನು ಹೇಳುತ್ತೇವೆ, ವಿಚಿತ್ರಗಳನ್ನೆಲ್ಲ ತೋರಿಸುತ್ತೇವೆ ಎಂದುಕೊಂಡರೇನೆ ಆ ಚಿಣ್ಣರಿಗೆ ಉತ್ಸಾಹ ಹೆಚ್ಚಾಯಿತು. 
ಆ ರಾತ್ರಿ  ಯಾವಾಗ ಬೆಳಗಾಗುತ್ತದೆಯೋ ಎಂದುಕೊಂಡರು.

ಆ ರಾತ್ರಿ  ಸೀತೆಗೂ ಸಹ ಮನಸ್ಸು ಭಾರವಾಗಿಯೇ ಇತ್ತು ಹಿಂದಿನ ನೆನಪುಗಳನ್ನು  ಎಷ್ಟೇ ಪಕ್ಕಕ್ಕೆ ಸರಿಸಿದರೂ ಮುಂದೆ ಬಂದು ನಿಲ್ಲುತ್ತಿದ್ದವು
ರಾಮನ ಜೊತೆ ಆನಂದವಾಗಿ ಕಳೆದ ಆ ವನವಾಸದ ದಿನಗಳು.
ಶೂರ್ಪನಖಿ ಬಂದಾಗ ಎಷ್ಟು  ಮನೋಹರವಾಗಿ ನಡೆದು ಬಂದಳು. ತಲೆಯಲ್ಲಿ ಬಿಳಿಯ ಮಲ್ಲಿಗೆ ಹೂಗಳ ಆಭರಣಗಳು. 
ತನ್ನ ಆಭರಣಗಳನ್ನು ವಿಚಿತ್ರವಾಗಿ ನೋಡಿದಳು.
ಪರಿಮಳವಿಲ್ಲದ, ಸುಕುಮಾರತೆಯಿಲ್ಲದ ಆ ಭಾರ ಏಕೆ ಹೊರುತ್ತಿದ್ದೀಯಾ ಎನ್ನುವಂತೆ ನೋಡಿದಳು. ತನ್ನನ್ನು ನೋಡಿದಳೇ ಹೊರತು ಮಾತನಾಡಲಿಲ್ಲ. ನೇರವಾಗಿ ರಾಮನ ಬಳಿಗೆ ಹೋದಳು. ತಾನು ಅವರುಗಳ ಮಾತುಗಳ ಬಗ್ಗೆ  ಗಮನವಿರಿಸಿಯೇ, ಏನೋ ಕೆಲಸ ಮಾಡಿಕೊಳ್ಳುತ್ತಿದ್ದಳು. ಕೆಲಕಾಲ ಕಳೆಯುವಷ್ಟರಲ್ಲಿ ಆಶ್ರಮದಲ್ಲಿ ರಕ್ತಪಾತ.  
ಓರ್ವ ಸ್ತ್ರೀಯ ಹೃದಯವಿದ್ರಾವಕ ರೋದನೆ.
ಆ ಚರ್ಯೆಯಿಂದ ಎಷ್ಟು  ಶಪಿಸಿದಳು.
ಆ ಶಾಪ ಇನ್ನೂ ತನ್ನನ್ನು ಬಿಟ್ಟಿಲ್ಲವೇನೋ.
ಆಕೆಯನ್ನು ಯಾವ ಪುರುಷನು ಪ್ರೇಮಿಸುವುದಿಲ್ಲ. ತನ್ನನ್ನು  ಪ್ರೇಮಿಸುವ ಪುರುಷ ದೂರಮಾಡಿದ್ದಾನೆ.
ಕೊನೆಗೆ ಕಥೆಗಳು ಒಂದೇನಾ?
ತನ್ನನ್ನು  ನೋಡಿ ಶೂರ್ಪನಖ ಏನನ್ನುತ್ತಾಳೆ? ತನ್ನ ಮೇಲಿನ ಕೋಪದಿಂದ ಮಾತನಾಡುವುದಿಲ್ಲವೇನೋ, ಆದರೂ ಶೂರ್ಪನಖಿಯನ್ನು ನೋಡಬೇಕು.
     ****

ಮರುದಿನ ಬೆಳಿಗ್ಗೆ  ಕೆಲಸವೆಲ್ಲಾ ಮುಗಿದ ಮೇಲೆ ಸೀತೆಯನ್ನು ಹಿಂದಿಟ್ಟುಕೊಂಡು ಲವಕುಶರಿಬ್ಬರೂ ಹೊರಟರು.
"ಅಮ್ಮಾ ಇಂದು ನಿನಗೆ ನನ್ನ ರಾಜನನ್ನು ತೋರಿಸುತ್ತೇನೆ" ಎಂದನು ಲವ.
ಅರಣ್ಯದಲ್ಲಿ ಸ್ವೇಚ್ಛೆಯಾಗಿ ತಿರುಗುವ ಮದಗಜವು ಲವನಿಗೆ ವಶವಾಗಿತ್ತು. ಅಣ್ಣ-ತಮ್ಮಂದಿರಿಬ್ಬರೂ ಅದರ ಮೇಲೆ ಹತ್ತಿ ವಿಹರಿಸುತ್ತಿದ್ದರು.
"ಅಮ್ಮಾ ನೀನು ರಾಜನ ಮೇಲೆ ಹತ್ತುವುದಿಲ್ಲವಾ" ಕೇಳಿದನು ಲವ. 
"ಬೇಡ, ನನಗೆ ನಡೆಯುವುದೇ ಇಷ್ಟ" ಎಂದಳು ಸೀತೆ.
ಪಟ್ಟದಾನೆಯ ಮೇಲೆ ಸವಾರಿ ಹೋದ ದಿನಗಳನ್ನು ನೆನೆಸಿಕೊಂಡು.
ಸೀತೆಗೆ ಆನೆಯೆಂದರೆ ಭಯವೆಂದುಕೊಂಡರು ಅಣ್ಣ-ತಮ್ಮಂದಿರಿಬ್ಬರು. ಪಾಪ ಅಮ್ಮನಿಗೆ ಆನೆಯನ್ನು ಹತ್ತಲು ಹೇಗೆ ಬರುತ್ತದೆ, ಭಯ ಕೂಡ. ಲವನ ಮೇಲೆ ಕೋಪಗೊಂಡ ಕುಶ.
ತಮಗೆ ಕಾಡಿನಲ್ಲಿ ಗೊತ್ತಿದ್ದ ಎಲ್ಲಾ ಪ್ರಾಣಿಗಳನ್ನು ಪರಿಚಯಿಸುತ್ತಾ ನಡೆದರು.
ಮಕ್ಕಳ ಮಾತಿನಿಂದ ಸೀತೆಗೆ ಮಾರ್ಗಾಯಾಸವಾಗಲಿಲ್ಲ.
"ಇದೇನಮ್ಮ, ಆ ಉದ್ಯಾನವನ."
ಸೀತಾ ಹಾಗೆಯೇ ನಿಂತುಬಿಟ್ಟಳು. ಪ್ರಕೃತಿಯ ಮಂದಹಾಸದಂತ್ತಿದ್ದ ಆ ತೋಟವನ್ನು ನೋಡಿ ಸೀತೆಗೆ ಮಾತೇ ಹೊರಡಲಿಲ್ಲ. ಅಶೋಕವನ ಇದರ ಮುಂದೆ ಏನೇನು ಅಲ್ಲ ಎನ್ನುವಂತಿತ್ತು.
"ಧನ್ಯಳಾದೆ ಶೂರ್ಪನಖ ಎಂದುಕೊಂಡಳು "
"ಬಾಮ್ಮ ಒಳಗೆ ಹೋಗೋಣ" ಎನ್ನುತ್ತಿದ್ದ ಮಕ್ಕಳಿಗೆ, 
"ನಾನು ಒಬ್ಬಳೇ ಹೋಗುತ್ತೇನೆ ನೀವು ಸಂಜೆಯವರೆಗೆ ಸುತ್ತಾಡಿ ಬನ್ನಿ ಒಟ್ಟಿಗೆ ಆಶ್ರಮಕ್ಕೆ ಹೋಗೋಣ" ಎಂದಳು. 
ದೂರದಲ್ಲಿ ಒಬ್ಬ ಸ್ತ್ರೀ  ಕಾಣಿಸಿಕೊಂಡಳು. ಆಕೆಯ ಮುಖ ಆಕಡೆ ತಿರುಗಿದ್ದರೂ ಸಹ ಆಕಾರವನ್ನು ನೋಡಿ ಆಕೆಯೇ ಶೂರ್ಪನಖ ಎಂದುಕೊಂಡಳು.
ಹತ್ತಿರ ಹೋಗಿ  "ಶೂರ್ಪನಖ" ಮೆಲ್ಲಗೆ ಕರೆದಳು.
ಶೂರ್ಪನಖ  ಹಿಂತಿರುಗಿ ನೋಡಿದಳು. ಆಕೆ ಸೀತೆಯನ್ನು ಗುರುತು ಹಿಡಿಯಲಿಲ್ಲ.
"ಯಾರಮ್ಮಾ ನೀನು ದಾರಿ ತಪ್ಪಿ ಬಂದ್ದಿದೀಯಾ?  ನನ್ನ ಹೆಸರು ನಿನಗೇಗೆ ಗೊತ್ತು?" ಕೇಳಿದಳು.
"ದಾರಿ ತಪ್ಪಲಿಲ್ಲ ಶೂರ್ಪನಖ, ದಾರಿ ಹುಡುಕಿಕೊಂಡು ಬಂದೆ, ನಾನು ಸೀತೆ" ಎಂದಳು.
ಶೂರ್ಪನಖಳಿಗೆ  ಮಾತೇ ಹೊರಡಲಿಲ್ಲ. 
ಸೀತೆ, ಇವಳು ಸೀತೆ ಎಷ್ಟು ಬದಲಾಗಿ ಹೋಗಿದ್ದಾಳೆ.
ಮೈತುಂಬ ಆಭರಣಗಳ ಭಾರ ಹೊತ್ತ ಸೀತೆ ನನಗೆ ಗೊತ್ತು ಅದು ಸಹ ಹೆಚ್ಚು ಕಾಲ ನೋಡಿರಲಿಲ್ಲ.
ರಾವಣನನ್ನು ಸಂಹರಿಸಿ ಆರ್ಯ ಸಾಮ್ರಾಜ್ಯವನ್ನು ದಕ್ಷಿಣ ಭಾಗಕ್ಕೆಲ್ಲಾ ವಿಸ್ತರಿಸಿದ ಚಕ್ರವರ್ತಿ ಶ್ರೀರಾಮಚಂದ್ರನ ಪಟ್ಟಮಹಿಷಿ ಸೀತೆ ಈಕೆಯೇ?

ಶೂರ್ಪನಖಳಿಗೆ ನಂಬಲು ಸಾಧ್ಯವಾಗಲಿಲ್ಲ. 
ಈ ನಾರುಮಡಿ ಏನು? ಈ ಹೂವಿನ ಹಾರಗಳೇನು? 
ಬಿಸಿಲಿಗೆ ಕಪ್ಪಾಗಿರುವ ಈಕೆ ಎಲ್ಲಿ?
ಈಕೆ ಸೀತೆ!! ಶ್ರೀರಾಮನ ಹೆಂಡತಿ ಸೀತೆಯೇ?
"ಸೀತೆ , ಶ್ರೀರಾಮಚಂದ್ರನ. . . " 
ಶೂರ್ಪನಖಳನ್ನು ಮಧ್ಯೆದಲ್ಲೇ ನಿಲ್ಲಿಸಿ "ನಾನು ಸೀತೆ, ಜನಕನ ಮಗಳು, ಭೂಮಾತೆಯ ಕುವರಿ" ಎಂದಳು ಅಭಿಮಾನದಿಂದ.
"ಮತ್ತೆ ಶ್ರೀರಾಮ" ಶೂರ್ಪನಖಳಿಗೆ ಎಲ್ಲವೂ ಅಯೋಮಯವಾಗಿದೆ.
"ಶ್ರೀರಾಮ ನನ್ನನ್ನು ಪರಿತ್ಯಜಿಸಿದ.  ಸದ್ಯಕ್ಕೆ ವಾಲ್ಮೀಕಿ ಆಶ್ರಮದಲ್ಲಿದ್ದೇನೆ."
ಶೂರ್ಪನಖಳಿಗೆ ಮಾತೇ ಹೊರ ಬರಲಿಲ್ಲ.
ಶ್ರೀರಾಮ ಸೀತೆಯನ್ನು ಪರಿತ್ಯಜಿಸುವುದಾ?
ಸೀತರಾಮರ ಪ್ರೇಮದ ಬಗ್ಗೆ ಅವಳಿಗೆ ಗೊತ್ತಿರುವಷ್ಟು ಬೇರೆ ಯಾರಿಗೂ ತಿಳಿದಿರುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ ಅವಳು ತೆತ್ತ ಬೆಲೆಯೂ ಕಡಿಮೆಯೇನಿರಲಿಲ್ಲ.
ಶ್ರೀರಾಮನನ್ನು ಪ್ರೇಮಿಸಿದ ಸ್ತ್ರೀಯರಿಗೆ ವೇದನೆ ತಪ್ಪುವುದಿಲ್ಲವಾ?
ಸೀತೆಯ ಮುಖದಲ್ಲಿ ಶೂರ್ಪನಖಳಿಗೆ ಶಾಂತ ಗಂಭೀರತೆಗಳನ್ನು ಬಿಟ್ಟು ವೇದನೆಯ ಛಾಯೆಗಳು ಕಾಣಿಸಲಿಲ್ಲ.
ಸೀತೆ ಎಷ್ಟು ಬೆಳೆದು ಬಿಟ್ಟಿದ್ದಾಳೆ ಎಂದುಕೊಂಡಳು ಶೂರ್ಪನಖ.
"ನೆನ್ನೆ ನಮ್ಮ ಮಕ್ಕಳು ನಿನ್ನ ಉದ್ಯಾನವನವನ್ನು ನೋಡಿದರು. ನಿನ್ನನ್ನು ನೋಡಿದರು. ಅವರೇ ನನ್ನನ್ನು ಕರೆದುಕೊಂಡು  ಬಂದರು. ನಿನ್ನ ತೋಟ ಎಷ್ಟು  ಸುಂದರವಾಗಿ, ಹಾಯಾಗಿದೆ" ಎಂದಳು ಮುಗುಳ್ನಗುತ್ತಾ.
"ಓ ಆ ಚಿನ್ನಾರಿಗಳು ನಿನ್ನ ಮಕ್ಕಳಾ, ಎಷ್ಟು ಮುದ್ದಾಗಿದ್ದಾರೆ" ಅಂದಳು ಶೂರ್ಪನಖ.
ಸೀತೆಯ ಮುಖದಲ್ಲಿ ಒಂದು ಕ್ಷಣ ಸಣ್ಣ ಗರ್ವ ಬಿಂದು ಕಾಣಿಸಿ ಮಾಯವಾಯಿತು. ಅದು ಶೂರ್ಪನಖಳ ದೃಷ್ಟಿಯನ್ನು ದಾಟಿ ಹೋಗಲಿಲ್ಲ.
"ಈ ತೋಟದಲ್ಲಿರುವ ಸಸಿಗಳು, ಬಳ್ಳಿಗಳು, ಗಿಡಗಳು ಎಲ್ಲವೂ ನನ್ನ ಮಕ್ಕಳೆ" ಎಂದಳು ಶೂರ್ಪನಖ.
"ಹೌದು ಅದಕ್ಕೆ ಎಷ್ಟು ಮನೋಹರವಾಗಿದೆ" ಒಪ್ಪಿಕೊಂಡಳು ಸೀತೆ ಶೂರ್ಪನಖಳ  ಕಣ್ಣಲ್ಲಿ ಗರ್ವವು ಕಾಣಿಸಿಕೊಂಡಿತು.
"ಹೇಳು ಶೂರ್ಪನಖ ನಿನ್ನ ಜೀವನ ಹೇಗಿದೆ? "
"ಈ ವನದಷ್ಟೇ ಸುಂದರವಾಗಿ ಆನಂದವಾಗಿದೆ."
"ನನಗೆ ಬಹಳಷ್ಟು ಸಂತೋಷವಾಗಿದೆ. ನಿನಗೆ ನಡೆದ ಅವಮಾನಕ್ಕೆ ನೀನು ಏನಾಗಿ ಹೋಗುತ್ತೀಯೆ ಎಂದುಕೊಂಡೆ. ನಿನ್ನ ಸೌಂದರ್ಯಾಕಾಂಕ್ಷೆ ನನಗೆ ಗೊತ್ತು. ನಿನ್ನ ಕುರೂಪಿತನವನ್ನು ನೀನು ಸಹಿಸಬಲ್ಲೆಯಾ? ಅದನ್ನು ಸಹಿಸಲಾಗದೆ ಏನು ಆಘಾತವನ್ನು ಮಾಡಿಕೊಂಡೆಯೋ ಎಂದು ನಿನ್ನ ನೆನಪು ಬಂದಾಗಲೆಲ್ಲಾ ನೊಂದುಕೊಂಡೆ"
ತನ್ನ ಕಡೆ ನೋಡಿದ ಸೀತೆಯ ಕಣ್ಣುಗಳಲ್ಲಿದ್ದ ದಯೆ ಮತ್ತು ಪ್ರೇಮಕ್ಕೆ ಶೂರ್ಪನಖ ಕರಗಿಹೋದಳು.
ಅವರಿಬ್ಬರ ಹೃದಯಗಳಲ್ಲೂ ಸ್ನೇಹ ಭಾವ ಅಂಕುರಿಸಿತು, ಅವರ ಶರೀರಗಳು ಪುಳಕಿತವಾದವು.
"ನೀನು ಧೈರ್ಯಶಾಲಿ" ಎಂದಳು ಸೀತೆ.
ಮನಃಸ್ಫೂರ್ತಿಯಾಗಿ ಸೀತೆ ಹೇಳಿದ ಆ ಮಾತು ಶೂರ್ಪನಖಳ ಮನಸ್ಸಿನಲ್ಲಿ  ಉದ್ವೇಗವನ್ನು ತಂದಿತು. ತನ್ನ ಜೀವನದ ಉದ್ದೇಶವನ್ನು ಸೀತೆಗೆ ಹೇಳಬೇಕೆಂಬ ಸ್ನೇಹ ಭಾವ ಅವಳ ಹೃದಯದಲ್ಲಿ ತುಂಬಿ ಬಂದಿತು.
"ನನ್ನನ್ನು ಈ ರೀತಿ ನೋಡಿ ಇದೆಲ್ಲಾ ಬಹಳ ಸುಲಭವಾಗಿ ನಡೆಯಿತು ಎಂದುಕೊಳ್ಳಬೇಡ. ಅಂದದ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿಯೇ ಆನಂದವನ್ನು ಪಡೆದುಕೊಂಡೆನು.  

ಕುರೂಪಿಯಾದ ಆರಂಭದ ದಿನಗಳಲ್ಲಿ ಬದುಕು ದುರ್ಭರವಾಗಿಯೆ ಇದ್ದಿತು.  ನನ್ನ ರೂಪ ನನಗೆ ಅಸಹ್ಯವೆನಿಸುತ್ತಿತ್ತು. ನನ್ನನ್ನು ನಾನೇ ದ್ವೇಷಿಸಿಕೊಳ್ಳುತ್ತಿದ್ದೆ.  ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ದಿನಗಳೂ ಇವೆ.  ನನಗೆ ಸೌಂದರ್ಯ ಬೇಕಿತ್ತು, ಪ್ರೇಮವೂ ಬೇಕಿತ್ತು. ಅವೆರಡೂ ಇಲ್ಲದೆ ನಾನು ಬದುಕಿರಲು ಸಾಧ್ಯವಿರಲಿಲ್ಲ. ಅಂತಹ ನಾನು ಕುರೂಪಿಯಾದೆನು."
"ನನ್ನ ರೂಪವನ್ನು ನೋಡಿ ಪುರುಷರು, ನಾನು ಮೋಹಿಸಿದ ಅಂದವಾದ ಪುರುಷರು ನನ್ನನ್ನು ನೋಡಿ ಅಸಹ್ಯಿಸಿಕೊಳ್ಳುತ್ತಿದ್ದರು. ಇನ್ಯಾಕೆ ಈ ಬದುಕು ಎಂದುಕೊಂಡೆನು. ಆ ದಿನಗಳು ನರಕವಾಗಿದ್ದವು. ನನ್ನ ಮನಸ್ಸು ದಿನವೂ ನೋವಿನಿಂದ, ಕೋಪದಿಂದ ಅಗ್ನಿಪರ್ವತವಾಗುತ್ತಿತ್ತು. ಶ್ರೀರಾಮನನ್ನು, ಅವನ ತಮ್ಮನನ್ನು, ನಿನ್ನನ್ನು ಎಷ್ಟೊಂದು ಶಪಿಸುತ್ತಿದ್ದೆನು. ನಿಮ್ಮ ಮೇಲೆ ವಿಷವನ್ನೇ ಸುರಿಸುತ್ತಿದ್ದೆ. ನನ್ನ ಮನಸ್ಸಿನಲ್ಲಿ ಪ್ರೇಮ ಲವಲೇಶವೂ ಇಲ್ಲದೇ ದ್ವೇ಼ಷವೇ ತುಂಬಿಹೋಗಿತ್ತು. ಸೌಂದರ್ಯವನ್ನು ಪ್ರೇಮಿಸುವ ನಾನು ಸುಂದರವಾದ ಪ್ರತಿಯೊಂದನ್ನು ದ್ವೇಷಿಸಲಾರಂಭಿಸಿದೆ. ನನ್ನ ಸೌಂದರ್ಯಾಕಾಂಕ್ಷೆ ಸುಂದರಿಯರ ಬಗ್ಗೆ ಅಸೂಯೆಯಾಗಿ ಮಾರ್ಪಟ್ಟಿತ್ತು.  
ನಾನು ನಡೆಯುವ ಅಗ್ನಿ ಪರ್ವತವಾದೆ, ದುಃಖ ಸಮುದ್ರವಾದೆ."
ವೇದನಾಮಯವಾದ ಶೂರ್ಪನಖಿಯ ನೆನಪಿನಿಂದ ಇಬ್ಬರ ಮನಸ್ಸುಗಳು ಭಾರವಾದವು.

"ಅಷ್ಟು ನೋವಿನಿಂದ ಹೇಗೆ ಹೊರ ಬಂದೆ ಶೂರ್ಪನಖಿ."
"ತುಂಬಾ ಕಷ್ಟವೇ ಆಯಿತು. ಸೌಂದರ್ಯದ ನಿಜವಾದ ಅರ್ಥವನ್ನು ಕಂಡುಕೊಳ್ಳುವುದು ನಿಜಕ್ಕೂ ಕಷ್ಟವಾಯಿತು. ನನಗೆ ಅತಿ ಸೌಂದರ್ಯ ಗರ್ವವಿತ್ತು. ನನ್ನ ಮೂಗನ್ನು ನೋಡಿಕೊಳ್ಳುತ್ತಾ ನಾನೆಷ್ಟು ಸಂಭ್ರಮಿಸುತ್ತಿದ್ದೆನೋ ನಿನಗೆ ತಿಳಿಯದು. ನಿಮ್ಮ ಆರ್ಯರ ಮೂಗುಗಳು ನನಗೆಷ್ಟು ವಿಚಿತ್ರವಾಗಿ ಕಾಣಿಸುತ್ತಿದ್ದವು. ವಿಚಿತ್ರದಲ್ಲಿಯೂ ಒಂದು ಸೌಂದರ್ಯ ಇಲ್ಲದಿರುವುದಿಲ್ಲ. ನನ್ನ ಮೂಗು ಉದ್ದವೂ ಅಲ್ಲ ಹಾಗಂತ ಮೊಂಡೂ ಅಲ್ಲ.
"ಮೂಗು ಹೇಗಿರಬೇಕೆಂದು ಆ ಶಿವ ಸೃಷ್ಟಿ ಆರಂಭದಲ್ಲಿ ಅಂದುಕೊಂಡನೋ ಅಂತಹ ಮೂಗು ನನ್ನದೆಂದು ನನಗೆಷ್ಟು ಗರ್ವವಿತ್ತು. ನನ್ನ ಪ್ರೀತಿ ಪಾತ್ರರು ಆ ಮೂಗನ್ನು ಚುಂಬಿಸಿದರೆ ನನಗೆಷ್ಟೋ ಖುಷಿಯಾಗುತ್ತಿತ್ತು.
ಆ ಮೂಗನ್ನು ಕಳೆದುಕೊಳ್ಳುವುದೆಂದರೆ ಏನೆಂದು ನನ್ನನ್ನು ಬಿಟ್ಟರೆ ಬೇರೆಯವರಿಗೆ ಅರ್ಥವಾಗದು. ಅದನ್ನೆಲ್ಲಾ ಸಹಿಸಿದೆ. ಕುರೂಪದಿಂದ ಬಂದ ವಿಕೃತವಾದ ಆಲೋಚನೆಗಳ ಭಾರವನ್ನು ಹೊತ್ತೆ. ಒಮ್ಮೊಮ್ಮೆ ಎಲ್ಲವನ್ನೂ ಎಲ್ಲರನ್ನೂ ರೂಪಹೀನಗೊಳಿಸಬೇಕೆನಿಸುತ್ತಿತ್ತು. ಆ ದ್ವೇಷದಿಂದ ಹೊರಬರಲು, ಮತ್ತೆ ಸೌಂದರ್ಯವನ್ನು ಪ್ರೇಮಿಸಲು ರೂಪ, ಕುರೂಪಗಳ ನಿಜವಾದ ಸಾರಾಂಶವನ್ನು ಕಂಡುಕೊಳ್ಳಲು ನನ್ನ ಜೊತೆ ನಾನೇ ಯುದ್ಧ ಮಾಡಬೇಕಾಗಿ ಬಂತು.  
ಆ ಯುದ್ಧದಲ್ಲಿ ನನಗೆ ಸಹಕರಿಸಿದ್ದು ಈ ಅನಂತ ಪ್ರಕೃತಿ.  ಪ್ರಕೃತಿಗೆ ರೂಪ, ಕುರೂಪಗಳೆಂಬ ಭೇದವಿಲ್ಲ ಎಂಬುದನ್ನು ಗ್ರಹಿಸಲು ಬಹಳ ಕಷ್ಟಪಟ್ಟೆ. ಅನೇಕ ಜೀವಗಳನ್ನು ಗಮನಿಸಿದೆ. ಸ್ತಬ್ಧತೆ ಚಲನದಲ್ಲಿನ ಏಕರೂಪತೆಯನ್ನು ಗಮನಿಸಿದೆ. ಬಣ್ಣಗಳ ರಹಸ್ಯವನ್ನು ಅರಿತೆನು. ಈ ವಿಷಯದಲ್ಲಿ ನನಗೆ ಯಾರೂ ಗುರು ಇಲ್ಲ. ನನಗೆ ನಾನೇ ಶೋಧಿಸಿದೆ. ಪ್ರಕೃತಿಯ ಪ್ರತಿ ಅಣುವನ್ನು ಶೋಧಿಸಿದೆ. ಆ ಶೋಧನೆಯಲ್ಲಿ ನನ್ನ ದೃಷ್ಟಿ ಬದಲಾಗಿಹೋಯಿತು. ನನ್ನ ಕಣ್ಣಿಗೆ ಪ್ರತಿಯೊಂದು ಅಂದವಾಗಿ ಕಾಣತೊಡಗಿತು. ನನ್ನ ಜೊತೆಗೆ ಪ್ರತಿಯೊಂದನ್ನೂ ಅಸಹ್ಯಿಸಿಕೊಳ್ಳುತ್ತಿದ್ದ ನಾನು ನನ್ನನ್ನೂ ಸೇರಿದಂತೆ ಪ್ರತಿಯೊಂದನ್ನೂ ಪ್ರೀತಿಸತೊಡಗಿದೆ."
"ಪಕ್ಷಿಗಳು ಏನೋ ಕಾರಣದಿಂದ ಚುಚ್ಚಿ ಚುಚ್ಚಿ ಎಲೆಗಳನ್ನು ಕಿತ್ತರೂ,  ಆ ಚಿಕ್ಕ ಪಕ್ಷಿ ನನ್ನಲ್ಲಿ ಉಂಟುಮಾಡುವ ಸ್ಪಂದನ ಎಷ್ಟು ಪ್ರೇಮಭರಿತವೋ ಅಷ್ಟೇ ಸೌಂದರ್ಯಭರಿತ ಎಂದು ತಿಳಿದುಕೊಳ್ಳಲು, ಆ ಸ್ಪಂದನೆಯನ್ನು ಅರ್ಥಮಾಡಿಕೊಳ್ಳಲು ನಾನು ಮಾಡಿದ ಸಾಧನೆ ಅಸಾಮಾನ್ಯವಾದದ್ದು. ಕ್ರಮವಾಗಿ ನನ್ನ ಕೈಗಳನ್ನು ಪ್ರೀತಿಸುವುದನ್ನು ಕಲಿತೆ, ಆ ಕೈಗಳಿಂದ ಸೃಷ್ಟಿಸುವುದನ್ನು ಕಲಿತೆ, ಶ್ರಮಿಸುವುದನ್ನು, ಸೇವೆ ಮಾಡುವುದನ್ನು ಕಲಿತುಕೊಂಡೆ. ಇದೆಲ್ಲಾ ಸಾಧ್ಯವಾಗಲು ಹತ್ತು ವರ್ಷಗಳಿಗಿಂತ ಹೆಚ್ಚೇ ಬೇಕಾಯಿತು. ಹತ್ತು ವರ್ಷಗಳ ಕಠೋರ ದೀಕ್ಷೆ ಫಲಿಸಿದ ನಂತರ ಈ ತೋಟವನ್ನು ಬೆಳೆಸಲಾರಂಭಿಸಿದೆ."
ತನ್ನ ಜೀವನಯಾನದ ಸತ್ಯ ಸೌಂದರ್ಯವನ್ನು ಸೀತೆಯ ಮುಂದಿಟ್ಟಳು.

"ನೀನೆಷ್ಟು ಸುಂದರವಾಗಿದ್ದೀಯೆ ಶೂರ್ಪನಖ. ನಿನ್ನ ಅಂದವನ್ನು ಯಾವ ಪುರುಷನೂ ಗ್ರಹಿಸದಿರಬಹುದು."
ಸೀತೆಯ ಕಂಠ ಗದ್ಗದವಾಯಿತು. 
ತನ್ನ ಅಗ್ನಿಪರೀಕ್ಷೆಗಿಂತ ಶೂರ್ಪನಖ ಗುರಿಯಾದ ಪರೀಕ್ಷೆ ಕಡಿಮೆಯದಲ್ಲ ಎಂದುಕೊಳ್ಳುತ್ತಲೇ ಸೀತೆಯ ಕಣ್ತುಂಬಿ ಬಂದಿತು.
ಶೂರ್ಪನಖ ಹಾಯಾಗಿ ಅಂದವಾಗಿ, ಆನಂದವಾಗಿ ನಕ್ಕಳು.
"ಪುರುಷರಿಗೆ ಮಾತ್ರ ಕಣ್ಣಿರುವುದಲ್ಲವೆ, ಮನಸ್ಸಿರುವುದಲ್ಲವೇ? ಕುರೂಪಿಗಳನ್ನು ಮಾಡುವ, ಅವರನ್ನು ಅಸಹ್ಯಿಸಿಕೊಳ್ಳುವುದು ಮಾತ್ರವೇ ಗೊತ್ತಿರುವ ಪುರುಷರ ಬಗ್ಗೆ  ಅಲ್ಲ..."
"ಅಂದರೆ. . . "  ಸೀತೆ ಮಾತು ನಿಲ್ಲಿಸಿದರೂ ಅವಳಿಗೆ ವಿಷಯ ಅರ್ಥವಾಯಿತು.
"ನಿನ್ನ ಊಹೆ ನಿಜವೆ ಸೀತಾ. ನನಗೊಬ್ಬ ಪುರುಷನ ಸಹಚರ್ಯ ದೊರಕಿದೆ. ನನ್ನ ಕೈಗಳಿಂದ ಪ್ರಕೃತಿಗೆ ಹರಿಯುವ ಸೌಂದರ್ಯವನ್ನು ಸ್ವಲ್ಪ ಸಮಯ ತನ್ನದಾಗಿಸಿಕೊಂಡು, ತನ್ನನ್ನು ನನಗರ್ಪಿಸಿಕೊಳ್ಳುವ ಅದೃಷ್ಟವಂತ ಇದ್ದಾನೆ" ಎನ್ನುತ್ತಾ ಶೂರ್ಪನಖ ಜೋರಾಗಿ "ಸುಧೀರ" ಎಂದು ಕರೆದಳು. ಹೆಸರಿಗೆ ತಕ್ಕ ಒಬ್ಬ ದೃಢಕಾಯನಾದ ವ್ಯಕ್ತಿ  ಅಲ್ಲಿಗೆ ಬಂದನು. 
"ಈಕೆ ಸೀತಾ."
ಸುಧೀರ ಗೌರವದಿಂದ ನಮಸ್ಕರಿಸಿದ.
"ಸೀತೆಗೆ ನಿನ್ನನ್ನು ತೋರಿಸಲೆಂದೆ ಕರೆದನು."
ಈ ಮಾತಿನಿಂದ ಸುಧೀರ ಅಲ್ಲಿಂದ ಹೊರಟು ಹೋದ.  ಈ ಚಿಕ್ಕ ವರ್ತನೆಯಿಂದ ಇಲ್ಲಿಯವರೆಗೂ ಯಾವ ಸ್ತ್ರೀ ಪುರುಷರ ಮಧ್ಯೆಯೂ  ತಾನು ಕಾಣದ ಬಂಧವೇನೂ ಇವರ ಮಧ್ಯೆ ಇದೆಯೆನಿಸಿತು ಸೀತೆಗೆ.
"ನಿನ್ನ ಜೀವನವನ್ನು ಸಫಲಗೊಳಿಸಿಕೊಂಡಿರುವೆ."
"ಸಫಲತೆಯ ಅರ್ಥ ಪುರುಷನ ಸಹಚರ್ಯದಿಂದ ಬರುವುದಿಲ್ಲವೆಂದು ಗ್ರಹಿಸಿದೆನು. ಅದು ತಿಳಿದ ಮೇಲೆಯೇ ಈ ಪುರುಷನ ಸಹಚರ್ಯೆ ದೊರಕಿದ್ದು."
ಸೀತಾ ಶೂರ್ಪನಖಳ ಮಾತನ್ನು ಜಾಗೃತೆಯಿಂದ ಕೇಳುತ್ತಿದ್ದಳು. ಅವಳ ಮಾತುಗಳಲ್ಲಿ ಏನೋ ವಿವೇಕ, ಏನೋ ಗಾಂಭೀರ್ಯ.  ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು.
" ಸೀತಾ. . .  ನೀನು?"
" ಮಕ್ಕಳ ಪಾಲನೆಯಲ್ಲಿ ನನ್ನ ಜೀವನ ಸಾರ್ಥಕವಾಗುತ್ತದೆ."
"ಅದೇ ನಿನ್ನ ಜೀವನದ ಆದರ್ಶವೇ?"
"ಹೌದು,  ನಾನು ರಾಮನ ಪತ್ನಿ  ಪಟ್ಟದ ರಾಣಿಯಾಗಿ ನನ್ನ ಕರ್ತವ್ಯಗಳನ್ನು ನೆರವೇರಿಸಲಾಗಲಿಲ್ಲ. ಕನಿಷ್ಠ ರಾಮರಾಜ್ಯಕ್ಜೆ ವಾರಸುದಾರನ್ನಾದರೂ ಕೊಡಬೇಕಲ್ಲವೇ."
"ರಾಜ್ಯದಲ್ಲಿ ನೀನೆಂದೂ ಇಲ್ಲದೇ ಹೋದರೂ ನಿನ್ನ ಜೀವನ ಹೇಗೆ ರಾಜ್ಯದ ಜೊತೆ ಬೆಸೆದು ಕೊಂಡಿದೆಯಲ್ಲ ಸೀತಾ?"
"ರಾಜಪತ್ನಿಯಾದ ನಂತರ ಇದು ತಪ್ಪುವುದಿಲ್ಲ ಅಲ್ಲವೇ?"
"ಯಾಕೋ ನನಗೆ ಮೊದಲಿನಿಂದಲೂ ರಾಜ್ಯವೆಂದರೆ ಭಯ. ನನ್ನ ಅಣ್ಣ ಎಷ್ಟು ಹೇಳಿದರೂ ನಾನು ರಾಜ್ಯದಲ್ಲಿ ಇರುತ್ತಿರಲಿಲ್ಲ. ಅರಣ್ಯ ವಿಹಾರದಲ್ಲಿ ಇರುವಷ್ಟು ಸಂತೋಷ ಇನ್ನಾವುದರಲ್ಲೂ ಸಿಗುವುದಿಲ್ಲ."
"ನನಗೂ ಅರಣ್ಯವಾಸವೇ ಇಷ್ಟ. ರಾಮ ಪರಿತ್ಯಜಿಸಿದ ಮೇಲೆ ಈ ವನವಾಸ ನನ್ನ ಕ್ಲೇಶವನ್ನು ತಗ್ಗಿಸಿದೆ."
ಮಾತುಗಳಲ್ಲಿ ಸಮಯ ಸರಿದದ್ದು ತಿಳಿಯಲಿಲ್ಲ.
"ನನ್ನ ಮಕ್ಕಳಿಗೆ ಅವರು ಶ್ರೀರಾಮನ ಮಕ್ಕಳೆಂದು ತಿಳಿಯದು. ನಾನು ಹೇಳಲಿಲ್ಲ. ಸಮಯ ಬಂದಾಗ ತಿಳಿಯುತ್ತದೆ."
"ತಿಳಿದ ಮೇಲೆ ಅವರು ಕ್ಷಣವಾದರೂ ಇರುತ್ತಾರಾ?"
ಶೂರ್ಪನಖ ಸೀತೆಯ ಕಡೆ ಕರುಣೆಯಿಂದ ನೋಡಿದಳು.
"ಅವರಿಗೆ ಅರಣ್ಯವಾಸ ಇಷ್ಟವೇ" ಅಂದಳು ಸೀತೆ.
"ಅವರಿಗೆ ಇಷ್ಟವಾಗಬಹುದು. ಆದರೆ ರಾಜ್ಯಕ್ಕೆ ಅರಣ್ಯವೆಂದರೆ ಏನು ಪ್ರೇಮ? ನಗರಗಳ ಅಭಿವೃದ್ಧಿ, ನಾಗರಿಕರ ರಕ್ಷಣೆಗೋಸ್ಕರ ಅರಣ್ಯ ಪುತ್ರರು ಹೋಗಲೇ ಬೇಕೇನೋ." 
ತಪ್ಪುವುದಿಲ್ಲ ಎಂದು ಸೀತೆಗೆ ಗೊತ್ತಿತ್ತು.
"ಆಗ ಏನು ಮಾಡುತ್ತೀಯಾ. ಒಬ್ಬಳೇ ವಾಲ್ಮೀಕಿ ಆಶ್ರಮದಲ್ಲಿ ಇದ್ದುಬಿಡುತ್ತೀಯ?"
"ಇಲ್ಲ ಶೂರ್ಪನಖ. ನನ್ನ ತಾಯಿ ಭೂದೇವಿಯ ಆಶ್ರಯ ಪಡೆಯುತ್ತೇನೆ."
"ನಿನ್ನ ತಾಯಿ ಎಲ್ಲಿಲ್ಲ ಸೀತಾ? ಆದರೆ ನಿನ್ನ ತಾಯಿಗೆ ಇದಕ್ಕಿಂತ ಸುಂದರ ರೂಪ ಇನ್ನೆಲ್ಲಿಯೂ ಇಲ್ಲ ಎಂದು ನನ್ನ ಅಭಿಪ್ರಾಯ."
ಗರ್ವದಿಂದ ತನ್ನ ತೋಟವನ್ನು ನೋಡಿದಳು ಶೂರ್ಪನಖ.
ಶೂರ್ಪನಖಳ ಉದ್ದೇಶ ಅರ್ಥವಾಯಿತೆಂಬಂತೆ ನಕ್ಕಳು ಸೀತೆ. ಅಂದುಕೊಳ್ಳದ ಆದರಣೆಯಿಂದ ಸೀತೆಯ ಮನಸ್ಸು ತುಂಬಿಬಂತು.
"ತಪ್ಪದೆ ಬರುತ್ತೇನೆ ಶೂರ್ಪನಖ. ನನ್ನ ಮಕ್ಕಳು ನನ್ನನ್ನು ಬಿಟ್ಟು ನಗರಕ್ಕೆ ಹೋದ ಮೇಲೆ ನಾನು ಭೂಪುತ್ರಿಯಾಗುತ್ತೇನೆ. ಈ ತಣ್ಣನೆ ಗಿಡಗಳ ನೆರಳನ್ನು ಅನುಭವಿಸಿತ್ತಾ ಜೀವನಕ್ಕೊಂದು ಹೊಸ ಅರ್ಥವನ್ನು ಕಲ್ಪಿಸಿಕೊಳ್ಳುತ್ತೇನೆ."
ಮಕ್ಕಳ ಬರುವಿಕೆಯಿಂದ ಅವರ ಮಾತುಕತೆ ನಿಂತುಹೋಯಿತು.
ಶೂರ್ಪನಖ ಅವರಿಗೆ ಹಣ್ಣುಗಳನ್ನು ಕೊಟ್ಟಳು. ಅವರು ಆಪ್ಯಾಯತೆಯಿಂದ ಅದನ್ನು ತೆಗೆದುಕೊಂಡರು.
"ಯಾರಮ್ಮ ಆಕೆ" ದಾರಿಯಲ್ಲಿ ಕೇಳಿದರು ತಾಯಿಯನ್ನು.
"ನನಗೆ ತುಂಬಾ ಬೇಕಾದ ವ್ಯಕ್ತಿ.  ತುಂಬಾ ಆಪ್ತೆ."
"ಮತ್ತೆ ನಮಗೆ ಯಾವಾಗಲೂ ಹೇಳಲೇ ಇಲ್ಲ."
"ಕಾಲ ಬಂದಾಗ ಎಲ್ಲಾ ತಿಳಿಯುತ್ತದೆ. ಆದರೆ ಈ ಅರಣ್ಯದಲ್ಲಿರುವ ಈ ಉದ್ಯಾನವನದ ಹಾದಿಯನ್ನು ಎಂದಿಗೂ ಮರೆಯಬೇಡಿ. ನೀವು ಎಲ್ಲಿಗೇ ಹೋದರೂ, ಏನು ಮಾಡಿದರೂ ಈ ಹಾದಿಯನ್ನು ಎಂದಿಗೂ ಮರೆಯಬೇಡಿ. ಮರೆಯುವುದಿಲ್ಲ ಅಲ್ಲವೇ."
"ಮರೆಯುವುದಿಲ್ಲಮ್ಮ" ತಾಯಿಗೆ ವಚನವಿತ್ತರು ಲವಕುಶರು.
****
[ಅನುವಾದ - ಸುಧಾ ಜಿ]

ಕಾಮೆಂಟ್‌ಗಳಿಲ್ಲ: