Pages

ಮಹಾನತೆಯತ್ತ - ಇಂದ್ರಾಣಿ ಚಕ್ರವರ್ತಿ

[ಈ ಅಂಕಣದಲ್ಲಿ ನಾವು ಸಾಮಾನ್ಯತೆಯಿಂದ ಮಹಾನತ್ತೆಯತ್ತ ಸಾಗುತ್ತಿರುವ ಕಿರಿಯರು - ಹಿರಿಯರ ಬಗ್ಗೆ ವರದಿ ನೀಡಲಿಚ್ಛಿಸುತ್ತೇವೆ. ಹುಟ್ಟಿದಾಗಲೇ ಯಾರೂ ಮಹಾನರಾಗಿ ಹುಟ್ಟುವುದಿಲ್ಲ, ಮಹಾನತೆ ನಮ್ಮ ಕ್ರಿಯೆಗಳಿಂದಾಗುತ್ತದೆ. ಮಹಾನರಾದವರ ಸಾಧನೆಯ ಹಿಂದೆ ಶ್ರಮವಿದೆ, ದೃಢಸಂಕಲ್ಪವಿದೆ. ಪ್ರತಿಯೊಬ್ಬರು ಮನಸ್ಸು ಮಾಡಿದಲ್ಲಿ ಮಹಾನತೆಯತ್ತ ಸಾಗಬಹುದೆಂಬುದೇ ನಮ್ಮ ಅಭಿಪ್ರಾಯ.]

ವೃದ್ಧರ ಬಗ್ಗೆ ಕಾಳಜಿ  

ಅವರು ಹೊರಟದ್ದು ಡಾಕ್ಟರೇಟ್ ಪದವಿ ಮಾಡಲೆಂದು, ಆದರೆ ಮಾಡಿದ್ದು ಬೇರೆಯೆ. 

ಇಂದ್ರಾಣಿ ಚಕ್ರವರ್ತಿಯವರ ತಾಯ್ತಂದೆಯರು ಉದ್ಯೋಗಿಗಳಾಗಿದ್ದರಿಂದ ಪುಟ್ಟ ಇಂದ್ರಾಣಿಯನ್ನು ಅಜ್ಜಿ-ತಾತನ ಬಳಿ ಬಿಟ್ಟು ಹೋಗುತ್ತಿದ್ದರು. ಆ ಕಾರಣದಿಂದಲೇ ಇಂದ್ರಾಣಿಯವರು ಹಿರಿಯರ ಬಗ್ಗೆ ಅಪಾರ ಗೌರವ-ಪ್ರೀತಿಯನ್ನು ಬೆಳೆಸಿಕೊಂಡರು.
ಇಂದ್ರಾಣಿಯವರು ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ತಮ್ಮ ಸಂಶೋಧನೆಗೆ ಆಯ್ದುಕೊಂಡ ವಿಷಯ “ಕಲ್ಕತ್ತಾದ ಬಡ ಪಿಂಚಣಿದಾರರ ಸಮಸ್ಯೆಗಳು”. ತಮ್ಮ ಸಂಶೋಧನೆಯ ಅವಧಿಯಲ್ಲಿ ಸಮಾಜ ಹಿರಿಯ ನಾಗರಿಕರನ್ನು ಹೇಗೆ ಕಡೆಗಣಿಸಿದೆ ಎಂಬುದು ಅವರಿಗೆ ಮನದಟ್ಟಾಯಿತು. ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ಖರ್ಚು ಮಾಡಿ, ಕೈಖಾಲಿಯಾದ ನಂತರ ಮಕ್ಕಳ ತಿರಸ್ಕಾರಕ್ಕೆ ಒಳಗಾಗುವ ತಾಯ್ತಂದೆಯರು, ಹಣದ ಕೊರತೆಯಿಲ್ಲದಿದ್ದರೂ ಕುಟುಂಬಕ್ಕೆ ಬೇಡವೇನೋ ಎನ್ನುವ ಪರಿಸ್ಥಿತಿಯನ್ನು ಎದುರಿಸುವ ಹಿರಿಯರನ್ನು ಕಂಡು ಇಂದ್ರಾಣಿಯವರು ಸಂಕಟಪಟ್ಟರು. 

ಅವರಿಗಾಗಿ ಏನಾದರೂ ಮಾಡಲೇಬೇಕು ಎನ್ನುವ ಸಂಕಲ್ಪ ತೊಟ್ಟ ಅವರು ಡಾಕ್ಟರೇಟ್ ಪಡೆದ ನಂತರ 1990ರಲ್ಲಿ, ಒಂದು ಬಾಡಿಗೆ ಮನೆಯನ್ನು ತೆಗೆದುಕೊಂಡು, ತಮ್ಮ ಸ್ನೇಹಿತರ ನೆರವಿನೊಂದಿಗೆ ಹಿರಿಯ ನಾಗರಿಕರಿಗಾಗಿ ಒಂದು ಆಶ್ರಯ ಧಾಮವನ್ನು ಆರಂಭಿಸಿದರು. ಅಲ್ಲಿ 50 ಮಂದಿ ಹಿರಿಯರು ಬೆಳಿಗ್ಗೆಯಿಂದ ಸಂಜೆಯವರೆಗೂ ಒಟ್ಟಾಗಿ ಸೇರಿ, ಕಥೆಗಳನ್ನು ಹೇಳುತ್ತಾ, ಹಾಡುಗಳನ್ನು ಹಾಡುತ್ತಾ, ಟಿವಿ ನೋಡುತ್ತಾ, ಆಟಗಳನ್ನು ಆಡುತ್ತಾ, ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಾ ಕಾಲ ಕಳೆಯುತ್ತಾರೆ. ಸಂಜೆ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ. 

ಕ್ರಮೇಣ ಈ ಧಾಮವೇ “ವೃದ್ಧರ ಸಮಸ್ಯೆಗಳ ಅಧ್ಯಯನ ಕೇಂದ್ರ”ವಾಗಿದೆ. ಈ ಸಂಸ್ಥೆ ಹತ್ತಿರದಲ್ಲಿರುವ ಕೊಳಗೇರಿಗಳಲ್ಲಿ ವೈದ್ಯಕೀಯ ನೆರವನ್ನು ನೀಡುವುದೇ ಅಲ್ಲದೆ 60 ಮಂದಿ ಹಿರಿಯರನ್ನು ದತ್ತು ತೆಗೆದುಕೊಂಡು ಅವರನ್ನು ನೋಡಿಕೊಳ್ಳುತ್ತಿದೆ. ಸರ್ಕಾರ ಮತ್ತು ಇತರೆ ದಾನಿಗಳ ನೆರವಿನಿಂದ ಇದನ್ನು ನಡೆಸಲಾಗುತ್ತಿದೆ.

ಇದರೊಂದಿಗೆ ಮಧ್ಯವಯಸ್ಕ ಇಂದ್ರಾಣಿಯವರು ಹಿರಿಯರ ಸಮಸ್ಯೆಗಳ ಬಗ್ಗೆ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಹಿರಿಯ ನಾಗರಿಕರ ಅನುಭವ ಮತ್ತು ಕೌಶಲ್ಯಗಳಿಂದ ಸಮಾಜ ಎಷ್ಟು ಉಪಯೋಗವನ್ನು ಪಡೆಯಬಹುದು ಎಂಬುದರ ಬಗ್ಗೆ ಈಗಾಗಲೇ ಅವರು ಬಹಳಷ್ಟು ಕಡೆಗಳಲ್ಲಿ ತಿಳಿಸಿಹೇಳಿದ್ದಾರೆ. “ನಾವು ನಮ್ಮ ಹಿರಿಯರೊಂದಿಗೆ ವರ್ತಿಸುವ ರೀತಿ ನಿಜಕ್ಕೂ ಅವಮಾನಕರ. ಅವರಿಂದ ನಾವು ಪಡೆದುಕೊಳ್ಳುವಂತಹದ್ದು ಬೇಕಾದಷ್ಟಿದೆ. ಜೊತೆಗೆ ಅವರು ಸಮಾಜಕ್ಕೆ, ನಮಗೆ ನೀಡಿರುವುದಕ್ಕೆ ಪ್ರತಿಫಲವಾಗಿ ನಾವು ಅವರ ಬಗ್ಗೆ ಕಾಳಜಿ ವಹಿಸಬೇಕಾದದ್ದು ನಮ್ಮ ಕರ್ತವ್ಯ” ಎನ್ನುತ್ತಾರೆ ಇಂದ್ರಾಣಿಯವರು. 
  -  ಸುಧಾ ಜಿ 

ಕಾಮೆಂಟ್‌ಗಳಿಲ್ಲ: