Pages

ಪುಸ್ತಕ ಪ್ರೀತಿ - ಶ್ಯಾಮಲಾ ಬೆಳಗಾಂವ್ಕರ್ ರವರ "ಹೂಬಿಸಿಲು ಮತ್ತು ‌ಹೊಂಬಿಸಿಲು"

ವಿಜಯಾ ದಬ್ಬೆಯವರ ಸಂಪಾದಕತ್ವದಲ್ಲಿ ಹೊರಬಂದ "ಶ್ಯಾಮಲಾ ಸಂಚಯ" ಕೃತಿಯಿಂದ ಲೇಖಕಿ ಶ್ಯಾಮಲಾ ಬೆಳಗಾಂವ್ಕರ್ ರವರ  "ಹೂಬಿಸಿಲು ಮತ್ತು ‌ಹೊಂಬಿಸಿಲು"   ಕಥಾಸಂಕಲನದಿಂದ ಆಯ್ದ ಹಲವು ಕಥೆಗಳ ಪರಿಚಯ ನಿಮ್ಮ ಮುಂದೆ.....

ಮೂವರು ನಾಗರಿಕರು

ಮಧುಮತಿ, ಕೃಷ್ಟಿ ಮತ್ತು ಶಾಂತೆ ಮೂವರು ಗೆಳತಿಯರು. ಒಂದೇ ಶಾಲೆಯಲ್ಲಿ ಓದುತ್ತಿರುವವರು. ಮುನ್ಸಿಪಾಲಿಟಿ ಸದಸ್ಯ ತೀರಿಹೋದ ಕಾರಣ ಶಾಲೆಗೆ ರಜೆಯನ್ನು ಘೋಷಿಸಿದ್ದರು.  ಮೂವರು ಗೆಳತಿಯರು ಮನೆ ಕಡೆಗೆ ಹೊರಟರು. ದಾರಿಯಲ್ಲಿ ಮನ ಬದಲಿಸಿ ತೀರಿ ಹೋದ ಸದಸ್ಯರ ಶವವನ್ನು ನೋಡಿಕೊಂಡು ಹೋಗುವುದಾಗಿ ನಿರ್ಧರಿಸಿದರು. ದಾರಿಯಲ್ಲಿ ವಯೋಸಹಜ ಕುತೂಹಲದಿಂದ ಅಂಗಡಿಗಳನ್ನೆಲ್ಲಾ ನೋಡಿಕೊಂಡು ಹೋಗುತ್ತಿದ್ದರು. ಒಬ್ಬರಿಗೊಬ್ಬರು ರೇಗಿಸಿಕೊಂಡು ನಡೆಯುತ್ತಿದ್ದರು. ಮಿಠಾಯಿ ಅಂಗಡಿಯಲ್ಲಿ ಮಿಠಾಯಿಯನ್ನು ತೆಗೆದುಕೊಂಡು ಪರೀಕ್ಷೆಯಲ್ಲಿ ಪಾಸಾಗುವಂತೆ ಹರಕೆ ಕಟ್ಟಿಕೊಂಡರು. ಅಂತೂ ಕೊನೆಗೆ ಮುನ್ಸಿಪಾಲಿಟಿ ಕಛೇರಿಗೆ ಬಂದು ಎಲ್ಲಾ ಕಡೆ ಹುಡುಕಾಡಿದರು. ಆದರೆ ಎಲ್ಲೂ ಸದಸ್ಯರ ಶವ ಕಾಣಲಿಲ್ಲ. ಕೊನೆಗೆ ಅಲ್ಲೇಯಿದ್ದವರನ್ನು ಕೇಳಿದರು. ಅವರು ಸದಸ್ಯರು ಅವರ ಮನೆಯಲ್ಲಿ ತೀರಿ ಹೋಗಿರುವುದು, ನೀವು ಅಲ್ಲೇ ಹೋಗಿ ನೋಡಿ ಎಂದರು.  ಮಕ್ಕಳು ಹೊಟ್ಟೆ ಹಸಿಯತೊಡಗಿದ್ದರಿಂದ ತಮ್ಮ ತಮ್ಮ ಮನೆ ಕಡೆಗೆ ಹೊರಟರು.

ನೀಲೆಯ ಸಂಸಾರ

ನೀಲೆ ತೇಗೂರ ಗೌಡರ ಮಗಳು. ಗೌಡರ ತಂಗಿ ಪದ್ಮಳಿಗೆ ವಕೀಲರೊಂದಿಗೆ ವಿವಾಹವಾಯಿತು. ಪೇಟೆಗೆ ಬಂದ ಪದ್ಮ ಅಣ್ಣನ ಮಗಳನ್ನು ತನ್ನ ಜೊತೆಯಲ್ಲಿ ಕರೆ ತಂದಳು. ಪೇಟೆಯಲ್ಲಿ ಶಾಲೆಗೆ ಸೇರಿದ ನೀಲೆ ನಾಲ್ಕನೇ ತರಗತಿಯವರೆಗೆ ಓದಿದಳು. ಪದ್ಮಳ ಮಗ ಶಂಕರ. ಒಂದೇ ಮನೆಯಲ್ಲಿದ್ದ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದನ್ನು ಪದ್ಮ ಮತ್ತು ಅವಳ ಪತಿ ಒಪ್ಪಿಕೊಂಡಿದ್ದರು. ಹೇಗೋ ಇದರ ಸುಳಿವು ತಿಳಿದ ಗೌಡರು ಮಗಳನ್ನು ಊರಿಗೆ ಕರೆಯಿಸಿಕೊಂಡರು. ಹಾಗೂ ಶಿದ್ಲಿಂಗ ಗೌಡನೊಡನೆ ಮಗಳ ಮದುವೆಯನ್ನು ನಿಶ್ಚಯಿಸಿದರು. ನೀಲೆ ಅತ್ತೆಗೆ ಕಾಗದ ಬರೆದಳು. ಅತ್ತೆ ಪದ್ಮಳು ಸಹ ನೀಲೆಗೆ ಕಾಗದ ಬರೆದಳು. ಆದರೆ ಗೌಡರು ಮಗಳಿಗೆ ತಿಳಿಯದಂತೆ ತಾವೇ ಉತ್ತರ ಬರೆಯಿಸಿ ಕಳುಹಿಸಿದರು. ತಡವಾಗಿ ತಲುಪಿದ ಕಾಗದವನ್ನೋದಿ ಪದ್ಮ ನೀಲೆಯನ್ನು ಕರೆ ತರಲು ಹೊರಟಳು. ಆದರೆ ಪದ್ಮ ಹೋಗುವವರೆಗೆ ಮದುವೆ ನಡೆದು ಹೋಯಿತು. ಬಂದ ದಾರಿಯಲ್ಲೇ ಪದ್ಮ ಮನೆಗೆ ತೆರಳಿದಳು. ನಂತರ ಶಂಕರನ ಮದುವೆಯೂ ನಡೆಯಿತು. ಮದುವೆಗೆ ನೀಲೆಯೂ ಗಂಡನೊಂದಿಗೆ ಹೋಗಿ ಬಂದಳು. ಮುಂದೆ ತಿಂಗಳಿಗೊಮ್ಮೆ ಶಂಕರನ ಮನೆಗೆ ಹೋಗುತ್ತಿದ್ದಳು. ಶಂಕರನನ್ನು ನೋಡಿ ಖುಷಿ ಪಡುವಳು. ಗಂಡನು ಇದಕ್ಕೆ ಅಡ್ಡಿ ಪಡಿಸಲಿಲ್ಲ.

ದೊಡ್ಡಮ್ಮ ನೋಡಿದ ವರ

ಸರೋಜ ಸುಂದರಮ್ಮನ ತಂಗಿಯ ಮಗಳು. ತಂಗಿ ಮತ್ತು ಅವಳ ಗಂಡ ಪ್ಲೇಗ್ ಕಾಯಿಲೆಯಿಂದ ತೀರಿ ಹೋದರು. ಸಾಯುವ ಮೊದಲು ತಮ್ಮ ಆಸ್ತಿ ಪತ್ರ ಎಲ್ಲವನ್ನೂ ಸುಂದರಮ್ಮನಿಗೆ ಕೊಟ್ಟು ಮಗಳನ್ನು ಸಾಕುವಂತೆ ಹೇಳಿ ತೀರಿಹೋದರು. ಹೀಗಾಗಿ ಸರೋಜ ದೊಡ್ಡಮ್ಮನ ಬಳಿ ಬೆಳೆದಳು.
ಸರೋಜ ಮದುವೆ ವಯಸ್ಸಿಗೆ ಬಂದಾಗ ವರನನ್ನು ಹುಡುಕಲು ಆರಂಭಿಸಿದರು. ದೊಡ್ಡಮ್ಮ ತೋರಿಸಿದ ಹುಡುಗನ ಭಾವಚಿತ್ರವನ್ನು ನೋಡಿ ಸರೋಜ ಮದುವೆಗೆ ಒಪ್ಪಿದಳು. ಮದುವೆ ಗಂಡಿನ ಮನೆಯಲ್ಲಿ ಎಂದು ನಿಶ್ಚಯವಾಯಿತು.
ಸರೋಜ ದೊಡ್ಡಮ್ಮನ ಜೊತೆಯಲ್ಲಿ ಗಂಡಿನ ಮನೆಗೆ ಬಂದಳು. ಮದುವೆಯ ಸಿದ್ಧತೆಗಳೆಲ್ಲಾ ನಡೆದಿದ್ದವು. ಹಸೆಮಣೆ ಏರಿದ ಸರೋಜ ವರನಿಗೆ ಹಾರ ಹಾಕುವಾಗ ತಿಳಿಯಿತು ತಾನು ಮದುವೆಯಾಗಿರುವುದು‌ ಮುದುಕನನ್ನು ಎಂದು. ಹಣದಾಸೆಯಿಂದ ದೊಡ್ಡಮ್ಮ ವರನೆಂದು ಮಗನ ಭಾವಚಿತ್ರ ತೋರಿಸಿ ಅವರಪ್ಪನಿಂದ ಐದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದ್ದಳು. ಮಗನಿಗೆ ತಿಳಿಯದಂತೆ ಅಪ್ಪ ಈ ಕೆಲಸ‌ ಮಾಡಿದ್ದನು. ದೊಡ್ಡಮ್ಮನ ಹಣದ ದಾಹ ಸರೋಜಾಳ ಆಸೆ ಆಕಾಂಕ್ಷೆಗಳನ್ನು ಬಲಿ ತೆಗೆದುಕೊಂಡಿತು.

ಕರುಳ ಕತ್ತರಿ

ವ್ಯಾಪಾರ ಮಾಡುತ್ತಿದ್ದ ಗದಿಗೆಪ್ಪ ದುಡಿದರೂ ಮನೆಗೆ ಹಣ ಕೊಡದೆ ಕುಡಿದು ಖಾಲಿ ಮಾಡುತ್ತಿದ್ದನು. ಮಡದಿ ಸಣ್ಣವ್ವ ಪಕ್ಕದ ಮನೆಯ ತುಂಗಾಸಾನಿಯ ಐಶ್ವರ್ಯವನ್ನು ನೋಡಿ ಹಣದಾಸೆಯಿಂದ‌ ತನ್ನ ಮಕ್ಕಳಿಗೂ ವೇಶ್ಯಾಧರ್ಮದ ದೀಕ್ಷೆ ಕೊಡಿಸಿದಳು. ಆದರೆ ಇದನ್ನ ಸಹಿಸದ ಮಕ್ಕಳು, ಒಬ್ಬಳು ಮನೆ ಬಿಟ್ಟು ಹೋದಳು. ಇನ್ನೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಚಿಕ್ಕವಳಾದ ಚಂದ್ರವ್ವ ತಾಯಿಯ ಉಪಟಳ ತಡೆಯಲಾರದೆ ಬೇರೆ ಇರತೊಡಗಿದಳು. ಅಲ್ಪ ಸ್ವಲ್ಪ ಗಾಯನ ಕಲಿತಿದ್ದ ಚಂದ್ರವ್ವ ದೇವಸ್ಥಾನದಲ್ಲಿ ಹಾಡುತ್ತಿದ್ದಳು. ಇವಳ ಗಾನಕ್ಕೆ ಮಾರುಹೋದ ಪಕ್ಕದೂರಿನ ವೆಂಕಣ್ಣ ನಾಯಕರು ಅವಳನ್ನು ತಮ್ಮೂರಿಗೆ ಕರೆದುಕೊಂಡು‌ ಹೋದರು. ಇವರೊಂದಿಗೆ ಬಂದ ಚಂದ್ರಮ್ಮ ಹೊಸ ಜೀವನ ಪ್ರಾರಂಭಿಸಿದಳು. ನಾಯಕರು ಸಾಕಷ್ಟು ಹಣ ಒಡವೆಗಳನ್ನು ಇವಳಿಗೆ ಕೊಟ್ಟರು. ಇದನ್ನು ನೋಡಿ ತಂದೆ ತಾಯಿ ಹಣದಾಸೆಯಿಂದ ಮನೆಗೆ ಕರೆದುಕೊಂಡು ಬಂದರು. ತಾಯಿಯ ಕಪಟ ಪ್ರೀತಿಯನ್ನು ಅರಿಯದ ಚಂದ್ರಮ್ಮ ಅವಳು ಕೊಟ್ಟ ಪಾಯಸವನ್ನು ಕುಡಿದು ಮಲಗಿದಳು. ಬೆಳಗಾಗುವುದೆ ತಡ ಬುದ್ಧಿಭ್ರಮಣೆಯಾಗಿತ್ತು. ಏಕೆಂದರೆ ದತ್ತೂರಿ ಬಿಜಗಳನ್ನು ಅರೆದು ಹಾಕಿ ಪಾಯಸ ಮಾಡಿದ್ದರು. ಅಪ್ಪ "ನಾಯಕರಿಗೆ ನನ್ನ ಮಗಳು ಹುಚ್ಚಿಯಂತೆ ಆಡುತ್ತಿದ್ದಾಳೆ ನಿಮ್ಮನ್ನು ನೋಡಬೇಕಂತೆ ಬನ್ನಿ, ಹಾಗೆ ಬರುವಾಗ ಅವಳ ಹಣ ಒಡವೆಗಳೆಲ್ಲವನ್ನೂ ತನ್ನಿ" ಎಂದು ತಿಳಿಸಿದನು. ಇವಳ ಸ್ಥಿತಿಯನ್ನು ನೋಡಿದ ನಾಯಕರು ತಂದೆತಾಯಿಯ ಮೇಲೆ ವ್ಯಾಜ್ಯ ಹೂಡಿದರು. ಯಾವ ತಂದೆ ತಾಯಿ ಮಕ್ಕಳಿಗೆ ಕೆಡುಕನ್ನುಂಟು ಮಾಡುತ್ತಾರೆ ಇದು ನಾಯಕರದೇ ಕೆಲಸ ಎಂದು ನಾಯಕರಿಗೆ ಶಿಕ್ಷೆಯಾಯಿತು. ಊರಿನ ಹಲವರು ಸೇರಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಲಿಲ್ಲ. ದತ್ತೂರಿ ಬೀಜದ ಮುಂದೆ ಯಾವ ಔಷಧಿಯೂ ಕೆಲಸ ಮಾಡಲಿಲ್ಲ. ಅವರಿವರು ಕೊಟ್ಟ ಆಹಾರವನ್ನು ತಿನ್ನತ್ತಾ ಹುಚ್ಚಿಯಾಗಿ ತಿರುಗುತ್ತಿದ್ದಳು ಚಂದ್ರವ್ವ.

ನಡೆದು ಬಂದ ಲಕ್ಷ್ಮಿ

ದ್ಯಾವಕ್ಕ ಕುಡುಕ ಗಂಡ ನಿಂಗನೊಡನೆ ಜಗಳ ಮಾಡಿಕೊಂಡು ಬೇರೆ ಕಡೆ ಜೀವನ ಪ್ರಾರಂಭಿಸಿದಳು. ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ದುಡಿದು ಚೆನ್ನಾಗಿ ಹಣ ಸಂಪಾದನೆ ಮಾಡಿದಳು. ವಿವಿಧ ಆಭರಣಗಳನ್ನು ಮಾಡಿಸಿಕೊಂಡಳು. ಮಗ ಸಾದೇವನನ್ನು ಓದಲು ಶಾಲೆಗೆ ಸೇರಿಸಿದಳು. ನಾಲ್ಕನೇ ತರಗತಿಯವರೆಗೆ ‌ಓದಿದ ಸಾದೇವ‌ ಶಾಲೆಗೆ‌ ಶರಣು ಹೊಡೆದು ಗರಡಿ ಶಾಲೆಯನ್ನು ಸೇರಿದನು. ದ್ಯಾವಕ್ಕ ಮಗನಿಗೆ ತನ್ನ ತಮ್ಮನ ಮಗಳು‌ ನೀಲಿಯೊಡನೆ ಚಿಕ್ಕ ವಯಸ್ಸಿಗೇ ಮದುವೆ ಮಾಡಿದಳು. ದ್ಯಾವಕ್ಕ ಜೋಗತಿಯಾದ್ದರಿಂದ  ಪ್ರತಿ ವರ್ಷವೂ ಎಲ್ಲಮ್ಮನ ಜಾತ್ರೆಗೆ ಹೋಗುತ್ತಿದ್ದಳು. ಒಮ್ಮೆ ಅದೇ ರೀತಿ ಜಾತ್ರೆಗೆ ಹೋದಾಗ ಮಗ ಮನೆಯಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ವಿವಾಹಿತೆ ದ್ರೌಪದಿಯನ್ನು ಮುಂಬಯಿಗೆ ಕರೆದುಕೊಂಡು ಹೋದನು. ಕೈಯಲ್ಲಿದ್ದ ಒಡವೆಗಳನ್ನು ಮಾರಿ ಸ್ವಲ್ಪ ದಿನ ಕಾಲಕಳೆದರು. ಈ ಸಮಯದಲ್ಲಿಯೇ ಪೋಲಿಸ್ ರ ಕೈಗೆ ಸಿಲುಕಿಕೊಂಡರು. ವಿಚಾರಣೆ ನಡೆಸಿ ಬೆಳಗಾವಿ ಪೋಲಿಸ್ ಠಾಣೆಗೆ ಕಳುಹಿಸಿದರು. ವಿಷಯ ತಿಳಿದ ದ್ಯಾವಕ್ಕ ಮಗನನ್ನು ಬಿಡಿಸಿದಳು. ಹಾಗೆ ದ್ರೌಪದಿಯಿಂದ ಅವಳ ಗಂಡನಿಗೆ ವಿಚ್ಛೇದನ ಕೊಡಿಸಿ ಮಗನೊಂದಿಗೆ ವಿವಾಹ ಮಾಡಿದಳು.
ಇಷ್ಟೆಲ್ಲಾ ಮಾಡಲು ಅವಳಲ್ಲಿದ್ದ  ಹಣವೆಲ್ಲಾ ಖಾಲಿಯಾಯ್ತು. ಜನರು ಹಣ ಹೋದರೂ ಅವಳ ಜೊತೆಯಲ್ಲೇ ಮಗನ ಮದುವೆ ಮಾಡಿದೆಯಲ್ಲ‌ ಎಂದರು.  "ನಾನೇನೋ ಗಂಡನ ಜೊತೆ ಸಂಸಾರ ಮಾಡಲಿಲ್ಲ ಇವರನ್ನೇಕೆ ಬೇರೆ ಮಾಡಲಿ" ಎಂದು ಉತ್ತರ ಕೊಟ್ಟಳು.
ಜನರು ಮೊದಲ ಸೊಸೆಯ ಬಗ್ಗೆ ಕೇಳಿದಾಗ ಅವಳೂ ಇರಲಿ  ಎಲ್ಲರೂ ಒಟ್ಟಾಗಿ ದುಡಿದು ಜೀವನ ಸಾಗಿಸುತ್ತೇವೆ ಎಂದಳು. ಈ ಬಾರಿಯ ಜಾತ್ರೆಗೆ ತನ್ನ ಜೋಗತಿ ಸೊಸೆಯನ್ನು ಕರೆದುಕೊಂಡು ಸಂತಸದಿಂದ ಕಾಲ ಕಳೆದು ಬಂದಳು.

ತಾಯಿ ಮಾತಾಯಿ

ಎಂದಿನಂತೆ ಸಂಜೆ ಪೂಜೆ ಮಾಡುವ ಸಮಯದಲ್ಲಿ ಡಾಕ್ಟರ್ ಚೌದರಿಯವರನ್ನು ನೋಡಲು ತಾಯಿ ಮಗಳಿಬ್ಬರು ಬಂದರು. ಇವರನ್ನು ಮಡದಿಯ ತಮ್ಮ ಶ್ರೀಧರ ಕಳುಹಿಸಿದ್ದರು. ಮಗಳಿಗೆ ಗರ್ಭಪಾತ ಮಾಡಿಸಲು ತಾಯಿ ಕರೆದುಕೊಂಡು ಬಂದಿದ್ದಳು. ಮೊದಲು ಡಾಕ್ಟರ್ ಒಪ್ಪಲಿಲ್ಲ. ಭಾವಮೈದನನ ಮೇಲೆ ಕೋಪಗೊಂಡರು. "ಈ ಕೆಲಸ ನನ್ನಿಂದ ಮಾಡಲು ಸಾಧ್ಯವಿಲ್ಲ" ಎಂದರು. ಆದರೆ ಲೀಲೆಯು ಕೋಪಗೊಂಡ ಡಾಕ್ಟರಿಗೆ ತನ್ನದಲ್ಲದ ತಪ್ಪಿಗೆ ತನಗೊದಗಿ ಬಂದ ಈ ಪರಿಸ್ಥಿತಿಯನ್ನು ಹೇಳತೊಡಗಿದಳು "ತಾಯಿ ನನ್ನನ್ನು ಬೋರ್ಡಿಂಗ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಿದ್ದಳು. ನಾನು ನೋಡಬೇಕು ಎಂದರೂ ಕರೆಯಿಸಿಕೊಳ್ಳುತ್ತಿರಲಿಲ್ಲ. ಕೊನೆಗೊಂದು ದಿನ ನನಗೆ ಓದಿಸುವ ಶಕ್ತಿಯಿಲ್ಲ ಎಂದು ಕರೆಸಿಕೊಂಡಳು. ಬಂದ ಮೇಲೆ ತಿಳಿಯಿತು ತಾಯಿಯ ಅನೈತಿಕ ಸಂಬಂಧ. ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿಯೇ ಕಾಮಾಂಧನೊಬ್ಬನಿಗೆ ಬಲಿಯಾದೆ. ಅದರ ಫಲವೇ ಇದು" ಎಂದು ಅಳತೊಡಗಿದಳು. ಕೇಳಿದ ಡಾಕ್ಟರ್ ಗರ್ಭಪಾತ ಮಾಡಲು ಒಪ್ಪಿಕೊಂಡರು.
ನಂತರ ಇವರ ಮನೆಯಲ್ಲಿಯೇ ಇದ್ದು ಸುಧಾರಿಸಿಕೊಂಡಳು ಲೀಲೆ. ಆದರ್ಶವಾದಿ ಶ್ರೀಧರ ಲೀಲೆಯನ್ನು ವಿವಾಹವಾದನು.

ಹೊಂಬಿಸಿಲು- ಸವತಿಯರು

ತಮ್ಮ ಜವಾಬ್ದಾರಿಯನ್ನು  ಕಳೆದುಕೊಳ್ಳಲೋಸ್ಕರ ಸರಸ್ವತಿ ಬಾಯಿ ಮತ್ತು ಬಲವಂತ ರಾಯರು ತಮ್ಮ ಮೊದಲನೇ ಮಗಳು ಕಾವೇರಿಯನ್ನು ಎರಡನೇ ವಧುವಾಗಿ ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು. ಕೃಷ್ಣಮೂರ್ತಿಗೆ ಮಕ್ಕಳಾಗದ ಕಾರಣ ಇನ್ನೊಂದು ಮದುವೆ ಮಾಡಲು ತಯಾರಾದರು ಅವನ ಅಪ್ಪ ಅಮ್ಮ. ರಾಯರು ಮಗಳನ್ನು ಕರೆದು ವಿಷಯ ತಿಳಿಸಿ ಅಭಿಪ್ರಾಯವನ್ನು ಕೇಳಿದರು. ಕೃಷ್ಣಮೂರ್ತಿ ತಂಗಿ ಕಾವೇರಿಯ ಗೆಳತಿಯಾದ್ದರಿಂದ ಅವರ ಮನೆಯ ಪರಿಸ್ಥಿತಿ ಇವಳಿಗೆ ಚೆನ್ನಾಗಿ ತಿಳಿದಿತ್ತು.  ಕೃಷ್ಣಮೂರ್ತಿಯ ಮಡದಿ ರುಕ್ಮಿಣಿ ಬಾಯಿಗೆ ಅವರ ಮನೆಯವರು ಹಿಂಸೆ ನೀಡುತ್ತಿದ್ದರು. ಮಕ್ಕಳಾಗಲಿಲ್ಲ ಎಂದು ಊಟ ತಿಂಡಿ ಸರಿಯಾಗಿ ಕೊಡುತ್ತಿರಲಿಲ್ಲ ಮನೆಕೆಲಸವನ್ನು ಅವಳಿಂದಲೇ ಮಾಡಿಸುತ್ತಿದ್ದರು. ನಾಲ್ಕನೇ ತರಗತಿಯವರೆಗೆ ಓದಿದ್ದ ಕಾವೇರಿ ವಿಚಾರವಂತೆ. ಅಪ್ಪ ಅಮ್ಮ  ಇವನಲ್ಲದಿದ್ದರು ಇನ್ನೊಬ್ಬರಿಗೆ ಮದುವೆ ಮಾಡುತ್ತಾರೆ, ಅವನ ಗುಲಾಮಳಾಗಿ ಇರಬೇಕು. ಈ ಕೃಷ್ಣಮೂರ್ತಿಯನ್ನು ಮದುವೆಯಾದರೆ ರುಕ್ಮಿಣಿಯ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂದು ಯೋಚಿಸಿದ ಕಾವೇರಿ ಮದುವೆಗೆ ಒಪ್ಪಿಕೊಂಡಳು. ಗೆಳತಿಯರೆಲ್ಲರೂ ಕಾವೇರಿಯನ್ನು ಹಾಸ್ಯ ಮಾಡಿದರೂ ತನ್ನ ನಿರ್ಣಯವನ್ನು ಬದಲಾಯಿಸದೆ ಮದುವೆಯಾದಳು. ನಂತರ ಗಂಡನ ಮನೆಗೆ ಬಂದಳು. ಬಂದವಳೇ ಮೊದಲು ರುಕ್ಮಿಣಿಯನ್ನು ಪ್ರೀತಿಯಿಂದ ಕಾಣತೊಡಗಿದಳು. ಕಾವೇರಿ ಗರ್ಭಿಣಿಯಾದಳು. ಗರ್ಭಿಣಿ ಕಾವೇರಿಯ ಮನಸ್ಸಿಗೆ ನೋವಾಗಬಾರದೆಂದು ಯಾರೂ ಅವಳ ಇಚ್ಛೆಗೆ ಅಡ್ಡಿ ಬರುತ್ತಿರಲಿಲ್ಲ. ಇದೇ ಒಳ್ಳೆಯ ಸಮಯವೆಂದು ತಿಳಿದ ಕಾವೇರಿ ರುಕ್ಮಿಣಿಯನ್ನು ಮನೆಯವರೆಲ್ಲರೂ ತನ್ನಂತೆ ಕಾಣುವಂತೆ ಗಂಡನ ಸಹಾಯದಿಂದ ಮನೆಯ ಪರಿಸ್ಥಿತಿಯನ್ನು ಬದಲಾಯಿಸಿದಳು.

ವಸಂತರಾಯ ಮದುವೆ 

ದಲಿತೋದ್ಧಾರ ಭಾಷಣವನ್ನು ಮುಗಿಸಿದ ಪ್ರೊಫೆಸರ್ ನನ್ನು ಹಿರಿಯ ವ್ಯಕ್ತಿಯೊಬ್ಬರು ಕಾಣಲು ಬಂದರು. ಅವರು ಭಾಷಣವನ್ನು ಮೆಚ್ಚಿ ಮಾತನಾಡಿದರು. ಅವರು "ಭಾಷಣದಲ್ಲೇ ಎಲ್ಲರೂ ತಮ್ಮ ಆದರ್ಶಗಳನ್ನು ತೋರಿಸುವರು, ಆದರೆ ಯಾರೂ ಸಹ ಕಾಲು ಜಾರಿದ ಹೆಣ್ಣು ಮಕ್ಕಳನ್ನು, ಬಾಲ ವಿಧವೆಯನ್ನು, ಹರಿಜನ ಹುಡುಗಿಯನ್ನು ಮದುವೆಯಾಗುವುದಿಲ್ಲ" ಎಂದರು. "ನೀವು ಸಹ ಇದೇ ರೀತಿ ಬರೀ ಭಾಷಣದಲ್ಲೇ ಆದರ್ಶರಾಗಿರುವಿರಾ ಅಥವಾ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವಿರಾ?" ಎಂದು ಕೇಳಿದರು. ಅವರ ಮಾತಿಗೆ ಪ್ರೊಫೆಸರ್ "ನನ್ನ ಮನಸ್ಸಿಗೆ ಒಪ್ಪಿದರೆ ಅವರನ್ನೇ  ವಿವಾಹವಾಗುವೆ" ಎಂದರು.
ಸರಿ ಎಂದು ಹಿರಿಯರು ಎಂಟು ವರ್ಷಗಳ ಹಿಂದಿನ ಕಥೆಯನ್ನು ಹೇಳಲು ಆರಂಭಿಸಿದರು. ಹುಡುಗನಿಗೆ ಸುಮಾರು ಹದಿನೈದು ವರ್ಷವಿರಬೇಕು. ಪಕ್ಕದ ಮನೆಯಲ್ಲಿದ್ದ ಗೆಳೆಯನ ತಂಗಿಯೊಡನೆ ಸ್ನೇಹ ಬೆಳೆದು ನಂತರ ಪ್ರೇಮಕ್ಕೆ ತಿರುಗಿತು. ಪರಿಣಾಮವಾಗಿ ಹುಡುಗಿ ಗರ್ಭಿಣಿಯಾದಳು. ಮನೆಯವರು ಯಾರೆಂದು ಕೇಳಿದಾಗ ಗೆಳೆಯನ ಹೆಸರನ್ನು ಹೇಳಿದಳು. ಇದನ್ನು ತಿಳಿದ ಹುಡುಗ ಎದುರಿಸಲಾರದೆ ಊರು ಬಿಟ್ಟು ಹೊರಟುಹೋದನು. ಆದರೆ ಹುಡುಗಿ ಮನೆಯವರು ಬೇರೆ ಊರಿಗೆ ಹೋಗಿ ಹೆರಿಗೆ ಮಾಡಿಸಿದರು. ಹುಟ್ಟಿದ ಹೆಣ್ಣು ಮಗುವನ್ನು ಅನಾಥಾಶ್ರಮದಲ್ಲಿ ಬಿಟ್ಟು ಬಂದರು ಎಂದು ಮಾತನ್ನು ನಿಲ್ಲಿಸಿದರು. ಕೇಳಿದ ಪ್ರೊಫೆಸರ್ ಗೆ ಆ ಹುಡುಗ ತಾನೇ ಎಂದು ತಿಳಿಯಿತು. ನಂತರ ಆಗ ಧೈರ್ಯದಿಂದ ಮಾಡಬೇಕಾದ ಕೆಲಸವನ್ನು ಈಗ ಮಾಡಿದರು ಪ್ರೊಫೆಸರ್. ಆ ಹುಡುಗಿಯನ್ನು ತಾವೇ ವಿವಾಹವಾದರು. ನಂತರ ಆಶ್ರಮದಲ್ಲಿದ್ದ ಮಗಳನ್ನು ಮನೆಗೆ ಕರೆ ತಂದು ಬೆಳೆಸಿದರು.

ಭೀಕರ ಪಾರುಪತ್ಯ

ಸ್ವಾತಂತ್ರ್ಯದ ಹೋರಾಟದ ದಿನಗಳವು. ದಂಡಿನ ಸತ್ಯಾಗ್ರಹ ಎಲ್ಲಾ ಕಡೆಯೂ ನಡೆಯುತ್ತಿತ್ತು. ಅದರಂತೆ ಶೋಕಾಪುರದಲ್ಲೂ ಸಹ ಜನರು ಊರಿನಿಂದ ಹೊರ ಹೋಗುವಂತಿಲ್ಲ, ಹಾಗೆಯೇ ಗಾಂಧಿ ಟೊಪ್ಪಿಗೆ ಹಾಕುವಂತಿಲ್ಲ. ಚಳವಳಿಗಳನ್ನು ಮಾಡುವಂತಿರಲಿಲ್ಲ. ಬಂದೂಕು ಹಿಡಿದ ಜನರು ಎಲ್ಲೆಲ್ಲೂ  ಕಾವಲಿದ್ದು ಮನ ಬಂದಂತೆ ‌ಲೂಟಿ ಮಾಡುತ್ತಿದ್ದರು. ಡ್ರೈವರ್ ರಾಮಜಿಯ ಕುಡಿತದ ಚಟ ಇಂತಹವರೊಡನೆ ಗೆಳೆತನ ಬೆಳೆಯುವಂತೆ ಮಾಡಿತು ಹಾಗೂ ಮನೆಯೊಳಗೆ ಬರುವಂತಾಯಿತು. ಯಾರು ಏನೂ ಹೇಳಿದರೂ ಕೇಳಲಿಲ್ಲ ರಾಮಜಿ. ಒಂದು ದಿನ ಬಂದೂಕಧಾರಿಗಳ ಕಣ್ಣು ರಾಮಜಿ ಮಡದಿಯ ಮೇಲೆ ಬಿದ್ದಿತು. ಮಡದಿ ಲಕ್ಷ್ಮಿ ಪತಿಯೊಂದಿಗೆ "ಪ್ರಾಣ ಹೋದರೂ ಸರಿ ನಾನು ಮಾನ‌ ಕಳೆದುಕೊಳ್ಳಲಾರೆ" ಎಂದು ಅಳಲು ಪ್ರಾರಂಭಿಸಿದಳು. ಮಡದಿಯನ್ನು ಸಂತೈಸಿದ ರಾಮಜಿ ಚಿಂತಿಸುತ್ತಾ‌ ಮಲಗಿದನು.
ಮಾರನೇ ದಿನ ಅವರೆಲ್ಲರಿಗೂ ನಿಮ್ಮ ಬಯಕೆ ಪೂರೈಸುವೆ ಎಂದು ಹೇಳಿ ಹಣ ತೆಗೆದುಕೊಂಡನು‌. ಆ ಹಣದಿಂದ ತನ್ನ ಸಾಲವನ್ನೆಲ್ಲಾ ತೀರಿಸಿದನು. ಆ ದಿನ ತನ್ನ ಮನೆಯವರೊಂದಿಗೆ ಸಂತೋಷದಿಂದ ಕಾಲ ಕಳೆದನು. ರಾತ್ರಿ ಮನೆಯವರೆಲ್ಲಾ ನಿದ್ರಿಸಿದ ಮೇಲೆ ತನ್ನ ಗೆಳೆಯರಿಗೆಲ್ಲಾ ಕುಡಿಸಿ ನಶೆಯೇರಿದ್ದ ಅವರೆಲ್ಲರನ್ನೂ ಸಾಹೇಬರನ್ನು ನೋಡೋಣ ಎಂದನು. ಎಲ್ಲರೂ ಒಪ್ಪಿ ವಾಹನವನ್ನೇರಿದರು. ವಾಹನವನ್ನು ವೇಗವಾಗಿ ಓಡಿಸುತ್ತಿದ್ದನು. ಅವನನ್ನು ಬಿಟ್ಟರೆ ಯಾರಿಗೂ ತಾವೆಲ್ಲಿ ಹೋಗುತ್ತಿದ್ದೇವೆ ಎಂದು ತಿಳಿಯಲಿಲ್ಲ. ವೇಗವಾಗಿ ಹೊರಟ ವಾಹನವು ಕಂದಕದ ಕಡೆಗೆ ಸಾಗಿ ಮರಕ್ಕೆ ಅಪ್ಪಳಿಸಿತು."ಲಕ್ಷ್ಮೀ ನಿನ್ನ ಮಾನ ಕಾಯ್ದೆ ಧನ್ಯನಾದೆ! ಎಂಬ ಕೂಗಿನೊಂದಿಗೆ, ಬಂದೂಕುಧಾರಿಗಳ ಹಾಹಾಕಾರ ಕೇಳಿ ಬರುತ್ತಿತ್ತು.

ಕಂತಿಯ ದೇಶಾಂತರ

ಕುಡುಕ ಗಂಡನಿಂದ ತಪ್ಪಿಸಿಕೊಂಡ ಕಂತೆವ್ವ‌ ತನ್ನರೆರಡು ಮಕ್ಕಳನ್ನು ಕರೆದುಕೊಂಡು ರಾತ್ರಿಯಲ್ಲಿ ಗಂಡ ಕುಡಿದು ಮಲಗಿರುವಾಗ ಮನೆ ಬಿಟ್ಟು ಹೊರಟಳು. ಇಡೀ ರಾತ್ರಿ ನಡೆದು ಸುಧಾರಿಸಿಕೊಳ್ಳಲು ಮರದ ಕೆಳಗೆ ಕುಳಿತಳು. ಹಾಗೆಯೇ ನಿದ್ದೆ ಮಾಡುತ್ತಿದ್ದಳು. 
ಇವರನ್ನು ಕಂಡ ದಾರಿಹೋಕರು ತಮ್ಮ ಗೌಡರ ಬಳಿಗೆ ಕರೆದುಕೊಂಡು ಹೋದರು. ಮರುಗಿದ ಗೌಡರು ತಮ್ಮ ಮನೆಯಲ್ಲೇ ಇರಲು ಅವಕಾಶ ಮಾಡಿಕೊಟ್ಟರು. ಗೌರಿ ಎಂಬ ಹೆಸರಿನಿಂದ ಮನೆಗೆಲಸ, ಕೊಟ್ಟಿಗೆ ಕೆಲಸ ಹೀಗೆ ಎಲ್ಲವನ್ನೂ ಮಾಡಲು ಪ್ರಾರಂಭಿಸಿದಳು ಕಂತಿ. ತನ್ನ ಸದ್ಗುಣಗಳಿಂದ ಎಲ್ಲರ ಪ್ರೀತಿ ಗಳಿಸಿದಳು. 
ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಾದೇವ ಯಾರೂ ಇಲ್ಲದವ. ಒಮ್ಮೆ ‌ಹೊಲದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಕುಡುಗೋಲಿನಿಂದ ಕಾಲಿಗೆ ನೋವು ಮಾಡಿಕೊಂಡನು. ಗೌಡರು ಹೇಳಿದ್ದರಿಂದ ಕಂತಿ ಅವನ ಶುಶ್ರೂಷೆ ಮಾಡಿದಳು. ಇದರಿಂದ ಒಬ್ಬರಿಗೊಬ್ಬರು ಹತ್ತಿರವಾದರು. ಗೌಡರು ಅವರಿಬ್ಬರಿಗೂ ಮದುವೆ ಮಾಡಿದರು. ಇಬ್ಬರೂ ಹೊಸ ಜೀವನ ಪ್ರಾರಂಭಿಸಿದರು. ಪ್ರತಿ ವರ್ಷವೂ ದೇವಿಯ ಗುಡ್ಡದ ಜಾತ್ರೆಗೆ ಗೌಡರ ಮನೆಯವರೆಲ್ಲರು ಹೋಗುತ್ತಿದ್ದರು. ಈ ಬಾರಿ ಅವರೊಂದಿಗೆ ಮಾದೇವ‌ ಮತ್ತು ಕಂತಿಯೂ ಮಕ್ಕಳೊಂದಿಗೆ ಹೊರಟರು.
"ದೂರದಲ್ಲಿ ಹೊಡಿಬ್ಯಾಡ್ರೋ ಸಾಯುತ್ತೀನಿ" ಎಂಬ ದನಿಯನ್ನು ಕೇಳಿ ಬೆಚ್ಚಿ ಬಿದ್ದಳು ಕಂತಿ. ಹತ್ತಿರ ಹೋಗಿ ನೋಡಿದಾಗಲೇ ತಿಳಿಯಿತು ಅವನು ತನ್ನ ಗಂಡ ಎಂದು. ಅವನ ಆ ಸ್ಥಿತಿಯನ್ನು ನೋಡಿ ಅಳಲು ಪ್ರಾರಂಭಿಸಿದಳು. ಮಕ್ಕಳು ಮತ್ತು ಮಾದೇವನನ್ನು ತೋರಿಸಿ ಮಾತನಾಡುತ್ತಿದ್ದಂತೆಯೇ‌ ಆತ ಮರಣಿಸಿದನು. ವಿಷಯ ತಿಳಿದ ಮಾದೇವ‌ ಅವನ ಅಂತ್ಯಕ್ರಿಯೆಯನ್ನು ಮಾಡಿ ಮುಗಿಸಿದನು. 
ಬಾಗಿಲ ಸಪ್ಪಳದಿಂದ ಎಚ್ಚೆತ್ತ ಕಂತಿ ಕಣ್ಣು ಬಿಡಲು ಇದುವರೆವಿಗೂ ತಾನು ಕಂಡದ್ದು ಕನಸು ಎಂದರಿವಾಗಲು ಕೆಲ ಸಮಯವೇ ಬೇಕಾಯಿತು. ತನ್ನ ಎರಡು ವರ್ಷದ ಹಿಂದಿನ ಕಥೆಯನ್ನು ನೆನೆದು ನಿಟ್ಟುಸಿರು ಬಿಟ್ಟಳು.

ಉತ್ತರ ಕರ್ನಾಟಕದ ಮೊದಲ ಕತೆಗಾರ್ತಿ ಎನಿಸಿಕೊಂಡ ಶ್ಯಾಮಲಾರವರು ತಮ್ಮ ಸುತ್ತಮುತ್ತಲಿನ ಘಟನೆಗಳನ್ನೇ ತಮ್ಮ ಕಥಾವಸ್ತುವನ್ನಾಗಿ ಮಾಡಿಕೊಂಡು  ಸುಂದರ ಕಥೆಗಳನ್ನು ಹೆಣೆದಿದ್ದಾರೆ. ಆ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.  ಅವುಗಳು ಅಂದಿನ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದಂತಿವೆ. ಕಥೆಗಳ ಮೂಲಕ  ಅಂದಿನ ಸ್ತ್ರೀಯರು ಹೇಗೆ ಶೋಷಿತರಾಗುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ.

- ವಿಜಯಲಕ್ಷ್ಮಿ ಎಂ ಎಸ್ 


ಕಾಮೆಂಟ್‌ಗಳಿಲ್ಲ: