Pages

ಲೇಖನ - ಯಾವ ಬಾಯಿಯಿಂದ ಶುಭಾಶಯ ಹೇಳಲಿ ಅಪ್ಪ




ಡಿಸೆಂಬರ್ ೨೩ ರಂದು ಅಂದರೆ ಇವತ್ತು ದೇಶದಲ್ಲಿ ಕಿಸಾನ್ ದಿನ ವೆಂದು ಆಚರಿಸಲಾಗುತ್ತದೆ. ಅಂದರೆ ದೇಶಕ್ಕೆ ಅನ್ನ ಕೊಡುವ ನಿನ್ನಂತಹ ಕಾಯಕ ಜೀವಿಗಳನ್ನು  ಸ್ಮರಿಸುವ ಮತ್ತು ಗೌರವಿಸುವ ದಿನ. ಆದರೆ ಈ ದಿನದ ಶುಭಾಶಯವನ್ನು ನಾ ನಿನಗೆ ಹೇಗೆ ಕೋರುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಇಂದು ದೇಶಕ್ಕೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿರುವ ನೀವುಗಳು, ಬದಲಾದ ಕಾಲಘಟ್ಟದಲ್ಲಿ, ಕೃಷಿಯಿಂದಾಗಿ ಬರುತ್ತಿರುವ ಎಲ್ಲ ಸಮಸ್ಯೆಗಳನ್ನು  ಎದುರಿಸಲು ಕಷ್ಟಪಡುತ್ತಲೇ, ನೋವನ್ನೆಲ್ಲಾ ನೀವೇ "ವಿಷಕಂಠ" ರಂತೆ ನುಂಗಿ, ಜೀವನದ ಬಂಡಿಯನ್ನು ಸಾಗಿಸಲು ಬಲು ಕಷ್ಟ ದಿಂದ  ದುಡಿಯುತ್ತಿದ್ದೀರಿ ಅಲ್ಲವೇನಪ್ಪಾ?? ಇನ್ನು ಯಾವ ಸುಖಕ್ಕಾಗಿ, ಸಂತೋಷಕ್ಕಾಗಿ ಶುಭಾಶಯ ಎಂಬ ಪ್ರಶ್ನೆ ಕಾಡುತ್ತಿದೆ ಅಪ್ಪ....
ಇದರ ಜೊತೆಗೆ ಹಿಂತಿರುಗಿ ನೋಡೋಣವೇ ಅಪ್ಪ!!   ನಿಮ್ಮ- ನಿಮ್ಮ ಅಪ್ಪಂದಿರಿಂದ  ವ್ಯವಸಾಯದ ಚುಕ್ಕಾಣಿಯನ್ನು ತೆಗೆದುಕೊಂಡ ನೀವು ಅಣ್ಣ-ತಮ್ಮಂದಿರು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಮೀರಿ ಆತ್ಮಹತ್ಯೆ ಮಾಡಿಕೊಂಡಿದ್ದೀರಿ!! ಇದು ಸರ್ಕಾರಗಳ ಅಧಿಕೃತ ಲೆಕ್ಕ ಆದರೆ ಲೆಕ್ಕಕ್ಕೆ ಸಿಗದೆ ಮಣ್ಣಲ್ಲಿ ಮಣ್ಣಾದವರು ಇನ್ನೇಷ್ಟೋ? 

ಇನ್ನೊಂದೆಡೆ ಪ್ರತಿದಿನ ಎರಡು ಸಾವಿರ ರೈತ ಒಕ್ಕಲುಗಳು ಕೃಷಿಗೆ ಶರಣೆಂದು ಕೈ ಮುಗಿದು,  ಉತ್ತಮ ಬದುಕಿನ ಅರಸುತ್ತಾ ನಗರಗಳ ಕೊಳಗೇರಿಗಳ ಕೂಪಗಳಿಗೆ ಬೀಳುತ್ತಿದ್ದಾರೆ ಇದು ಕೂಡಾ ಸರ್ಕಾರಿ ಅಂಕಿ ಅಂಶಗಳು, ಆದರೆ ಇಂತಹ ಬಹುತೇಕ ಜನರ ಬದುಕು ಇಂದಿಗೂ ಬದಲಾಗಿಲ್ಲ. 
ಇದಕ್ಕಾಗಿ ಶುಭಾಶಯ ಹೇಳಲೇ?

ಒಮ್ಮೆ  ನಮ್ಮ ಸಂಬಂಧಿಕರ ಕಡೆಗೆ ಕಣ್ಣು ಹಾಯಿಸೋಣವೇ ಅಪ್ಪ?

ನಮಗೆ ಪ್ರತಿವರ್ಷ ಆಲೂಗಡ್ಡೆಗಳನ್ನು ಕಳುಹಿಸುವ ನಿನ್ನ ದೊಡ್ಡತ್ತೆಯ ಮಕ್ಕಳು ಇಂದು ಆಲೂಗಡ್ಡೆನಾ ಕೆ.ಜಿ ಗೆ  ಇಪ್ಪತ್ತು ಪೈಸೆಗಳಂತೆ  ಮಾರುತ್ತಿದ್ದಾರೆ ಅಪ್ಪ!!
ಇನ್ನೊಂದು ಕಡೆ  ಗೋಧಿಯನ್ನು ನಮಗೆ ಕಳುಹಿಸುವ ಲಂಬೂ ಮಾವಂದಿರಿಗೆ ತಮ್ಮ ಗೋಧಿಗೆ ಬೆಲೆಯೂ ಸಿಗುತ್ತಿಲ್ಲ. ಹಾಗಯೇ ಅದ್ದರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು  ನಿರ್ವಹಿಸಲು ಆಗದೇ, ನೆಲವನ್ನು ಬಂಜರು ಮಾಡಿಕೊಂಡು ಪಾಡು ಪಡುತ್ತಿದ್ದಾರೆ ಕಣಪ್ಪಾ.!!! 
ಇನ್ನೊಂದು ಕಡೆ ಟೀ - ಸಾಂಬಾರ ಮುಂತಾದ ವಿಶೇಷ ಪದಾರ್ಥಗಳನ್ನು ಕಳುಹಿಸುತ್ತಿದ್ದ, ನಿನ್ನ ಸಣ್ಣತ್ತೆಯ ಮಕ್ಕಳಲ್ಲಿ, ಕೆಲವರು ಈಗಾಗಲೇ ಕೆಲಸ ಹುಡುಕುತ್ತಾ ಇಲ್ಲಿಗೆ ಬಂದು ಬೇಕಾದಷ್ಟು  ದಿನಗಳು ಅಯ್ತಲ್ವೇ? ಇನ್ನೂ ನಿನ್ನ ನಡುಕಲತ್ತೆಯ ಮಕ್ಕಳ ಪಾಡನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ? ಎಲ್ಲ ಸಂಪತ್ತನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದರೂ ಕುತಂತ್ರಿಗಳ ಕುತಂತ್ರದಿಂದಾಗಿ, ತುತ್ತು ಅನ್ನಕ್ಕಾಗಿ-ಉದ್ಯೋಗಕ್ಕಾಗಿ ಊರೂರು ಅಲೆಯುತ್ತಿರುವುದು ವಿಪರ್ಯಾಸವಲ್ಲವೇ?.
ನಮಗೆ ಹತ್ತಿ ಬಟ್ಟೆಗಳನ್ನು ಪೂರೈಸಲು, ಹತ್ತಿ ಬೆಳೆಯುತ್ತಿದ್ದ, ನಮ್ಮ  ಕಡಲ ಕಡೆಯ ನಿಮ್ಮ ಮುತ್ತಜ್ಜಿ ಕಾಲದ ಸಂಬಂಧಿಕರು ಇಂದು ತಾವೇ ಬೆವರುತ್ತಿದ್ದಾರೆ ನೋಡಪ್ಪಾ....
ಇಂತಹ ಮಹಾನ್ ಸಾಧನೆಗಾಗಿ ಶುಭಾಶಯ ಹೇಳಲೇ?

ಇನ್ನೂ ನಿನ್ನ ದೊಡ್ಡಪ್ಪನ ಮಕ್ಕಳು ನೀರಿಲ್ಲ, ಮಳೆ ಎಂದೂ ಬರುವುದೋ ಅಂತಾ ಕಣ್ಣು ಕಣ್ಣು ಬಿಟ್ಟು ಆಕಾಶನೇ ನೋಡ್ತಾ ದಿನ ದೂಡುತ್ತಿದ್ದರೆ ನೋಡು...

ನಿನ್ನ ಚಿಕ್ಕಪ್ಪನ ಮಕ್ಕಳು ಬೆಳೆಗೆ ನೀರಿಲ್ಲ, ಪರಿಹಾರ ಕೊಡಿ ಅಂತಾ ಪಾರ್ಲಿಮೆಂಟಿನ ಸಮೀಪವೇ, ಬಹಳಷ್ಟು ದಿನ  ಬೆತ್ತಲೆಯಾಗಿ ನಿಂತು ಪ್ರತಿಭಟನೆ ಮಾಡಿದರೂ ಸಹ  ನೀನು ಅರಿಸಿ ಕಳುಹಿಸಿದ ಮಹಾನ್ ನಾಯಕರು ಎನಿಸಿಕೊಂಡವರು ಕಣ್ಣೆತ್ತಿಯೂ ನೋಡಲಿಲ್ಲವೋ ಅಪ್ಪ..
ಇಂಥಾ ಸಂತೋಷಕ್ಕಾಗಿ ಶುಭಾಶಯ ಹೇಳಲೇ ಅಪ್ಪ,,

ಈಗ ನಿನ್ನ ಅಣ್ಣ-ಅಕ್ಕಂದಿರ ಕಥೆಯನ್ನು ನೋಡು, ಕುಡಿಯುವುದಕ್ಕೆ, ಬೆಳೆ ಬೆಳೆಯುವುದಕ್ಕೆ ನೀರು ಕೊಡಿ ಎಂದು‌ ಅಂತ  ಎರಡು ವರ್ಷಗಳಿಂದ ನಮ್ಮ ಕಾಕಾನ ಮಕ್ಕಳು ನಡೆಸುತ್ತಿದ್ದರೆ ಸರ್ಕಾರಗಳು  "ಲಾಠಿ ಚಾರ್ಜ್ ಭಾಗ್ಯ"  ನೀಡುತ್ತಿವೆ. ಇನ್ನೊಂದು ಕಡೆ ನಮ್ಮ ದೊಡ್ಡಪ್ಪಂದಿರ ಮಕ್ಕಳು "ಬರ-ನೆರೆ"ಗೆ ಶಾಶ್ವತ ಪರಿಹಾರ ಕೊಡಿ ಎಂದು ಕೂಗುತ್ತಿರುವ ಕೂಗಿಗೆ ಎಲ್ಲರ ಕಿವಿ ಕಿವುಡಾಗುತ್ತಿದೆ. ಇನ್ನೊಂದು ಕಡೆ ಮಲೆನಾಡು ಮತ್ತು ಕರಾವಳಿಯ ಅತ್ತೆಯ ಮಕ್ಕಳ ಜಮೀನಿನಲ್ಲಿ, ಅಂತರ್ಜಲ ಕುಸಿಯುತ್ತಾ ಇದೆ. ವರ್ಷದಿಂದ ವರ್ಷಕ್ಕೆ ಕೃಷಿ ಬಿಟ್ಟು ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಬಯಲುಸೀಮೆಯ ಅತ್ತೆಯ ಮಕ್ಕಳು ವಿಷ ಅಂತಾ ಗೊತ್ತಿದ್ದರೂ ಸಹ  ಫ್ಲೋರೈಡ್ ಯುಕ್ತ ನೀರನ್ನು ಕುಡಿಯುವುದಕ್ಕೆ ಬಳಸುತ್ತಿರುವುದು ಎಷ್ಟೊಂದು ನೋವಿನ ಸಂಗತಿಯಲ್ಲವೇ ಅಪ್ಪ?

ಇಂತಹ ನೋವುಗಳನ್ನು ಭರಿಸಲಿಕ್ಕಾಗಿ ಶುಭಾಶಯ ಕೋರಲೇ?
ಈಗ ನಿನ್ನನ್ನೇ ನೋಡಪ್ಪ..

ಕಬ್ಬು ಬಾಳಿಗೂ ಸಿಹಿ ಆಗುತ್ತದೆ ಅಂಥಾ ಬೆಳೆಯುತ್ತ ಇದ್ದೆ. ಆದರೆ ಅದು ಸಹ ಕಹಿಯೇ ಆಗೋಯ್ತು. ಭತ್ತ ಬೆಳೆಯುತ್ತಿದ್ದೆ. ಆದರೆ ಮನೆಗೆ ಅಂತಾ ಒಂದು ಕಾಳನ್ನು ಇಟ್ಟುಕೊಳ್ಳದೇ ಸಾಲಕ್ಕಾಗಿ ಎಲ್ಲವನ್ನೂ ಮಾರುತ್ತಿದ್ದೆ. ಆದರೆ ಎರಡು- ಮೂರು ವರ್ಷಗಳಿಂದ ಸರಿಯಾಗಿ ನೀರು ಇಲ್ಲ ಭತ್ತವೂ ಇಲ್ಲ ಅಕ್ಕಿಯೂ ಇಲ್ಲ.  
ಹಾಕಿದ ಫಸಲುಗಳಲ್ಲಿ ಖರ್ಚು ಮಾಡಿದ ಹಣವು ಬರದೇ ದೊಡ್ಡ ಸಾಲಗಾರನಾಗಿದ್ದೀಯಾ ಅಲ್ಲವೇ ಅಪ್ಪ ?
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬೂಟಾಟಿಕೆಯ ಶುಭಾಶಯಗಳನ್ನು ಹೇಳಲೇ ಅಪ್ಪ?
ನನ್ನಿಂದ ಸಾಧ್ಯವಿಲ್ಲ ಅಪ್ಪ .

- ಆಕಾಶ್ ಕುಮಾರ್ ಬಿ ಎನ್

ಕಾಮೆಂಟ್‌ಗಳಿಲ್ಲ: