Pages

ಕಥೆ - ಹೃದಯ ಕರಗಿತು



ಶಿವಪುರ ಎಂಬುದು ಒಂದು ಸಣ್ಣಹಳ್ಳಿ. ಅಲ್ಲಿ ಮುದುಕಿಯೊಬ್ಬಳು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದಳು. ಹೆಸರು ಮಲ್ಲವ್ವ. ಆ ಐದಾರು ವರ್ಷದ ಹುಡುಗಿಯ ಅಪ್ಪ ಅಮ್ಮ ಚಿಕ್ಕಂದಿನಲ್ಲೇ ಗತಿಸಿದ್ದರು. ಆ ತಬ್ಬಲಿಯ ಆರೈಕೆ ಮುದುಕಿಯ ಕೂಲಿನಾಲಿಯೊಂದಿಗೆ ನಡೆಯುತ್ತಿತ್ತು. ಅವರಿಬ್ಬರು ಐವತ್ತು ರೂಪಾಯಿ ಬಾಡಿಗೆಯ ಒಂದು ಪುಟ್ಟ ಮನೆಯಲ್ಲಿದ್ದರು. 
ಕೂಲಿ ಮಾಡಿ ಇಬ್ಬರ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಬಾಡಿಗೆಯ ಹಣ ಜೀವಕ್ಕೇ ಭಾರ, ಹೀಗಾಗಿ ಐದಾರು ತಿಂಗಳ ಬಾಡಿಗೆ ಬಾಕಿಯಿದ್ದು, ಪ್ರತಿ ತಿಂಗಳು ಮಾಲಿಕ ಬಾಡಿಗೆಗೆ ಎಡತಾಕುತ್ತಿದ್ದನು. ಮಾಲೀಕ ನೋಡಲು ದಾಂಡಿಗನಾಗಿದ್ದ. ಉದ್ದವಾದ ಮೀಸೆ, ಎತ್ತರ ನಿಲುವನ್ನು ನೋಡಿ ಮಲ್ಲವ್ವ ಹೆದರಿ ಓಡುತ್ತಿದ್ದಳು.
ಮುದುಕಿ ಅದೇ ಊರಿನ ಸಂಗಪ್ಪ ಸಾಹುಕಾರನ ತೋಟದಲ್ಲಿ ಆಳಾಗಿ ಕೂಲಿ ಮಾಡುತ್ತಿದ್ದಳು. ಆತ ಬಹಳ ಜಿಪುಣ. ಕೂಲಿಕಾರರ ದುಡಿಮೆಗೆ, ಸಮಯಕ್ಕೆ ಸರಿಯಾಗಿ ಕೂಲಿ ಕೊಡುತ್ತಿರಲಿಲ್ಲ. ಇಂಥ ಸಮಯದಲ್ಲಿ ಮುದುಕಿಗೆ ಕೂಲಿ ಸಿಗದೇ ಹೋದರೆ, ಪಾಪ ಅವರಿಬ್ಬರಿಗೂ ಉಪವಾಸವೇ ಗತಿ! ಕೆಲಸಕ್ಕೆ ಹೋದಾಗ ಮೊಮ್ಮಗಳಿಗೆ ಬೇಸರವಾಗಬಾರದೆಂದು ಒಂದು ಆಡುಮರಿಯನ್ನು ತೆಗೆದುಕೊಟ್ಟಿದ್ದಳು. 
ಮಲ್ಲವ್ವ ಅದನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ, ಸ್ವಂತ ತಂಗಿಯಂತೆ ಸಾಕಿದ್ದಳು. ಅವರಿಬ್ಬರ ಮಧ್ಯೆ ಗಾಢವಾದ ಪ್ರೇಮ ಬೆಳೆದಿತ್ತು. ಮುದುಕಿ ಕೆಲಸಕ್ಕೆ ಹೊರಟಾಗ ಮಲ್ಲವ್ವ ಕಾಡಿಬೇಡಿ ರೊಕ್ಕ ಪಡೆದುಕೊಂಡು ಕೊಟ್ಟ ಕಾಸಿನಲ್ಲಿ ಸ್ವಲ್ಪ ತಾನೂ ತಿಂದು, ಇನ್ನುಳಿದ ಸ್ವಲ್ಪವನ್ನು ಮಣ್ಣಿನ ಕುಡಿಕೆಯಲ್ಲಿ ಕೂಡಿಟ್ಟಿದ್ದಳು.
ಒಂದು ದಿನ ನಸುಕಿನಲ್ಲೇ ಮಾಲಿಕ ಬಾಡಿಗೆ ವಸೂಲಿಗೆ ಬಂದ. "ಬಾಡಿಗೆ ಕೊಡದೇ ಹೋದರೆ ನಿಮ್ಮ ಆಡುಮರಿಯನ್ನು ಎಳೆದೊಯ್ಯುವೆ” ಎಂದ. 
ಕೂಡಲೇ ಅಲ್ಲೇ ನಿಂತಿದ್ದ ಮಲ್ಲವ್ವ ಆಡನ್ನು ತೆಕ್ಕೆಯಲ್ಲಿ ಬಿಗಿದಪ್ಪಿಕೊಂಡು ಓಡಿದಳು. “ಇದು ನನ್ನ ಮರಿ. ನಾನು ಕೊಡುವುದಿಲ್ಲ. ಇವಳು ನನ್ನ ತಂಗಿ” ಎಂದು ಮನಸಾರೆ ಅತ್ತು ನುಡಿದಳು. 
ಆಗ ಆ ಮಗುವಿನಲ್ಲಿ ಹುದುಗಿದ್ದ ಪ್ರಾಣಿದಯೆ ಕಂಡು ಮಾಲೀಕನ ಕಣ್ಣುತುಂಬಿ, “ಹಾಗೇನಿಲ್ಲ, ತಮಾಷೆಗೆ ನುಡಿದೆ” ಎಂದನು. 
ತಕ್ಷಣ ಮಲ್ಲವ್ವ ಏನೋ ನೆನಪಿಸಿಕೊಂಡು ಒಳಹೋಗಿ ತಾನು ಕೂಡಿ ಹಾಕಿದ್ದ ಹಣದ ಕುಡಿಕೆಯನ್ನು ಮಾಲೀಕನಿಗೆ ಕೊಟ್ಟು, "ಇದನ್ನು ಎಣಿಸಿ, ಕಡಿಮೆಯಿದ್ದರೆ ಮತ್ತೆ ಕೂಡಿಸಿಕೊಡುವೆ” ಎಂದಳು. 
ಮಾಲಿಕನಿಗೆ ಐವತ್ತು ರೂಪಾಯಿ ದೊರಕಿತು. ಮಲ್ಲವ್ವನ ಬುದ್ಧಿವಂತಿಕೆಯನ್ನು ಕಂಡು ಹೃದಯ ಕರಗಿತು 
“ಮಗೂ! ಬಡತನದ್ದಲ್ಲಿ ಹುಟ್ಟಿದರೂ ನೀನು ಎಂಥ ಜಾಣೆ. ನಿನ್ನ ಆಡಿನಮರಿ, ಕಾಸು ಎರಡೂ ನೀನೇ ಇಟ್ಟುಕೋ. ಇನ್ನು ಮುಂದೆ ನಾನು ನಿಮಗೆ ಬಾಡಿಗೆ ಕೊಡಿ ಎಂದು ಕೇಳುವುದಿಲ್ಲ. ಈ ಜಗತ್ತಿನಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯಕ್ಕಿಂತ ದೊಡ್ಡದು ಯಾವುದು? ಜಗತ್ತಿನಲ್ಲಿ ಹಣ ನೆರಳು ಬಿಸಿಲಿದ್ದಂತೆ; ಎಂದೂ ಶಾಶ್ವತವಲ್ಲ. ನಾವು ಹಣಕ್ಕೆ ಬೆಲೆ ಕೊಡದೆ ವ್ಯಕ್ತಿಯ ಗುಣಕ್ಕೆ ಮಹತ್ವ ಕೊಡುವುದು ಉತ್ತಮ” ಎಂದು ಹೇಳಿ ಅಲ್ಲಿಂದ ಹೊರಟನು.
ಜಮುನಾ    

ಕಾಮೆಂಟ್‌ಗಳಿಲ್ಲ: