Pages

ಕಥೆ - ನಂಬಿಕೆಯ ಭಂಟ



ಜಾನಕಮ್ಮನವರಿಗೆ ದಿನಾ ಸಂಜೆ ತಮ್ಮ ಪ್ರೀತಿಯ ಸಾಕು ನಾಯಿ ಜಿಮ್ಮಿಯೊಂದಿಗೆ ವಾಕ್ ಮಾಡುವ ಅಭ್ಯಾಸ. ಸಂಜೆ ನಾನು ಶಾಲೆ ಮುಗಿಸಿಕೊಂಡು ಮನೆಗೆ ಹಿಂತಿರುಗುವ ರಸ್ತೆಯಲ್ಲೇ ಅವರ ಮನೆ ಇರುವುದರಿಂದ ಅವರ ನನ್ನ ಪರಿಚಯವಾಯ್ತು. ಪರಿಚಯ ಸ್ನೇಹವಾಯ್ತು. ಜಾನಕಮ್ಮನವರು ಸುಮಾರು 55-60 ರ ಆಸುಪಾಸಿನವರಿರಬಹುದು. ಆದರೆ ನಮ್ಮ ಸ್ನೇಹಕ್ಕೆ ವಯಸ್ಸು ಎಂದೂ ಅಡ್ಡಿ ಬರಲಿಲ್ಲ. 

ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಎಂದಿನಂತೆ ಜಾನಕಮ್ಮನವರು ಸಿಕ್ಕಿದರು. ಹೀಗೆ ಅದು-ಇದು ಮಾತನಾಡುತ್ತಾ ಹೆಜ್ಜೆ ಹಾಕುತ್ತಿದ್ದೆವು. ಅವರ ಜೊತೆ ಜಿಮ್ಮಿಯೂ ಇತ್ತು. ಜಾನಕಮ್ಮನವರು ಮರುದಿನ ಜಿಮ್ಮಿಯ ಹುಟ್ಟುಹಬ್ಬಕ್ಕೆ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ಆ ಕ್ಷಣ ಅವರ ಆಹ್ವಾನವನ್ನು ಕೇಳಿ ಸ್ವಲ್ಪ ಕಸಿವಿಸಿಯಾಯಿತು. ಜಿಮ್ಮಿಯ ಹುಟ್ಟಿದ ಹಬ್ಬವೇ?!! ಎಂದುಕೊಂಡೆ. ಆದರೆ ಅವರ ಮುಂದೆ ಏನನ್ನೂ ತೋರಿಸಿಕೊಳ್ಳದೆ, ಆಗಲಿ ಬರುವೆ ಎಂದು ಮನೆಯ ಕಡೆಗೆ ನಡೆದೆ.

ಮಾರನೆಯ ದಿನ ಸಂಜೆ ಜಾನಕಮ್ಮನವರ ಮನೆಗೆ ಜಿಮ್ಮಿಯ ಹುಟ್ಟಿದ ಹಬ್ಬ ಸಮಾರಂಭಕ್ಕೆ ಹೋದೆ. ಸಮಾರಂಭ ಅದ್ಧೂರಿಯಾಗಿ0iÉುೀ ಇತ್ತು. ಒಂದಿಪ್ಪತ್ತು ಮಹಿಳೆಯರಿದ್ದರು. ಜಾನಕಮ್ಮನವರು ನನ್ನನ್ನು ಆದರದಿಂದ ಬರಮಾಡಿಕೊಂಡರು. ಜಿಮ್ಮಿಯ ಪರವಾಗಿ ಜಾನಕಮ್ಮನವರೇ ಮೇಣದ ಬತ್ತಿ ಹಚ್ಚಿ, ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು. ಅದನ್ನೆಲ್ಲ ನೋಡಿದ ನನಗೆ ಎಷ್ಟು ಅದೃಷ್ಟವಂತ ನಾಯಿ ಇದು ಅನ್ನಿಸಿತು. 

ಎಲ್ಲರೂ ಹೊರಟ ನಂತರ ಕುತೂಹಲ ತಾಳಲಾರದೇ ಜಾನಕಮ್ಮನವರನ್ನು ಕರೆದು, "ನಾಯಿಗಳಿಗೂ ಹುಟ್ಟಿದ ಹಬ್ಬ ಆಚರಿಸುವ ವಿಚಿತ್ರವನ್ನು ಮೊದಲ ಬಾರಿ ನೋಡಿದ್ದು ನಿಮ್ಮ ಮನೆಯಲ್ಲಿಯೇ, ನಿಜಕ್ಕೂ ಜಿಮ್ಮಿಗೆ ನಿಮ್ಮಂತ ಒಡತಿ ಸಿಕ್ಕಿರುವುದು ಅದೃಷ್ಟವೇ ಸರಿ" ಎಂದು ಕೇಳಿಯೇ ಬಿಟ್ಟೆ. ಅದಕ್ಕವರು ಮುಗುಳ್ನಕ್ಕು "ಅಲ್ಲಮ್ಮ, ಜಿಮ್ಮಿ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಈ ಒಂಟಿ ಜೀವಕ್ಕೆ ಆಧಾರವಾಗಿರುವ ಮತ್ತೊಂದು ಜೀವವೇ ನನ್ನ ಜಿಮ್ಮಿ" ಎಂದರು.

"ನನಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತದೆ ಆಗ ನಾನು ವೈದ್ಯರು ನೀಡಿದ ಮಾತ್ರೆ ತಕ್ಷಣ ತೆಗೆದುಕೊಳ್ಳದಿದ್ದರೆ ನನ್ನ ಹೃದಯ ಬಡಿತವೇ ನಿಂತು ಹೋಗುತ್ತದೆ. ಒಮ್ಮೆ ನನಗೆ ಹೀಗೆ ತೀವ್ರವಾಗಿ ಎದೆ ನೋವು ಶುರುವಾಯ್ತು ಮಾತ್ರೆ ಬೇರೆ ಪಕ್ಕದಲ್ಲಿ ಇರಲಿಲ್ಲ, ನೋವಿನಿಂದ ನೆಲಕ್ಕುರುಳಿ ಒದ್ದಾಡುತ್ತಿದ್ದೆ, ಆಗ ಪಕ್ಕದಲ್ಲೇ ಇದ್ದ ಜಿಮ್ಮಿ ನನ್ನ ವಿಚಿತ್ರ ವರ್ತನೆಯನ್ನು ಗಮನಿಸಿ ಒಂದೇ ಸಮನೆ ಬೊಗಳಲಾರಂಭಿಸಿತು. ಸಾಲದ್ದಕ್ಕೆ ಪಕ್ಕದ ಮನೆಯ ಕಾಂಪೌಂಡ್ ಮುಂದೆ ನಿಂತು ಒಂದೇ ಸಮನೆ ಬೊಗಳುತ್ತಿತ್ತು. ಇದನ್ನು ಗಮನಿಸಿದ ಪಕ್ಕದ ಮನೆಯವರು ಹೊರ ಬಂದೊಡನೆ ಅವರ ಬಟ್ಟೆಯನ್ನು ಬಾಯಲ್ಲಿ ಕಚ್ಚಿ ನಮ್ಮ ಮನೆಗೆ ಕರೆತಂದಿತು. ಆಗ ನನ್ನ ಪರಿಸ್ಥಿತಿಯನ್ನು ಕಂಡ ಅವರು ನನ್ನನ್ನು ಮೇಲೆತ್ತಿ ಮಲಗಿಸಿ ನನ್ನ ಮಾತ್ರೆಯನ್ನು ತಂದು ಕೊಟ್ಟರು. ಸ್ವಲ್ಪ ಸಮಯದ ನಂತರ ನಾನು ಚೇತರಿಸಿಕೊಂಡೆ. ಅಂದು ಜಿಮ್ಮಿ ನನ್ನ ಪ್ರಾಣ ಉಳಿಸಿತು" ಎಂದರು. 

ಆಗ ನಾನು "ನಿಮಗೆ ಯಾರೂ ಇಲ್ಲವೇ?" ಎಂದು ಕೇಳಿದ್ದಕ್ಕೆ ಅವರು, "ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಹೊರದೇಶದಲ್ಲಿ ಕೆಲಸದಲ್ಲಿದ್ದಾರೆ. ಪಾಪ ಅವರಿಗೆ ಈ ಮುದಿ ಅಮ್ಮನನ್ನು ನೋಡಿಕೊಳ್ಳುವ ಆಸಕ್ತಿಯೂ ಇಲ್ಲ, ಹೆಚ್ಚಾಗಿ ಸಮಯವೂ ಇಲ್ಲ. ಅವರು ಓದಿ ಸಂಪಾದಿಸುವವರೆಗೂ ಈ ಅಮ್ಮನ ಅವಶ್ಯಕತೆ ಇತ್ತು. ಆದರೆ ಈಗವರು ಲಕ್ಷಲಕ್ಷ ಸಂಪಾದಿಸಿ, ಹೆಂಡತಿ-ಮಕ್ಕಳೊಂದಿಗೆ ಹಾಯಾಗಿದ್ದಾರೆ. ಈಗ ಅವರಿಗೆ ನನ್ನ ಅವಶ್ಯಕತೆಯಿಲ್ಲ. ನಮ್ಮ ಯಜಮಾನ್ರು ನನಗೆ ಏನನ್ನೂ ಕಡಿಮೆ ಮಾಡಿಲ್ಲ. ನಾನು ಸಾಯುವವರೆಗೂ ಜೀವನಕ್ಕೆ ಏನೂ ತೊಂದರೆ ಇಲ್ಲ, ಅವರು ಹೋದ ಮೇಲೆ ನಾನು ಒಂಟಿಯಾದೆ. ನನ್ನ ಮಕ್ಕಳನ್ನು ನನ್ನೊಟ್ಟಿಗೆ ಬಂದಿರಿ ಎಂದು ಅಂಗಲಾಚಿ ಕೇಳಿದರೂ ಅವರು ಬರಲಿಲ್ಲ. ಅವರೊಟ್ಟಿಗೆ ಹೊರದೇಶಕ್ಕೆ ಹೋಗಲು ನನಗೆ ಇಷ್ಟವಿಲ್ಲ. ಹಾಗಾಗಿ ಈ ನನ್ನ ಮುದ್ದು ಜಿಮ್ಮಿಯೇ ನನಗೆ ಆಸರೆ ಹಾಗೂ ಕಾವಲು. ಒಬ್ಬಂಟಿಗಳಾದ ನನಗೆ ಎಲ್ಲಾ ರೀತಿಯಲ್ಲೂ ರಕ್ಷಣೆ ನೀಡುತ್ತದೆ. ಮೇಲಾಗಿ ನನ್ನ ಮಕ್ಕಳಂತೆ ನನ್ನೊಬ್ಬಳನ್ನೇ ಬಿಟ್ಟು ಎಲ್ಲೂ ಹೋಗೊಲ್ಲ. ನನ್ನ ಇಬ್ಬರು ಮಕ್ಕಳಿಗಿಂತ ನನ್ನ ಜಿಮ್ಮಿಯೇ ನನ್ನ ಪ್ರೀತಿಯ ಮಗ. ಅವನಿಗಾಗಿ ನಾನು ಇಷ್ಟು ಮಾಡದಿದ್ದರೆ ಹೇಗೆ?" ಎಂದರು. 

ಅವರ ಈ ಕಥೆಯನ್ನು ಕೇಳಿ ನಿಜಕ್ಕೂ ಮನ ಕರಗಿತು. ಎಂಥಾ ಪ್ರಶ್ನೆ ಕೇಳಿಬಿಟ್ಟೆನಲ್ಲಾ ಎಂದು ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಹೆತ್ತ ತಾಯಿಗಿಂತ ಸಂಪಾದನೆಯೇ ಹೆಚ್ಚಾಯಿತೇ ಎಂದು ಜಾನಕಮ್ಮನವರ ಮಕ್ಕಳ ಬಗ್ಗೆ ಕೋಪ ಬಂದರೆ, ಮಾನವೀಯತೆಯಲ್ಲಿ ಒಮ್ಮೊಮ್ಮೆ ಪ್ರಾಣಿಗಳು ಮನುಷ್ಯನನ್ನು ಮೀರಿಸುತ್ತವೆ ಎಂದು ಜಿಮ್ಮಿಯ ಬಗ್ಗೆ ಹೆಮ್ಮೆಯೂ ಆಯಿತು. 

  ದೀಪಶ್ರೀ ಜೆ

ಕಾಮೆಂಟ್‌ಗಳಿಲ್ಲ: