Pages

ಕಥೆ - ನಿಜವಾದ ಶಿಕ್ಷಣ


   ದ್ವಿತೀಯ ಪಿಯುಸಿ ಓದುತ್ತಿದ್ದ ಸಹನಾ ಎಂದೂ ಯಾವುದೇ ಕಾರಣಕ್ಕೂ ತರಗತಿಗಳಿಗೆ ಗೈರು ಹಾಜರಾಗುತ್ತಿರಲಿಲ್ಲ. ಈ ವರ್ಷವೂ ಹೆಚ್ಚಿನ ಹಾಜರಾತಿ ಪಡೆವ ಹೆಗ್ಗಳಿಕೆ ಅವಳ ಮಡಿಲಿಗೆ ಬೀಳುವ ಸಂಭವವಿತ್ತು. ಅವಳ ತರಗತಿಯ ಕೆಲವು ವಿದ್ಯಾರ್ಥಿಗಳು ಅವಳನ್ನು ಈ ವಿಷಯದ ಬಗ್ಗೆ ಛೇಡಿಸುತ್ತಿದ್ದುದ್ದುಂಟು. 
   ಹೀಗಿರುವಾಗ ಅದೊಂದು ದಿನ ಕಾರಣಾಂತರಗಳಿಂದ ಕಾಲೇಜ್ 11.30ರಿಂದ ಆರಂಭವಾಗುತಿದ್ದುದರಿಂದ ಸಹನಾಳ ತಂದೆ ಚೆಕ್ ನೀಡಿ ಬ್ಯಾಂಕಿನಿಂದ ಹಣ ತರಲು ಹೇಳಿದರು. ಹಾಗಾಗಿ ಅವಳು 11-30ರ ಒಳಗೆ ಕೆಲಸ ಮುಗಿಸಿಕೊಂಡು ಕಾಲೇಜಿಗೆ ಹೋಗಬೇಕಿತ್ತು. ತಿಂಗಳ ಮೊದಲ ವಾರವಾದ್ದರಿಂದ ಬ್ಯಾಂಕ್ ಜನಭರಿತವಾಗಿರುತ್ತದೆ ಎಂಬುದನ್ನು ತಿಳಿದಿದ್ದ ಸಹನಾ ಬೇಗನೇ ಬಂದು ಅವಳ ಕೆಲಸವನ್ನು ಮುಗಿಸಿಕೊಂಡಾಗ 11 ಘಂಟೆಯಾಗಿತ್ತು. ಇನ್ನು 30 ನಿಮಿಷಗಳಲ್ಲಿ ಕಲೇಜಿಗೆ ಹೋಗಬೇಕೆಂದುಕೊಂಡು ಸರಸರನೆ ಹೆಜ್ಜೆ ಹಾಕಿದಳು.
   ಅಷ್ಟರಲ್ಲಿ ಅಲ್ಲೇನೋ ಜೋರು ಧ್ವನಿ ಕೇಳಿಸಿದಂತಾಗಿ ಶಬ್ಧ ಬಂದ ದಿಕ್ಕಿಗೆ ನೋಡಿದಾಗ ಬ್ಯಾಂಕಿನವರೊಬ್ಬರು ಒಬ್ಬ ಅಜ್ಜಿಯ ಮೇಲೆ ಕೂಗಾಡುತ್ತಿದ್ದುದ್ದನ್ನು ಕಂಡಳು. ಏನಿರಬಹುದೆಂದು ವಿಚಾರಿಸುವ ಮನಸ್ಸಾದರೂ, ಕಾಲೇಜಿಗೆ ಲೇಟಾಗುತ್ತದೆಂದು ಮುಂದೆ ನಡೆದಳು. ಆದರೆ ಏಕೋ ಏನೋ ಅವಳ ಮನಸ್ಸು ಒಪ್ಪಲಿಲ್ಲ. ವಿಚಾರಿಸಿಯೀ ಬಿಡೋಣವೆಂದು ಅಜ್ಜಿಯ ಬಳಿ ಹೋದಳು. 
ಅಜ್ಜಿ ಸಹನಾಳ ಪ್ರಶ್ನೆಗೆ ಉತ್ತರಿಸುತ್ತಾ, “ನಮ್ಮಂತಹ ವಯಸ್ಸಾದವರ ಗೋಳು ಯಾರು ಕೇಳುತ್ತಾರಮ್ಮ, ಹೆತ್ತ ಮಕ್ಕಳೇ ನಮ್ಮ ಬಗ್ಗೆ ಕಾಳಜಿ ವಹಿಸದಿದ್ದಾಗ, ಮೂರನೆಯವರು ನಮ್ಮ ಬಗ್ಗೆ ಕಾಳಜಿ ವಹಿಸಲು ಸಾಧ್ಯವೇ?” ಎಂದು ಹತಾಶರಾಗಿ ನುಡಿದರು. 
  ಆಗ ಸಹನಾ, “ಅಜ್ಜಿ, ನಿಮಗೀಗ ಬಂದಿರುವ ಕಷ್ಟವಾದರೂ ಏನು? ದಯವಿಟ್ಟು ಹೇಳಿ, ನನ್ನ ಕೈಲಾಗುವುದಾದರೆ, ನಾನು ಸಹಾಯ ಮಾಡುತ್ತೇನೆ”, ಎಂದಳು. 
“ಅಯ್ಯೊ, ನಿನ್ನಂತಹ ಪುಟ್ಟ ಹುಡುಗಿಗೆ ಹೇಳುವ ಕಷ್ಟವಲ್ಲಮ್ಮ, ಆದರೂ ಹೇಳುತ್ತೇನೆ ಕೇಳು. ನಾನು ನನ್ನ ಪತಿಯ ಪಿಂಚಣಿ ಹಣವನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಪ್ರತಿ ತಿಂಗಳೂ ಹೇಗೋ ಕಷ್ಟಪಟ್ಟು, ಈ ಉದ್ದ ಕ್ಯೂನಲ್ಲಿ ನಿಂತು ಹಣ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ ಈ ಬಾರಿ ಕ್ಯೂನಲ್ಲಿ ನಿಲ್ಲಲ್ಲು ಆಗುತ್ತಿಲ್ಲ. ನೆನ್ನೆಯಿಂದ ಸ್ವಲ್ಪ ಜ್ವರ ಇತ್ತು. ಈಗ ಏಕೋ ಕಣ್ಣು ಮಂಜಾಗುತ್ತಿದೆ, ತಲೆ ಸುತ್ತುತ್ತಿದೆ, ಮನೆಗೆ ಹೋಗಿ ನಾಳೆ ಬರೋಣವೆಂದರೆ, ಇಂದೇ ಹಣದ ಅವಶ್ಯಕತೆಯಿದೆ. ಆದ್ದರಿಂದ ಆ ಬ್ಯಾಂಕಿನವರ ಬಳಿ ಕೇಳಿಕೊಳ್ಳೋಣ ಎಂದು ಹೋದೆ, ಆ ವ್ಯಕ್ತಿ ಹಾಗೆ ಕೊಡಲು ಸಾಧ್ಯವೇ ಇಲ್ಲ, ನಿಮಗಿಂತ ಮುಂಚೆ ಬಂದವರಿರುತ್ತಾರೆ ಎಂದುಬಿಟ್ಟ. ದಯವಿಟ್ಟು ಏನಾದರೂ ಮಾಡಿ ಎಂದದ್ದಕ್ಕೆ ಕೂಗಾಡಿಬಿಟ್ಟ. ಈಗ ನಾನೇ ನಿಲ್ಲಬೇಕು. ಯಾರನ್ನು ಕೇಳಲಿ, ಎಲ್ಲರಿಗೂ ಅವರವರದೇ ತಾಪತ್ರಯಗಳು” ಎಂದು ನಿಟ್ಟುಸಿರಿಟ್ಟರು. 
    ಅಜ್ಜಿಯ ಕಥೆ ಕೇಳಿ ಸಹಾನಾಗೆ ಬೇಸರವಾಯಿತು. ಒಂದು ಘಳಿಗೆ ಕಾಲೇಜಿನ ನೆನಪಾದರೂ, ಮರುಕ್ಷಣವೇ, “ಅಜ್ಜಿ, ನೀವೇನೂ ಯೋಚನೆ ಮಾಡಬೇಡಿ. ಹಣ ನಾನು ತಂದುಕೊಡುತ್ತೇನೆ”, ಎಂದಳು. ಕ್ಯೂನಲ್ಲಿ ನಿಂತು ಹಣವನ್ನು ಪಡೆದು ಅಜ್ಜಿಗೆ ಕೊಟ್ಟಾಗ ಘಂಟೆ 1-30 ಆಗಿತ್ತು. ಅಂದು ಅವಳಿಗೆ ಕಾಲೇಜಿಗೆ ಹೋಗಲಾಗುವುದಿಲ್ಲ ಎಂದು ಗೊತ್ತಾದರೂ ಆ ಬಗ್ಗೆ ಅವಳಿಗೆ ಬೇಸರವಿರಲಿಲ್ಲ. ಬದಲಿಗೆ ವಯಸ್ಸಾದ ಹಿರಿಜೀವಕ್ಕೆ ಸಹಾಯ ಮಾಡಿದ ಸಂತೃಪ್ತಿಯಿತ್ತು. ಬ್ಯಾಂಕಿನಿಂದ ಮನೆಗೆ ಹಿಂತಿರುಗುವಾಗ, ಅಲ್ಲಿನ ಗೋಡೆಯ ಮೇಲೆ ನೇತಾಡುತ್ತಿದ್ದ “ಜನಸೇವೆಯೇ ಜನಾರ್ಧನ ಸೇವೆ” ಎಂಬ ಫಲಕವನ್ನು ನೋಡಿ, “ಓಹೋ ಇದೇ ಏನೋ ಬ್ಯಾಂಕಿನವರು ಮಾಡುವ ಜನಾರ್ಧನ ಸೇವೆ” ಎಂದು ತನ್ನೊಳಗೆ ನಗುತ್ತಾ ಹೊರ ನಡೆದಳು.
 - ದೀಪಾ ಜೆ 
[ಕೃಪೆ: ಅಪೂರ್ವ ಕಣ್ಮಣಿ ಮಾಸಪತ್ರಿಕೆ]

ಕಾಮೆಂಟ್‌ಗಳಿಲ್ಲ: