{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿರುವುದನ್ನು, ಆ ದ್ವೇಷ ದಂಗೆಗಳಾಗಿ ಮಾರ್ಪಟ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ, ಜೀವಹರಣವಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಯಾವುದೇ ರೀತಿಯ ಗಲಭೆಗಳಾದಾಗಲೂ ಅದಕ್ಕೆ ಹೆಚ್ಚು ಬಲಿಯಾಗುವುದು, ಅವಮಾನಕ್ಕೊಳಗಾಗುವುದು, ನಷ್ಟಕ್ಕೊಳಗಾಗುವುದು ಹೆಣ್ಣುಮಕ್ಕಳೇ.
ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದ್ವೇಷದಿಂದ ನಾವೇನೂ ಸಾಧಿಸಲು, ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ನಾವು ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ತಮ್ಮ ಹಿತಾಸಕ್ತಿಗಾಗಿ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ನಾವು ನೀವೆಲ್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಅನಿಸಿಕೆ, ಅಭಿಪ್ರಾಯಗಳನ್ನು, ಬರಹಗಳನ್ನು, ಕವನಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಮಹಾನ್ ಕವಿಗಳಲ್ಲೊಬ್ಬರಾದ ಶ್ರೀ ಸಿದ್ಧಯ್ಯಪುರಾಣಿಕರ (ಕಾವ್ಯಾನಂದ) ಕವನ}
ನಡುಹಗಲು! ಕಡುಬೇಸಿಗೆಯ ಸೂರ್ಯ ನಡುನೆತ್ತಿಗೇರಿರಲು
ಪೊಡವಿ ತಲ್ಲಣಿಸುತಿದೆ! ತಿರೆಗೆ ಜ್ವರ ಬಂದಂತೆ
ಬಿರುಬಿಸಿಲ ಉರಿಹೆಚ್ಚಿ ಉಗಿ ಕಾರುತಿದೆ ನೆಲವು!
ತನಗೆ ತಂಪನು ನೀಡೆ ಗಾಳಿಯೂ ಗೋಳಿಟ್ಟು
ತರುಗಳನು ಬೇಡುತಿದೆ ಆಗಾಗ ಕೆಣಕೆಣಕಿ!
ಬಿಸಿಲುಗುದುರೆಗಳೇರಿ ವಸುಧೆಯೊಡಲಿಂದೊಗೆದ
ಬಿಸಿಯುಸಿರು ಓಡುತಿದೆ ಮೋಡಗಳ ಮೊರೆ ಹೋಗಲು!
ಹೊಗೆಬಂಡಿಯೋಡುತಿದೆ ದಿಗಿಲುಗೊಂಡವರಂತೆ
ಉಗಿಯ ಬಿಸುಪಿಮ್ಮಡಿಸೆ ಹಗಲುಗುಳ್ವ ಕಿಚ್ಚಿನಲಿ!
ನಾನಿಳಿದ ನಿಲ್ದಾಣವೊಂದು ಹಂಚಿನ ಕೋಣೆ
ನಾಲ್ಕು ಜನರೊಮ್ಮೆಗೇ ನಿಂತುಕೊಳ್ಳಲು ಬರದು
ಮಗ್ಗಲಿನ ತಗಡುಮನೆಯರೆಗಾವುನೆರಳಿನಲಿ
ಉಸ್ಸೆಂದು ಹೊರಳುತಿವೆ ಜೀವಿಗಳು ನಾಲ್ಕಾರು!
ಸನಿಹದಲ್ಲಿ ಮರವಿಲ್ಲ ನಿಲ್ಲೆ ನೆರಳಿನಿಸಿಲ್ಲ
ಊರಿಹುದು ದೂರದಲಿ ದಾರಿ ತಿಳಿಯದು ನನಗೆ
ಏನು ಮಾಡುವುದೆಂದು ಜಾನಿಸುತ ನಿಂತಿರಲು
ಕಿವಿಯ ಕೊರೆಯುತ ಹೊಕ್ಕು ಎದೆಯನಡುಗಿಸಿತೊಂದು
ಕರುಣಕ್ರಂದನ - “ಸಲಾಮ್ ಸಾಬ್”!
ಹಿಂತಿರುಗಿ ನೋಡಿದೆನು, ಹೆದರಿ ಹೌಹಾರಿದೆನು!
ದೈನ್ಯತೆಯ ನಿಟ್ಟುಸಿರೆ ನರನಾಗಿ ನಿಂತಂತೆ
ದಾರಿದ್ರ್ಯದುಮ್ಮಳವೆ ಮೈದಾಳಿತೆಂಬಂತೆ
ಅಳಲ ಚೀತ್ಕಾರವೇ ಚರ್ಮ ತೊಟ್ಟಿರುವಂತೆ
ಕನಿಕರದ ಕಣ್ಣೀರೆ ಕೈಕಾಲು ತಳೆದಂತೆ
ಕರುಳುಗಳ ಕಲಮಲವೆ ಕಾಯವನು ಪಡೆದಂತೆ
ಎಲುವು ತೊಗಲುಗಳಲ್ಲಿ ಎಂತೆಂತೊ ಜೀವವನು
ಬಲುಮೆಯಿಂದಲಿ ಹಿಡಿದು ಉಸಿರಬಲೆಯಲಿ ಬಿಗಿದು
ಬಾಯ್ಬಿಡುತ ನಿಂತಿತ್ತು ನರನ ಆಕೃತಿಯೊಂದು!
ನರನೆನಲೊ ನೆರಳೆನೆಲೊ ಅರೆಜೀವ ಹಾರಿರುವ
ಬರಿಕಳೇಬರವೆನಲೊ ನಿಟ್ಟುಸಿರ ತಿದಿಯೆನಲೊ?
ತಳದಿಂದ ತಲೆವರೆಗೆ ಕಣ್ಣಿಟ್ಟು ನೋಡಿದರೆ
ಮಧ್ಯದಲಿ ಕಾಣುವುದು ಛಿದ್ರವಸ್ತದ ತುಂಡು!
ತಲೆಯ ಕಾಯುವರಾರು? ಕರುಣೆ ಬಂದಿತೊ ಏನೊ
ನರೆಗೂದಲೆಂಬುವಕೆ – ಮುಚ್ಚಿಹವು ತಲೆ ಕೆನ್ನೆ!
ಹೆಗಲಿನಲಿ ಹರುಕೊಲ್ಲಿ ಬಗಲಿನಲಿ ಆನುಗೋಲ್
ಎಡಗೈಯೊಳಿದೆ ಪಾತ್ರೆ ಬಲಗೈಗೆ ಹಣೆಯು –
“ಸಲಾಮ್ ಸಾಬ್, ಸಲಾಮ್ ಸಾಬ್!”
ಬೆವರು ಬತ್ತಿಹ ಕಾಯ ಹೊಲಸು ಮೆತ್ತಿಹ ಮೈಯು
ಹಿಂಡಿದಂತಿಹ ಚರ್ಮ ಖಂಡವಂಟದ ಎಲುವು
ಕಾಂತಿಯಿಂಗಿದ ಕಣ್ಣು ಚಿಂತೆಯಡಸಿದ ಹಣೆಯು
ಹಸಿದು ಕುಸಿದಿಹ ಹೊಟ್ಟೆ ಮುರಿದು ಬಾಗಿದ ಬೆನ್ನು
ನರೆತು ನಡುಗುವ ತಲೆಯು ಬರತು ಅಂಟಿಹ ಜಿಹ್ವೆ
ಬಿಸಿಲನಣಕಿಸಿನಿಂತು ನಿರುಕಿಸುತಲಿಹ ಜೀವಿ
ಭಾರತದ ಬಡತನದ ಬಾವುಟದ ಚಿತ್ರದೊಲು!
ಅಳಲು ಕರುಣೆಗೆ ಬರೆದ ಜೀವಂತ ಪತ್ರದೊಲು!
ಸಲಾಮ್ ಸಾಬ್ ! ಸಲಾಮ್ ಸಾಬ್!
ಕಂಡೊಡನೆ ಕಲ್ಲೆದೆಯ ಕರಗಿಸುವ ಕನಿಕರವು
ಕಲಕಿದರು ಎದೆಯನ್ನು ಕನಲಿ ನುಡಿಯಿತು ಬುದ್ಧಿ:
“ಇವ ತುರುಕ - ಭಾರತದ ಅರಮನೆಯ ಮುರುಕ!
ಇವ ಮ್ಲೇಂಛ - ಭಾರತದ ಹಂಚೆ ಹೂಡಿಹ ಸಂಚ!
ಹಾವ್ಗೆ ಹಾಲೆರೆಯದಿರು - ಸಾಯಲಿವರೀ ರೀತಿ!”
ಎಂದು ಗುಡುಗಿದ ದನಿಗೆ, “ಕನಲದಿರು ಬುದ್ಧಿಯೇ,
ಭಾರತದ ವೈರಿಗಳು ಬಡ ತುರುಕರಲ್ಲ, ಸಿರಿ
ತಲೆಗೇರಿ ಕುಣಿಯುತಿಹ ಸ್ವಾರ್ಥಿಗಳು ಕೆಲವು ಜನ!
ಕೆಡುಕರವರೀ ಪಾಪ ಬಡ ಜನಕೆ ಮೃತ್ಯುವೆ?”
ಬೆಚ್ಚಿದೆನು ಮನದಲ್ಲಿ! ನಿಶ್ಚಯವು ಈ ಮಾತು-
ಬಡ ತುರುಕ ಬೇಡುವುದು ಅನ್ನ- ಅಲ್ಲ ಪಾಕಿಸ್ತಾನ!
ಇವರೊಡನೆ ದ್ವೇಷವೆ? ನಾಲ್ಕಾಣಿಯನ್ನಿತ್ತೆ.
“ಸಲಾಮ್ ಸಾಬ್!” ಅವನ ಹಿಗ್ಗನು ಕಂಡು
ಹಿಗ್ಗಿತೆನ್ನೆದೆ! ಹೊಟ್ಟೆ ತುಂಬುಣ್ಣುವನು ಹಸಿದ ಜೀವಿ?
ಹುಟ್ಟಿನೊಳಗಿರಬಹುದು ಹಸಿದ ಹೊಟ್ಟೆಯಲಿ ಕುಲವುಂಟೆ?
ವೇಷದೊಳಗಿರಬಹುದು ಹೃದಯಭಾಷೆಯಲಿ ಕುಲವುಂಟೆ?
ಜಡ ತನುವಿಗಿರಬಹುದು ಬಡತನಕೆ ಕುಲವುಂಟೆ?
ಕರಿಬಿಳಿಯ ವರ್ಣವಿರೆ ಕರುಣಕ್ಕೆ ಕುಲವುಂಟೆ?
ಸಲಾಮ್ ಸಾಬ್! ಸಲಾಮ್ ಸಾಬ್!
- ಸಿದ್ಧಯ್ಯಪುರಾಣಿಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ