Pages

ಪುಸ್ತಕ ಪ್ರೀತಿ - ದೇವಾಂಗನಾ ಶಾಸ್ತ್ರೀ ಯವರ ಕಥಾಸಂಕಲನ



ದೇವಾಂಗನೆಯವರು ಸಮಕಾಲೀನ ಲೇಖಕಿಯರಾದ ತ್ರಿವೇಣಿ, ಕೊಡಗಿನ ಗೌರಮ್ಮ ಅವರುಗಳಂತೆ ತಮ್ಮ ಸುತ್ತ ಮುತ್ತಲಿನ ಮಹಿಳೆಯರ ಸಮಸ್ಯೆಗಳನ್ನು ಕುರಿತು ಬರೆಯುತ್ತಿದ್ದರು. ಸಣ್ಣ ಸಣ್ಣ ಕಥೆಗಳ ಮೂಲಕ ಇವರು ಸಮಾಜದಲಿ ಮಹಿಳೆಯರ ಸ್ಥಿತಿಗಳನ್ನು ತೋರಿಸಿದ್ದಾರೆ. ಜನರ ಮೌಢ್ಯತೆಯ ಬಗ್ಗೆಯೂ ಬರೆದಿದ್ದಾರೆ. ಬರೆದದ್ದು ಸ್ವಲ್ಪವಾದರೂ ಸ್ತ್ರೀ ಪರ ವಿಚಾರವಾದಿಯಾಗಿದ್ದಾರೆ.  ಅವರ ಸಣ್ಣ ಕಥೆಗಳ ಪರಿಚಯ ನಿಮ್ಮ ಮುಂದಿಡುತ್ತಿದ್ದೇನೆ.
ವೇಣೀಸಂಹಾರ 
ಪೌರೋಹಿತ್ಯ ಮಾಡಿ ಜೀವನ ನಿರ್ವಹಣೆ ಮಾಡಿ ಕೊಂಡಿದ್ದ ಶಂಭು ತನ್ನ ಮುದ್ದಿನ ಮಗಳು ಏಳು ವರ್ಷದ ಶಾಂತೆಯನ್ನು ನಲವತ್ತೈದು ದಾಟಿದ ಚಿದಾನಂದ ದೀಕ್ಷಿತರೊಂದಿಗೆ ವಿವಾಹ ಮಾಡಿದನು. ಆದರೆ  ವರ್ಷದೊಳಗೆ ದೀಕ್ಷಿತರು ಮರಣಿಸಿದರು. ಮಗಳು ಚಿಕ್ಕವಳೆಂದು ಕೇಶಮುಂಡನ ಮಾಡಿಸಿರಲಿಲ್ಲ. ಶಾಂತೆ ಬೆಳೆದಂತೆ ಅವಳ ಕೇಶವೂ ಬೆಳೆದು  ಕಣ್ಸೆಳೆಯುತ್ತಿತ್ತು. ಅದೇ ತನ್ನ ಪೌರೋಹಿತ್ಯಕ್ಕೆ ಅಡ್ಡಿಯಾಯಿತೆಂದು ಅವಳಿಗೆ ಕೇಶಮುಂಡನ ಮಾಡಲು ನಿರ್ಧರಿಸಿದನು. ವಿಷಯ ತಿಳಿದ ಶಾಂತೆ ತುಂಬಾ ವೇದನೆ ಪಟ್ಟಳು. ಕನ್ನಡಿಯ ಮುಂದೆ ನಿಂತು ಕೂದಲಿಗೆ ಎಣ್ಣೆ ಹಚ್ಚಿ ತುರುಬು ಹಾಕಿ ಅಲಂಕಾರ ಮಾಡಿಕೊಳ್ಳುತ್ತಿರುವಾಗಲೇ ಹಜಾಮನ ದನಿ ಕೇಳಿ ಮೂರ್ಛೆ ಹೋದಳು. ಅವಳು ಆ ಸ್ಥಿತಿಯಲ್ಲಿರುವಾಗಲೇ ಹಜಾಮನ ಮುಂದೆ ಕೂರಿಸಿದರು.ಅಣ್ಣ ವಿರೋಧಿಸಿದರು ಅಪ್ಪ ಇವನ ಮಾತನ್ನು ಕೇಳದೆ ಕೇಶ ತೆಗೆಯಲು ಹೇಳಿದನು.  ನೀರು ಚಿಮುಕಿಸಿದ್ದರಿಂದ ಎಚ್ಚರಗೊಂಡ ಶಾಂತೆ  ಬಿದ್ದಿದ್ದ ಕೇಶರಾಶಿಯನ್ನು ಕಂಡು " ಅಯ್ಯೋ ಅಣ್ಣ! ನನಗಾರೂ ಇಲ್ಲ. ತಂದೆ ತಾಯಿ ಎಲ್ಲ ಸತ್ತುಹೋಗಿದ್ದಾರೆ ನಾನೂ ಸತ್ತೆ!" ಎನ್ನುತ್ತಾ ಕುಸಿದಳು.
"ಅಂತೂ ಧರ್ಮ ಉಳಿದು ಕೊಂಡಿತು. ಪರಲೋಕದ ಗಂಡನಿಗೆ ಆಹಾರದ ಜೊತೆಯಲ್ಲಿ ಭೂಲೋಕದಲ್ಲಿನ ಹೆಂಡತಿಯ ತಲೆಗೂದಲಿನ ನೀರು ಬೆರೆಸಿ ಕೊಳ್ಳುವುದು ತಪ್ಪಿತು. ಹೆಣ್ಣು ಮಡಿಯಾದಳು, ಸ್ವರ್ಗಕ್ಕೆ ಹಾದಿ ನಿರಂತರವಾಯಿತು " ಎಂದು ಹೇಳಿರುವುದು ಜನರ ಮೌಢ್ಯವನ್ನು ತೋರಿಸುತ್ತದೆ.

ಹಾರೇಗೋಲು
ಬಡತನ ಏನನ್ನಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಭುವನೇಶ್ವರಿಯ ಮತ್ತು ರಾಮಾವಧಾನಿಗಳ ಮದುವೆಯೇ ಒಂದು ಉದಾಹರಣೆ. ತನ್ನ ತಂದೆಗಿಂತ ಎರಡು ವರ್ಷ ದೊಡ್ಡವರಾದ ಹಾಗೂ ನಾಲ್ಕನೆಯ ಮದುವೆಯಾಗುತ್ತಿರುವ  ಅವಧಾನಿಗಳನ್ನು ಒಪ್ಪಲು ಬಡತನವೇ ಕಾರಣ. ಮಗನ ಮದುವೆ ಮಾಡುವ ವಯಸ್ಸಿನಲ್ಲಿ ಮದುವೆಯಾಗಲು ಅವಧಾನಿಗಳು ಕೊಟ್ಟ ಕಾರಣ ಮನೆಯಲ್ಲಿ ಕೆಲಸ ಮಾಡಲು ಹೆಣ್ಣು ಮಗಳಿಲ್ಲ ಎಂದು. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದು ಅವಧಾನಿಗಳು  ಇಹಲೋಕ ತ್ಯಜಿಸಿದರು. ಇವರ ಸ್ವರ್ಗಾರೋಹಣಕ್ಕೆ ಅನುಕೂಲವಾಗಲು ಮಡದಿ ಭುವನೇಶ್ವರಿಯನ್ನು ಶುದ್ಧಿ ಮಾಡಿದರು. ಇದೀಗ ಅರಳಬೇಕಾಗಿದ್ದ ಅವಳ ಜೀವನ ವೈಧವ್ಯದಲ್ಲಿ ನರಳಬೇಕಾಯಿತು. ಭುವನೇಶ್ವರಿ ಮತ್ತು ಅವಧಾನಿಗಳ ಮಕ್ಕಳ ನಡುವೆ ಜಗಳ ಪ್ರಾರಂಭವಾಯಿತು. ಭುವನೇಶ್ವರಿ ಮನೆ ಬಿಟ್ಟು ಹೊರ ಬಂದಳು.
ಭತ್ತಅವಲಕ್ಕಿಗಳನ್ನು ಕುಟ್ಟುವ ಕಾಯಕ ಮಾಡುತ್ತಾ ತಂದೆ ಮತ್ತು ತಂಗಿಯರನ್ನು ಪೋಷಣೆ ಮಾಡುತ್ತಿದ್ದಳು. ಹೀಗಿರುವಾಗ ಪುರೋಹಿತರ ಮನೆಯಲ್ಲಿ ಭತ್ತ ಕುಟ್ಟುವ ಸಲುವಾಗಿ ತನ್ನ ತವರೂರಿಗೆ ಬಂದಳು ಭುವನೇಶ್ವರಿ. ಪುರೋಹಿತರ ಮಗ ಮಾಧವ ಮೊದಲೇ ಪರಿಚಿತನಾಗಿದ್ದರೂ ಇವಳ ಜೊತೆ ಅನುಚಿತವಾಗಿ ನಡೆದುಕೊಂಡನು. ಕೈಯಲ್ಲಿದ್ದ ಹಾರೇಕೋಲಿನ ಸಹಾಯದಿಂದ ತನ್ನ ಶೀಲವನ್ನುಳಿಸಿಕೊಂಡಳು. ಈ ಘಟನೆಯಿಂದ ಅವಳಲ್ಲಿ ಪುರುಷ ಜಾತಿಯ ಮೇಲೇ ಜಿಗುಪ್ಸೆ ಉಂಟಾಯಿತು. ಹೀಗೆ ಸಮಸ್ಯೆಗಳು ಯಾರನ್ನಾದರೂ ಹೇಗೆ ಬೇಕಾದರೂ  ಬದಲಾಯಿಸುತ್ತದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ.

 ನಾಲ್ಕುನೂರು 
ಗೆಳತಿ ಇಂದಿರೆಯ ಮದುವೆ ಜೋಯಿಸರು ಮಗನೊಂದಿಗೆ ನಿಶ್ಚಯವಾಯಿತು. ವರದಕ್ಷಿಣೆಯಾಗಿ ಐನೂರು ರೂಗಳನ್ನು ಕೊಡಲು ಒಪ್ಪಿಕೊಂಡಿದ್ದರು ಇಂದಿರೆಯ ತಂದೆ. ಆದರೆ ಅದನ್ನು  ಕೊಡದ್ದರಿಂದ ಎರಡೂ ಕಡೆಯವರಿಗೂ ಘರ್ಷಣೆ ನಡೆಯಿತು. ನೂರು ರೂಗಳನ್ನು ಈಗ ಕೊಡುವೆ ಉಳಿದ ನಾನೂರು ರೂಗಳನ್ನು ನಂತರ ಕೊಡುತ್ತೇವೆ ಎಂದು ಒಪ್ಪಿ ಮದುವೆ ಮುಗಿಸಿದರು. ಸ್ವಲ್ಪ ದಿನದಲ್ಲೇ ತಂದೆ ತೀರಿಹೋದರು. ವರದಕ್ಷಿಣೆ ಹಣ ಬರಲಿಲ್ಲವೆಂದು ಇಂದಿರೆಗೆ ಹಿಂಸೆ ಕೊಡುತ್ತಿದ್ದರು. ತಾಯಿ ತನ್ನ ಬಳಿಯಿದ್ದ ಆಭರಣಗಳನ್ನು ಮಾರಿ ಕೊಡಲು ನಿರ್ಧರಿಸಿದಳು. ಆದರೆ ಇದ್ದ ಅಲ್ಪಸ್ವಲ್ಪ ಆಭರಣಗಳನ್ನೂ ಯಾರೋ ಅಪಹರಿಸಿದರು. ಇಂದಿರೆಯ ಗಂಡ ತಂದೆ ತಾಯಿ ಹೇಳಿದಂತೆ ಕೇಳುತ್ತಿದ್ದನು. ಸಾಲದೆಂಬಂತೆ ಇಂದಿರೆಯ ಮೇಲೆ ಮಾವನ ಕಣ್ಣು ಬಿದ್ದಿತು. ಕೊನೆಗೆ ಅವಳ ನಡತೆ ಸರಿಯಿಲ್ಲವೆಂದು ಗರ್ಭಿಣಿಯಾದ ಅವಳನ್ನು ಮನೆಯಿಂದ ಹೊರ ಹಾಕಿದರು. ಸರಳಾ ಇಂದಿರೆಯನ್ನು ತವರು ಮನೆಗೆ ಕರೆದುಕೊಂಡು ಬಂದಳು. ಇಂದಿರೆ ಗಂಡು ಮಗುವಿನ ತಾಯಿಯಾದಳು. ಉಳಿದ ವರದಕ್ಷಿಣೆ ಹಣವನ್ನು ಕೊಟ್ಟರೆ ಮಾತ್ರ ಸೊಸೆಯನ್ನು ಮನೆಗೆ ಕರೆದುಕೊಳ್ಳುತ್ತೇವೆ ಎಂದು ತಾಯಿಗೆ ತಿಳಿಸಿದರು ಇಂದಿರೆಯ ಮಾವ. ತಾಯಿ ಹೊಲವನ್ನು ಒತ್ತೆಯಿಟ್ಟು ನಾನೂರು ರೂಗಳೊಂದಿಗೆ ಮಗಳನ್ನು ಗಂಡನ ಮನೆಗೆ ಕಳುಹಿಸಿದಳು. ಗಂಡನ ಎರಡನೇ ಮದುವೆಯ ದಿಬ್ಬಣವು ಇವಳನ್ನು ಎದಿರುಗೊಂಡಿತು. ನೋಡಿದ ಇಂದಿರೆ ಅಲ್ಲೇ ಅಳುತ್ತಾ ಕುಳಿತಳು. 

ವರದಕ್ಷಿಣೆ
ರಾಮು ಮತ್ತು ಲೀಲಾ ಇಬ್ಬರೂ ಓದುತ್ತಿರುವಾಗಲೇ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಲೀಲಾಳ ತಂದೆ ರಾಮುವಿನ ಮನೆಗೆ ಬಂದರು. ರಾಮುವಿನ ಅಪ್ಪ ಮಗನಿಗೆ ವರದಕ್ಷಿಣೆ  ಕೊಟ್ಟರೆ ಮಾತ್ರ ಮದುವೆ ಎಂದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಈ ಮದುವೆಯಿಂದ ನಡೆಯುವುದಿಲ್ಲ ಎಂದರು.
ವಿಷಯ ತಿಳಿದ ರಾಮು ಲೀಲಾಳನ್ನಲ್ಲದೆ ಬೇರಾರನ್ನು ಮದುವೆಯಾಗುವುದಿಲ್ಲ ಎಂದು ನದಿಗೆ ಧುಮುಕಿ ಪ್ರಾಣ ಬಿಟ್ಟನು. ಪತ್ರಿಕೆಯಲ್ಲಿ ರಾಮುವಿನ ಮರಣದ ವಿಷಯವನ್ನು  ಓದಿದ ಲೀಲಾಳು ಸಹ ಆತ್ಮಹತ್ಯೆ ಮಾಡಿಕೊಂಡಳು.

ಅಡ-ಕತ್ತರಿ
ಮದುವೆ ದಿಬ್ಬಣದ ಜೊತೆ ಹೋಗುತ್ತಿದ್ದ ಗೌರಿ ಗೆಳತಿ ವಾಣಿಯನ್ನು ನೀನು ಮದುವೆಗೆ ಬರುವುದಿಲ್ಲವಾ? ಕೇಳಿದಳು." ಛೀ ಛೀ ಚಟ್ಟಕ್ಕೇರುವ ಮದುಮಗನಿಗೆ ಎಳೆಹುಡುಗಿಯೊಡನೆ ಮದುವೆ, ನೋಡು ಹೆಂಗಸರೊಬ್ಬರೂ ದಿಬ್ಬಣಕ್ಕೆ ಬರುವುದಿಲ್ಲವೆಂದು ಸತ್ಯಾಗ್ರಹ ಹಿಡಿದರೆ ಈ ಆಸಡ್ಡೆ ಹೇಗೆ ನಡೆಯುತ್ತಿತ್ತು." ಎಂದು ಬಾಲ್ಯವಿವಾಹವನ್ನು ವಿರೋಧಿಸುತ್ತಿದ್ದಳು. ಇದನ್ನು ಕೇಳಿದ ಗೌರಿ ಗೆಳತಿಗೆ ತನ್ನ ಕಥೆಯನ್ನು ಹೇಳಿದಳು. ಗಂಡ ತಿಮ್ಮಣ್ಣ ನೋಡಲು ಸುಂದರನಾಗಿದ್ದ. ಆದರೆ ನಡತೆ ಅರಿತಿರಲಿಲ್ಲ. ಊರಿನಲ್ಲಿ ಎಲ್ಲಾ ಹೆಂಗಳೆಯರಿಂದಲೂ ಬೈಗುಳ ಪಡೆಯುತ್ತಿದ್ದನು. ಮನಸ್ಸಿಲ್ಲದೆ ನನ್ನ ಮದುವೆಯಾದರು. ಗಂಡನಿಗೆ ಬೇಡವಾದ ನನ್ನ ಮೇಲೆ ಮಾವನ ಕಣ್ಣು ಬಿದ್ದಿತು. ತನ್ನ ಆಸೆ ಈಡೇರಲಿಲ್ಲವೆಂದು ಗೌರಿಯ ನಡತೆ ಸರಿಯಿಲ್ಲವೆಂದು ಮಗ ತಿಮ್ಮಣ್ಣನಿಗೆ ಚಾಡಿ ಹೇಳಿದ ಅಪ್ಪ. ಗಂಡ ಮಡದಿಯನ್ನು ಹೊಡೆದು ಮನೆಯಿಂದ ಹೊರ ಹಾಕಿದ. ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎಂಬಂತೆ ಅಲ್ಲೇ ಜಗಲಿಯ ಮೇಲೆ ಕುಳಿತಳು. ನಂತರ ಮಾವ ಒಳಗೆ ಕರೆದುಕೊಂಡು ಹೋದನು. "ಮುದುಕನ ಮದುವೆ ಎಂದು ನೀನೆಷ್ಟು ರೇಗುತ್ತೀಯಾ? ನನಗಂತೂ ನನ್ನನ್ನು ಮಗನಿಗೆ ಕೊಡದೆ ತಂದೆಗೆ ಕೊಟ್ಟರಾಗುತ್ತಿದ್ದಲ್ಲವೆ? ಎಂಬ ಗೌರಿಯ ಮಾತಿನಿಂದ ಅವಳು ಬೇಡದ ಮದುವೆಯಿಂದ ಎಷ್ಟು ನೊಂದಿರುವಳು ಎಂಬುದನ್ನು ತಿಳಿಸಿದ್ದಾರೆ. ಹೀಗೆ ಮಾವ - ಮಗನ ಬೇಕು ಬೇಡಗಳ ನಡುವೆ ಗೌರಿಯ ಜೀವನ ಹೇಗಿತ್ತೆಂಬುದು ಊಹಿಸಲಸಾಧ್ಯ. 

    -  ವಿಜಯಲಕ್ಷ್ಮಿ ಎಂ. ಎಸ್


ಕಾಮೆಂಟ್‌ಗಳಿಲ್ಲ: