ಪಾತ್ರಗಳು
ವೀರಣ್ಣ – ಮಧ್ಯ ವಯಸ್ಸಿನ ಗಣಿ ಕಾರ್ಮಿಕ
ಕಿಟ್ಟಿ – 15 ವರ್ಷದ ಹುಡುಗ
ಸೀನಣ್ಣ – 50 ವರ್ಷದ ಸಹಾಯಕ
ಕಾಳಣ್ಣ – ಮಧ್ಯ ವಯಸ್ಸಿನ ಗಣಿ ಕಾರ್ಮಿಕ
ಸುಬ್ಬಣ್ಣ – 50 ವರ್ಷದ ತಂಡದ ಮೇಲ್ವಿಚಾರಕ
ದೃಶ್ಯ: ಕಲ್ಲಿದ್ದಲ ಗಣಿಯ ಒಳಭಾಗ. ಬಹಳ ಇಕ್ಕಟ್ಟಿನ ಸ್ಥಳ. 5 ಳಿ ಅಡಿ ಎತ್ತರದ ಬಂಡೆಯಿಂದ ಕೊರೆದ ಸ್ಥಳ. ಹಿಂದಿನ ಗೋಡೆಯುದ್ದಕ್ಕೂ ಕಲ್ಲಿದ್ದಲ ಸಣ್ಣ ಸಾಲನ್ನೇ ಕಾಣಬಹುದು. ಹಿಂದೆ ಕೆಲವು ಮರದ ಬೊಂಬುಗಳನ್ನು ಗೋಡೆ ಮತ್ತು ಛಾವಣಿಗೆ ಬೆಂಬಲವಾಗಿ ನಿಲ್ಲಿಸಲಾಗಿದೆ. ಗೋಡೆಯ ಮೇಲಿನ ಮೊಳೆಯೊಂದರಲ್ಲಿ ಜಾಕೆಟ್ ಒಂದು ತೂಗಾಡುತ್ತಿದೆ.
ಅದಕ್ಕೆ ದಾರಿ ಇರುವುದು ಬಲ [ವೀಕ್ಷಕರ] ಗೋಡೆಯಲ್ಲಿ. 4 ಅಡಿ ಎತ್ತರದ, 3 ಳಿ ಅಡಿ ಅಗಲದ ಬಾಗಿಲಿದೆ. ಪ್ರತಿಯೊಂದು ಕಡೆಯೂ ಬೊಂಬುಗಳನ್ನು ನಿಲ್ಲಿಸಲಾಗಿದೆ. ಇದರ ಮೇಲೆ ಒಂದು ಒರಟಾದ ಮತ್ತು ಕೊಳೆಯಾದ ಕ್ಯಾನ್ ವಾಸ್ ‘ಪರದೆ’ ಇದೆ. ಉತ್ತಮ ಗಾಳಿಗಾಗಿ ಭೂಮಿಯಾಳದಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆ. ಗಣಿಯಲ್ಲಿನ ಹಳಿಗಳ ಬೆಂಬಲಕ್ಕೆ ನೀಡುವ ಮರದ ತುಂಡುಗಳು, ಬೊಂಬುಗಳು ಅಲ್ಲಲ್ಲಿ ಬಿದ್ದಿವೆ. ಕಾರ್ಮಿದರು ಊಟ ಮಾಡುವಾಗ ಅದರ ಮೇಲೆಯೇ ಕುಳಿತು ಮಾಡುತ್ತಾರೆ.
ಪರದೆ ಸರಿಸಿದಾಗ ಕಿಟ್ಟಿ ಮಧ್ಯದಲ್ಲಿ ಕುಳಿತು ತನ್ನ ಡಬ್ಬಿಯಿಂದ ರೊಟ್ಟಿ ಮತ್ತು ಚಟ್ನಿ ತಿನ್ನುತ್ತಾ ಟೀ ಕುಡಿಯುತ್ತಿದ್ದಾನೆ. ಅವನ ಪಕ್ಕದಲ್ಲಿ ದೊಡ್ಡದಾದ ನೀರಿನ ಕ್ಯಾನ್ ಇದೆ. ಬಲಗಡೆಯಲ್ಲಿ ವೀರಣ್ಣ ಕುಳಿತು ತನ್ನ ಊಟವನ್ನು ತಿನ್ನುತ್ತಿದ್ದಾನೆ. ಅವರು ಪಿಟ್ ನ ಒಳಗೆ 3 ಗಂಟೆಗಳಿದ್ದುದ್ದರಿಂದ ಮುಖಗಳು ಕಪ್ಪಾಗಿವೆ. ಇಬ್ಬರೂ ತಮ್ಮ ಕೋಟ್ ಗಳನ್ನು ಹಾಕಿಕೊಂಡಿದ್ದಾರೆ. ಅದು ಅಲ್ಲಿನ ರೂಢಿ, ಊಟ ಮಾಡುವಾಗ ಕೋಟ್ ಧರಿಸುವುದು. ಅವರ ರಕ್ಷಣಾ ದೀಪಗಳು ಅವರ ಪಕ್ಕದಲ್ಲಿಯೇ ಇವೆ. ಆದರೆ ರಂಗದ ಉದ್ದೇಶಕ್ಕಾಗಿ ಮಂದ ನೀಲಿ ಬೆಳದು ಅವಶ್ಯಕ.
ವೀರಣ್ಣ – [ಬಾಯುಂಬ ತುಂಬಿಕೊಂಡು ತನ್ನ ಡಬ್ಬಿಯನ್ನು ಜೋರಾಗಿ ಸದ್ದು ಮಾಡುತ್ತಾ ಮುಚ್ಚುತ್ತಾನೆ. ‘ಮುಗಿಯಿತು’ ಎಂಬಂತೆ ಅದನ್ನು ತನ್ನ ಜೇಬಿನೊಳಗೆ ಹಾಕಿಕೊಳ್ಳುತ್ತಾನೆ. ವೀರಣ್ಣ ಇನ್ನೂ ಊಟವನ್ನು ಮಾಡುತ್ತಾ ಕಿಟ್ಟಿಯತ್ತ ನೋಡುತ್ತಾನೆ.]
ವೀರಣ್ಣ – ಆಗಲೇ ಊಟವನ್ನು ಮುಗಿಸಿಬಿಟ್ಟೆಯಾ ಕಿಟ್ಟಿ?
ಕಿಟ್ಟಿ – [ಅಗಿಯುತ್ತಲೇ] ಹೂಂ!
ವೀರಣ್ಣ – ಮಗೂ ಅಷ್ಟು ಬೇಗ ಬೇಗನೆ ತಿನ್ನಬಾರದಪ್ಪ. ಅದು ಹೊಟ್ಟೆಗೆ ಒಳ್ಲೆಯದಲ್ಲ.
ಕಿಟ್ಟಿ – ಮೊಳೆಗಳನ್ನೂ ಅರಗಿಸಿಕೊಳ್ಳಬಲ್ಲ ಶಕ್ತಿಯಿದೆ ನನಗೆ... ಸೀನಣ್ಣ ಇಂದು ಬಹಳ ತಡ ಮಾಡುತ್ತಿದ್ದಾನೆ.
ವೀರಣ್ಣ – ಕೆಳಗಡೆ ಆ ಟ್ರಕ್ ಗಳು ಒಂದಕ್ಕೊಂದು ಡಿಕ್ಕಿ ಹೊಡಿದಿವೆ. ಗೊತ್ತಿಲ್ಲವೇ ನಿನಗೆ?
ಕಿಟ್ಟಿ – ಓಹ್, ಅದಕ್ಕೆ ಸಮಯಕ್ಕೆ ಮುಂಚೆಯೇ ಕಲ್ಲಿದ್ದಲ್ಲನ್ನು ತುಂಬುವುದು ನಿಂತುಹೋಯಿತು.
ವೀರಣ್ಣ - ಹೌದು. ಸೀನಣ್ಣ ಈಗ ಶಾಪ ಹಾಕುತ್ತಿರುತ್ತಾನೆ. ಅವನಿಗೆ ಬೆವರು ಸುರಿಸುವುದು ಇಷ್ಟವೇ ಇಲ್ಲ. ಸೋಮಾರಿ.......
[ಕಿಟ್ಟಿ ಇನ್ನೂ ಹುಡುಗ ಎಂಬುವುದರಿಂದ ಅವನು ಸಂಪೂರ್ಣವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ]
ಕಿಟ್ಟಿ – [ವೀರಣ್ಣನ ಡಬ್ಬಿಯನ್ನು ನೋಡುತ್ತಿದ್ದು] ನಿನ್ನ ಹತ್ತಿರ ಇರುವುದು ಚಪಾತಿಯೇ?
ವೀರಣ್ಣ - ಹೌದು [ಮುಗುಳ್ನಗುತ್ತಾ] ಸ್ವಲ್ಪ ಬೇಕಾ?
[ಬಿಲ್ಲಿಗೆ ಎರಡನೇ ಬಾರಿ ಕೇಳುವುದೇ ಬೇಕಿಲ್ಲ. ತಕ್ಷಣ ಆತ ವೀರಣ್ಣನ ಪಕ್ಕದಲ್ಲಿರುವನು. ವೀರಣ್ಣ ಇನ್ನೂ ಮುಗುಳ್ನಗುತ್ತಲೇ ಅವನಿಗೆ ಒಂದು ಭಾಗವನ್ನು ಕೊಡುತ್ತಾನೆ. ಕಿಟ್ಟಿ ಅದನ್ನು ತಿನ್ನುತ್ತಾನೆ.]
ಕಿಟ್ಟಿ – ವಂದನೆಗಳು ವೀರಣ್ಣ - ಲಕ್ಷ ವಂದನೆಗಳು!
[ಅದನ್ನು ತೃಪ್ತಿಕರವಾಗಿ ತಿನ್ನುತ್ತಾ ತನ್ನ ಜಾಗಕ್ಕೆ ಹಿಂತಿರುಗುತ್ತಾನೆ]
ವೀರಣ್ಣ - ಕಿಟ್ಟಿ, ನಿನಗೆ ಚಪಾತಿ ಎಂದರೆ ಬಹಳ ಇಷ್ಟವೆನಿಸುತ್ತದೆ?
ಕಿಟ್ಟಿ - ಹೊಟ್ಟೆ ಬಿರಿಯುವಷ್ಟು ತಿನ್ನುತ್ತಿದ್ದೆ. ಆದರೆ ವೀರಣ್ಣ, ನಮ್ಮಮ್ಮ ತೀರಿಹೋಗಿದ್ದಾರೆ. [ನಿಟ್ಟುಸಿರಿಟ್ಟು] ಅವಳಿದ್ದಾಗ ಪ್ರತಿದಿನವೂ ಚಪಾತಿ ಮಾಡುತ್ತಿದ್ದಳು.
ವೀರಣ್ಣ - ನಿನ್ನ ಅಕ್ಕ ಮಾಡುವುದಿಲ್ಲವೇ?
ಬಲ್ಲಿ – [ತಿರಸ್ಕಾರದಿಂದ] ಅವಳಾ! ಅವಳಿಗೆ ಅಷ್ಟೆಲ್ಲ ಸವಯವೆಲ್ಲಿ. ಅವಳ ಮುಖಕ್ಕೆ ಪೌಡರ್ ಹಾಕಲು, ತಲೆ ಬಾಚಲು ಸಮಯವೆಲ್ಲಾ ಕಳೆದುಹೋಗುತ್ತದೆ. ಸಿನಿಮಾ, ನೃತ್ಯ ಎರಡರ ಬಗ್ಗೆ ಮಾತ್ರ ಆಕೆ ಯೋಚನೆ ಮಾಡಬಲ್ಲಳು. ಯಾರಾದರೂ ಒಬ್ಬ ವ್ಯಕ್ತಿಯನ್ನು ಹಿಡಿಯಬೇಕೆಂದೇ ಅವಳ ಪ್ರಯತ್ನವೆಲ್ಲಾ ವೀರಣ್ಣ. ಆದರೆ ಅವನು ಸಿಕ್ಕಾಗ ಖಂಡಿತ ಅವಳು ಅವನಿಗೆ ವಿಷ ಹಾಕುವಳು. ಅವಳಿಗೊಂದು ಹೊಸ ಗೆಸರು ಇಟ್ಟಿದ್ದೇನೆ.
ವೀರಣ್ಣ – ಓಹ್! ಏನೆಂದು ಕಿಟ್ಟಿ?
ಕಿಟ್ಟಿ _ [ಬಹಳ ತೃಪ್ತಿಯಿಂದ] ಅಲಂಕಾರದ ಗೊಂಬೆ. ಅವಳು ಅದರಲ್ಲಿ ಬಹಳ ಚತುರಳು.
ವೀರಣ್ಣ – [ಅಚ್ಚರಿಯಿಂದ] ಅವಳು ಬಹಳ ಒಳ್ಳೆಯ ನೃತ್ಯಗಾತಿ ಎಂದು ಕೇಳಿದ್ದೀನೆ.
ಕಿಟ್ಟಿ - ನೃತ್ಯಪಟು, ಹೌದು ಆದರೆ ರೊಟ್ಟಿ ವಾಡುವಲ್ಲಿ ಅಲ್ಲ[ತಡೆಯುತ್ತಾ] ವೀರಣ್ಣ, ಈ ಚಪಾತಿ ಬಹಳ ಚೆನ್ನಾಗಿದೆ. ನಿನ್ನ ಹೆಂಡತಿಯ ಬಗ್ಗೆ ನಿನಗೆ ಹೆಮ್ಮೆ ಅಲ್ಲವೇ?
ವೀರಣ್ಣ – [ಇದ್ದಕ್ಕಿದ್ದಂತೆ ಯೋಚಿಸುತ್ತಾ] ಬಹುಶಃ ನಾನೆಷ್ಟು ಹೆಮ್ಮೆ ಪಡಬೇಕಿತ್ತೊ ಅಷ್ಟಿಲ್ಲವೆನಿಸುತ್ತದೆ. ಕಿಟ್ಟಿ, ಗಣಿ ಕಾರ್ಮಿಕ ಒಂದು ರೀತಿಯ ವಿಚಾರಹೀನ ವ್ಯಕ್ತಿ. ಸಂಬಳದ ದಿನ, 40 ಶಿಲ್ಲಿಂಗ್ಸ್ ತೆಗೆದುಕೊಂಡು ಹೋಗಿ ದೊಡ್ಡ ಹೀರೋನಂತೆ ಹೆಂಡತಿಯ ಕೈಗೆ ಕೊಡುತ್ತಾನೆ. ಆದರೆ ಒಬ್ಬ ಮನುಷ್ಯ, ಅವನ ಹೆಂಡತಿ ಮತ್ತು 5 ಮಕ್ಕಳಿಗೆ ಊಟ-ಬಟ್ಟೆ ಕೊಡಬೇಕಾದರೆ ಆ ಹಣಕಾಸಿನ ಮಂತ್ರಿ ಸಹ ಒದ್ದಾಡಿಬಿಡುತ್ತಾನೆ. ಆದರೆ ಅವರು ಹೇಗೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎನ್ನುವುದು ನನಗೇಗಲೂ ಅರ್ಥವಾಗುವುದಿಲ್ಲ. ಇಷ್ಟರ ಮಧ್ಯೆಯೂ ಅವರಿಗೆ ನಗುವ, ಹಾಡುವ ಎದೆಗಾರಿಕೆ ಇದೆ.
ಕಿಟ್ಟಿ - ನಮ್ಮಮ್ಮ ಕೂಡ ಯಾವಾಗಲೂ ಹಾಡುತ್ತಿದ್ದಳು. ವೀರಣ್ಣ , ಯಾವಾಗಲೂ [ಕಣ್ಣುಗಳನ್ನು ಕೆಳಗೆ ಮಾಡುತ್ತಾ] ನಿಜಕ್ಕೂ ಅವಳನ್ನು ಕಳೆದುಕೊಂಡಿದ್ದೇನೆ.
ವೀರಣ್ಣ - ನಿಮ್ಮ ತಂದೆ ಈಗ ಹುಷಾರಾಗಿದ್ದಾರಾ?
ಕಿಟ್ಟಿ – [ನಿರಾಶನಾಗಿ] ಕೆಲವು ದಿನ ಪರವಾಗಿಲ್ಲ. ಇನ್ನು ಕೆಲವು ದಿನ ಪೂರ್ತಿ ಹುಷಾರು ತಪ್ಪುತ್ತಾರೆ. ಅವರು ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ನನಗನಿಸುವುದಿಲ್ಲ.
ವೀರಣ್ಣ - ಬಹಳ ಕಷ್ಟದ ಕಾಲದಲ್ಲಿದ್ದೀಯಾ, ಕಿಟ್ಟಿ.
ಕಿಟ್ಟಿ – ಅಪ್ಪಾ ಹೇಳ್ತಾರೆ, ‘ನೀನು ದುಡಿತಿರೋದರಿಂದ ವಾಸಿ. ಅದರಿಂದ ಜೀವನ ಹೇಗೋ ನಡೀತಿದೆ’ ಅಂತ. ಅದಕ್ಕೆ ನಾನು ಹೇಗಾದರೂ ಈ ಕೆಲಸ ಉಳಿಸಿಕೊಳ್ಳಲೇಬೇಕು, ವೀರಣ್ಣ.
ವೀರಣ್ಣ – [ಯೋಚಿಸುತ್ತಾ] ಕೆಲಸ!...... ಇಡೀ ಪ್ರಪಂಚ ಈ ಕೆಲಸದ ಹಿಂದೆ ಸಿತ್ತುತ್ತಿದೆ ಇನಿಸುತ್ತೆ ....... ಕೆಲಸವಿಲ್ಲ ಅಂದ್ರೆ ಊಟ ಇಲ್ಲ- ಊಟ ಇಲ್ಲ ಅಂದ್ರೆ ನಗು ಇಲ್ಲ. [ನಿಟ್ಟುಸಿರಿಡುತ್ತಾನೆ] ನನಗನ್ನಿಸುತ್ತೆ, ಇದೊಂದು ವಿಚಿತ್ರ ರೀತಿ ಅಂತ.
[ಸ್ವಲ್ಪ ಕಾಲ ಮೌನ. ಹೊರಗಡೆ ಕುದುರೆ ಮರಿಯೊಂದು ಕೆನೆಯುವುದು ಕೇಳುತ್ತದೆ. ಕಿಟ್ಟಿ ವೀರಣ್ಣ ನತ್ತ ಬೇಸರದಿಂದ ನೋಡುತ್ತಾ]
ಕಿಟ್ಟಿ – ಅದು ಡ್ಯಾನಿ....... ಅದಕ್ಕೆ ಬ್ರೆಡ್ ಇಡಲು ಮರೆತೆಬಿಟ್ಟೆ.
ವೀರಣ್ಣ – [ಹಗುರವಾಗಿ] ಕಿಟ್ಟಿ, ಅದಕ್ಕೆ ಸಾಕಷ್ಟು ಇದೆ.
ಕಿಟ್ಟಿ – ಇತ್ತೀಚೆಗೆ ಅದು ನನ್ನ ಬ್ರೆಡ್ ಮತ್ತು ಟೀಗೆ ಕಾಯುತ್ತಿರುತ್ತದೆ. [ಪುನಃ ಕುದುರೆಮರಿ ಕೆನೆಯುತ್ತದೆ] ವೀರಣ್ಣ, ನಾನು ಅವನು ಒಳ್ಳೆಯ ಸ್ನೇಹಿತರು. ನನಗೇನಾದರೂ ಲಾಟರಿ ಹೊಡೆದರೆ ಅದನ್ನೂ ಕೊಂಡುಕೊಂಡು ಹುಲ್ಲುಗಾವಲಿಗೆ ಕರೆದುಕೊಂಡು ಹೋಗುತ್ತೇನೆ. [ಒಂದು ರೀತಿಯಾಗಿ ಕ್ಷಮಾಪಣಾಭಾವದಿಂದ] ಡ್ಯಾನಿಯ ಬಗ್ಗೆ ಯೋಚಿಸದೆ ಎಲ್ಲವನ್ನೂ ನಾನೇ ತಿಂದದ್ದು ಹೊಟ್ಟೆಬಾಕತನವಲ್ಲವೇ ವೀರಣ್ಣ?
[ವೀರಣ್ಣ ಕೊನೆಯಲ್ಲಿ ಉಳಿದ ಚಪಾತಿಯನ್ನು ಅವನ ಮುಂದೆ ಹಿಡಿಯುತ್ತಾ]
ವೀರಣ್ಣ - ಕಿಟ್ಟಿ, ಇದನ್ನು ಕೊಡು ಹೋಗು.
[ಕಿಟ್ಟಿ ತಕ್ಷಣ ಅದನ್ನು ತೆಗೆದುಕೊಳ್ಳಲು ಏಳುವನು]
ಕಿಟ್ಟಿ – [ತೆಗೆದುಕೊಳ್ಳುತ್ತಾ] ವೀರಣ್ಣ, ನೀನು ಪಬ್ಲಿಕ್ ಹೀರೋ ನಂಬರ್ ಒನ್. [ಬಾಗಿಲಿನತ್ತ ಹೋಗುತ್ತಾನೆ].
ವೀರಣ್ಣ – ಆ ಪರದೆ ಮೇಲೆತ್ತು ಕಿಟ್ಟಿ, ಸ್ವಲ್ಪ ಗಾಳಿ ಬರಲಿ. ಇಲ್ಲಿ ಹಿಂಸೆಯಾಗುತ್ತಿದೆ.
[ಕಿಟ್ಟಿ ಪರದೆ ಎತ್ತುತ್ತಿರುವಾಗ ಕುದುರೆಮರಿ ಪುನಃ ಕೆನೆಯುತ್ತದೆ]
ಕಿಟ್ಟಿ - ಬಂದೆ ಡ್ಯಾನಿ, ಬಂದೆ. [ಕಿಟ್ಟಿ ಹೊರಹೋಗುತ್ತನೆ. ವೀರಣ್ಣ ಹಣೆಯ ಮೇಲಿನ ಬೆವರನ್ನು ಬೆರಳಿನಿಂದ ತೆಗೆಯುತ್ತಾನೆ. ಜೋರಾಗಿ ಉಸಿರೆಳೆದುಕೊಳ್ಳುತ್ತಾ ಒಳಗೆ ಬರುತ್ತಿರುವ ಗಾಳಿಯನ್ನು ಸೇವಿಸುತ್ತಿರುವಂತಿದೆ. ಡಬ್ಬಿ ಮತ್ತು ಟೀ ಪ್ಲಾಸ್ಕ್ ಮುಚ್ಚುತ್ತಾ ಜಾಕೆಟ್‍ನ ಜೇಬಿನೊಳಗೆ ಹಾಕಿಕೊಳ್ಳುತ್ತಾನೆ. ಸೀನಣ್ಣ ಒಳಗೆ ಬರುತ್ತಾನೆ. ಶರ್ಟ್ ತೋಳುಗಳನ್ನು ಮಡಿಚಿ ಕೆಂಪು ಬಿಳಿಯ ಕರ್ಚೀಫ್ ನಲ್ಲಿ ಬೆವರನ್ನು ಒರೆಸಿಕೊಳ್ಳುತ್ತಿದ್ದಾನೆ. ವೀರಣ್ಣನಿಗೆ ಅವನ ಬರವು ಕಂಡರೂ ಅದರ ಬಗ್ಗೆ ಗಮನ ಕೊಡುವುದಿಲ್ಲ. ಸೀನಣ್ಣ ಒಳಬರುತ್ತಾ ತನ್ನ ಜಾಕೆಟ್ ನ ಬಳಿ ಹೋಗುತ್ತಾಮಾತನಾಡಲಾರಂಭಿಸುತ್ತಾನೆ. ತೋಳುಗಳನ್ನು ಬಿಗಿಸಿ ವೀರಣ್ಣ ನ ದಿಕ್ಕಿನತ್ತ ಮಾತನಾಡಲಾರಂಭಿಸುತ್ತನೆ.
ಸೀನಣ್ಣ – ಈ ಪಿಟ್ ನಲ್ಲಿ ಆಗುವುದೆಲ್ಲಾ ಸಂತನ ಹೃದಯವನ್ನೂ ಮುರಿದುಬಿಡುತ್ತದೆ.
[ಜೇಬಿನಿಂದ ಪ್ಲಾಸ್ಕ್ ಮತ್ತು ಡಬ್ಬಿ ಹೊರತೆಗೆಯುತ್ತಾನೆ]
ವೀರಣ್ಣ – [ಅಸಮಾಧಾನದಿಂದ ನೋಡುತ್ತ] ಏನು ಸಮಾಚಾರ?
ಸೀನಣ್ಣ – ಕೆಳಗಡೆ ಆ 4 ಟ್ರಕ್ ಗಳು ಬ್ರೇಕ್ ಹಾಳಾಗಿ ಒಂದಕ್ಕೊಂದು ಹೊಡೆದುಕೊಂಡು ಚಾವಣಿಗೆ ಹೊಡೆದಿವೆ...... ಆ ಹುಡುಗ ಎಲ್ಲಿ?
ವೀರಣ್ಣ – ಅವನಿಂದ ನಿನಗೆ ಏನಾಗಬೇಕು?
ಸೀನಣ್ಣ – ತಂಡದ ನಾಯಕ ಅವನ ಹತ್ತಿರ ಮಾತನಾಡಬೇಕಂತೆ. ಆ ಟ್ರಕ್ ಗಳ ಬ್ರೇಕ್ ಹಾಳಾಗಲು ಅವನೇ ಕಾರಣ. ಅವನು ಕೆಲಸ ಕಳೆದುಕೊಂಡರೂ ಆಶ್ಚರ್ಯವೇನಿಲ್ಲ. ರಾಬರ್ಟ್ ಬಹಳ ಸಿಟ್ಟಾಗಿದ್ದಾನೆ.
ವೀರಣ್ಣ – ರಾಬರ್ಟ್ ಗೆ ಹೇಗೆ ಗೊತ್ತಾಯ್ತು?
ಸೀನಣ್ಣ - ನಾನೇ ಹೇಳಿದೆ.
ವೀರಣ್ಣ – [ಕೋಪಿಸಿಕೊಂಡು] ನಿನಗೆ ಹೇಗೆ ಗೊತ್ತಾಯ್ತು?
ಸೀನಣ್ಣ - ಹೇಗೆ ಅಂದ್ರೆ? ಅದೊಂದೇ ರೀತಿಯಲ್ಲಿ ಬ್ರೇಕ್ ಹಾಳಾಗಲು ಸಾಧ್ಯ.
[ಊಟಕ್ಕೆ ಎಡಗಡೆ ಕುಳಿತುಕೊಳ್ಳುತ್ತಾನೆ]
ವೀರಣ್ಣ – [ಕೋಪದಿಂದ] ಆ ಮೇಲ್ವಿಚಾರಕನಿಗೆ ಇಂತಹ ವಿಷಯ ಹೇಳಲು ಕಾಯುತ್ತಿರುತ್ತೀಯ? ಇದಕ್ಕಾಗಿ ಅವನು ನಿನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡಿದ್ದೀಯಾ?
ಸೀನಣ್ಣ – ಯಾರ ಮೇಲೆ ಕೂಗಾಡುತ್ತಿದ್ದೀಯಾ?
ವೀರಣ್ಣ - ನಿನ್ನ ಮೇಲೆ. ಆ ಹುಡುಗ ಬೇಕಾಗಿ ಆ ಬ್ರೇಕ್ ಹಾಳಾಗುವಂತಹ ಕೆಲಸ ಮಾಡುತ್ತನೇನು? ತಪ್ಪುಗಳು ಆಗುತ್ತಿರುತ್ತವೆ. ನೀನ್ಯಾವತ್ತೂ ನಿನ್ನ ಜೀವನದಲ್ಲಿ ತಪ್ಪೇ ಮಾಡಿಲ್ಲವೇ?
ಸೀನಣ್ಣ - ನಾನು ಅಲ್ಲಿ ಕ್ಲೀನ್ ಮಾಡಿ ಬಂದದ್ದನ್ನು ನೋಡಿದ್ದರೆ ನೀನು ಈ ಮಾತು ಆಡುತ್ತಿರಲಿಲ್ಲ.
ವೀರಣ್ಣ - ನಿನ್ನ ಕೆಲಸವೇ ಅದನ್ನೆಲ್ಲಾ ಕ್ಲೀನ್ ಮಾಡುವಂತಹುದ್ದು. ನನ್ನನ್ನು ಕೇಳಿದರೆ ನೀನು ಆ ಕೆಲಸಕ್ಕೇ ಲಾಯಕ್ಕು. ನಾನೇಳಿದ್ದು ಅರ್ಥವಾಯ್ತೇ?
ಸೀನಣ್ಣ - ನೋಡು ವೀರಣ್ಣ! ಊಟದ ಸಮಯದಲ್ಲಿ ಇದೇ ಮಾತು ಮುಂದುವರೆದರೆ ನಾನು ನಾಯಕನ ಹತ್ತಿರ ಮಾತನಾಡುತ್ತೇನೆ. ನಿನ್ನಿಂದ ಅವಮಾನ ಸಹಿಸುವುದಿಲ್ಲ ನಾನು.
ವೀರಣ್ಣ - ಕಿಟ್ಟಿ ಏನಾದರೂ ಕೆಲಸ ಕಳೆದುಕೊಂಡರೆ ಇದಕ್ಕಿಂತ ಹೆಚ್ಚಿನದನ್ನು ಅನುಭವಿಸಬೇಕಾಗುತ್ತದೆ. ನಿನ್ನ ಕುತ್ತಿಗೆ ಮುರಿಯುತ್ತೇನೆ.
ಸೀನಣ್ಣ – ಈ ವಿಷಯ ನಿನಗೆ ಸೇರಿದ್ದಲ್ಲ.
ವೀರಣ್ಣ – ಆದರೆ ನಾನೇ ಈ ವಿಷಯ ನನಗೂ ಸೇರುವಂತೆ ಮಾಡಿಕೊಳ್ಳುತ್ತಿದ್ದೇನೆ. ಆ ಹುಡುಗ ಕೆಲಸ ಕಳೆದುಕೊಳ್ಳುವಂತಿಲ್ಲ. ಅವನ ಕುಟುಂಬಕ್ಕೂ ಉಪವಾಸಕ್ಕೂ ನಡುವೆ ಈ ಕೆಲಸವಿದೆ. ನೀನ್ಯಾಕೆ ರಾಬರ್ಟ್ ಗೆ ಅವನ ಮೇಲೆ ಹೇಳಿದೆ?
ಸೀನಣ್ಣ – ಅವನ ಮೇಲೆ ಹೇಳದಿದ್ದರೆ ಅದು ನನ್ನ ತಲೆಯ ಮೇಲೆ ಬರ್ತಿತ್ತು.
ವೀರಣ್ಣ - ಹೌದು. ಅದಾದರೆ ದುರಂತವಾಗುತ್ತಿತ್ತು ಅಲ್ಲವೇ? ನೀನು, ನಿನ್ನ ಹ್ಯಾಮ್ ಮತ್ತು ಮೊಟ್ಟೆ – ಥೂ ಸ್ವಾರ್ಥಿ!
ಸೀನಣ್ಣ – ಈ ಗಣಿಯೊಳಗೆ ನಮ್ಮನ್ನು ನಾವು ನೋಡಿಕೊಳ್ಳದಿದ್ರೆ ಇನ್ಯಾರೂ ನೋಡಿಕೊಳ್ಳಲ್ಲ.
ವೀರಣ್ಣ – [ತಿರಸ್ಕಾರದಿಂದ] ಅದು ನಿನ್ನ ಜೀವನದ ಧೋರಣೆಯೇ?
ಸೀನಣ್ಣ - ಹೌದು.
ವೀರಣ್ಣ – ಮುಂದೊಂದು ದಿನ ನೀನೂ ಇತರರ ಸಹಾಯ ಕೇಳಬಹುದು. ಆಗ ಏನು ಮಾಡುವೆ?
ಸೀನಣ್ಣ – ಆ ದಿನ ಎಂದೂ ಬರುವುದಿಲ್ಲ. ನೀನೇನು ಯೋಚನೆ ಮಾಡಬೇಡ.
ವೀರಣ್ಣ - ನಿನಗಿಂತ ಉತ್ತಮರಾದ ವ್ಯಕ್ತಿಗಳಿಗೂ ಸಹ ಸಹಾಯದ ಅವಶ್ಯಕತೆ ಬಂದಿತ್ತು. ಅವರು ಸಹಾಯವನ್ನು ಸಂತೋಷವಾಗಿ ಸೀನಣ್ಣ ತೆಗೆದುಕೊಂಡರು.
ಸೀನಣ್ಣ – ವೀರಣ್ಣ, ಒಂದು ವಿಷಯವಂತೂ ಖಂಡಿತ. ನಿನ್ನ ಹತ್ತಿರ ಸಹಾಯ ಕೇಳುವಂತಹ ದಿನ ನನಗೆ ಕೆಟ್ಟ ದಿನವಾಗಿರುತ್ತದೆ.
ವೀರಣ್ಣ – ಜಂಬ ಕೊಚ್ಚಿಕೊಳ್ಳಬೇಡ ಸೀನಣ್ಣ. ಇದು ವಿಚಿತ್ರ ಪ್ರಪಂಚ ನೆನಪಿಡು. ವಿಚಿತ್ರ ಸಂಗತಿಗಳು ನಡೆಯುತ್ತವೆ.
ಸೀನಣ್ಣ – ಅದೊಂದು ಎಂದಿಗೂ ನಡೆಯುವುದಿಲ್ಲ. [ಕಿಟ್ಟಿ ಹಿಂತಿರುಗುತ್ತಾನೆ. ಊಟ ಮಾಡುವುದರಲ್ಲಿ ಮಗ್ನನಾಗಿರುವ ಸೀನಣ್ಣನತ್ತ ನೋಡುತ್ತಾನೆ]
ಕಿಟ್ಟಿ – ಇಲ್ಲಿ ಹ್ಯಾಮ್ ಮತ್ತು ಮೊಟ್ಟೆಯ ಆಹ್ಲಾದಕರ ವಾಸನೆಯಿದೆ.
ವೀರಣ್ಣ – ವಾರದಲ್ಲಿ ಹತ್ತು ಶಿಫ್ಟ್ ಗಳು ಮತ್ತು ಮಕ್ಕಳಿಲ್ಲ. ವ್ಯತ್ಯಾಸವಿದೆ ಕಿಟ್ಟಿ.
[ಸೀನಣ್ಣ ವೀರಣ್ಣ ನತ್ತ ನೋಡಿ ನಂತರ ಕಿಟ್ಟಿಯತ್ತ ನೋಡುತ್ತಾನೆ]
ಸೀನಣ್ಣ- [ಕಿಟ್ಟಿಗೆ] ಹೊರಗಡೆ ಮೇಲ್ವಿಚಾರಕನನ್ನು ನೋಡಿದೆಯಾ?
ಕಿಟ್ಟಿ – [ಅನುಮಾನದಿಂದ] ಇಲ್ಲ...... ಏಕೆ? ಅವರಿಗೇನು ಬೇಕಿತ್ತು ನನ್ನಿಂದ?
ವೀರಣ್ಣ – ಆ ಟ್ರಕ್ ಅಪಘಾತದ ಆಪಾದನೆ ನಿನ್ನ ಮೇಲೆ ಬಂದಿದೆ.
ಕಿಟ್ಟಿ - ನಾನಾ? ಹೇಗೆ?
ಸೀನಣ್ಣ - ನೀನು
[ಕಿಟ್ಟಿ ಚಿಂತಾಕ್ರಾಂತನಾಗಿದ್ದಾನೆ]
ಕಿಟ್ಟಿ- [ವೀರಣ್ಣನಿಗೆ] ಅಂದರೆ ನನ್ನನ್ನು ಕೆಲಸದಿಂದ ಹೊರಗೆ ಹಾಕುತ್ತಾರಾ?
ವೀರಣ್ಣ – ಇಂದು ಗಣಿಯಿಂದ ನೀನು ಹೊರಗೆ ಹೋಗಬೇಕಾಗಿ ಬಂದರೆ, ಅದು ನೀನೊಬ್ಬನೇ ಆಗಿರುವುದಿಲ್ಲ.
ಕಿಟ್ಟಿ - ಹಾಗೆಂದರೆ ಏನು ವೀರಣ್ಣ ?
ವೀರಣ್ಣ – ಈಗ ಅದರ ವಿಷಯ ಬಿಡು........ ಕಾಳಣ್ಣನಿಗೆ ಕೆಲಸ ನಿಲ್ಲಿಸುವ ಸಮಯ ಎಂದು ಗೊತ್ತಿಲ್ಲವೇ?
ಕಿಟ್ಟಿ – ಅವರು ಇಂದು ಇಲ್ಲಿ ಊಟ ಮಾಡುತ್ತಿಲ್ಲ.
ವೀರಣ್ಣ – ಏಕೆ?
ಕಿಟ್ಟಿ - ನನಗೆ ಗೊತ್ತಿಲ್ಲ. ಬೆಳಿಗ್ಗೆ ಸಹ ಅವರು ಊಟವನ್ನು ಅಲ್ಲಿಗೆ ತೆಗೆದುಕೊಂಡು ಹೋದರು.
ವೀರಣ್ಣ - ಹೋಗು ಅವನನ್ನು ಕರೆ. ಅವನು ಹುಷಾರಾಗಿದ್ದಾನಾ ಖಚಿತಪಡಿಸಿಕೊ.
[ಕಿಟ್ಟಿ ಹೊರಹೋಗುತ್ತಾನೆ. ಸೀನಣ್ಣ ತನ್ನ ಕೆಟ್ಟ ನೋಟ ಬೀರುತ್ತಾನೆ]
ವೀರಣ್ಣ – ಕಿಟ್ಟಿಯ ತಂದೆಗೆ ಹುಷಾರಿಲ್ಲ. ನಿನಗೆ ಗೊತ್ತ?
ಸೀನಣ್ಣ - ಹಾ!
ವೀರಣ್ಣ – ಕಿಟ್ಟಿಯ ಸಂಬಳದ ಮೇಲೆ ಬದುಕಿದ್ದಾರೆ.
ಸೀನಣ್ಣ – ಅದಕ್ಕೂ ನನಗೂ ಏನು ಸಂಬಂಧ?
ವೀರಣ್ಣ - ನೀನು ಆ ಗಫರ್ ಗೆ ಹೇಳಬಹುದು. ಇಳಿಜಾರಿನಲ್ಲಿ ಹಳಿಗಳ ಕೊಂಡಿ ಮುರಿದುಹೋಗಿತ್ತು ಎಂದು.
ಸೀನಣ್ಣ – ಅವನಿಗೇನಾದರೂ ನಾನು ಸುಳ್ಳು ಹೇಳ್ತಾ ಇದ್ದೀನಿ ಅಂತಾ ಗೊತ್ತಾದರೆ ನನ್ನನ್ನೂ ಹೊರಹಾಕ್ತಾನೆ.
ವೀರಣ್ಣ – ಇದರಿಂದಾಗಿ ಕಿಟ್ಟಿಯನ್ನು ಕೆಲಸದಿಂದ ಕಿತ್ತುಹಾಕಿದ್ರೆ ನಾನು ..........
[ಸುಬ್ಬಣ್ಣ ಬರುತ್ತಾನೆ. ಎತ್ತರದ ಮನುಷ್ಯ, ಲ್ಯಾಂಪ್ ಬೆಲ್ಟ್ ಗೆ ಹಾಕಿಕೊಂಡಿದ್ದಾನೆ.]
ಸುಬ್ಬಣ್ಣ – [ಸೀನಣ್ಣನಿಗೆ] ಆ ಎತ್ತುವ ಹಗ್ಗದಲ್ಲಿ ಸಣ್ಣ ಎಳೆಯಿದೆ. ನಿನ್ನ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅದನ್ನೂ ಸರಿಮಾಡು.
[ಸೀನಣ್ಣ ತಕ್ಷಣ ಡಬ್ಬಿ ಮುಚ್ಚಿ ಓಡುತ್ತಾನೆ]
ಸೀನಣ್ಣ – ಒಂದು ನಿಮಿಷದಲ್ಲಿ ಸರಿಪಡಿಸಿ ಬಂದುಬಿಡುತ್ತೇನೆ ರಾಬರ್ಟ್. ಒಂದೇ ನಿಮಿಷ. [ಹೊರಹೋಗುತ್ತನೆ. ಸುಬ್ಬಣ್ಣ ನೋಟ್ ಬುಕ್, ಪೆನ್ಸಿಲ್ ತೆಗೆದು ಏನನ್ನೋ ಬರೆಯುತ್ತಾ ಕುಳಿತಿದ್ದಾನೆ]
ಸುಬ್ಬಣ್ಣ – ಒಂದಲ್ಲಾ ಒಂದು ಸಮಸ್ಯೆ. ಈ ಬೆಳಗ್ಗೆ ಅರ್ಧ ಘಂಟೆ ಹಾಳಾಯ್ತು.
ವೀರಣ್ಣ – ಕಲ್ಲಿದ್ದಲ ಗಣಿ ಕೆಲಸ ಬಿಸ್ಕತ್ ಕೆಲಸವಲ್ಲ ಸುಬ್ಬಣ್ಣ, ಎಲ್ಲವೂ ಹಾಡಿನಂತೆ ಸುಗಮವಾಗಿ ಸಾಗಲು.
ಸುಬ್ಬಣ್ಣ - ಬಹಳಷ್ಟು ಅಜಾಗರೂಕತೆಯಿದೆ. ಇಂದು ಒಂದು ಉದಾಹರಣೆ ತೋರಿಸಬೇಕೆಂದಿದ್ದೇನೆ. ಎಲ್ಲಿ ಆ ಕುದುರೆಮರಿ ಓಡಿಸುವವನು?
ವೀರಣ್ಣ – ಕಾಳಣ್ಣ ಮಾರ್ಷಲ್ ಗೆ ಊಟ ಮಾಡುವಂತೆ ಕೂಗಲು ಹೋಗಿದ್ದಾನೆ.
ಸುಬ್ಬಣ್ಣ - ನಾನು ಮಾತನಾಡುವವರೆಗೂ ಅವನಿಗೆ ಕೆಲಸ ಆರಂಭಿಸಬಾರದೆಂದು ಹೇಳು.
ವೀರಣ್ಣ – ಕೆಲಸದಿಂದ ಹೊರಹಾಕಬೇಕೆಂದು ಯೋಚಿಸುತ್ತಿರುವೆಯಾ?
ಸುಬ್ಬಣ್ಣ – ಆ ಟ್ರಕ್ ಅಪಘಾತ ಆಗಿದ್ದು ಅವನ ತಪ್ಪಿನಿಂದ. ಅದಕ್ಕಾಗಿ ಅವನು ದಂಡ ತೆರಲೇಬೇಕು.
ವೀರಣ್ಣ - ಸುಬ್ಬಣ್ಣ ಎಲ್ಲರೂ ತಪ್ಪು ಮಾಡುತ್ತರೆ
ಸುಬ್ಬಣ್ಣ – ಆದರೆ ಅದು ನಮ್ಮ ಹತ್ತಿರ ಆಗುವುದನ್ನು ನಾವು ನೋಡಲಾರೆವು.
ವೀರಣ್ಣ – [ಆಶ್ಚರ್ಯಚಕಿತನಾಗಿ] ನಾವು! ಇಂಪೀರಿಯಲ್ ಕೋಲ್ ಕಂಪನಿಯಲ್ಲಿ ನಿನಗ್ಯಾವಾಗ ಶೇರ್ ಸಿಕ್ಕಿತು ಸುಬ್ಬಣ್ಣ ?
ಸುಬ್ಬಣ್ಣ – ಏನು ಹಾಗೆಂದರೆ?
ವೀರಣ್ಣ - ನೀನು ‘ನಾವು’ ಎಂದು ಹೇಳಿದೆ. ಕೇವಲ ನಿರ್ದೇಶಕರು ಮಾತ್ರ ಬಹುವಚನದಲ್ಲಿ ಮಾತನಾಡುತ್ತಾರೆ.
ಸುಬ್ಬಣ್ಣ – ಓಹ್! ವ್ಯಂಗ್ಯವಾಗಿ ಹೇಳುತ್ತಿದ್ದೀಯಾ? ಅದೆಲ್ಲಾ ಬಿಟ್ಟುಬಿಡು ವೀರಣ್ಣ . ಬಹುಶಃ ನಿನ್ನ ಆರೋಗ್ಯಕ್ಕೆ ಬೇಕಾದ್ದಕ್ಕಿಂತ ಹೆಚ್ಚಿನ ಒಳ್ಳೆ ಗಾಳಿ ಕುಡಿಯುತ್ತಿದ್ದೀಯಾ ಎನಿಸುತ್ತೆ.
ವೀರಣ್ಣ - ಹಾಗಾದ್ರೆ ನಿನಗೆ ಒಳ್ಳೆ ಗಾಳಿ ಅಂದ್ರೆ ಏನು ಅಂತಾ ಗೊತ್ತಾ?
ಸುಬ್ಬಣ್ಣ – ಆ?
ವೀರಣ್ಣ – ಇಲ್ಲೇ ಕೆಳಗಡೆ ಬಹಳಷ್ಟರ ಜೊತೆ ಕೆಲಸ ಮಾಡುತ್ತಿದ್ದೇವೆ.
ಸುಬ್ಬಣ್ಣ – [ಪರದೆ ಮೇಲೇರಿಸಿರುವುದು ನೋಡಿ] ಬಹುಶಃ ನೀನು ನೋಡಬಹುದಾದ್ದಕ್ಕಿಂತ ಹೆಚ್ಚಿನದು ಕಾಣಿಸುತ್ತಿದೆ ಎಂದರ್ಥ. [ಬಾಗಿಲಿನತ್ತ ಹೋಗಿ ಸಿಟ್ಟಿನಿಂದ ಪರದೆಯನ್ನು ಕೆಳಗೆ ಬಿಡುತ್ತಾನೆ].
ವೀರಣ್ಣ – [ಮುಗುಳ್ನಗುತ್ತ] ಸುಬ್ಬಣ್ಣ ಇದರಂತೆ ಈ ಪಿಟ್ ನಲ್ಲಿರುವುದನ್ನೆಲ್ಲಾ ಸರಿಪಡಿಸಲು ಸಾಧ್ಯವಿದ್ದರೆ ಚೆನ್ನಾಗಿತ್ತು.
ಸುಬ್ಬಣ್ಣ – ಏನು ನಿನ್ನ ಮಾತಿನರ್ಥ?
ವೀರಣ್ಣ – ಮುಖ್ಯ ಗಾಳಿ ಬರುವ ಕಡೆ ಕೆಳಗೆ ಬಿದ್ದದ್ದನ್ನೆಲ್ಲಾ ತೆಗೆಸಿಹಾಕಿದ್ದೀಯಾ?
ಸುಬ್ಬಣ್ಣ – ಅದಕ್ಕೂ ನಿನಗು ಏನು ಸಂಬಂಧ?
ವೀರಣ್ಣ – ಕೇವಲ ವಿಷಯ ತಿಳಿದುಕೊಳ್ಳುವ ಯತ್ನ.
ಸುಬ್ಬಣ್ಣ – ಅದನ್ನು ತೆಗೆಸಿಹಾಕದಿದ್ರೆ ನನಗೇನಾಗುತ್ತೆ?
ವೀರಣ್ಣ - ನಿನಗೇನಾಗುತ್ತೆ ಅಂತಲ್ಲ, ಅದು ನಮಗೆಲ್ಲರಿಗೂ ಆಗುವಂತಹುದು. [ಮುಖ್ಯವಾದುದನ್ನು ಹೇಳುವಂತೆ] ಇಲ್ಲಿ ಗ್ಯಾಸ್ ಗೇನೂ ಕಡಿಮೆ ಇಲ್ಲ ಅಲ್ಲವೇ? ನೆನಪಿದೆಯಾ?
ಸುಬ್ಬಣ್ಣ – [ವ್ಯಂಗ್ಯ ನಗೆಯೊಂದಿಗೆ] ಹೌದಾ?
ವೀರಣ್ಣ - ಬೆಂಬಲ ನೀಡುವ ಬೊಂಬುಗಳು ಕಡಿಮೆಯಿವೆ. ಗಾಳಿ ಸಾಕಷ್ಟಿಲ್ಲ. ಆದರೆ ಗ್ಯಾಸ್ ಗೇನೂ ಅಭಾವವಿಲ್ಲ.
ಸುಬ್ಬಣ್ಣ – [ಯೋಚಿಸುತ್ತಾ] ಓಹ್! ಹೌದಾ...... ಪಿಟ್ ಕೆಲಸ ಮುಗಿಸಿದ ನಂತರ ನನ್ನ ಕಛೇರಿಗೆ ಸುಬ್ಬಣ್ಣ. ನಿನ್ನೊಂದಿಗೆ ಗಂಭೀರವಾದ ಮಾತುಕತೆ ಆಗಬೇಕು.
[ಸೀನಣ್ಣ ತನ್ನ ಸಾಮಾನುಗಳೊಂದಿಗೆ ಹಿಂತಿರುಗುತ್ತಾನೆ]
ಸೀನಣ್ಣ - ನಾನು ಸಿದ್ಧ ರಾಬರ್ಟ್.
[ಸುಬ್ಬಣ್ಣ ಹೊರಗೆ ಹೋಗಿ ನಂತರ ವೀರಣ್ಣ ನನ್ನು ನೋಡುತ್ತಾನೆ]
ಸುಬ್ಬಣ್ಣ - ಪಿಟ್ ನೊಳಗೆ ಗ್ಯಾಸ್ ಇದೆಯಾ? ಮುಖ್ಯ ಗಾಳಿಹಾದಿ ಬಿದ್ದರೆ, ಓಹ್ ಸರ್ಕಾರಿ ಇನ್ಸ್‍ಪೆಕ್ಟರ್ ಇದನ್ನು ತಿಳಿಯಬೇಕಲ್ಲವೇ? ವೀರಣ್ಣ ನಿನ್ನಂತಹವರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತು, ಮನಸ್ಸಿನಲ್ಲಿರಲಿ
[ಸುಬ್ಬಣ್ಣ ಹೋಗುತ್ತಾನೆ. ಸೀನಣ್ಣ ನಾಯಿಯಂತೆ ಹಿಂದೆ ಹೋಗುತ್ತಾನೆ. ವೀರಣ್ಣ ಮುಗುಳ್ನಗುತ್ತಾನೆ. ಆದರೆ ಅದು ಸಮಸ್ಯೆಯ ನಗು. ಕಿಟ್ಟಿ ಬರುತ್ತಾನೆ.]
ಕಿಟ್ಟಿ - ನನ್ನನ್ನು ಹೊರಹಾಕುತ್ತಾರಾ ವೀರಣ್ಣ ?
ವೀರಣ್ಣ – ಅದನ್ನೂ ನನಗೆ ಬಿಡು ಕಿಟ್ಟಿ....... ಕಾಳಣ್ಣ ಬರ್ತಾ ಇದ್ದಾನೆಯೇ?
ಕಿಟ್ಟಿ - ಹೌದು. ಆದರೆ ವೀರಣ್ಣ, ಅವನು ಈಗಾಗಲೇ ಊಟ ಮಾಡಿದ್ದಾನೆ. ಅದನ್ನವನು ಅಲ್ಲಿಗೇ ತೆಗೆದುಕೊಂಡು ಹೋದನಂತೆ.
ವೀರಣ್ಣ – ಅವನು ಯಾವತ್ತೂ ಈ ರೀತಿ ಮಾಡಿಲ್ಲವಲ್ಲ.
ಕಿಟ್ಟಿ – ಅವನಿಗೆ ಬಹಳ ಹಸಿವಾಗಿತ್ತಂತೆ. ಹಾಗಾಗಿ ಮಧ್ಯದಲ್ಲಿಯೇ....... [ಕುಳಿತುಕೊಳ್ಳುತ್ತಾ] ವೀರಣ್ಣ, ನನ್ನನ್ನು ಹೊರಹಾಕಿದರೆ ಮನೆಗೆ ಹೇಗೆ ಹೋಗೋದು?
ವೀರಣ್ಣ – ಕಿಟ್ಟಿ ನಿನ್ನನ್ನೇನಾದರೂ ಹೊರಹಾಕಿದ್ರೆ, ಈ ರಕ್ತಸಿಕ್ತ ಪಿಟ್ ಅನ್ನು ಚಳುವಳಿಯ ಹಾದಿಗಿಳಿಸುತ್ತೇನೆ. ಆಗ ಕಂಪನಿ ಅದರ ಬಗ್ಗೆ ಏನಾದ್ರೂ ಹೇಳಲೇಬೇಕು.
[ಕಾಳಣ್ಣ ಬರುತ್ತಾನೆ. ಎಲ್ಲರನ್ನೂ ಸ್ಪಷ್ಟವಾಗಿ ನೋಡೋದಿಲ್ಲ. ಅವನಿಗೆ ತೀವ್ರ ಕೆಮ್ಮಿದೆ.]
ವೀರಣ್ಣ – ಕಾಳಣ್ಣ ನಿನ್ನ ಆ ಕೆಮ್ಮು ಇನ್ನಷ್ಟು ಉಲ್ಬಣವಾಗಿದೆ.
ಕಾಳಣ್ಣ – [ಉಸಿರಾಡಲು ಕಷ್ಟಪಡುತ್ತಾ] ಅಲ್ಲಿನ ಆ ಗಾಳಿ ನನಗೆ ಉಸಿರು ಕಟ್ಟಿಸುತ್ತಿದೆ. ವೀರಣ್ಣ ನನಗೆ ಉಸಿರು ಕಟ್ಟಿಸುತ್ತಿದೆ.
ವೀರಣ್ಣ – ಅಲ್ಲೇಕೆ ಕೆಲಸ ಮಾಡಲು ಹೋದೆ?
ಕಾಳಣ್ಣ - ನನಗೆ ಅಲ್ಲಿಂದ ಹೊರಬರಲಾಗಿದ್ದರೆ, ಅಲ್ಯಾರು ಕೆಲಸ ಮಾಡುತ್ತಿದ್ದರು? ಅವನಿಗೂ ಗೊತ್ತು. ಬೇರೆ ಕೆಲಸ ಕೊಡೋಲ್ಲ. ದೇವ್ರೆ....... ನಾನು ನಿಜಕ್ಕೂ ಮದುವೆ ಆಗಬಾರದಾಗಿತ್ತು, ವೀರಣ್ಣ ಆಗಿನಿಂದಲೂ ನರಕವೇ........ ಇಲ್ಲಿ ಸಂಕೋಲೆಯಲ್ಲಿರುವುದು.
ವೀರಣ್ಣ – [ಕಾಳಣ್ಣ ಸೀನಣ್ಣ ಕುಳಿತಿದ್ದ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ.] ನೀನೇಕೆ ನಮ್ಮ ಜೊತೆ ತಿಂಡಿ ತಿನ್ನಲಿಲ್ಲ.
ಕಾಳಣ್ಣ-[ತಪ್ಪು ಮಾಡಿದವನಂತೆ] ನಾನು...... ಬೇಗ ತಿಂದೆ.
ವೀರಣ್ಣ – ಏಕೆ?
ಕಾಳಣ್ಣ- [ಸನ್ನಿ ಹಿಡಿದವನಂತೆ] ವೀರಣ್ಣ........ ನನಗೆ ಅಲ್ಲಿ ಕೆಲಸ ಮಾಡಲು ಭಯವೆನಿಸುತ್ತದೆ...... ಅದು ಯಾವುದೋ ಒಂದು ದಿನ ಕೆಳಗೆ ಬೀಳುತ್ತದೆ ಮತ್ತು ನನ್ನನ್ನು ನಾಶ ಮಾಡುತ್ತದೆ.
[ಅವನ ಈ ರೀತಿಯನ್ನು ನೋಡಿ ವೀರಣ್ಣ ಚಕಿತನಾಗುತ್ತಾನೆ. ಕಿಟ್ಟಿ ಆಶ್ಚರ್ಯಚಕಿತನಾಗಿ ಕಾಳಣ್ಣನತ್ತ ನೋಡುತ್ತಿದ್ದಾನೆ. ವೀರಣ್ಣ ಕಾಳಣ್ಣನ ಬಳಿಗೆ ಹೋಗುತ್ತಾನೆ.]
ವೀರಣ್ಣ- ಕಾಳಣ್ಣ, ಧೈರ್ಯ ತಂದುಕೊ, ತಮ್ಮಾ, ಸ್ಥೈರ್ಯ ಕಳೆದುಕೊಳ್ಳಬೇಡ.
ಕಾಳಣ್ಣ – ಆದರೆ ನಾನೇನು ಮಾಡಲಿ...... ಒಂದಲ್ಲ ಒಂದು ದಿನ ಅದು ನನ್ನ ಮೇಲೆ ಬೀಳುತ್ತದೆ ಎಂದು ನನಗೆ ಗೊತ್ತು.
ವೀರಣ್ಣ- ಕಾಳಣ್ಣ, ಇಂದು ಬೆಳಗ್ಗೆ ಏನಾಯ್ತು ಎಂದು ನನಗೆ ಗೊತ್ತಿದೆ. ಇದು ಹಸಿವಿನಿಂದಾಗಿ. ಇಂದು ಬೆಳಿಗ್ಗೆ ನೀನು ತಿಂಡಿಯನ್ನು ತರಲಿಲ್ಲ. ಏಕೆ?
ಕಾಳಣ್ಣ - ಇಲ್ಲ ವೀರಣ್ಣ. ನಾನು, ನಾನು..........
ವೀರಣ್ಣ - ಪರವಾಗಿಲ್ಲ ಕಾಳಣ್ಣ. ನೀನೇನು ಅದರ ಬಗ್ಗೆ ಅವಮಾನ ಪಟ್ಟುಕೊಳ್ಳಬೇಕೆಲ್ಲ. ಹೆಂಡತಿ ಮತ್ತು ಮಕ್ಕಳು ಇರುವಾಗ ಅವರನ್ನು ಬಿಟ್ಟು ತಿಂಡಿ ತರದಿರುವುದು ಅಪರಾಧವೇನೂ ಅಲ್ಲ. [ವೀರಣ್ಣ ಕಿಟ್ಟಿಯತ್ತ ನೋಡುತ್ತಾನೆ] [ಕಿಟ್ಟಿಗೆ] - ಸೀನಣ್ಣ ಆ ಕುದುರೆಮರಿಗೆ ಸ್ವಲ್ಪ ಬ್ರೆಡ್ ಬಿಟ್ಟಿದ್ದಾನಲ್ಲವೇ?
ಕಿಟ್ಟಿ – [ಆಶ್ಚರ್ಯಚಕಿತನಾಗಿ] ಏನು, ಬಿಟ್ಟಿದ್ದಾನೆಯೇ?
ವೀರಣ್ಣ- [ಕಿಟ್ಟಿಗೆ ಸುಮ್ಮನಿರುವಂತೆ ಸನ್ಹೆ ಮಾಡಿ] ನೀನು ಹೊರಗಡೆ ಹೋಗಿದ್ದೆ. ಅದಕ್ಕೆ ಅವನು ಹೇಳಿದ್ದು ನಿನಗೆ ಕೇಳಿಸಲಿಲ್ಲ. ಡ್ಯಾನಿಗೆ ಸಾಕಷ್ಟು ಓಟ್ಸ್ ಇದೆ.
[ವೀರಣ್ಣ ಸೀನಣ್ಣನ ಡಬ್ಬಿ ತೆಗೆದು, ಬ್ರೆಡ್ ಅನ್ನು ತೆಗೆದು, ಕಾಳಣ್ಣನ ಕೈಯಲ್ಲಿ ತುರುಕುತ್ತಾನೆ. ಕಾಳಣ್ಣ ಸಂಕೋಚ ಪಟ್ಟುಕೊಳ್ಳುತ್ತಾನೆ]
ಕಾಳಣ್ಣ - ಬೇಡ!...... ಸೀನಣ್ಣ ಎಲ್ಲರಿಗೂ ಹೇಳಿಕೊಂಡು ಬರುತ್ತಾನೆ.
ವೀರಣ್ಣ- [ಬಲವಂತವಾಗಿ ತುರುಕುತ್ತಾ] ತೆಗೆದುಕೊ. ಮೂರ್ಖನಂತೆ ಆಡಬೇಡ. ಸೀನಣ್ಣಗೆ ನಾನು ಹೇಳುತ್ತೇನೆ. [ಕಾಳಣ್ಣ ತೆಗೆದುಕೊಳ್ಳುತ್ತಾನೆ. ಬೇಕೊ ಬೇಡವೊ ಎಂಬಂತೆ ಮತ್ತು ಅವಮಾನ ಪಟ್ಟುಕೊಳ್ಳುತ್ತಾನೆ] ನಿನಗೆ ಇಲ್ಲಿ ತಿನ್ನಬಾರದು ಎನಿಸಿದರೆ ನಿನ್ನ ಸ್ಥಳಕ್ಕೆ ತೆಗೆದುಕೊಂಡು ಹೋಗಿ ತಿನ್ನು. [ಕಾಳಣ್ಣ ನಿರಾಶನಾಗಿ ವೀರಣ್ಣನತ್ತ ನೋಡುತ್ತಾನೆ]
ಕಾಳಣ್ಣ - ವೀರಣ್ಣ ನನಗೆ ಸಾಕಾಗಿದೆ. ಇಲ್ಲಿ ಕೆಲಸ ಮಾಡಲು ನನ್ನಲ್ಲಿ ಶಕ್ತಿಯಿಲ್ಲ. ಆದರೆ ವಿಧಿಯಿಲ್ಲ. ಆ ಮೇಲ್ಛಾವಣಿ ಕುಸಿದು ಬಿದ್ದು ನಾನು ಹೋದರೆ, ಮೇರಿಗೆ ಪರಿಹಾರವಾದರೂ ಸಿಗುತ್ತದೆ. ಅವಳ ಸಮಸ್ಯೆಗಳು ಕೊನೆಯಾಗುತ್ತವೆ.
ವೀರಣ್ಣ - ಕಾಳಣ್ಣ! ಆ ವಿಚಾರವನ್ನು ತಲೆಯಿಂದ ಹೊರಗೆ ಹಾಕು. ಅದು ಹೇಡಿಗಳ ಲಕ್ಷಣ ....... ಹೋಗು ಬ್ರೆಡ್ ತಿನ್ನು ಹೋಗು. ಸರಿಹೋಗುತ್ತೀಯಾ. [ಕಾಳಣ್ಣ ಎದ್ದು ನಿಧಾನವಾಗಿ ಹೊರಹೋಗುತ್ತಾನೆ. ಅವನು ಅಲ್ಲಿಂದ ಹೋದ ಮೇಲೆ ಕೆಮ್ಮುವುದು ಕೇಳಿಸುತ್ತದೆ] ಕಾಳಣ್ಣ ಸಾಕಷ್ಟು ಸುಸ್ತಾಗಿದ್ದಾನೆ ಅನಿಸುತ್ತೆ.
ಕಿಟ್ಟಿ- ಸೀನಣ್ಣ ತನ್ನ ಬ್ರೆಡ್ ಕಾಣದಿದ್ದಾಗ ಸಿಟ್ಟಿನಿಂದ ಹುಚ್ಚನಾಗುತ್ತನೆ.
ವೀರಣ್ಣ- [ಮುಗುಳ್ನಗುತ್ತಾ] ಇಲಿಗಳ ಮೇಲೆ ಹಾಕೋಣ ಕಿಟ್ಟಿ. ಅವನ ಹತ್ತಿರ ಇನ್ನೂ ಸಾಕಷ್ಟು ಹ್ಯಾಮ್ ಮತ್ತು ಮೊಟ್ಟೆ ಇದೆ. ಅದೂ ಇಲ್ಲದಿದ್ದರೆ ಒಂದು ದಿನ ಹಸಿವಿನಿಂದ ಇರುವುದು ಅವನಿಗೆ ಒಳ್ಳೆಯದೇ.
[ಸೀನಣ್ಣ ಆತುರದಿಂದ ಹಿಂತಿರುಗುತ್ತಾನೆ ಮತ್ತು ಕೋಪದಲ್ಲಿಯೇ ಇದ್ದಾನೆ]
ಸೀನಣ್ಣ- [ಪ್ರವೇಶಿಸುತ್ತಾ] ನನ್ನ ಊಟ ನನಗೇನೂ ಒಳ್ಳೆಯದು ಮಾಡುವುದಿಲ್ಲ ಎನ್ನುವುದು ಇದಕ್ಕೇ. ಒಂದು ಕಡೆ ಶಾಂತಿಯುತವಾಗಿ ಕುಳಿತು ತಿನ್ನಲು ಅವಕಾಶವೇ ಇರುವುದಿಲ್ಲ. ಯಾವಾಗಲು ಏನಾದರೂ ತಪ್ಪಾಗುತ್ತಿರುತ್ತದೆ. [ಹಿಂದಿನ ರೀತಿಯಲ್ಲಿಯೇ ಕುಳಿತು ಡಬ್ಬಿ ತೆಗೆದುಕೊಳ್ಳುತ್ತಾನೆ. ಅದರ ಭಾರ ಕಡಿಮೆಯಾಗಿರುವುದರಿಂದ ಶಾಕ್ ಆಗುತ್ತಾನೆ. ಸಂದೇಹದಿಂದ ವೀರಣ್ಣ ನತ್ತ ನೋಡುತ್ತಾನೆ. ನಂತರ ಡಬ್ಬಿ ತೆರೆಯುತ್ತಾನೆ.] ಏ ನನ್ನ ಬ್ರೆಡ್ ಎಲ್ಲಿ?
ವೀರಣ್ಣ - ಕೆಲವು ಇಲಿಗಳು ಬಂದು ತೆಗೆದುಕೊಂಡು ಹೋಗಿಬಿಟ್ಟವು ಸೀನಣ್ಣ.
ಸೀನಣ್ಣ- [ವ್ಯಂಗ್ಯದಿಂದ] ಓಹ್! ಇಲಿಗಳೇ? ಮುಚ್ಚಳ ತೆಗೆದು ಮತ್ತೆ ಮುಚ್ಚಿ ಬಿಟ್ಟವಲ್ಲವೇ?
ವೀರಣ್ಣ - ಹೌದು. ಇತ್ತೀಚೆಗೆ ಅವೂ ಮಾನವನ ಸ್ವಭಾವ ಕಲಿಯುತ್ತಿವೆ. [ಸೀನಣ್ಣ ಹೆದರಿಸುವನಂತೆ ಎದ್ದೇಳುತ್ತಾನೆ]
ಸೀನಣ್ಣ- ನನ್ನ ಬ್ರೆಡ್ ಎಲ್ಲಿ?
ವೀರಣ್ಣ –[ಕಿಟ್ಟಿಗೆ] ಇತ್ತೀಚೆಗೆ ನನ್ನ ಮಾತನ್ನೇ ನಂಬುತ್ತಿಲ್ಲ, ಕಿಟ್ಟಿ.
ಸೀನಣ್ಣ- ನೋಡು, ನನಗೆ ನನ್ನ ಬ್ರೆಡ್ ಬೇಕು.
ವೀರಣ್ಣ- ಬಹಳ ತಡವಾಯಿತು. ಸೀನಣ್ಣ, ಅದು ಟಾಟಾ ಹೇಳಿ ಹೊರಟುಹೋಯಿತು.
ಸೀನಣ್ಣ- ಎಲ್ಲಿ ಹೋಯಿತು?
ವೀರಣ್ಣ- ನೋಡು, ಕಾಳಣ್ಣ ಮಾರ್ಷಲ್ ಇಲ್ಲಿಗೆ ಬಂದಿದ್ದ. ಅವನು ಏನನ್ನೂ ತಂದಿರಲಿಲ್ಲ. ಆದ್ದರಿಂದ ನೀನು ಬಿಟ್ಟದ್ದನ್ನು ಅವನಿಗೆ ಕೊಟ್ಟರೆ ನೀನೇನು ತಪ್ಪು ತಿಳಿಯುವುದಿಲ್ಲ ಎಂದು ಭಾವಿಸಿದೆ.
ಸೀನಣ್ಣ- ಏನು? ನನ್ನ ಬ್ರೆಡ್ ಅನ್ನು ಅವನಿಗೆ ಕೊಟ್ಟುಬಿಟ್ಟೆಯಾ? ಈಗ ನಾನೇನು ತಿನ್ನಲಿ?
ವೀರಣ್ಣ- ನೀನು ಸಾಕಷ್ಟು ತಿಂದಿರಬೇಕಲ್ಲವೇ?
[ಸೀನಣ್ಣ ತನ್ನ ಡಬ್ಬಿಯನ್ನು ಹುಚ್ಚನಂತೆ ಎತ್ತುತ್ತಾ ವೀರಣ್ಣನ ಕಡೆ ಗುರಿಯಿಡುತ್ತಾನೆ]
ಸೀನಣ್ಣ- ನಿನ್ನ ತಲೆ ಒಡೆದು ಹಾಕುತ್ತೇನೆ. ನೀನು....................
[ವೀರಣ್ಣ ತನ್ನನ್ನು ರಕ್ಷಸಿಕೊಳ್ಳುತ್ತಾನೆ. ಕಿಟ್ಟಿ ಅಲ್ಲಿ ನೆಗೆಯುತ್ತಾನೆ. ರಾಬರ್ಟ್ ಒಳಬರುತ್ತಾನೆ]
ಸುಬ್ಬಣ್ಣ-ಏನು ವಿಷಯ? ಏನು ನಡೆಯುತ್ತಿದೆ?
ಸೀನಣ್ಣ- [ಕರುಣಾಜನಕವಾಗಿ ಸುಬ್ಬಣ್ಣ ಕಡೆ ನೋಡುತ್ತಾ, ] ರಾಬರ್ಟ್ ನಾನು ಹೊರ ಹೋಗಿದ್ದಾಗ ಅವನು ನನ್ನ ಬ್ರೆಡ್ ಕದ್ದು ಕೊಟ್ಟು ಬಿಟ್ಟಿದ್ದಾನೆ.
ಸುಬ್ಬಣ್ಣ- [ಆಶ್ಚರ್ಯಚಕಿತನಾಗಿ] ನಿನ್ನ ಬ್ರೆಡ್ ಕದ್ದನೇ?
ಸೀನಣ್ಣ - ಹಾ, ಕದ್ದು ಕಾಳಣ್ಣನಿಗೆ ಕೊಟ್ಟುಬಿಟ್ಟಿದ್ದಾನೆ.
ಸುಬ್ಬಣ್ಣ- [ವೀರಣ್ಣನಿಗೆ] ನಿಜವೇ?
ವೀರಣ್ಣ- ಕಾಳಣ್ಣ ಇಲ್ಲಿಗೆ ಬಂದಾಗ ಹಸಿವಿನಿಂದ ಸುಸ್ತಾಗಿದ್ದ. ನಾನು, ನನ್ನ ಕೆಲಸದಿಂದ ಕನಿಷ್ಟ ಪಕ್ಷ ಜೀವನದಲ್ಲಿ ಒಮ್ಮೆಯಾದರೂ ಜೊತೆಗಾರರಿಗೆ ಸಹಾಯಮಾಡಲು ಅವಕಾಶ ಸಿಕ್ಕಿತೆಂದು ಸೀನಣ್ಣ ಸಂತೋಷಪಡುತ್ತಾನೆ ಎಂದುಕೊಂಡೆ.
ಸೀನಣ್ಣ- [ಇನ್ನೂ ಸಿಟ್ಟಿನಿಂದಲೇ] ಅವನು ನನ್ನ ಅನುಮತಿಯನ್ನೂ ಕೇಳಲಿಲ್ಲ. ರಾಬರ್ಟ್........... ಈಗ ನೋಡು, ನನಗೆ ಏನು ಇಲ್ಲ.
ಸುಬ್ಬಣ್ಣ - ವೀರಣ್ಣ, ನಿನ್ನ ಸಾಮಾನು ತೆಗೆದುಕೊಂಡು ಇಲ್ಲಿಂದ ಹೊರಡು. [ಕಿಟ್ಟಿಗೆ] ನೀನೂ ಅಷ್ಟೇ.
ವೀರಣ್ಣ - ಸರಿ, ಆದರೆ ನಾನು ಇಲ್ಲಿಂದ ಹೊರಡುವ ಮುನ್ನ ಈ ದುರಾಸೆಯ ಹಂದಿಯ ತಲೆ ಒಡೆದೇ ಹೋಗುತ್ತೇನೆ.
[ವೀರಣ್ಣ ಕೋಪದಿಂದ ತನ್ನ ಜಾಕೆಟ್ ತೆಗೆಯುತ್ತಾನೆ. ಸುಬ್ಬಣ್ಣ ಅವರಿಬ್ಬರ ನಡುವೆ ಬರುತ್ತಾನೆ. ಸೀನಣ್ಣ ಮೂಲೆಗೆ ಹೋಗುತ್ತಾನೆ]
ಸುಬ್ಬಣ್ಣ – [ವೀರಣ್ಣನಿಗೆ] ಇಲ್ಲಿ ಒಬ್ಬನನ್ನು ಹೊಡೆದರೆ ಏನಾಗುತ್ತೆ ಎಂದು ಗೊತ್ತು ತಾನೆ?
ವೀರಣ್ಣ – [ಸುಬ್ಬಣ್ಣ ನನ್ನು ದಾಟಿ ಸೀನಣ್ಣನತ್ತ ಹೋಗಲು ಪ್ರಯತ್ನಿಸುತ್ತಾ] ನಾನೇನು ಅದರ ಬಗ್ಗೆ ಯೋಚಿಸೋಲ್ಲ. ಕಾಳಣ್ಣ ಹಸಿದಿದ್ದ ಮತ್ತು ..........
[ಗುಡುಗಿನಂಥ ಭಯಂಕರ ಶಬ್ದ ಕೇಳಿಬರುತ್ತದೆ. ತಕ್ಷಣವೇ ಜಗಳ ಮರೆತುಹೋಗುತ್ತದೆ. ಬಲೆಯಲ್ಲಿ ಸಿಕ್ಕ ಪ್ರಾಣಿಗಳಂತೆ ತಕ್ಷಣವೇ ಎಲ್ಲರೂ ಒಂದೆಡೆ ಸೇರುತ್ತಾ ಎಡ ಗೋಡೆಯತ್ತ ಧಾವಿಸುತ್ತಾರೆ. ಕಿಟ್ಟಿ ವೀರಣ್ಣನ ಆಶ್ರಯದತ್ತ ಧಾವಿಸುತ್ತಾನೆ. ಶಬ್ಧ ಹೆಚ್ಚುತ್ತಿದೆ ಮತ್ತು ಭಯಂಕರವೆನಿಸುತ್ತಿದೆ. ಸ್ವಲ್ಪ ಕಾಲದ ನಂತರ ಕಾಳಣ್ಣ ಕಾಲೆಳೆದುಕೊಂಡು ಒಳಗೆ ಬಂದು ಕೆಳಗೆ ಬೀಳುತ್ತಾನೆ. ತೆವಳುತ್ತಾ ತನ್ನ ಜೊತೆಗಾರರನ್ನು ಸೇರಿಕೊಳ್ಳುತ್ತಾನೆ.]
ಕಾಳಣ್ಣ- ನಾವು ಸಿಕ್ಕಿಹಾಕಿಕೊಂಡಿದ್ದೇವೆ, ಸಿಕ್ಕಿಹಾಕಿಕೊಂಡಿದ್ದೇವೆ.
[ಧ್ವನಿ ಈಗ ಹೆಚ್ಚುತ್ತಿದೆ. ಮಣ್ಣು ಸುರಿಯುತ್ತಿರುವ ಶಬ್ದ ಕೇಳಿಬರುತ್ತಿದೆ. ಧೂಳಿನಿಂದ ಕೂಡಿದ ಕಲ್ಲೊಂದು ರಂಗದ ಮೇಲೆ ಬೀಳುತ್ತದೆ. ಬಾಗಿಲಿನಲ್ಲಿ ಜೋರಾದ ಶಬ್ಧ ಕೇಳಿ ಬರುತ್ತದೆ]
[ಕ್ರಮೇಣ ಧ್ವನಿ ಕಡಿಮೆಯಾಗುತ್ತಾ ಬೆಟ್ಟಗಳ ನಡುವೆ ಗುಡುಗಿನಂತೆ, ನಂತರ ಸದ್ದಡಗುತ್ತದೆ. ಸುತ್ತಲೂ ಮಣ್ಣು ಬೀಳುತ್ತಿರುವ ಶಬ್ಧ ಮಾತ್ರ ಕೇಳಿಬರುತ್ತಿದೆ.]
[ವೀರಣ್ಣ ಹುಷಾರಾಗಿ ಬಾಗಿಲಿನತ್ತ ಹೋಗುತ್ತಾನೆ. ಪರದೆಯನ್ನು ಎತ್ತುತ್ತಾನೆ. ಎಲ್ಲರೂ ಕೂಗಿಕೊಳ್ಳುತ್ತಾರೆ. ಕಲ್ಲಿನಿಂದ ಬಾಗಿಲು ಮುಚ್ಚಿಹೋಗಿದೆ. ವೀರಣ್ಣ ತಿರುಗಿ ಭಯಗ್ರಸ್ಥರಾದ ಜೊತೆಗಾರರನ್ನು ನೋಡುತ್ತಾನೆ]
ವೀರಣ್ಣ – ದೇವರೇ........ ನಾವು ಗೋರಿಯೊಳಗೆ ಇದ್ದೇವೆ.
(ಮುಂದುವರೆಯುತ್ತದೆ)
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ