ಎಂ. ಆರ್ ಶ್ರೀನಿವಾಸಮೂರ್ತಿಯವರ ‘ರಂಗಣ್ಣನ ಕನಸಿನ ದಿನಗಳು’- ಹಾಸ್ಯಪ್ರಂಗಗಳನ್ನು ಒಳಗೊಂಡ ಪುಸ್ತಕ ಮೊದಲ ಮುದ್ರಣವಾದದ್ದು ೧೯೪೯ರಲ್ಲಿ. ಅಂದಿನ ಪರಿಸ್ಥಿತಿಗಳಿಗನುಗುಣವಾಗಿ ಕಥೆ ಸಾಗುತ್ತದೆ. ಹಾಗಾಗಿ ಪುಸ್ತಕ ನಮ್ಮನ್ನು ೬೦ ದಶಕಗಳ ಹಿಂದೆ ಕೊಂಡೊಯ್ಯುತ್ತದೆ. ಅಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಿತಿಗತಿಗಳನ್ನು ಕೆಲ ಹಾಸ್ಯ ಪ್ರಸಂಗಗಳ ಮೂಲಕ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ರಂಗಣ್ಣನೇ ಕಥಾನಾಯಕ. ರಂಗಣ್ಣನಿಗೆ ಪ್ರಾಥಮಿಕ ಶಾಲಾ ಶಿಕ್ಷಕನ ಹುದ್ದೆಯಿಂದ ಇನ್ಸ್‍ಪೆಕ್ಟರ್ ಹುದ್ದೆಯ ಬಡ್ತಿಯೊಂದಿಗೆ ಜನಾರ್ದನಪುರಕ್ಕೆ ವರ್ಗವಾಗುತ್ತದೆ. ತನ್ನ ರೇಂಜಿಗೆ ಬರುವ ಎಲ್ಲ ಹಳ್ಳಿಯ ಶಾಲೆಗಳನ್ನು -ಶಿಕ್ಷಕರನ್ನು ಸುವ್ಯವಸ್ಥಿತವಾಗಿ ರೂಪಿಸಬೇಕೆಂಬುದೇ ರಂಗಣ್ಣನ ಕನಸು. ತನ್ನ ಈ ಕನಸನ್ನು ನನಸಾಗಿಸಲು ರಂಗಣ್ಣ ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾನೆ. ರೇಂಜಿನಲ್ಲಿರುವ ಪ್ರತಿಯೊಂದು ಹಳ್ಳಿಯ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಹಾಗೂ ಶಿಕ್ಷಕರ ಕುಂದುಕೊರತೆಗಳನ್ನು ವಿಚಾರಿಸಿ ಬಗೆಹರಿಸುತ್ತಿರುತ್ತಾನೆ. ಹೀಗೆ ತಾನು ಭೇಟಿ ನೀಡಿದ ಹಳ್ಳಿಗಳ ಶಾಲೆಗಳಲ್ಲಿ ತನಗಾದ ಅನುಭವಗಳನ್ನು ರಂಗಣ್ಣನೇ ನಮಗೆ ಹೇಳುವಂತೆ ಲೇಖಕರು ಚಿತ್ರಿಸಿದ್ದಾರೆ.
ನೂರಾರು ಕನಸುಗಳನ್ನು ಹೊತ್ತು ಇನ್ಸ್ಪೆಕ್ಟರ್‍ಗಿರಿಗೆ ಬಂದ ರಂಗಣ್ಣ ಮೊದಲು ಭೇಟಿ ನೀಡಿದ್ದು ಕಂಬದಹಳ್ಳಿಗೆ. ಬೈಸಿಕಲ್ ಏರಿ ಅತಿ ಉತ್ಸಾಹದಿಂದ ರಂಗಣ್ಣ ಹಳ್ಳಿಯ ರಸ್ತೆಯ ದುರವಸ್ಥೆಯಿಂದಾಗಿ ಎದ್ದು ಬಿದ್ದು ಶಾಲೆಗೆ ತಲುಪಿದನು. ಆದರೆ ಅಲ್ಲಿ ಮಕ್ಕಳಿದ್ದರೂ ಶಿಕ್ಷಕರ ಗೈರುಹಾಜರಿಯಿಂದಾಗಿ ಪೆಚ್ಚುಮೋರೆ ಹಾಕಿಕೊಂಡು ತನ್ನ ಉತ್ಸಾಹ ಕಳೆದುಕೊಳ್ಳುತ್ತಾನೆ. ಆದರೂ ಧೃತಿಗೆಡದೆ ತಾನು ಕಂಡ ಕನಸನ್ನು ನನಸಾಗಿಸಲು ಮುಂದೆ ಹೆಜ್ಜೆ ಹಾಕುತ್ತಾನೆ. ಹೀಗೆ ಇನ್ಸ್‍ಪೆಕ್ಟರ್ ರಂಗಣ್ಣ 4 ತಿಂಗಳಲ್ಲಿ ಭೇಟಿ ನೀಡಿದ ಶಾಲೆಗಳಿಗೆ ಪ್ರತ್ಯೇಕ ಕಟ್ಟಡಗಳು ಇರುವುದಿಲ್ಲ. ಬಹುತೇಕವಾಗಿ ಹರಕಲು ಗುಡಿಸಲುಗಳಲ್ಲಿ, ಮರದ ಕೆಳಗೆ, ಗುಡಿಗಳಲ್ಲಿ ನಡೆಯುತಿತ್ತು. ಇದು ನಮ್ಮ ನಾಡಿನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ‘ಮಹತ್ವ’ವನ್ನು ಎತ್ತಿ ತೋರಿಸುವಂತಿದೆ. ಇದು ಶಾಲೆಗಳ ಕಥೆಯಾದರೆ, ಇನ್ನು ಶಿಕ್ಷಕರ ಕಥೆ ಹೇಳತೀರದು. ಆಗಸ ಎಂಬ ಪದವನ್ನು ಅಗಸ ಎಂದು ಮಕ್ಕಳಿಗೆ ಬೋಧನೆ ಮಾಡುವ ಮೇಷ್ಟ್ರು ರಂಗಪ್ಪನಂತಹವರು ಒಂದು ಕಡೆಯಾದರೆ, ಮತ್ತೊಂದು ಕಡೆ ತಮ್ಮ ಅತ್ಯುತ್ತಮ ಜ್ಞಾನವನ್ನು ಮಕ್ಕಳಿಗೆ ಧಾರೆಯೆರೆಯುವ ಶಿಕ್ಷಕರು.
ಸರ್ಕಾರ ಶಿಕ್ಷಕರಿಗೆ ನೀಡುತ್ತಿದ್ದ ಸಂಬಳ ಎಷ್ಟಿತ್ತೆಂದರೆ ಜನ ಮೇಷ್ಟ್ರುಗಳನ್ನು ‘ಬಡ ಮೇಷ್ಟ್ರು’ ಎಂದೇ ಕರೆಯುತ್ತಿದ್ದರು. ಕೆಲ ಮೇಷ್ಟ್ರುಗಳಂತೂ ತಮ್ಮ ತಮ್ಮ ಕುಲಕಸುಬುಗಳನ್ನು ರೂಢಿಸಿಕೊಂಡು ಸಂಸಾರವನ್ನು ತೂಗಿಸುತ್ತಿದ್ದರು. ಮೇಷ್ಟ್ರು ಮುನಿಸ್ವಾಮಿಯೆಂಬಾತ ಸಂಬಳ ಸಾಲದೆ ಶಾಲಾ ಕಟ್ಟಡದ ಒಂದು ಮೂಲೆಯಲ್ಲಿ ಕ್ಷೌರಿಕನ ವೃತ್ತಿಯನ್ನು ನಡೆಸುತ್ತಿರುತ್ತಾನೆ. ಇದನ್ನು ಕಂಡು ಹೌಹಾರುತ್ತಾನೆ ರಂಗಣ್ಣ. ಮೇಷ್ಟ್ರು ಮುನಿಸ್ವಾಮಿಯ ಕಷ್ಟಕಾರ್ಪಣ್ಯಗಳನ್ನು ಕೇಳಿ, ಜೊತೆಗೆ ಶಿಕ್ಷಕ ವೃತ್ತಿಗೆ ದ್ರೋಹ ಮಾಡದೆ ತನ್ನ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದುದ್ದರಿಂದ ಆತನನ್ನು ಕ್ಷಮಿಸುತ್ತಾನೆ. ಅಂತಃಕರಣವುಳ್ಳ ರಂಗಣ್ಣ ತಾನೂ ಕ್ಷೌರ ಮಾಡಿಸಿಕೊಂಡು ಹಣವನ್ನು ಕೊಟ್ಟು, ಅಲ್ಲಿಂದ ಹೊರಡುತ್ತಾನೆ. ಆದರೆ ಶಾಲೆಯ ಕಟ್ಟಡದಲ್ಲಾಗಲಿ, ಶಾಲಾ ಅವಧಿಯಲ್ಲಾಗಲೀ ಅಲ್ಲದೆ ಬೇರೆ ಕಡೆ ತನ್ನ ವೃತ್ತಿಯನ್ನು ಮುಂದುವರೆಸುವಂತೆ ಸಲಹೆ ನೀಡುತ್ತಾನೆ. ಈ ಸನ್ನಿವೇಶವನ್ನು ಓದುವಾಗ ತುಸು ಹಾಸ್ಯವೆನಿಸಿದರೂ ಲೇಖಕರು ಆಗಿನ ಬಡ ಶಿಕ್ಷಕರ ವಾಸ್ತವದ ಬದುಕನ್ನು ತೆರೆದಿಟ್ಟಿದ್ದಾರೆ. ಇದೊಂದೇ ಅಲ್ಲ ವ್ಯವಸಾಯದ ಜೊತೆಗೆ ಶಿಕ್ಷಕ ವೃತ್ತಿಯನ್ನು ನಿಭಾಯಿಸುತ್ತಿದ್ದ ಮೇಷ್ಟ್ರು ವೆಂಕಟಸುಬ್ಬಯ್ಯ - ಹೀಗೆ ಕೆಲವು ಘಟನೆಗಳು ಹಾಸ್ಯದ ಹೊನಲನ್ನೇ ಹರಿಸುತ್ತವೆ. ಆದರೆ ಹಾಸ್ಯವನ್ನು ಪಕ್ಕಕ್ಕಿಟ್ಟು ಕ್ಷಣ ಹೊತ್ತು ಯೋಚಿಸಿದಾಗ ಅದರ ಗಾಂಭೀರ್ಯ ಅರ್ಥವಾಗಿ ಹೃದಯಸ್ಪರ್ಶಿಯಾಗುತ್ತವೆ.
ಒಮ್ಮೆ ಸುದ್ದೇನಹಳ್ಳಿಗೆ ಭೇm ಇತ್ತಾಗ ಅಲ್ಲಿನ ಕೆಂಚಪ್ಪ ಮೇಷ್ಟ್ರು ಬೋರ್ಡ್ ಒರೆಸುವ ಬಟ್ಟೆಯನ್ನು ಇಟ್ಟಿರುವುದಿಲ್ಲ. ತನ್ನ ರುಮಾಲನ್ನೇ ತೆಗೆದು ಬೋರ್ಡ್ ಒರೆಸುವುದನ್ನು ನೋಡಿ ರಂಗಣ್ಣನಿಗೆ ತೀರಾ ಬೇಸರವಾಗುತ್ತದೆ. ಶಾಲೆಗೆ ನೀಡುವ ಕಡಿಮೆ ಅನುದಾನದಿಂದ ಏನು ತಾನೇ ಮಾಡಲು ಸಾಧ್ಯವೆಂದು ಶಾಲಾ ಖರ್ಚುವೆಚ್ಚದ ಪುಸ್ತಕವನ್ನು ನೋಡುತ್ತಾನೆ. ಅದರಲ್ಲಿ ಬೋರ್ಡ್ ಒರೆಸುವ ಬಟ್ಟೆಗಾಗಿ ಹಣ ಖರ್ಚಾಗಿರುವುದನ್ನು ನೋಡಿ ಕೋಪದಿಂದ ರಂಗಣ್ಣ ಮೇಷ್ಟ್ರನ್ನು ಪ್ರಶ್ನಿಸುತ್ತಾನೆ. ಕೆಂಚಪ್ಪ ಮೇಜಿನ ಮೇಲಿನ ರುಮಾಲನ್ನು ಎತ್ತಿಕೊಂಡು ಇದೇ ಸ್ವಾಮಿ ಆ ಬಟ್ಟೆ ಎನ್ನುತ್ತಾನೆ. ಪ್ರಾಮಾಣಿಕನಾದ ಕೆಂಚಪ್ಪ ‘ಬರುವ ಅತಿ ಕಡಿಮೆ ಸಂಬಳದಿಂದಾಗಿ, ರುಮಾಲನ್ನು ಕೊಂಡುಕೊಳ್ಳಲಾಗದೆ ಬೋರ್ಡ್ ಒರೆಸುವ ಬಟ್ಟೆಯನ್ನೇ ರುಮಾಲಾಗಿ ಬಳಸುತ್ತಿದ್ದೇನೆ, ತಪ್ಪು ಲೆಕ್ಕ ನೀಡಿಲ್ಲ ಸ್ವಾಮಿ’ ಎನ್ನುತ್ತಾನೆ. ರುಮಾಲಿಲ್ಲದೆ ಇದ್ದರೆ ಮೇಷ್ಟ್ರುಗಳಿಗೆ ದಂಡ ವಿಧಿಸುವ ಪದ್ಧತಿ ಇದ್ದುದ್ದರಿಂದ ರಂಗಣ್ಣ ‘ಏನ್ರಿ, ಈಗ ರುಮಾಲಿಲ್ಲದೆ ನಿಂತಿದ್ದೀರಲ್ಲ’ ಎಂದ ತಕ್ಷಣವೇ ಕೆಂಚಪ್ಪ ಆ ಸುಣ್ಣ ಬಳಿದ ಬಟ್ಟೆಯನ್ನೇ ತಲೆಗೆ ಸೊಟ್ಟಸೊಟ್ಟಾಗಿ ಸುತ್ತಿಕೊಂಡು, ರುಮಾಲಿನ ಒಂದು ಕೊನೆ ಸಡಿಲವಾಗಿ ಬಿಚ್ಚಿಕೊಂಡಿದ್ದನ್ನೂ ಗಮನಿಸದೆ ಕೈಮುಗಿದು ನಿಲ್ಲುತ್ತಾನೆ. ರಂಗಣ್ಣನಿಗೆ ದುಃಖವಾಗುತ್ತದೆ, ತನ್ನ ಶಿಕ್ಷಕರ ಬಡತನ ಎಂದಿಗೆ ದೂರವಾಗುತ್ತದೋ ಎಂದು ಚಿಂತಿಸುತ್ತಾನೆ. ಇದುವರೆಗೂ ತನ್ನ ಅನುಭವಗಳನ್ನು ಹೇಳಿಕೊಂಡು ನಗಿಸುತ್ತಿದ್ದ ರಂಗಣ್ಣ ಈ ಘಟನೆಯಲ್ಲಿ ತಾನೂ ಅತ್ತು ನಮ್ಮ ಕಣ್ಣುಗಳನ್ನೂ ತೇವಗೊಳಿಸುತ್ತಾನೆ.
ಶಾಲೆಗಳ ಅಭಿವೃದ್ಧಿಯಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲ, ಹಳ್ಳಿಯವರ ಪಾತ್ರ ಎಷ್ಟರ ಮಟ್ಟಿಗೆ ಇರಬೇಕೆಂಬುದನ್ನೂ ಸಹ ಲೇಖಕರು ತಿಳಿಸಿದ್ದಾರೆ. ಇನ್ಸ್‍ಪೆಕ್ಟರ್ ರಂಗಣ್ಣನ ನೇತೃತ್ವದಲ್ಲಿ ಪ್ರತಿ ತಿಂಗಳು ಹಳ್ಳಿಯವರ ಆಹ್ವಾನದ ಮೇರೆಗೆ ಶಿಕ್ಷಕರ ಸಭೆ ನಡೆಯುತ್ತಿತ್ತು. ಹಳ್ಳಿಯ ಮುಖಂಡರೂ ಸಹ ಈ ಸಭೆಯಲ್ಲಿ ಭಾಗವಹಿಸಿ ಶಾಲೆಯ ಅಭಿವೃದ್ಧಿಗೆ ತಮ್ಮಿಂದಾಗುವ ಸಹಾಯ-ಸಹಕಾರ ನೀಡುತ್ತಿದ್ದರು. ಹಳ್ಳಿಯ ಜನ ಶಿಕ್ಷಕರ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇದ್ದಾಗ ಮಾತ್ರ ಶಾಲೆ ಹಾಗೂ ಮಕ್ಕಳು ಎಲ್ಲ ರೀತಿಯಲ್ಲೂ ಮುಂದುವರೆಯಲು ಸಾಧ್ಯ ಎಂದು ರಂಗಣ್ಣ ಸಲಹೆ ಸೂಚನೆಗಳನ್ನು ನೀಡುತ್ತಿದ್ದನು.
ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮುಖಂಡರ ಪ್ರವೇಶ ಹಾಗೂ ಕುಮ್ಮಕ್ಕಿನಿಂದಾಗಿ ಕೆಲ ಶಿಕ್ಷಕರು ಗೂಂಡಾಗಳಂತೆ ವರ್ತಿಸುತ್ತಿದ್ದುದ್ದನ್ನು, ಅಂತಹವರಿಗೆ ನಮ್ಮ ರಂಗಣ್ಣ ಸರಿಯಾದ ಪಾಠ ಕಲಿಸಿ, ಒಳ್ಳೆಯ ದಾರಿಗೆ ತರುವ ಸನ್ನಿವೇಶ ಗಳು, ಹೀಗೆ ಶಿಕ್ಷಣ, ಹಳ್ಳಿಯ ಜನ, ರಾಜಕೀಂiÀi ಮುಖಂಡರು, ಗೂಂಡಾಗಿರಿ, ಬಡ ಶಿಕ್ಷಕರ ವಾಸ್ತವ ಬದುಕಿನ ತೊಳಲಾಟ, ಊಟದ ಮಧ್ಯೆ ಉಪ್ಪಿನಕಾಯಿ ಇದ್ದಂತೆ ರಂಗಣ್ಣನ ಸಾಂಸಾರಿಕ ಜೀವನದ ಚಿತ್ರಣ - ಹೀಗೆ ಎಲ್ಲವೂ ಈ ಪುಸ್ತಕದಲ್ಲಿ ಅಡಗಿದೆ.
ಇನ್ನು ನಮ್ಮ ರಂಗಣ್ಣನ ಬಗ್ಗೆ ಹೇಳುವುದಾದರೆ, ಬಹಳ ಪ್ರಾಮಾಣಿಕ ಶಿಕ್ಷಕ ಹಾಗೂ ಅಧಿಕಾರಿ. ತನ್ನ ಕೈಕೆಳಗಿನ ಶಿಕ್ಷಕರು ಎಷ್ಟೇ ತಪ್ಪು ಮಾಡಿದರೂ ಅವರ ಮೇಲೆ ರೇಗಾಡದೆ, ಕೋಪಿಸಿಕೊಂಡು ನೋಟಿಸ್ ಕೊಡದೆ, ದಂಡ ಹಾಕದೆ ಸ್ನೇಹಪರತೆಯಿಂದ ಅವರ ತಪ್ಪುಗಳನ್ನು ಮನ್ನಿಸಿ, ತಿದ್ದಿ, ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿರುತ್ತಾನೆ.
ಅಂತೂ ರಂಗಣ್ಣ ತನ್ನ ಕನಸಿನಂತೆ ಎಲ್ಲಾ ಶಾಲೆಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಪರಿಹರಿಸಿ ಮಾದರಿ ಇನ್ಸ್‍ಪೆಕ್ಟರ್ ಎನಿಸಿಕೊಂಡು ನಮ್ಮೆಲ್ಲರ ಶಹಬಾಶ್ ಗಿರಿ ಗಿಟ್ಟಿಸಿಕೊಳ್ಳುತ್ತಾನೆ. ಕಥೆಯ ಹಾಸ್ಯ ಪ್ರಸಂಗಗಳಲ್ಲಿ ಕೆಲವು ಕಡೆ ಆಡಳಿತ ಭಾಷೆಯಲ್ಲಿ ಬಳಸುವ ಪದಗಳು ಸೇರ್ಪಡೆಯಾಗಿದ್ದರೂ, ಹಳ್ಳಿಯ ಸೊಗಡಿನ ಪದಗಳು, ಜನರ ಆಡುಭಾಷೆಯ ಪದಗಳೂ ಇರುವುದರಿಂದ ಎಲ್ಲೂ ಬೇಸರವಾಗದೆ ಕಥೆ ಓದಿಸಿಕೊಂಡು ಹೋಗುತ್ತದೆ. ಪ್ರಾಥಾಮಿಕ ಶಾಲಾ ಶಿಕ್ಷಕರ ಸ್ಥಿತಿಗತಿಗಳನ್ನು ಚಿತ್ರಿಸುವಲ್ಲಿ ಲೇಖಕರು ನಿಜಕ್ಕೂ ಯಶಸ್ವಿಯಾಗಿದ್ದಾರೆ. ಮತ್ತಿನ್ನೇಕೆ ತಡ. ಈಗಲೇ ಹತ್ತಿರದ ಪುಸ್ತಕ ಭಂಡಾರಕ್ಕೆ ಭೇಟಿ ನೀಡಿ ಪುಸ್ತಕವನ್ನು ಕೊಂಡು ತನ್ನಿ ಅಥವಾ ಗ್ರಂಥಾಲಯದಿಂದ ತಂದು ಓದಿ ನೀವೂ ಅದರ ರುಚಿಯನ್ನು ಆಸ್ವಾದಿಸಿ.
ಎಂ ಆರ್ ಶ್ರೀನಿವಾಸಮೂರ್ತಿ
ಇಂದಿನ ದಿನಗಳಲ್ಲಿ ಶಿಕ್ಷಕರ ಪರಿಸ್ಥಿತಿ ಬದಲಾಗಿದೆ, ಅವರಿಗೆ ಒಳ್ಳೆಯ ಸಂಬಳ ಬರುತ್ತಿದೆ. ಆದರೆ ರಂಗಣ್ಣ ಕಂಡ ಕನಸು ಮಾತ್ರ ನನಸಾಗಿಲ್ಲ. ಶಾಲೆಗಳಿಗೆ ಉತ್ತಮ ಕಟ್ಟಡಗಳೇನೋ ಇವೆ ಆದರೆ ಶಿಕ್ಷಣ ಮಾತ್ರ ಇನ್ನೂ ಸುಧಾರಿಸಿಲ್ಲ. ಮುಖ್ಯವಾಗಿ ಪ್ರತಿಯೊಬ್ಬ ಶಿಕ್ಷಕ/ಶಿಕ್ಷಕಿ ಓದಲೇಬೇಕಾದ ಪುಸ್ತಕವಿದು. ಪ್ರತಿಯೊಬ್ಬ ಶಿಕ್ಷಕ ರಂಗಣ್ಣನಂತಾದರೇ ಭಾರತದ ಶಿಕ್ಷಣ ಅತ್ಯುನ್ನತ ಸ್ಥಿತಿಯನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.
- ದೀಪಶ್ರೀ ಜೆ
1 ಕಾಮೆಂಟ್:
ಬಹಳ ಒಳ್ಳೆಯ ಪುಸ್ತಕ ನಾನು ಚಿಕ್ಕಂದಿನಲ್ಲಿದ್ದಾಗ ಒದಿದ್ದೆ ಈಗಲೂ ಮರೆಯಲಾಗಿಲ್ಲ.
ಮಾಸ್ತರರಿಗೆ ಹರಳೆಣ್ಣೆ ಕುಡಿಸಿದ ಪ್ರಸಂಗ ನಗೆಯುಕ್ಕಿಸುತ್ತದೆ.
ನೀವು ಹೇಳಿದಂತೆ ಈಗಿನ ಪ್ರತಿಯೊಬ್ಬ ಶಿಕ್ಷಕರೂ ಓದಬೇಕಾದ ಅನುಕರಿಸಬೇಕಾದ ಪುಸ್ತಕ.
ಕಾಮೆಂಟ್ ಪೋಸ್ಟ್ ಮಾಡಿ